ಕಾಲಿನ ಬ್ಯಾಂಡೇಜು ಮಮತಾಳನ್ನು ಬಂಗಾಳದ ಸಿಎಂ ಸ್ಥಾನಕ್ಕೆ ಕೊಂಡೊಯ್ಯುತ್ತಾ?
ಪಶ್ಚಿಮ ಬಂಗಾಲದ ವಿಧಾನಸಭಾ ಚುನಾವಣೆ ನಿಜಕ್ಕೂ ರಂಗೇರುತ್ತಿದೆ. ಮುಳುಗುತ್ತಿರುವಂತೆ ಕಾಣುತ್ತಿರುವ ಟಿಎಂಸಿ ಹಡಗನ್ನು ಹೇಗಾದರೂ ಮಾಡಿ ದಡ ಸೇರಿಸಲು ಮಮತಾ ಬ್ಯಾನರ್ಜಿ ಎಂಬ ಛಲದಂಕ ಮಲ್ಲಿ ಕೊನೆಯ ಸುತ್ತಿನ ಕಸರತ್ತಿಗೆ ಚಾಲನೆ ನೀಡಿದ್ದಾರೆ. ಬಹುಶ: ಪ್ರಶಾಂತ್ ಕಿಶೋರ್ ಅವರ ಐಡಿಯಾ ಇರಬಹುದೇನೋ? ಇಲ್ಲಿಯ ತನಕ ಅಲ್ಲಿ ಭಾರತೀಯ ಜನತಾ ಪಾರ್ಟಿಯ ಮುಖಂಡರ ಮೇಲೆ ದಾಳಿ ನಡೆಯುತ್ತಿತ್ತು. ಆರಂಭದಲ್ಲಿ ಸಂಸದ ತೇಜಸ್ವಿ ಸೂರ್ಯ ಅಲ್ಲಿ ರ್ಯಾಲಿ ಮಾಡಲು ಹೋದಾಗ ಅವರ ಮೇಲೆ ದಾಳಿ ನಡೆದಿತ್ತು. ಆಗ ಅದಕ್ಕೆ ಪ್ರತಿಕ್ರಿಯಿಸಿದ ಸಿಎಂ ಮಮತಾ ಬ್ಯಾನರ್ಜಿಯವರು ಇದರ ಹಿಂದೆ ಟಿಎಂಸಿ ಕಾರ್ಯಕರ್ತರ ಕೈವಾಡ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ರು. ಈಗ ಅವರು ನಾಮಪತ್ರ ಸಲ್ಲಿಸಲೋ ಮತ್ತೊಂದಕ್ಕೋ ಹೋಗಿರುವಾಗ ಕಾಲಿಗೆ, ಕುತ್ತಿಗೆಗೆ ಏನೋ ತಾಗಿದೆ, ಅದಕ್ಕೆ ಬಿಜೆಪಿಯವರೇ ಕಾರಣ ಎಂದು ಘಂಟಾಘೋಷವಾಗಿ ಹೇಳಿದ್ದಾರೆ. ಬಿಜೆಪಿಯವರ ಮೇಲೆ ಪೆಟ್ರೋಲ್ ಬಾಂಬ್ ಬಿಸಾಡಿದ್ರೂ ಅದು ತಮ್ಮವರಲ್ಲ, ತಮ್ಮ ಮೇಲೆ ಸಣ್ಣ ಫೆಕ್ಸ್ ಅದರ ಪಾಡಿಗೆ ಅದು ಬಿದ್ದರೆ ಅದಕ್ಕೆ ಬಿಜೆಪಿ ಕಾರಣ ಎನ್ನುತ್ತಿರುವ ಮಮತಾ ಸೋಲಿನ ಹತಾಶೆಯನ್ನು ಈಗಲೇ ತೋರಿಸುತ್ತಿದ್ದಾರಾ? ತಮಗೆ ಗಾಯ ಆಗಿ ಆಸ್ಪತ್ರೆಯಲ್ಲಿ ಮಲಗಿದ್ದನ್ನೇ ಅಸ್ತ್ರವನ್ನಾಗಿ ಮಮತಾ ಬಳಸಲು ಹೊರಟಿದ್ದಾರೆ. ಈ ಮೂಲಕವಾದರೂ ಜನರಿಗೆ ತಮ್ಮ ಮೇಲೆ ಕಳೆದು ಹೋಗಿರುವ ಸಿಂಪಥಿ ಮತ್ತೆ ಬರಲಿ ಎನ್ನುವುದು ಅವರ ದೂರದೃಷ್ಟಿಯಾಗಿರಬಹುದು. ಒಬ್ಬ ಮುಖ್ಯಮಂತ್ರಿಯನ್ನು ಅದರಲ್ಲಿಯೂ ಪಶ್ಚಿಮ ಬಂಗಾಲದಂತಹ ಸೂಕ್ಷ್ಮ ರಾಜ್ಯದ ಜಾತ್ಯಾತೀತ ಮುಖ್ಯಮಂತ್ರಿಯನ್ನು ಬಿಜೆಪಿ ಕಾರ್ಯಕರ್ತರು ತಳ್ಳಿ ಹಲ್ಲೆ ಮಾಡಿದ್ರು ಎಂದು ಯಾರಾದರೂ ಅಂದುಕೊಳ್ಳುವುದೇ ಹಾಸ್ಯಾಸ್ಪದ. ಮಮತಾ ಬ್ಯಾನರ್ಜಿಯವರ ಸುತ್ತಲೂ ಪುರುಷ ಸೆಕ್ಯೂರಿಟಿ ಗಾರ್ಡ್ ಗಳು, ಮಹಿಳಾ ಸೆಕ್ಯೂರಿಟಿ ಗಾರ್ಡ್ ಗಳು ದಿನದ 24 ಗಂಟೆಗಳ ತನಕ ನಿರಂತರವಾಗಿ ಒಂದು ಕಡ್ಡಿ ಕೂಡ ಸೋಂಕದಂತೆ ಎಚ್ಚರಿಕೆ ವಹಿಸುತ್ತಾರೆ. ಅವರ ಸೆಕ್ಯೂರಿಟಿಯಲ್ಲಿ ಯಾವ ಲೋಪವೂ ಆಗದಂತೆ ಪೂರ್ಣ ಮುಂಜಾಗ್ರತೆಯನ್ನು ವಹಿಸುತ್ತಾರೆ. ಅಂತಹ ಸಂದರ್ಭದಲ್ಲಿ ಅವರ ಮೇಲೆ ಹಲ್ಲೆಯಾಯಿತು ಮತ್ತು ಅದನ್ನು ಬಿಜೆಪಿ ಕಾರ್ಯಕರ್ತರು ಮಾಡಿದ್ರು ಎಂದು ಹೇಳುವ ಮೂಲಕ ಬಿಜೆಪಿಯನ್ನು ವಿಲನ್ ಆಗಿ ಚಿತ್ರಿಸಿ ಕನಿಷ್ಟ ನಂದಿಗ್ರಾಮದಲ್ಲಿ ವೋಟ್ ತಿರುಗಿಸಲು ಮಮತಾ ಕೊನೆಯ ಕ್ಷಣದ ಪ್ರಯತ್ನ ಮಾಡಿದ್ದಾರೆ. ಆದದ್ದು ಏನೆಂದರೆ ಮಮತಾ ನಾಮಪತ್ರ ಸಲ್ಲಿಸಿ ಹೊರಗೆ ಬರುವಾಗ ಅವರ ಕಾರಿಗೆ ಎದುರಿಗೆ ಕಟ್ಟಿದ್ದ ಫ್ಲೆಕ್ಸ್ ಬಿಚ್ಚಿಕೊಂಡು ಇವರ ಕಾರಿನ ಬಾಗಿಲ ಮೇಲೆ ಬಿದ್ದಿದೆ. ಅವರು ಕಾರಿನ ಬಾಗಿಲ ಬಳಿ ನಿಂತಿದ್ದಾಗ ಫೆಕ್ಸ್ ಬಿದ್ದ ರಭಸಕ್ಕೆ ಇವರನ್ನು ತಳ್ಳಿದಂತೆ ಆಗಿದೆ. ಸಹಜವಾಗಿ ಇವರ ಕಾಲಿಗೆ ಗಾಯ ಆಗಿದೆ. ಇನ್ನು ಗಾಯದ ಅಳತೆಗೂ ಹಾಕಿರುವ ಬೃಹತ್ ಬ್ಯಾಂಡೇಜಿನ ಅಳತೆಗೂ ಸಂಬಂಧ ಇರುವುದಿಲ್ಲ ಎಂದು ಎಲ್ಲರಿಗೂ ಗೊತ್ತಿದೆ. ಅವರ ಕಾಲಿಗೆ ಹಾಕಿರುವ ಬ್ಯಾಂಡೇಜು ನೋಡಿದರೆ ಕರುಣೆ ಮೂಡುತ್ತದೆ ಎಂದು ಟಿಎಂಸಿ ಕಾರ್ಯಕರ್ತರು ನಂಬಿದ್ದಾರೆ. ಅದಕ್ಕಾಗಿ ಮಮತಾ ಆಸ್ಪತ್ರೆಯಲ್ಲಿ ಬ್ಯಾಂಡೇಜು ಹಾಕಿ ಮಲಗಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಒಂದು ಚುನಾವಣೆ ಎಂದರೆ ಅದರಲ್ಲಿಯೂ ಪ್ರತಿಷ್ಟೆಯ ರಾಜ್ಯ ಎಂದರೆ ಗೆಲ್ಲಲು ಎಲ್ಲಾ ರೀತಿಯ ಅಸ್ತ್ರಗಳನ್ನು ರಾಜಕೀಯ ಪಕ್ಷಗಳು ಪ್ರಯೋಗಿಸಬೇಕಾಗುತ್ತದೆ. ಆ ನಿಟ್ಟಿನಲ್ಲಿ ಮಮತಾ ಮೊದಲು ಬಳಸಿದ್ದೆ ಹಿಂದೂತ್ವದ ಅಸ್ತ್ರ. ಹಿಂದಿನ ಚುನಾವಣೆಯಲ್ಲಿ ಮುಸ್ಲಿಮರ ಕೇರಿಯಲ್ಲಿಯೇ ಹುಟ್ಟಿದವರಂತೆ ವರ್ತಿಸುತ್ತಿದ್ದ ಬ್ಯಾನರ್ಜಿ ಈ ಬಾರಿ ಹಿಂದೂ ದೇವರ ಯಾಗ, ಮಂತ್ರೋಚ್ಚಾರಣೆ ಮಾಡುವ ಮೂಲಕ ತಮ್ಮ ಬಣ್ಣ ನಿಧಾನವಾಗಿ ಬದಲಾಯಿಸಿದ್ದಾರೆ. ಅವರಿಗೆ ಜೈ ಶ್ರೀರಾಮ್ ಎನ್ನುವುದು ಹಿಂದೆ ಅಪಥ್ಯವಾಗಿತ್ತು. ಆದರೆ ಈ ಬಾರಿ ಅದೇ ಶಬ್ದಗಳು ಬಂಗಾಲದ ಮೂಲೆಮೂಲೆಗಳಲ್ಲಿ ಕೇಳುತ್ತಿರುವುದರಿಂದ ಅವರಿಗೆ ಗಾಳಿ ಈ ಬಾರಿ ಹೇಗೆ ಮತ್ತು ಎಲ್ಲಿಂದ ಬೀಸುತ್ತಿದೆ ಎನ್ನುವುದು ಗೊತ್ತಿಲ್ಲದ ವಿಷಯವೇನಲ್ಲ. ದಶಕಗಳ ಕಾಲ ಅಧಿಕಾರದಲ್ಲಿದ್ದ ಕಮ್ಯೂನಿಸ್ಟರ ನಿರಂಕುಶ ಪ್ರಭುತ್ವವನ್ನು ಮುರಿದು ಮಮತಾ ಬ್ಯಾನರ್ಜಿಗೆ ಅಲ್ಲಿನ ಮತದಾರ ಗೆಲುವಿನ ಮುದ್ರೆ ಒತ್ತಿದಾಗ ನಿಜಕ್ಕೂ ಇದು ಸಾಧ್ಯವೇ ಎಂದು ಅಂದು ರಾಷ್ಟ್ರವೇ ಆಶ್ಚರ್ಯಪಟ್ಟುಕೊಂಡಿತ್ತು. ಏಕೆಂದರೆ ಜ್ಯೋತಿ ಬಸು ಅವರಂತಹ ನಾಯಕರ ಯುಗ ಕೂಡ ಒಂದು ದಿನ ಮುಗಿಯಬಹುದು ಎಂದು ಅಂದುಕೊಳ್ಳದ ರಾಜ್ಯ ಅದು. ಆದರೆ ಮಮತಾ ಒಂಟಿಯಾಗಿ ಅವರನ್ನೆಲ್ಲ ಮನೆಗೆ ಕಳುಹಿಸಿ ಪಶ್ಚಿಮ ಬಂಗಾಲದ ಮಗಳಿಗೆ ನಿಮ್ಮ ಆರ್ಶೀವಾದ ಇರಲಿ ಎಂದು ಕೇಳಿಕೊಂಡಿದ್ದರು. ಸಾದಾ ಬಳಿ ವರ್ಣದ ನೀಲಿ ಅಂಚಿನ ಸೀರೆ, ಕಾಲಿಗೆ ಹವಾಯಿ ಚಪ್ಪಲಿ, ಸಾಮಾನ್ಯ ಕನ್ನಡಕ ಧರಿಸಿ ಬೀದಿಗಿಳಿಯುವ ಮಮತಾರಲ್ಲಿ ಅಲ್ಲಿನ ಮಹಿಳೆಯರು ತಮ್ಮದೇ ವಠಾರದ ಹೆಣ್ಣುಮಗಳನ್ನು ಕಂಡಿದ್ದರು. ತಮ್ಮ ಪಕ್ಷದ ಕಾರ್ಯಕರ್ತರಿಗೆ ಪೊಲೀಸರಿಂದ ಅನ್ಯಾಯವಾದಾಗ ಹಿಂದೆ ಮುಂದೆ ನೋಡದೇ ಠಾಣೆಗೆ ನುಗ್ಗಿ ಪೊಲೀಸರ ಬೆವರಿಳಿಸುತ್ತಿದ್ದ ಮಮತಾರಲ್ಲಿ ಪುರುಷರು ಕಾಳಿಯನ್ನೇ ಕಂಡಿದ್ದರು. ಅಂತಹ ಜಾತ್ಯಾತೀತ ನಾಯಕಿಯನ್ನು ಬಂಗಾಳ ಎತ್ತಿಕೊಂಡಾಡಿತ್ತು. ಆದರೆ ಅಮಿತ್ ಶಾ ಅವರ ರಣನೀತಿ, ಮೋದಿ ಚರಿಷ್ಮಾ ಮತ್ತು ಬಿಜೆಪಿ ಮುಖಂಡರ ರಾಜಕೀಯ ನಡೆಗಳು ಮಮತಾ ಮುಖದಲ್ಲಿ ಚಿಂತೆಯ ಗೆರೆಗಳನ್ನು ಮೂಡಿಸುತ್ತಿವೆ. ಈ ಬಾರಿ ಗೆಲ್ಲದಿದ್ದರೆ ಮತ್ತೆಂದೂ ಕಷ್ಟ ಎನ್ನುವ ಛಲದಲ್ಲಿ ಬಿಜೆಪಿ ಹೋರಾಡುತ್ತಿದೆ. ಯಾರು ಗೆದ್ದರೂ ಅದು ವಿರೋಚಿತ ಗೆಲುವಾಗಲಿದೆ. ಯಾಕೆಂದರೆ ಚುನಾವಣೆ ನಡೆಯುತ್ತಿರುವುದು ಮಮತಾ ಬಣ ಹಾಗೂ ಮಮತಾ ಬಣದಿಂದ ಸಿಡಿದು ಹೋದ ಅವರದ್ದೇ ಓರಗೆಯ ನಾಯಕರ ನಡುವೆ!
Leave A Reply