ಅದ್ಭುತ ಪ್ರತಿಭೆಯ ದಿಶಾ ಸಿ.ಶೆಟ್ಟಿ ಕಟ್ಲ.
ಯಕ್ಷಗಾನವನ್ನು ” ಗಂಡುಕಲೆ ” ಎಂದು ಹೇಳುವ ಮಾತಿದೆ . ಈ ವಾಕ್ಯವು ತಪ್ಪು ಕಲ್ಪನೆಗೆ ಅವಕಾಶ ಮಾಡಿ ಕೊಟ್ಟಿದೆ . ಇಲ್ಲಿ ಗಂಡು ಎಂದರೆ ಬಲಿಷ್ಟ ಎಂಬ ಅರ್ಥವೇ ಹೊರತು ಗಂಡಸರು ಮಾತ್ರ ನಿರ್ವಹಿಸಬೇಕಾದ ಕಲೆ ಎಂದು ಅರ್ಥೈಸಬಾರದು . ಪ್ರಾಕೃತಿಕವಾಗಿ , ಶಾರೀರಿಕವಾಗಿ ಹೆಣ್ಣಿಗಿಂತಲೂ ಗಂಡೇ ಬಲಿಷ್ಟನಾಗಿರುವ ಕಾರಣ ” ಶ್ರೇಷ್ಠ ” ಎಂಬ ಅರ್ಥದಲ್ಲಿ ” ಗಂಡುಕಲೆ ” ಯೇ ಹೊರತು , ಯಕ್ಷಗಾನ ಕೇವಲ ಗಂಡಸರ ಕಲೆ , ಹೆಣ್ಮಕ್ಕಳಿಗಲ್ಲಾ ಎಂಬ ಅರ್ಥದಲ್ಲಿ ಅಲ್ಲ ಎಂಬುದನ್ನು ಒಪ್ಪಿಕೊಳ್ಳಲೇಬೇಕು .
ಯಕ್ಷರಂಗಕ್ಕೆ ಹೆಣ್ಮಕ್ಕಳ ಪ್ರವೇಶ ಇತ್ತೀಚಿನ ಬೆಳವಣಿಗೆಯಲ್ಲ . ಎಷ್ಟೋ ವರ್ಷಗಳ ಹಿಂದೆಯೇ ಹೆಣ್ಣುಮಕ್ಕಳು ಯಕ್ಷಗಾನದ ಪಾತ್ರ ನಿರ್ವಹಿಸಿದ ದಾಖಲೆಯಿದೆ .1930 ರ ಆಸುಪಾಸಿನಲ್ಲೇ ಸುಪ್ರಸಿದ್ಧ ಅರ್ಥಧಾರಿಗಳಾದ ಕವಿ ಭೂಷಣ ವೆಂಕಪ್ಪ ಶೆಟ್ಟರ ಕಿರಿಯ ಸಹೋದರಿ ತಲ್ಲಂಗಡಿ ಪರಮೇಶ್ವರಿ ಶೆಡ್ತಿಯವರು ಸುಪ್ರಸಿದ್ಧ ತಾಳಮದ್ದಳೆ ಕೂಟಗಳಲ್ಲಿ ಅರ್ಥಧಾರಿಗಳಾಗಿ ಮೆರೆದಿದ್ದರು . ಸುಪ್ರಸಿದ್ಧ ಮದ್ದಲೆವಾದಕರಾದ ಶತಾಯುಷಿ ಹಿರಿಯಡ್ಕ ಗೋಪಾಲರಾಯರು ಬಾಲಕನಾಗಿರುವ ಕಾಲದಲ್ಲಿ ಯಮುನಾ ಬಾಯಿ ಎಂಬ ಮಹಿಳೆಯೋರ್ವರು ಮದ್ದಲೆ ವಾದಕರಾಗಿ ಹೆಸರು ಗಳಿಸಿದ್ದರು . ಇವರ ಕಾಲಮಾನವೂ 1920 ರ ಆಸುಪಾಸಿನಲ್ಲಿರಬಹುದು . 1970 ದಶಕದಲ್ಲಿ ಶ್ರೀಮತಿ ನರ್ಮದಾ ಶಿಬರೂರಾಯರು ಭಾಗವತಿಕೆ ಕ್ಷೇತ್ರದಲ್ಲಿ ಮಿಂಚಿದ್ದರು . 1975 ರ ಆಸುಪಾಸಿನಲ್ಲಿ ಶ್ರೀಮತಿ ಲೀಲಾವತಿ ಬೈಪಡಿತ್ತಾಯರು 40 ವರ್ಷಗಳಷ್ಟು ಕಾಲ ವೃತ್ತಿಪರ ಭಾಗವತರಾಗಿ ಮೇಳಗಳಲ್ಲಿ ವಿಜೃಂಭಿಸಿದ್ದರು .(ಇತ್ತೀಚೆಗೆ ನಿವೃತ್ತರಾಗಿದ್ದಾರೆ ) ಈಗಲೂ ಯಕ್ಷಗಾನ ರಂಗಕ್ಕೆ ಸಾಕಷ್ಟು ಮಹಿಳೆಯರು ಪ್ರವೇಶ ಮಾಡಿದ್ದಾರೆ , ಮಾಡುತ್ತಲೂ ಇದ್ದಾರೆ . ಹಿಮ್ಮೇಳ , ಮುಮ್ಮೇಳಗಳಲ್ಲಿ ಸಾಧಕರಾಗಿ ಹೆಸರು ಗಳಿಸಿದ್ದಾರೆ .
ದಿಶಾ ಸಿ.ಶೆಟ್ಟಿ ಕಟ್ಲ ಅಂತಹ ಅಸಾಮಾನ್ಯ ಸಾಧಕರಲ್ಲಿ ಓರ್ವಳಾಗಿ ಗುರುತಿಸಿಕೊಂಡಿದ್ದಾಳೆ . ಯಕ್ಷಗಾನ, ನೃತ್ಯ , ಓದು , ಕ್ರೀಡೆ , ನಿರೂಪಣೆ , ಭಾಷಣ , ಸಮಾಜ ಸೇವೆ – ಹೀಗೆ ಹಲವಾರು ಕ್ಷೇತ್ರಗಳಲ್ಲೂ ಸಮಾನವಾಗಿ ಮಿಂಚಿದ ದಿಶಾ ಚಿಕ್ಕ ಪ್ರಾಯದಲ್ಲೇ ದೊಡ್ಡ ಸಾಧನೆ ಮಾಡಿದ ಸಾಧಕಳು .
14.03.1998ರಲ್ಲಿ ಚಂದ್ರಶೇಖರ – ಪ್ರಮದಾ ಶೆಟ್ಟಿ ದಂಪತಿಗಳ ಸುಪುತ್ರಿಯಾಗಿ ಸುರತ್ಕಲ್ ನಲ್ಲಿ ಜನಿಸಿದ ದಿಶಾ , ಬಾಲ್ಯದಿಂದಲೇ ತುಂಬಾ ಪ್ರತಿಭಾವಂತೆ ಎಂದು ಗುರುತಿಸಿಕೊಂಡವಳು . ಇವಳ ಕುಟುಂಬವೇ ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಕಾರಣ ದಿಶಾಳಿಗೂ ಯಕ್ಷಗಾನದ ನಂಟು ಬಾಲ್ಯದಲ್ಲೇ ಅಂಟಿಕೊಂಡಿತು .ತನ್ನ 10 ನೇ ವಯಸ್ಸಿನಲ್ಲೇ ಅಗ್ನಿಯ ಪಾತ್ರ ನಿರ್ವಹಿಸಿ ಮೆಚ್ಚುಗೆ ಗಳಿಸಿದ್ದರು . ಇವಳ ತಾಯಿ ಶ್ರೀಮತಿ ಪ್ರಮದಾ ಶೆಟ್ಟಿ ಹಾಗೂ ಚಿಕ್ಕಮ್ಮ ಶುಭದಾ ಶೆಟ್ಟಿಯವರು 30 ವರ್ಷಗಳ ಹಿಂದೆಯೇ ಯಕ್ಷಗಾನ ಗುರುಗಳಾದ ಗಣೇಶಪುರ ಗಿರೀಶ ನಾವಡರಿಂದ ಶಾಸ್ತ್ರೋಕ್ತವಾಗಿ ಯಕ್ಷಗಾನದ ಹೆಜ್ಜೆಗಾರಿಕೆ ಕಲಿತ ಹವ್ಯಾಸೀ ಕಲಾವಿದರು . ಪ್ರಮದಾ ಶೆಟ್ಟಿಯವರು ಪುಂಡು ಪಾತ್ರಗಳಲ್ಲಿ ಮಿಂಚಿದರೆ , ಶುಭದಾ ಶೆಟ್ಟಿಯವರು ಯಾವುದೇ ಪಾತ್ರಗಳನ್ನು ನಿರ್ವಹಿಸಿದ ಅನುಭವಿಗಳು. ಒಮ್ಮೆ ತನ್ನ ತಾಯಿಯೊಂದಿಗೆ ಯಕ್ಷಗಾನ ಕಾರ್ಯಕ್ರಮ ವೀಕ್ಷಿಸಲು ಹೋಗಿದ್ದೇ ದಿಶಾಳಿಗೆ ಯಕ್ಷಗಾನದ ನಂಟು ಅಂಟಲು ಕಾರಣವಾಯಿತು . ಅಂದು ಯಕ್ಷಗಾನದ ಸುಪ್ರಸಿದ್ಧ ಪುಂಡು ವೇಷಧಾರಿಯಾಗಿದ್ದ ದಿವಾಕರ ರೈ ಸಂಪಾಜೆಯವರ ಅಭಿಮನ್ಯು ಪಾತ್ರ ನೋಡಿದ ದಿಶಾ , ತುಂಬಾ ಆಕರ್ಷಿತಳಾಗಿ ತಾನೂ ಯಕ್ಷಗಾನದ ಪಾತ್ರಧಾರಿ ಆಗಬೇಕೆಂದು ಸಂಕಲ್ಪಿಸಿದಳು . ತನ್ನ ತಾಯಿಯಾದ ಪ್ರಮದಾ ಶೆಟ್ಟಿಯವರಿಂದ ಯಕ್ಷಗಾನದ ಪ್ರಾಥಮಿಕ ಹೆಜ್ಜೆಗಾರಿಕೆ ಕಲಿತು , ಮುಂದೆ ಇತರ ಕಲಾವಿದರ ಪ್ರಸ್ತುತಿ ನೋಡಿಯೇ ಏಕಲವ್ಯನಂತೆ ಯಕ್ಷಗಾನದ ಸಂಪೂರ್ಣ ನಾಟ್ಯಗಳನ್ನು ಅಭ್ಯಸಿಸಿದಳು . ನಂತರ ಯಕ್ಷಗಾನ ಗುರುಗಳಾದ ರಕ್ಷಿತ್ ಶೆಟ್ಟಿ ಪಡ್ರೆಯವರಲ್ಲಿ ಶಿಷ್ಯೆಯಾಗಿ ಯಕ್ಷಗಾನದ ಸಂಪೂರ್ಣ ಪಟ್ಟುಗಳನ್ನು ಕರಗತ ಮಾಡಿಕೊಂಡಳು . ತನ್ನ 14 ನೇ ವಯಸ್ಸಿನಲ್ಲಿ ಪೂರ್ಣ ಪ್ರಮಾಣದ ಕಲಾವಿದೆಯಾಗಿ ಯಕ್ಷಗಾನ ರಂಗ ಪ್ರವೇಶಿಸಿ ಖ್ಯಾತಳಾದ ದಿಶಾ , ನಂತರ ಹಿಮ್ಮುಖಳಾಗಲೇಯಿಲ್ಲ . ಮೂರು ವರ್ಷಗಳ ಹಿಂದೆ ಉಪ್ಪಿನಂಗಡಿಯ ” ಯಕ್ಷಸಂಗಮ ” ದವರ ವಾರ್ಷಿಕೋತ್ಸವದಲ್ಲಿ , ಸುಪ್ರಸಿದ್ಧ ಪುಂಡುವೇಷಧಾರಿಗಳಾಗಿರುವ ಲೋಕೇಶ ಮುಚ್ಚೂರರ ಎದುರು ಪಾತ್ರದಲ್ಲಿ ಅದ್ಭುತವಾಗಿ ನಿರ್ವಹಿಸಿ , ಸುದ್ದಿಯಾದ ದಿಶಾ ನಂತರ ನೂರಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಪ್ರಸಿದ್ಧರಾದರು . ಹೆಣ್ಣಾಗಿ ಹುಟ್ಟಿದರೂ , ಗಂಡು ಪಾತ್ರಗಳಲ್ಲೇ ಹೆಚ್ಚಾಗಿ ಮಿಂಚಿರುವ ದಿಶಾ , “ಯಕ್ಷಕುವರಿ ” ಎಂದು ಅಭಿಮಾನಿಗಳಿಂದ ಕರೆಸಿಕೊಂಡಿದ್ದಾಳೆ . ಅಭಿಮನ್ಯು ,ಬಬ್ರುವಾಹನ , ಭಾರ್ಗವ , ಶ್ರೀಕೃಷ್ಣ , ಶ್ರೀರಾಮ , ಸುಧನ್ವ , ಲಕ್ಷ್ಮಣ , ವಿಷ್ಣು , ಕುಶ , ಅಶ್ವತ್ಥಾಮ , ಚಂಡ , ರುದ್ರಕೋಪ ಮುಂತಾದ ಪುಂಡುವೇಷಗಳಲ್ಲದೇ ಕೋಲು ಕಿರೀಟದ ಪಾತ್ರಗಳಲ್ಲೂ ಮಿಂಚಿರುವ ದಿಶಾ , ಓರ್ವ ಅಪರೂಪದ ಕಲಾವಿದೆಯಾಗಿ ಗುರುತಿಸಿಕೊಂಡಿದ್ದಾಳೆ .ಇತ್ತೀಚೆಗೆ ಮುಂಬೈ ಮಹಾನಗರಿಯಲ್ಲಿ ವೃಷಭಾಸುರನಾಗಿ ಕೋಲು ಕಿರೀಟದಲ್ಲಿ ಪಾತ್ರ ನಿರ್ವಹಿಸಿ , ಅಭಿಮಾನಿಗಳ ಮನ ಗೆದ್ದಿದ್ದರು .ಪಾರಂಪರಿಕ ನಾಟ್ಯ , ಹೆಜ್ಜೆಗಾರಿಕೆ ಹಾಗೂ ಸತತವಾಗಿ ಧಿಗಿಣಗಳ ಮೂಲಕ ವೃತ್ತಿಪರ ಕಲಾವಿದರ ಮಟ್ಟದಲ್ಲಿ ಪ್ರಸ್ತುತಿ ನೀಡುವಲ್ಲಿ ಸಫಲಳಾಗಿದ್ದಾಳೆ . ಈಗಲೂ ದಿವಾಕರ ರೈಯವರ ಪುಂಡುವೇಷವನ್ನೇ ಮಾದರಿಯಾಗಿಸಿಕೊಂಡಿರುವ ದಿಶಾ , ದಿವಾಕರ ರೈಯವರು ಪಾತ್ರಗಳನ್ನು ನಿರ್ವಹಿಸುವಾಗ , ಅವರ ಕಾಲ ಹೆಜ್ಜೆಯನ್ನು ನೋಡಿಯೇ , ಅವರ ಮುಂದಿನ ಹೆಜ್ಜೆ ಯಾವುದು ಎಂಬುದನ್ನು ಗುರುತಿಸುವಷ್ಟು ಸೂಕ್ಷ್ಮತೆ ಹೊಂದಿದ್ದಾಳೆ .ಪ್ರಸ್ತುತ ಮಹಿಳಾ ಯಕ್ಷಗಾನ ಕಲಾವಿದರಲ್ಲಿ ಪ್ರಸಿಧ್ದಿಯ ತುತ್ತತುದಿಯ ಅಂಚಿನಲ್ಲಿದ್ದರೂ , ತಾನಿನ್ನೂ ಅಭ್ಯಾಸಿಯೇ ಎಂದು ಭಾವಿಸಿರುವ ದಿಶಾ , ಇತ್ತೀಚೆಗೆ ಮಾತುಗಾರಿಕೆ ಹಾಗೂ ರಾಜ ವೇಷಗಳ ಬಗೆಗೆ ಹೆಚ್ಚಿನ ಪ್ರಾವಿಣ್ಯತೆ ಪಡೆಯಲು ಸುಪ್ರಸಿದ್ಧ ವೇಷಧಾರಿ ಹಾಗೂ ಯಕ್ಷಗಾನ ಗುರುಗಳಾದ ಅಡ್ಕ ರಾಕೇಶ್ ರೈಯವರಲ್ಲಿ ಶಿಷ್ಯೆಯಾಗಿ ಅಭ್ಯಸಿಸುತ್ತಿದ್ದಾಳೆ . ಯಾವುದೇ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಬಲ್ಲ ದಿಶಾ ಯಕ್ಷಲೋಕಕ್ಕೊಂದು ಅನುಪಮ ಕೊಡುಗೆ .
ಸಹ್ಯಾದ್ರಿ ಕಾಲೇಜಿನಲ್ಲಿ ಎಂ.ಬಿ.ಎ. ವಿದ್ಯಾರ್ಥಿಯಾಗಿರುವ ದಿಶಾ ಭಾಷಣ , ನೃತ್ಯ , ನಿರೂಪಣೆ ಹಾಗೂ ಸಮಾಜ ಸೇವೆಗಳಲ್ಲೂ ತೊಡಗಿಸಿಕೊಂಡಿದ್ದಾಳೆ . ಉತ್ತಮ ಕ್ರೀಟಾಪಟುವಾಗಿದ್ದು ಓದಿನಲ್ಲೂ ಸದಾ ಮುಂದೆ ಇದ್ದು ಪಿಯುಸಿಯಲ್ಲಿ 93 % ಅಂಕ ಗಳಿಸಿದ ಸಾಧನೆ ಮಾಡಿದ್ದಾಳೆ . ಕಾಲೇಜಿನ ಗ್ರೂಪ್ ಸೋಷಿಯಲ್ ತಂಡದ ನಾಯಕಿಯಾಗಿ ಹಲವಾರು ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾಳೆ . ಇದರ ಅಂಗವಾಗಿಯೇ ಕಳೆದ ವರ್ಷ ಅತ್ತಾವರದಲ್ಲಿ ದಾರಿಬದಿಯಲ್ಲಿ ಕಡ್ಲೆಕಾಯಿ ಮಾರುತ್ತಿದ್ದ ವೃದ್ಧೆಯೊಬ್ಭಳಿಗೆ ಆ ದಿನ ರಜೆ ಮಾಡಲು ಹೇಳಿ , ವೃದ್ಧೆಯ ಕಡ್ಲೆಕಾಯಿಯನ್ನು ತನ್ನ ತಂಡದ ಮೂಲಕ ಸಂಜೆಯ ತನಕ ತಾನೇ ಸ್ವತಃ ಮಾರಿ ಆ ವೃದ್ಧೆಗೆ ಸಹಾಯ ಮಾಡಿದ್ದು ಜಾಲತಾಣದಲ್ಲಿ ವೈರಲ್ ಆಗಿ ಸಂಚಲನ ಮೂಡಿಸಿತ್ತು . ಭಾರತದ ಪ್ರಧಾನಿಗಳಾದ ನರೇಂದ್ರ ಮೋದಿಯವರ ” ಸ್ವಚ್ಚ ಭಾರತ ” ಪರಿಕಲ್ಪನೆಯಲ್ಲೂ ಮುಂಚೂಣಿಯಲ್ಲಿ ಕಾಣಿಸಿಕೊಂಡು , ಸ್ವಚ್ಚತೆಯ ಮಹತ್ವವನ್ನು ಸಾರುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಖ್ಯಾತರಾಗಿದ್ದಾಳೆ . ರಾಷ್ಟ್ರೀಯ ವಿಚಾರ ಧಾರೆಗಳು , ದೇಶಭಕ್ತಿಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿರುವ ದಿಶಾ , ಭಾರತೀಯ ಸಂಸ್ಕೃತಿಯ ಪ್ರಬಲ ಪ್ರತಿಪಾದಕಳು .ರಾಷ್ಟ್ರೀಯ ವಿಚಾರ ಧಾರೆಯನ್ನು ಹೊಂದಿರುವ ರಾಜಕೀಯ ಪಕ್ಷದಲ್ಲಿ ತೆರೆಮರೆಯಲ್ಲಿ ಸಕ್ರಿಯಳಾಗಿದ್ದಾಳೆ . ” ತನ್ನತನವನ್ನು ಬಲಿಗೊಟ್ಟು ಜನಪ್ರಿಯತೆ ಗಳಿಸುವ ಮನಸ್ಸತ್ವ ತನ್ನದಲ್ಲ ” ಎಂಬ ದಿಶಾಳ ಅಭಿಪ್ರಾಯ ಸಾಧುವೂ ಹೌದು .” ರಾಧಾವಿಲಾಸ ” ಯಕ್ಷಗಾನ ನೃತ್ಯ ರೂಪಕದಲ್ಲಿ ಪಟ್ಲ ಸತೀಶ್ ಶೆಟ್ಟಿ , ಸತ್ಯನಾರಾಯಣ ಪುಣಿಚಿತ್ತಾಯ , ರವಿಚಂದ್ರ ಕನ್ನಡಿಕಟ್ಟೆ , ಗಿರೀಶ್ ರೈ ಕಕ್ಕೆಪದವು ಮುಂತಾದ ಖ್ಯಾತನಾಮ ಭಾಗವತರ ಭಾಗವತಿಕೆಯಲ್ಲಿ ತನ್ನ ಅಕ್ಕ ಡಾ.ವರ್ಷಾ ಶೆಟ್ಟಿ , ಗುರುಗಳಾದ ರಕ್ಷಿತ್ ಶೆಟ್ಟಿಯವರ ರಾಧೆಗೆ ಸರಿಸಮಾನವಾಗಿ ಶ್ರೀಕೃಷ್ಣನ ಪಾತ್ರ ನಿರ್ವಹಿಸಿ ನೂರಾರು ಪ್ರದರ್ಶನ ನೀಡಿದ್ದಾಳೆ . “ರಾಧಾವಿಲಾಸ ” ವು ಮಾತುಗಾರಿಕೆಯಿಲ್ಲದೇ ಸುಮಾರು 45 ನಿಮಿಷಗಳಷ್ಟು ನಾಟ್ಯದಿಂದಲೇ ಸಾಗುವ ನೃತ್ಯರೂಪಕವಾಗಿದ್ದು , ಅಷ್ಟು ದೀರ್ಘ ಕಾಲವನ್ನು ನಾಟ್ಯದಿಂದಲೇ ತುಂಬಿಸುವ ಕ್ಷಮತೆಯನ್ನು ದಿಶಾ ಹೊಂದಿದ್ದಾಳೆ ಎಂಬುದು ಉಲ್ಲೇಖನೀಯ .
ಕಾಲೇಜಿನ ಓದು , ಅಸೈನ್ಮೆಂಟ್ ನೊಂದಿಗೆ ಯಕ್ಷಗಾನ ಕ್ಷೇತ್ರದ ಚಟುವಟಿಕೆಗಳನ್ನು ಸಮನ್ವಯತೆಯೊಂದಿಗೆ ಹೊಂದಿಸಿ ಹೋಗುವಲ್ಲಿ ದಿಶಾಳ ಸಾಮರ್ಥ್ಯ ಮೆಚ್ಚಲೇಬೇಕು . ಭಾರತದ ಪ್ರಧಾನ ಮಂತ್ರಿಗಳ ಮಹತ್ವಾಕಾಂಕ್ಷೆಯ ” ವೋಕಲ್ ಫಾರ್ ಲೋಕಲ್ ” ಪರಿಕಲ್ಪನೆಯನ್ನು ಸಾದಾರಪಡಿಸುವ ಅಂಗವಾಗಿ ತನ್ನದೇ ಆದ ” ಪೇಜ್ ” ರಚಿಸಿ ಆ ಮೂಲಕ 35 ಕ್ಕೂ ಮಿಕ್ಕಿದ ಹಲವಾರು ಭಾರತೀಯ ಉತ್ಪಾದನಾ ವ್ಯವಹಾರ ಸಂಸ್ಥೆಗಳಿಗೆ ಉಚಿತವಾಗಿ ” ಪ್ರೊಮೋಷನ್ ” ನೀಡಿರುವುದಲ್ಲದೇ , ಇಂದು ಈ ಪೇಜ್ ಅತ್ಯಂತ ಹೆಚ್ಚು ಫಾಲೋವರ್ಸ್ ಹೊಂದಿದ್ದು ಮುಂಚೂಣಿಯಲ್ಲಿದೆ .
ಇಂಗ್ಲಿಷ್ ಭಾಷೆಯಲ್ಲಿ ಉತ್ತಮ ವಾಕ್ ಪ್ರಭುತ್ವ ಹೊಂದಿರುವ ಕಾರಣ 20 ಕ್ಕೂ ಹೆಚ್ಚಿನ ವಿದ್ಯಾಸಂಸ್ಥೆಗಳಲ್ಲಿ ” ಮೋಟಿವೇಷನ್ ಸ್ಪೀಕರ್ ” ಆಗಿ , ಹೊಸ ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ಹುಟ್ಟಿಸುವಲ್ಲಿ ತಮ್ಮ ಪ್ರತಿಭಾ ಸಾಮರ್ಥ್ಯ ತೋರ್ಪಡಿಸಿದ್ದಾಳೆ . ಮುಂದೆ ಉತ್ತಮ ನೌಕರಿ ದೊರೆತರೂ , ಯಕ್ಷಗಾನಕ್ಕೇ ತನ್ನ ಪ್ರಥಮ ಆದ್ಯತೆ ಎಂಬ ನಿಲುವು ಹೊಂದಿರುವ ದಿಶಾ , ” ಯಕ್ಷಗಾನ ತನ್ನ ಉಸಿರು ” ಎಂದು ಹೇಳುವ ಮೂಲಕ , ಕರಾವಳಿಯ ಹೆಮ್ಮೆಯ ಕಲೆಯ ಬಗ್ಗೆ ಅಭಿಮಾನ ತಾಳಿದ್ದಾಳೆ . ಸುರತ್ಕಲ್ ನಲ್ಲಿ ” ಯಕ್ಷ ಯಾಮಿನಿ ಕಲಾತಂಡ ” ವನ್ನು ಸ್ಥಾಪಿಸಿ ಈ ಸಂಸ್ಥೆಯ ಮೂಲಕ ನೂರಾರು ಪ್ರದರ್ಶನ ನೀಡಿದ್ದು , ಹಲವಾರು ಕಡೆಗಳಲ್ಲಿ ಸಂಮಾನವೂ ಲಭಿಸಿದೆ . ಹಲವಾರು ಯಕ್ಷಗಾನ ಸ್ಪರ್ಧೆಗಳಲ್ಲಿ ವಿಜೇತಳಾಗಿರುವುದೂ ಗಮನಾರ್ಹ. ಸಂಮಾನಳಿಗೆ ಆಶಿಸದಿರುವ ದಿಶಾ , ನೇರ ನುಡಿಯ , ಕಟ್ಟುನಿಟ್ಟಿನ ಅಭಿಪ್ರಾಯ ಹೊಂದಿರುವುದಲ್ಲದೇ , ತನಗೆ ಸರಿ ಕಾಣದ್ದನ್ನು ಯಾವುದೇ ಮುಲಾಜಿಲ್ಲದೇ ಖಂಡಿಸುವ ವಿಶಿಷ್ಟ ಜಾಯಮಾನವುಳ್ಳವಳು . ಯಕ್ಷಗಾನದ ಪ್ರಾಥಮಿಕ ಅಂಗವಾದ ಪೂರ್ವರಂಗವನ್ನು ಸಂಪೂರ್ಣವಾಗಿ ಅಭ್ಯಸಿಸದೇ , ಕೇವಲ ಒಂದು ಕಾರ್ಯಕ್ರಮಕ್ಕಾಗಿ ಯಕ್ಷಗಾನ ಕಲಿಯುತ್ತಿರುವುದರ ಬಗ್ಗೆ , ವೇಷ ಧರಿಸದೇ , ಯಕ್ಷಗಾನ ಪ್ರದರ್ಶನ ನೀಡುವ ” ಪ್ರಹಸನ ” ದ ಬಗ್ಗೆ ತೀವ್ರವಾದ ವಿರೋಧ ವ್ಯಕ್ತಪಡಿಸುವ ಇವಳ ನಿಲುವು ಸರ್ವದಾ ಸ್ವಾಗತಾರ್ಹ . ಈ ನಿಲುವನ್ನು ಯಕ್ಷಗಾನದ ಅಭಿಮಾನಿಯಾಗಿ ನಾನೂ ಸಮರ್ಥಿಸುತ್ತೇನೆ . ( ಇತ್ತೀಚೆಗೆ ಒಂದೆರಡು ಟಿ.ವಿ.ಸಂದರ್ಶನದಲ್ಲಿ ಈ ಕುರಿತಾಗಿ ದಿಶಾ ಪ್ರಬಲವಾದ ವಿರೋಧ ವ್ಯಕ್ತ ಪಡಿಸಿದ್ದನ್ನು ಉಲ್ಲೇಖಿಸಲೇಬೇಕು ) . ಚಲನಚಿತ್ರಗಳಲ್ಲೂ , ಯಕ್ಷಗಾನವನ್ನು ವಾಣಿಜ್ಯ ಉದ್ದೇಶಗಳಿಗೋಸ್ಕರ ಬಳಸುವಲ್ಲಿ ದುರುಪಯೋಗ ಆಗುತ್ತಿರುವುದರ ಬಗ್ಗೆಯೂ ವಿರೋಧವನ್ನು ಹೊಂದಿದ್ದಾರೆ . ಬೆಂಗಳೂರಿನಂಥಹ ಮಹಾನಗರದ ಪ್ರತಿಷ್ಠಿತ ಹೊಟೇಲ್ , ವಾಣಿಜ್ಯ ಸಂಸ್ಥೆಗಳಲ್ಲೂ ದಿಶಾಳ ಶ್ರೀಕೃಷ್ಣ ಪಾತ್ರದ ಫೋಟೋಗಳು ರಾರಾಜಿಸುತ್ತಿರುವುದು ಗಮನಾರ್ಹ
ಇತ್ತೀಚಿಗೆ ಮಂಗಳೂರಿನ ಸಂಘನಿಕೇತನದಲ್ಲಿ ಅಖಿಲ ಭಾರತ ಮಟ್ಟದ ಕೇಂದ್ರೀಯ ಬೈಠಕ್ ಜರುಗಿತ್ತು . ದೇಶ ವಿದೇಶಗಳ ಪ್ರತಿನಿದಿಗಳು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ , ಕರಾವಳಿಯ ಕಲೆಯಾದ ಯಕ್ಷಗಾನವನ್ನು ಪರಿಚಯಿಸಲು ರಸ್ತೆಯ ಎರಡೂ ಬದಿಗಳಲ್ಲೂ ದಿಶಾಳ ಯಕ್ಷಗಾನ ವೇಷದ ಹತ್ತಾರು ಕಟೌಟ್ ಗಳನ್ನು ಹಾಕಲಾಗಿತ್ತು . ಅದನ್ನು ನೋಡಿದ ನೂರಾರು ಪ್ರತಿನಿಧಿಗಳು ಆ ಪೋಟೋಗಳಲ್ಲಿಯ Expression ನೋಡಿ ನನ್ನಲ್ಲಿ ಈ ಕಲಾವಿದ ಯಾರು ಎಂದು ಕೇಳಿದಾಗ ದಿಶಾ ಎಂಬ ಹೆಣ್ಣು ಹುಡುಗಿ ಎಂದು ಹೇಳಿದಾಗ ಅವರೆಲ್ಲರೂ ” ಗ್ರೇಟ್ , ಗ್ರೇಟ್ ” ಎಂದು ಉದ್ಗರಿಸಿದ್ದರು . ಈಗಾಗಲೇ ಟಿ.ವಿ.ಸೀರಿಯಲ್ , ಕನ್ನಡ – ತುಳು ಚಲನಚಿತ್ರಗಳಲ್ಲಿ ಅವಕಾಶ ಹುಡುಕಿಕೊಂಡು ಬಂದರೂ , ಅದನ್ನು ಸ್ಪಷ್ಟವಾಗಿ ನಿರಾಕರಿಸಿರುವ ದಿಶಾ ಮುಂದೆ ಯಾವುದಾದರೂ ಪ್ರತಿಷ್ಠಿತ ಸಂಸ್ಥೆಯ ಮಾರುಕಟ್ಟೆ ವಿಭಾಗದ ಅಧಿಕಾರಿಯಾಗಬೇಕು ಎಂಬ ಹಂಬಲ ಹೊಂದಿದ್ದಾಳೆ . ದಿಶಾಳಿಗೆ ಶುಭವನ್ನು ಕೋರುತ್ತೇನೆ .
ಎಂ.ಶಾಂತರಾಮ ಕುಡ್ವ
ಮೂಡಬಿದಿರೆ
Leave A Reply