• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಅದ್ಭುತ ಪ್ರತಿಭೆಯ ದಿಶಾ ಸಿ.ಶೆಟ್ಟಿ ಕಟ್ಲ.

Tulunadu News Posted On September 14, 2020
0


0
Shares
  • Share On Facebook
  • Tweet It

ಯಕ್ಷಗಾನವನ್ನು ” ಗಂಡುಕಲೆ ” ಎಂದು ಹೇಳುವ ಮಾತಿದೆ . ಈ ವಾಕ್ಯವು ತಪ್ಪು ಕಲ್ಪನೆಗೆ ಅವಕಾಶ ಮಾಡಿ ಕೊಟ್ಟಿದೆ . ಇಲ್ಲಿ ಗಂಡು ಎಂದರೆ ಬಲಿಷ್ಟ ಎಂಬ ಅರ್ಥವೇ ಹೊರತು ಗಂಡಸರು ಮಾತ್ರ ನಿರ್ವಹಿಸಬೇಕಾದ ಕಲೆ ಎಂದು ಅರ್ಥೈಸಬಾರದು . ಪ್ರಾಕೃತಿಕವಾಗಿ , ಶಾರೀರಿಕವಾಗಿ ಹೆಣ್ಣಿಗಿಂತಲೂ ಗಂಡೇ ಬಲಿಷ್ಟನಾಗಿರುವ ಕಾರಣ ” ಶ್ರೇಷ್ಠ ” ಎಂಬ ಅರ್ಥದಲ್ಲಿ ” ಗಂಡುಕಲೆ ” ಯೇ ಹೊರತು , ಯಕ್ಷಗಾನ ಕೇವಲ ಗಂಡಸರ ಕಲೆ , ಹೆಣ್ಮಕ್ಕಳಿಗಲ್ಲಾ ಎಂಬ ಅರ್ಥದಲ್ಲಿ ಅಲ್ಲ ಎಂಬುದನ್ನು ಒಪ್ಪಿಕೊಳ್ಳಲೇಬೇಕು .

ಯಕ್ಷರಂಗಕ್ಕೆ ಹೆಣ್ಮಕ್ಕಳ ಪ್ರವೇಶ ಇತ್ತೀಚಿನ ಬೆಳವಣಿಗೆಯಲ್ಲ . ಎಷ್ಟೋ ವರ್ಷಗಳ ಹಿಂದೆಯೇ ಹೆಣ್ಣುಮಕ್ಕಳು ಯಕ್ಷಗಾನದ ಪಾತ್ರ ನಿರ್ವಹಿಸಿದ ದಾಖಲೆಯಿದೆ .1930 ರ ಆಸುಪಾಸಿನಲ್ಲೇ ಸುಪ್ರಸಿದ್ಧ ಅರ್ಥಧಾರಿಗಳಾದ ಕವಿ ಭೂಷಣ ವೆಂಕಪ್ಪ ಶೆಟ್ಟರ ಕಿರಿಯ ಸಹೋದರಿ ತಲ್ಲಂಗಡಿ ಪರಮೇಶ್ವರಿ ಶೆಡ್ತಿಯವರು ಸುಪ್ರಸಿದ್ಧ ತಾಳಮದ್ದಳೆ ಕೂಟಗಳಲ್ಲಿ ಅರ್ಥಧಾರಿಗಳಾಗಿ ಮೆರೆದಿದ್ದರು . ಸುಪ್ರಸಿದ್ಧ ಮದ್ದಲೆವಾದಕರಾದ ಶತಾಯುಷಿ ಹಿರಿಯಡ್ಕ ಗೋಪಾಲರಾಯರು ಬಾಲಕನಾಗಿರುವ ಕಾಲದಲ್ಲಿ ಯಮುನಾ ಬಾಯಿ ಎಂಬ ಮಹಿಳೆಯೋರ್ವರು ಮದ್ದಲೆ ವಾದಕರಾಗಿ ಹೆಸರು ಗಳಿಸಿದ್ದರು . ಇವರ ಕಾಲಮಾನವೂ 1920 ರ ಆಸುಪಾಸಿನಲ್ಲಿರಬಹುದು . 1970 ದಶಕದಲ್ಲಿ ಶ್ರೀಮತಿ ನರ್ಮದಾ ಶಿಬರೂರಾಯರು ಭಾಗವತಿಕೆ ಕ್ಷೇತ್ರದಲ್ಲಿ ಮಿಂಚಿದ್ದರು . 1975 ರ ಆಸುಪಾಸಿನಲ್ಲಿ ಶ್ರೀಮತಿ ಲೀಲಾವತಿ ಬೈಪಡಿತ್ತಾಯರು 40 ವರ್ಷಗಳಷ್ಟು ಕಾಲ ವೃತ್ತಿಪರ ಭಾಗವತರಾಗಿ ಮೇಳಗಳಲ್ಲಿ ವಿಜೃಂಭಿಸಿದ್ದರು .(ಇತ್ತೀಚೆಗೆ ನಿವೃತ್ತರಾಗಿದ್ದಾರೆ ) ಈಗಲೂ ಯಕ್ಷಗಾನ ರಂಗಕ್ಕೆ ಸಾಕಷ್ಟು ಮಹಿಳೆಯರು ಪ್ರವೇಶ ಮಾಡಿದ್ದಾರೆ , ಮಾಡುತ್ತಲೂ ಇದ್ದಾರೆ . ಹಿಮ್ಮೇಳ , ಮುಮ್ಮೇಳಗಳಲ್ಲಿ ಸಾಧಕರಾಗಿ ಹೆಸರು ಗಳಿಸಿದ್ದಾರೆ .

ದಿಶಾ ಸಿ.ಶೆಟ್ಟಿ ಕಟ್ಲ ಅಂತಹ ಅಸಾಮಾನ್ಯ ಸಾಧಕರಲ್ಲಿ ಓರ್ವಳಾಗಿ ಗುರುತಿಸಿಕೊಂಡಿದ್ದಾಳೆ . ಯಕ್ಷಗಾನ, ನೃತ್ಯ , ಓದು , ಕ್ರೀಡೆ , ನಿರೂಪಣೆ , ಭಾಷಣ , ಸಮಾಜ ಸೇವೆ – ಹೀಗೆ ಹಲವಾರು ಕ್ಷೇತ್ರಗಳಲ್ಲೂ ಸಮಾನವಾಗಿ ಮಿಂಚಿದ ದಿಶಾ ಚಿಕ್ಕ ಪ್ರಾಯದಲ್ಲೇ ದೊಡ್ಡ ಸಾಧನೆ ಮಾಡಿದ ಸಾಧಕಳು .
14.03.1998ರಲ್ಲಿ ಚಂದ್ರಶೇಖರ – ಪ್ರಮದಾ ಶೆಟ್ಟಿ ದಂಪತಿಗಳ ಸುಪುತ್ರಿಯಾಗಿ ಸುರತ್ಕಲ್ ನಲ್ಲಿ ಜನಿಸಿದ ದಿಶಾ , ಬಾಲ್ಯದಿಂದಲೇ ತುಂಬಾ ಪ್ರತಿಭಾವಂತೆ ಎಂದು ಗುರುತಿಸಿಕೊಂಡವಳು . ಇವಳ ಕುಟುಂಬವೇ ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಕಾರಣ ದಿಶಾಳಿಗೂ ಯಕ್ಷಗಾನದ ನಂಟು ಬಾಲ್ಯದಲ್ಲೇ ಅಂಟಿಕೊಂಡಿತು .ತನ್ನ 10 ನೇ ವಯಸ್ಸಿನಲ್ಲೇ ಅಗ್ನಿಯ ಪಾತ್ರ ನಿರ್ವಹಿಸಿ ಮೆಚ್ಚುಗೆ ಗಳಿಸಿದ್ದರು . ಇವಳ ತಾಯಿ ಶ್ರೀಮತಿ ಪ್ರಮದಾ ಶೆಟ್ಟಿ ಹಾಗೂ ಚಿಕ್ಕಮ್ಮ ಶುಭದಾ ಶೆಟ್ಟಿಯವರು 30 ವರ್ಷಗಳ ಹಿಂದೆಯೇ ಯಕ್ಷಗಾನ ಗುರುಗಳಾದ ಗಣೇಶಪುರ ಗಿರೀಶ ನಾವಡರಿಂದ ಶಾಸ್ತ್ರೋಕ್ತವಾಗಿ ಯಕ್ಷಗಾನದ ಹೆಜ್ಜೆಗಾರಿಕೆ ಕಲಿತ ಹವ್ಯಾಸೀ ಕಲಾವಿದರು . ಪ್ರಮದಾ ಶೆಟ್ಟಿಯವರು ಪುಂಡು ಪಾತ್ರಗಳಲ್ಲಿ ಮಿಂಚಿದರೆ , ಶುಭದಾ ಶೆಟ್ಟಿಯವರು ಯಾವುದೇ ಪಾತ್ರಗಳನ್ನು ನಿರ್ವಹಿಸಿದ ಅನುಭವಿಗಳು‌. ಒಮ್ಮೆ ತನ್ನ ತಾಯಿಯೊಂದಿಗೆ ಯಕ್ಷಗಾನ ಕಾರ್ಯಕ್ರಮ ವೀಕ್ಷಿಸಲು ಹೋಗಿದ್ದೇ ದಿಶಾಳಿಗೆ ಯಕ್ಷಗಾನದ ನಂಟು ಅಂಟಲು ಕಾರಣವಾಯಿತು . ಅಂದು ಯಕ್ಷಗಾನದ ಸುಪ್ರಸಿದ್ಧ ಪುಂಡು ವೇಷಧಾರಿಯಾಗಿದ್ದ ದಿವಾಕರ ರೈ ಸಂಪಾಜೆಯವರ ಅಭಿಮನ್ಯು ಪಾತ್ರ ನೋಡಿದ ದಿಶಾ , ತುಂಬಾ ಆಕರ್ಷಿತಳಾಗಿ ತಾನೂ ಯಕ್ಷಗಾನದ ಪಾತ್ರಧಾರಿ ಆಗಬೇಕೆಂದು ಸಂಕಲ್ಪಿಸಿದಳು . ತನ್ನ ತಾಯಿಯಾದ ಪ್ರಮದಾ ಶೆಟ್ಟಿಯವರಿಂದ ಯಕ್ಷಗಾನದ ಪ್ರಾಥಮಿಕ ಹೆಜ್ಜೆಗಾರಿಕೆ ಕಲಿತು , ಮುಂದೆ ಇತರ ಕಲಾವಿದರ ಪ್ರಸ್ತುತಿ ನೋಡಿಯೇ ಏಕಲವ್ಯನಂತೆ ಯಕ್ಷಗಾನದ ಸಂಪೂರ್ಣ ನಾಟ್ಯಗಳನ್ನು ಅಭ್ಯಸಿಸಿದಳು . ನಂತರ ಯಕ್ಷಗಾನ ಗುರುಗಳಾದ ರಕ್ಷಿತ್ ಶೆಟ್ಟಿ ಪಡ್ರೆಯವರಲ್ಲಿ ಶಿಷ್ಯೆಯಾಗಿ ಯಕ್ಷಗಾನದ ಸಂಪೂರ್ಣ ಪಟ್ಟುಗಳನ್ನು ಕರಗತ ಮಾಡಿಕೊಂಡಳು . ತನ್ನ 14 ನೇ ವಯಸ್ಸಿನಲ್ಲಿ ಪೂರ್ಣ ಪ್ರಮಾಣದ ಕಲಾವಿದೆಯಾಗಿ ಯಕ್ಷಗಾನ ರಂಗ ಪ್ರವೇಶಿಸಿ ಖ್ಯಾತಳಾದ ದಿಶಾ , ನಂತರ ಹಿಮ್ಮುಖಳಾಗಲೇಯಿಲ್ಲ‌ . ಮೂರು ವರ್ಷಗಳ ಹಿಂದೆ ಉಪ್ಪಿನಂಗಡಿಯ ” ಯಕ್ಷಸಂಗಮ ” ದವರ ವಾರ್ಷಿಕೋತ್ಸವದಲ್ಲಿ , ಸುಪ್ರಸಿದ್ಧ ಪುಂಡುವೇಷಧಾರಿಗಳಾಗಿರುವ ಲೋಕೇಶ ಮುಚ್ಚೂರರ ಎದುರು ಪಾತ್ರದಲ್ಲಿ ಅದ್ಭುತವಾಗಿ ನಿರ್ವಹಿಸಿ , ಸುದ್ದಿಯಾದ ದಿಶಾ ನಂತರ ನೂರಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಪ್ರಸಿದ್ಧರಾದರು . ಹೆಣ್ಣಾಗಿ ಹುಟ್ಟಿದರೂ , ಗಂಡು ಪಾತ್ರಗಳಲ್ಲೇ ಹೆಚ್ಚಾಗಿ ಮಿಂಚಿರುವ ದಿಶಾ , “ಯಕ್ಷಕುವರಿ ” ಎಂದು ಅಭಿಮಾನಿಗಳಿಂದ ಕರೆಸಿಕೊಂಡಿದ್ದಾಳೆ . ಅಭಿಮನ್ಯು ,ಬಬ್ರುವಾಹನ , ಭಾರ್ಗವ , ಶ್ರೀಕೃಷ್ಣ , ಶ್ರೀರಾಮ , ಸುಧನ್ವ , ಲಕ್ಷ್ಮಣ , ವಿಷ್ಣು , ಕುಶ , ಅಶ್ವತ್ಥಾಮ , ಚಂಡ , ರುದ್ರಕೋಪ ಮುಂತಾದ ಪುಂಡುವೇಷಗಳಲ್ಲದೇ ಕೋಲು ಕಿರೀಟದ ಪಾತ್ರಗಳಲ್ಲೂ ಮಿಂಚಿರುವ ದಿಶಾ , ಓರ್ವ ಅಪರೂಪದ ಕಲಾವಿದೆಯಾಗಿ ಗುರುತಿಸಿಕೊಂಡಿದ್ದಾಳೆ .ಇತ್ತೀಚೆಗೆ ಮುಂಬೈ ಮಹಾನಗರಿಯಲ್ಲಿ ವೃಷಭಾಸುರನಾಗಿ ಕೋಲು ಕಿರೀಟದಲ್ಲಿ ಪಾತ್ರ ನಿರ್ವಹಿಸಿ , ಅಭಿಮಾನಿಗಳ ಮನ ಗೆದ್ದಿದ್ದರು .ಪಾರಂಪರಿಕ ನಾಟ್ಯ , ಹೆಜ್ಜೆಗಾರಿಕೆ ಹಾಗೂ ಸತತವಾಗಿ ಧಿಗಿಣಗಳ ಮೂಲಕ ವೃತ್ತಿಪರ ಕಲಾವಿದರ ಮಟ್ಟದಲ್ಲಿ ಪ್ರಸ್ತುತಿ ನೀಡುವಲ್ಲಿ ಸಫಲಳಾಗಿದ್ದಾಳೆ . ಈಗಲೂ ದಿವಾಕರ ರೈಯವರ ಪುಂಡುವೇಷವನ್ನೇ ಮಾದರಿಯಾಗಿಸಿಕೊಂಡಿರುವ ದಿಶಾ , ದಿವಾಕರ ರೈಯವರು ಪಾತ್ರಗಳನ್ನು ನಿರ್ವಹಿಸುವಾಗ , ಅವರ ಕಾಲ ಹೆಜ್ಜೆಯನ್ನು ನೋಡಿಯೇ , ಅವರ ಮುಂದಿನ ಹೆಜ್ಜೆ ಯಾವುದು ಎಂಬುದನ್ನು ಗುರುತಿಸುವಷ್ಟು ಸೂಕ್ಷ್ಮತೆ ಹೊಂದಿದ್ದಾಳೆ .ಪ್ರಸ್ತುತ ‌ಮಹಿಳಾ ಯಕ್ಷಗಾನ ಕಲಾವಿದರಲ್ಲಿ ಪ್ರಸಿಧ್ದಿಯ ತುತ್ತತುದಿಯ ಅಂಚಿನಲ್ಲಿದ್ದರೂ , ತಾನಿನ್ನೂ ಅಭ್ಯಾಸಿಯೇ ಎಂದು ಭಾವಿಸಿರುವ ದಿಶಾ , ಇತ್ತೀಚೆಗೆ ಮಾತುಗಾರಿಕೆ ಹಾಗೂ ರಾಜ ವೇಷಗಳ ಬಗೆಗೆ ಹೆಚ್ಚಿನ ಪ್ರಾವಿಣ್ಯತೆ ಪಡೆಯಲು ಸುಪ್ರಸಿದ್ಧ ವೇಷಧಾರಿ ಹಾಗೂ ಯಕ್ಷಗಾನ ಗುರುಗಳಾದ ಅಡ್ಕ ರಾಕೇಶ್ ರೈಯವರಲ್ಲಿ ಶಿಷ್ಯೆಯಾಗಿ ಅಭ್ಯಸಿಸುತ್ತಿದ್ದಾಳೆ . ಯಾವುದೇ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಬಲ್ಲ ದಿಶಾ ಯಕ್ಷಲೋಕಕ್ಕೊಂದು ಅನುಪಮ ಕೊಡುಗೆ .
ಸಹ್ಯಾದ್ರಿ ಕಾಲೇಜಿನಲ್ಲಿ ಎಂ.ಬಿ.ಎ. ವಿದ್ಯಾರ್ಥಿಯಾಗಿರುವ ದಿಶಾ ಭಾಷಣ , ನೃತ್ಯ , ನಿರೂಪಣೆ ಹಾಗೂ ಸಮಾಜ ಸೇವೆಗಳಲ್ಲೂ ತೊಡಗಿಸಿಕೊಂಡಿದ್ದಾಳೆ . ಉತ್ತಮ ಕ್ರೀಟಾಪಟುವಾಗಿದ್ದು ಓದಿನಲ್ಲೂ ಸದಾ ಮುಂದೆ ಇದ್ದು ಪಿಯುಸಿಯಲ್ಲಿ 93 % ಅಂಕ ಗಳಿಸಿದ ಸಾಧನೆ ಮಾಡಿದ್ದಾಳೆ . ಕಾಲೇಜಿನ ಗ್ರೂಪ್ ಸೋಷಿಯಲ್ ತಂಡದ ನಾಯಕಿಯಾಗಿ ಹಲವಾರು ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾಳೆ . ಇದರ ಅಂಗವಾಗಿಯೇ ಕಳೆದ ವರ್ಷ ಅತ್ತಾವರದಲ್ಲಿ ದಾರಿಬದಿಯಲ್ಲಿ ಕಡ್ಲೆಕಾಯಿ ಮಾರುತ್ತಿದ್ದ ವೃದ್ಧೆಯೊಬ್ಭಳಿಗೆ ಆ ದಿನ ರಜೆ ಮಾಡಲು ಹೇಳಿ , ವೃದ್ಧೆಯ ಕಡ್ಲೆಕಾಯಿಯನ್ನು ತನ್ನ ತಂಡದ ಮೂಲಕ ಸಂಜೆಯ ತನಕ ತಾನೇ ಸ್ವತಃ ಮಾರಿ ಆ ವೃದ್ಧೆಗೆ ಸಹಾಯ ಮಾಡಿದ್ದು ಜಾಲತಾಣದಲ್ಲಿ ವೈರಲ್ ಆಗಿ ಸಂಚಲನ ಮೂಡಿಸಿತ್ತು . ಭಾರತದ ಪ್ರಧಾನಿಗಳಾದ ನರೇಂದ್ರ ಮೋದಿಯವರ ” ಸ್ವಚ್ಚ ಭಾರತ ” ಪರಿಕಲ್ಪನೆಯಲ್ಲೂ ಮುಂಚೂಣಿಯಲ್ಲಿ ಕಾಣಿಸಿಕೊಂಡು , ಸ್ವಚ್ಚತೆಯ ಮಹತ್ವವನ್ನು ಸಾರುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಖ್ಯಾತರಾಗಿದ್ದಾಳೆ . ರಾಷ್ಟ್ರೀಯ ವಿಚಾರ ಧಾರೆಗಳು , ದೇಶಭಕ್ತಿಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿರುವ ದಿಶಾ , ಭಾರತೀಯ ಸಂಸ್ಕೃತಿಯ ಪ್ರಬಲ ಪ್ರತಿಪಾದಕಳು .ರಾಷ್ಟ್ರೀಯ ವಿಚಾರ ಧಾರೆಯನ್ನು ಹೊಂದಿರುವ ರಾಜಕೀಯ ಪಕ್ಷದಲ್ಲಿ ತೆರೆಮರೆಯಲ್ಲಿ ಸಕ್ರಿಯಳಾಗಿದ್ದಾಳೆ . ” ತನ್ನತನವನ್ನು ಬಲಿಗೊಟ್ಟು ಜನಪ್ರಿಯತೆ ಗಳಿಸುವ ಮನಸ್ಸತ್ವ ತನ್ನದಲ್ಲ ” ಎಂಬ ದಿಶಾಳ ಅಭಿಪ್ರಾಯ ಸಾಧುವೂ ಹೌದು .” ರಾಧಾವಿಲಾಸ ” ಯಕ್ಷಗಾನ ನೃತ್ಯ ರೂಪಕದಲ್ಲಿ ಪಟ್ಲ ಸತೀಶ್ ಶೆಟ್ಟಿ , ಸತ್ಯನಾರಾಯಣ ಪುಣಿಚಿತ್ತಾಯ , ರವಿಚಂದ್ರ ಕನ್ನಡಿಕಟ್ಟೆ , ಗಿರೀಶ್ ರೈ ಕಕ್ಕೆಪದವು ಮುಂತಾದ ಖ್ಯಾತನಾಮ ಭಾಗವತರ ಭಾಗವತಿಕೆಯಲ್ಲಿ ತನ್ನ ಅಕ್ಕ ಡಾ.ವರ್ಷಾ ಶೆಟ್ಟಿ , ಗುರುಗಳಾದ ರಕ್ಷಿತ್ ಶೆಟ್ಟಿಯವರ ರಾಧೆಗೆ ಸರಿಸಮಾನವಾಗಿ ಶ್ರೀಕೃಷ್ಣನ ಪಾತ್ರ ನಿರ್ವಹಿಸಿ ನೂರಾರು ಪ್ರದರ್ಶನ ನೀಡಿದ್ದಾಳೆ . “ರಾಧಾವಿಲಾಸ ” ವು ಮಾತುಗಾರಿಕೆಯಿಲ್ಲದೇ ಸುಮಾರು 45 ನಿಮಿಷಗಳಷ್ಟು ನಾಟ್ಯದಿಂದಲೇ ಸಾಗುವ ನೃತ್ಯರೂಪಕವಾಗಿದ್ದು , ಅಷ್ಟು ದೀರ್ಘ ಕಾಲವನ್ನು ನಾಟ್ಯದಿಂದಲೇ ತುಂಬಿಸುವ ಕ್ಷಮತೆಯನ್ನು ದಿಶಾ ಹೊಂದಿದ್ದಾಳೆ ಎಂಬುದು ಉಲ್ಲೇಖನೀಯ .
ಕಾಲೇಜಿನ ಓದು , ಅಸೈನ್ಮೆಂಟ್ ನೊಂದಿಗೆ ಯಕ್ಷಗಾನ ಕ್ಷೇತ್ರದ ಚಟುವಟಿಕೆಗಳನ್ನು ಸಮನ್ವಯತೆಯೊಂದಿಗೆ ಹೊಂದಿಸಿ ಹೋಗುವಲ್ಲಿ ದಿಶಾಳ ಸಾಮರ್ಥ್ಯ ಮೆಚ್ಚಲೇಬೇಕು . ಭಾರತದ ಪ್ರಧಾನ ಮಂತ್ರಿಗಳ ಮಹತ್ವಾಕಾಂಕ್ಷೆಯ ” ವೋಕಲ್ ಫಾರ್ ಲೋಕಲ್ ” ಪರಿಕಲ್ಪನೆಯನ್ನು ಸಾದಾರಪಡಿಸುವ ಅಂಗವಾಗಿ ತನ್ನದೇ ಆದ ” ಪೇಜ್ ” ರಚಿಸಿ ಆ ಮೂಲಕ 35 ಕ್ಕೂ ಮಿಕ್ಕಿದ ಹಲವಾರು ಭಾರತೀಯ ಉತ್ಪಾದನಾ ವ್ಯವಹಾರ ಸಂಸ್ಥೆಗಳಿಗೆ ಉಚಿತವಾಗಿ ” ಪ್ರೊಮೋಷನ್ ” ನೀಡಿರುವುದಲ್ಲದೇ , ಇಂದು ಈ ಪೇಜ್ ಅತ್ಯಂತ ಹೆಚ್ಚು ಫಾಲೋವರ್ಸ್ ಹೊಂದಿದ್ದು ಮುಂಚೂಣಿಯಲ್ಲಿದೆ .
ಇಂಗ್ಲಿಷ್ ಭಾಷೆಯಲ್ಲಿ ಉತ್ತಮ ವಾಕ್ ಪ್ರಭುತ್ವ ಹೊಂದಿರುವ ಕಾರಣ 20 ಕ್ಕೂ ಹೆಚ್ಚಿನ ವಿದ್ಯಾಸಂಸ್ಥೆಗಳಲ್ಲಿ ” ಮೋಟಿವೇಷನ್ ಸ್ಪೀಕರ್ ” ಆಗಿ , ಹೊಸ ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ಹುಟ್ಟಿಸುವಲ್ಲಿ ತಮ್ಮ ಪ್ರತಿಭಾ ಸಾಮರ್ಥ್ಯ ತೋರ್ಪಡಿಸಿದ್ದಾಳೆ . ಮುಂದೆ ಉತ್ತಮ ನೌಕರಿ ದೊರೆತರೂ , ಯಕ್ಷಗಾನಕ್ಕೇ ತನ್ನ ಪ್ರಥಮ ಆದ್ಯತೆ ಎಂಬ ನಿಲುವು ಹೊಂದಿರುವ ದಿಶಾ , ” ಯಕ್ಷಗಾನ ತನ್ನ ಉಸಿರು ” ಎಂದು ಹೇಳುವ ಮೂಲಕ , ಕರಾವಳಿಯ ಹೆಮ್ಮೆಯ ಕಲೆಯ ಬಗ್ಗೆ ಅಭಿಮಾನ ತಾಳಿದ್ದಾಳೆ . ಸುರತ್ಕಲ್ ನಲ್ಲಿ ” ಯಕ್ಷ ಯಾಮಿನಿ ಕಲಾತಂಡ ” ವನ್ನು ಸ್ಥಾಪಿಸಿ ಈ ಸಂಸ್ಥೆಯ ಮೂಲಕ ನೂರಾರು ಪ್ರದರ್ಶನ ನೀಡಿದ್ದು , ಹಲವಾರು ಕಡೆಗಳಲ್ಲಿ ಸಂಮಾನವೂ ಲಭಿಸಿದೆ . ಹಲವಾರು ಯಕ್ಷಗಾನ ಸ್ಪರ್ಧೆಗಳಲ್ಲಿ ವಿಜೇತಳಾಗಿರುವುದೂ ಗಮನಾರ್ಹ. ಸಂಮಾನಳಿಗೆ ಆಶಿಸದಿರುವ ದಿಶಾ , ನೇರ ನುಡಿಯ , ಕಟ್ಟುನಿಟ್ಟಿನ ಅಭಿಪ್ರಾಯ ಹೊಂದಿರುವುದಲ್ಲದೇ , ತನಗೆ ಸರಿ ಕಾಣದ್ದನ್ನು ಯಾವುದೇ ಮುಲಾಜಿಲ್ಲದೇ ಖಂಡಿಸುವ ವಿಶಿಷ್ಟ ಜಾಯಮಾನವುಳ್ಳವಳು . ಯಕ್ಷಗಾನದ ಪ್ರಾಥಮಿಕ ಅಂಗವಾದ ಪೂರ್ವರಂಗವನ್ನು ಸಂಪೂರ್ಣವಾಗಿ ಅಭ್ಯಸಿಸದೇ , ಕೇವಲ ಒಂದು ಕಾರ್ಯಕ್ರಮಕ್ಕಾಗಿ ಯಕ್ಷಗಾನ ಕಲಿಯುತ್ತಿರುವುದರ ಬಗ್ಗೆ , ವೇಷ ಧರಿಸದೇ , ಯಕ್ಷಗಾನ ಪ್ರದರ್ಶನ ನೀಡುವ ” ಪ್ರಹಸನ ” ದ ಬಗ್ಗೆ ತೀವ್ರವಾದ ವಿರೋಧ ವ್ಯಕ್ತಪಡಿಸುವ ಇವಳ ನಿಲುವು ಸರ್ವದಾ ಸ್ವಾಗತಾರ್ಹ . ಈ ನಿಲುವನ್ನು ಯಕ್ಷಗಾನದ ಅಭಿಮಾನಿಯಾಗಿ ನಾನೂ ಸಮರ್ಥಿಸುತ್ತೇನೆ . ( ಇತ್ತೀಚೆಗೆ ಒಂದೆರಡು ಟಿ.ವಿ.ಸಂದರ್ಶನದಲ್ಲಿ ಈ ಕುರಿತಾಗಿ ದಿಶಾ ಪ್ರಬಲವಾದ ವಿರೋಧ ವ್ಯಕ್ತ ಪಡಿಸಿದ್ದನ್ನು ಉಲ್ಲೇಖಿಸಲೇಬೇಕು ) . ಚಲನಚಿತ್ರಗಳಲ್ಲೂ , ಯಕ್ಷಗಾನವನ್ನು ವಾಣಿಜ್ಯ ಉದ್ದೇಶಗಳಿಗೋಸ್ಕರ ಬಳಸುವಲ್ಲಿ ದುರುಪಯೋಗ ಆಗುತ್ತಿರುವುದರ ಬಗ್ಗೆಯೂ ವಿರೋಧವನ್ನು ಹೊಂದಿದ್ದಾರೆ . ಬೆಂಗಳೂರಿನಂಥಹ ಮಹಾನಗರದ ಪ್ರತಿಷ್ಠಿತ ಹೊಟೇಲ್ , ವಾಣಿಜ್ಯ ಸಂಸ್ಥೆಗಳಲ್ಲೂ ದಿಶಾಳ ಶ್ರೀಕೃಷ್ಣ ಪಾತ್ರದ ಫೋಟೋಗಳು ರಾರಾಜಿಸುತ್ತಿರುವುದು ಗಮನಾರ್ಹ

ಇತ್ತೀಚಿಗೆ ಮಂಗಳೂರಿನ ಸಂಘನಿಕೇತನದಲ್ಲಿ ಅಖಿಲ ಭಾರತ ಮಟ್ಟದ ಕೇಂದ್ರೀಯ ಬೈಠಕ್ ಜರುಗಿತ್ತು . ದೇಶ ವಿದೇಶಗಳ ಪ್ರತಿನಿದಿಗಳು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ , ಕರಾವಳಿಯ ಕಲೆಯಾದ ಯಕ್ಷಗಾನವನ್ನು ಪರಿಚಯಿಸಲು ರಸ್ತೆಯ ಎರಡೂ ಬದಿಗಳಲ್ಲೂ ದಿಶಾಳ ಯಕ್ಷಗಾನ ವೇಷದ ಹತ್ತಾರು ಕಟೌಟ್ ಗಳನ್ನು ಹಾಕಲಾಗಿತ್ತು . ಅದನ್ನು ನೋಡಿದ ನೂರಾರು ಪ್ರತಿನಿಧಿಗಳು ಆ ಪೋಟೋಗಳಲ್ಲಿಯ Expression ನೋಡಿ ನನ್ನಲ್ಲಿ ಈ ಕಲಾವಿದ ಯಾರು ಎಂದು ಕೇಳಿದಾಗ ದಿಶಾ ಎಂಬ ಹೆಣ್ಣು ಹುಡುಗಿ ಎಂದು ಹೇಳಿದಾಗ ಅವರೆಲ್ಲರೂ ” ಗ್ರೇಟ್ , ಗ್ರೇಟ್ ” ಎಂದು ಉದ್ಗರಿಸಿದ್ದರು . ಈಗಾಗಲೇ ಟಿ.ವಿ.ಸೀರಿಯಲ್ , ಕನ್ನಡ – ತುಳು ಚಲನಚಿತ್ರಗಳಲ್ಲಿ ಅವಕಾಶ ಹುಡುಕಿಕೊಂಡು ಬಂದರೂ , ಅದನ್ನು ಸ್ಪಷ್ಟವಾಗಿ ನಿರಾಕರಿಸಿರುವ ದಿಶಾ ಮುಂದೆ ಯಾವುದಾದರೂ ಪ್ರತಿಷ್ಠಿತ ಸಂಸ್ಥೆಯ ಮಾರುಕಟ್ಟೆ ವಿಭಾಗದ ಅಧಿಕಾರಿಯಾಗಬೇಕು ಎಂಬ ಹಂಬಲ ಹೊಂದಿದ್ದಾಳೆ . ದಿಶಾಳಿಗೆ ಶುಭವನ್ನು ಕೋರುತ್ತೇನೆ .

ಎಂ.ಶಾಂತರಾಮ ಕುಡ್ವ

ಮೂಡಬಿದಿರೆ

0
Shares
  • Share On Facebook
  • Tweet It




Trending Now
ಟಾಯ್ಲೆಟಲ್ಲಿ ಮಹಿಳಾ ಉದ್ಯೋಗಿಗಳ ವಿಡಿಯೋ ರೆಕಾರ್ಡ್... ಇನ್ಫೋಸಿಸ್ ಉದ್ಯೋಗಿ ಬಂಧನ!
Tulunadu News July 2, 2025
ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ನಾಮಕರಣ ಮಾಡಬೇಕಾ?
Tulunadu News July 2, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಟಾಯ್ಲೆಟಲ್ಲಿ ಮಹಿಳಾ ಉದ್ಯೋಗಿಗಳ ವಿಡಿಯೋ ರೆಕಾರ್ಡ್... ಇನ್ಫೋಸಿಸ್ ಉದ್ಯೋಗಿ ಬಂಧನ!
    • ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ನಾಮಕರಣ ಮಾಡಬೇಕಾ?
    • ಪ್ರತಿ ತಿಂಗಳು ಪತ್ನಿಗೆ 4 ಲಕ್ಷ ಕೊಡಿ - ಕ್ರಿಕೆಟರ್ ಶಮಿಗೆ ಹೈಕೋರ್ಟ್ ಆದೇಶ!
    • ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
    • ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?
    • ಸಂವಿಧಾನದಿಂದ "ಜಾತ್ಯಾತೀತತೆ" ಮತ್ತು "ಸಮಾಜವಾದ" ಶಬ್ದಗಳನ್ನು ತೆಗೆಯುವ ಬಗ್ಗೆ ಚರ್ಚೆ ನಡೆಯಲಿ - ಆರ್ ಎಸ್ ಎಸ್
    • PFI ಟಾರ್ಗೆಟ್- 950 ಜನರ ಹಿಟ್ ಲಿಸ್ಟ್ ರೆಡಿ! NIA ಕೋರ್ಟ್ ನಲ್ಲಿ ವಕೀಲರಿಂದ ಮಾಹಿತಿ...
  • Popular Posts

    • 1
      ಟಾಯ್ಲೆಟಲ್ಲಿ ಮಹಿಳಾ ಉದ್ಯೋಗಿಗಳ ವಿಡಿಯೋ ರೆಕಾರ್ಡ್... ಇನ್ಫೋಸಿಸ್ ಉದ್ಯೋಗಿ ಬಂಧನ!
    • 2
      ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ನಾಮಕರಣ ಮಾಡಬೇಕಾ?
    • 3
      ಪ್ರತಿ ತಿಂಗಳು ಪತ್ನಿಗೆ 4 ಲಕ್ಷ ಕೊಡಿ - ಕ್ರಿಕೆಟರ್ ಶಮಿಗೆ ಹೈಕೋರ್ಟ್ ಆದೇಶ!
    • 4
      ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • 5
      ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!

  • Privacy Policy
  • Contact
© Tulunadu Infomedia.

Press enter/return to begin your search