ತಾಲಿಬಾಲಿನ ಸಹಿಷ್ಣುತಾವಾದಿ ಉಗ್ರರ ಬಗ್ಗೆ ಭಾರತದ ಬುದ್ಧಿಜೀವಿಗಳು ಸೈಲೆಂಟ್!!
Posted On August 23, 2021
ತಾಲಿಬಾನ್ ಸಂಘಟನೆಯಿಂದ ಇಷ್ಟು ದೊಡ್ಡ ದೊಂಬಿ ನಡೆಯುತ್ತಿದೆ. ಇಡೀ ಪ್ರಪಂಚ ಅಪಘಾನಿಸ್ತಾನದತ್ತ ನೋಡುತ್ತಿದೆ. ಉಗ್ರರು ಸಿಕ್ಕಸಿಕ್ಕ ಕಡೆಗಳಲ್ಲಿ ಮಹಿಳೆಯರನ್ನು ಎಳೆದೊಯ್ಯುತ್ತಿದ್ದಾರೆ. ಅತ್ಯಾಚಾರ, ಹತ್ಯೆ ಸರಣಿಯಲ್ಲಿ ನಡೆಯುತ್ತಿದೆ. ಎಲ್ಲಾ ಮಾಧ್ಯಮಗಳಲ್ಲಿ ಅದೇ ಚರ್ಚೆಯಾಗುತ್ತಿದೆ. ಟಿವಿಯವರು ವಾರದಿಂದ ಅದನ್ನೇ ತೋರಿಸುತ್ತಿದ್ದಾರೆ. ಆದರೆ ನಮ್ಮ ದೇಶದ, ರಾಜ್ಯದ ಮುಸ್ಲಿಂ ಮೂಲಭೂತವಾದಿಗಳು, ಬುದ್ಧಿಜೀವಿ ಎನಿಸಿಕೊಂಡವರು ಒಂದು ಅಕ್ಷರವನ್ನು ಮಾತನಾಡುತ್ತಿಲ್ಲ. ಹೆಂಗಸರು ನಮ್ಮನ್ನು ಈ ನರಕದಿಂದ ಪಾರು ಮಾಡಿ ಎಂದು ಅಮೇರಿಕಾದ ಸೈನ್ಯದ ಎದುರು ಬೇಡಿಕೊಳ್ಳುತ್ತಿದ್ದರೂ ನಮ್ಮ ದೇಶದೊಳಗೆ ಇರುವ ಪರಮ ಸಹಿಷ್ಣುವಾದಿಗಳು ಯಾಕೆ ಮನೆಯಿಂದ ಹೊರಗೆ ಬಂದು ಕೈಯಲ್ಲಿ ಬೋರ್ಡ್ ಹಿಡಿದು ಬೆಂಗಳೂರಿನ ಟೌನ್ ಹಾಲ್ ಮೆಟ್ಟಿಲುಗಳ ಮೇಲೆ ಕುಳಿತುಕೊಳ್ಳುತ್ತಿಲ್ಲ. ನಾನು ಕೂಡ ನಗರ ನಕ್ಸಲ್ ಎಂದು ಕುತ್ತಿಗೆಗೆ ಬೋರ್ಡ್ ಹಾಕಿಸಿಕೊಂಡು ಪೋಸ್ ಕೊಡುತ್ತಿದ್ದವರು ಈಗ ನಾನು ಕೂಡ ತಾಲಿಬಾನ್ ಎಂದು ಯಾಕೆ ಹೇಳುತ್ತಿಲ್ಲ.
ಆವತ್ತು ಸದ್ದಾಂ ಹುಸೇನ್ ಹಾಗೂ ಬಿನ್ ಲಾಡೆನ್ ಅಮೇರಿಕಾ ಸೈನ್ಯದ ಗುಂಡಿಗೆ ಬಲಿಯಾದಾಗ ಅಮಾಯಕರಿಗೆ ನೆಲೆ ಇಲ್ಲ ಎಂದು ಬಾರ್ ನಲ್ಲಿ ಕುಳಿತು ಗುಂಡು ಹಾಕುತ್ತಾ ಮೊಸಳೆ ಕಣ್ಣೀರು ಸುರಿಸಿದವರು ಈಗ ಕಾಣುತ್ತಿಲ್ಲ. ಇಸ್ರೇಲ್ ಮತ್ತು ಇರಾಕ್ ನಲ್ಲಿ ನಾಗರಿಕರ ಮೇಲೆ ದಾಳಿಗಳಾದಾಗ ಪ್ರತಿಭಟಿಸಿದವರು ಈಗ ಭಾರತದಲ್ಲಿ ಎಲ್ಲಿಯೂ ಕಾಣಿಸುತ್ತಿಲ್ಲ. ಷರಿಯತ್ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೆ ತರುತ್ತೇವೆ ಎಂದು ಕೈಯಲ್ಲಿ ಮಿಶಿನ್ ಗನ್ ಹಿಡಿದುಕೊಂಡು ಬೊಬ್ಬೆ ಹೊಡೆಯುತ್ತಿರುವ ತಾಲಿಬಾನ್ ಉಗ್ರನ ವಿಡಿಯೋ ಟಿವಿಯಲ್ಲಿ ನೋಡಿದವರು ಇಲ್ಲಿ ಕುಳಿತುಕೊಂಡಾದರೂ ಇದು ನಮ್ಮ ಧರ್ಮ ಕಲಿಸಿದ್ದಲ್ಲ ಎಂದು ಹೇಳುತ್ತಿಲ್ಲ. ಅತ್ತ ಮಹಿಳೆಯರು, ಮಕ್ಕಳು ಲೈಂಗಿಕ ತೃಷೆಗೆ ಬಲಿಯಾಗುತ್ತಿದ್ದರೆ ಭಾರತದಲ್ಲಿ ವಾಸಿಸಲು ಭಯವಾಗುತ್ತಿದೆ ಎನ್ನುವವರು ಎಲ್ಲಿಯೂ ಕಾಣಿಸುತ್ತಿಲ್ಲ. ಟಿವಿಯಲ್ಲಿ ವಾರ್ತಾ ನಿರೂಪಕಿಯಾಗಿದ್ದ ಹೆಣ್ಣುಮಗಳನ್ನು ತಾಲಿಬಾನ್ ಉಗ್ರರು ಕೊಂದು ಹಾಕಿದ್ದನ್ನು, ಅಪಘಾನಿಸ್ತಾನದ ಮೊದಲ ನಾಲ್ಕು ಮಹಿಳಾ ಪೈಲೆಟ್ ಗಳಲ್ಲಿ ಒಬ್ಬ ಲೇಡಿ ಪೈಲೆಟ್ ಅನ್ನು ಕಲ್ಲು ಬಿಸಾಡಿ ಕೊಂದು ಹಾಕಿದ ಹೃದಯವಿಲ್ಲದೇ ಇರುವ ಉಗ್ರರ ಬಗ್ಗೆ ಇಲ್ಲಿನ ಬುದ್ಧಿಜೀವಿಗಳು ಕಿಸಕ್ ಎಂದಿಲ್ಲ. ಮುಖಕ್ಕೆ ಮಾಸ್ಕ್ ಹಾಕಿದ್ದ ಕಾರಣಕ್ಕೆ ಮಾತನಾಡುವ ಸ್ಥಿತಿಯಲ್ಲಿಯೂ ಇಲ್ವಾ ಎನ್ನುವ ಸಂಶಯ ಉಂಟಾಗುತ್ತಿದೆ.
ಒಂದು ವೇಳೆ ತಾಲಿಬಾನ್ ಉಗ್ರರು ಮುಸ್ಲಿಂ ಆಗದೇ ಹಿಂದೂ ಆಗಿದ್ದಲ್ಲಿ ಬುದ್ಧಿಜೀವಿಗಳ ಪ್ರತಿಕ್ರಿಯೆ ಹೇಗಿರುತ್ತಿತ್ತು? ಅರ್ಧ ಸ್ನಾನ ಮಾಡುತ್ತಿದ್ದವರು ಕೂಡ ವಿಷಯ ಕಿವಿಗೆ ಬಿದ್ದ ಕೂಡಲೇ ಹಾಗೆ ಓಡಿ ಹೊರಗೆ ಬಂದು ಪ್ರತಿಭಟನೆಗೆ ಕುಳಿತುಕೊಳ್ಳುತ್ತಿದ್ದರು. ತಡರಾತ್ರಿ ಬೇಕಾದರೂ ನೈಟ್ ಡ್ರೆಸ್ ನಲ್ಲಿ ಕ್ಯಾಂಡಲ್ ಹಿಡಿದು ಮೆರವಣಿಗೆ ಹೊರಡುತ್ತಿದ್ದರು. ಘಟನೆ ಪ್ರಪಂಚದ ಯಾವುದೋ ಮೂಲೆಯಲ್ಲಿ ನಡೆದರೂ ಇಲ್ಲಿ ಮೋದಿ ಪುತ್ಥಳಿ ಸುಡುತ್ತಿದ್ದರು. ಯಾಕೆಂದರೆ ಇಲ್ಲಿ ಧರ್ಮ ಮುಖ್ಯವಾಗುತ್ತಿತ್ತು. ಆದರೆ ಈಗ ಯಾರೂ ಮಾತನಾಡುತ್ತಿಲ್ಲ. ಯಾಕೆಂದರೆ ಒಂದನೇಯದಾಗಿ ಉಗ್ರರು ಮುಸ್ಲಿಂ ಮತ್ತು ಉಗ್ರರ ಕೈಯಲ್ಲಿ ಸಾಯುತ್ತಿರುವವರು ಅದೇ ಧರ್ಮದ ಅಮಾಯಕ ಜನರು. ಒಂದೇ ಧರ್ಮದ ಜನರು ಒಂದೇ ದೇಶದಲ್ಲಿ ಒಂದೇ ಕಾಲಕ್ಕೆ ಒಟ್ಟಿಗೆ ಇರಲು ಸಾಧ್ಯವಿಲ್ಲ ಎನ್ನುವಂತಹ ಪರಿಸ್ಥಿತಿ ಉದ್ಭವವಾಗುತ್ತದೆ ಎಂದರೆ ಇದಕ್ಕಿಂತ ಘೋರ ದುರಂತ ಬೇರೆನಿಲ್ಲ. ನೈಲ್ ಪಾಲಿಶ್ ಹಾಕಬಾರದು, ಮನೆಯ ಬಾಲ್ಕನಿಯಲ್ಲಿ ಕೂಡ ಕಾಣಿಸಬಾರದು ಎಂದು ಹೇಳುತ್ತಾರೆ ಎಂದರೆ ನಾವು 21 ನೇ ಶತಮಾನದಲ್ಲಿ ಇದ್ದೇವಾ ಅಥವಾ ಯಾರೂ ಊಹಿಸದ ಒಂದು ಯುಗ ಶುರುವಾಯಿತಾ ಎಂದು ಅನಿಸುತ್ತದೆ. ಭಯೋತ್ಪಾದನೆಗೆ ಧರ್ಮ ಇಲ್ಲ ಎನ್ನುತ್ತಾರೆ. ಆದರೆ ತಮ್ಮ ಧರ್ಮದ ಮೇಲೆ ದೌರ್ಜನ್ಯ ಆದಾಗ ಯಾರಾದರೂ ನಾಲ್ಕು ಕೇಸರಿ ಬಾವುಟ ಹಿಡಿದು ಹೊರಗೆ ಬಂದರೆ ಬುದ್ಧಿಜೀವಿಗಳಿಗೆ ದೇಶದೊಳಗೆ ಅಭದ್ರತೆ ಶುರುವಾಗುತ್ತದೆ. ಅದೇ ಗನ್ ಹಿಡಿದು ಹೊರಗೆ ಬಹಿರಂಗವಾಗಿ ಸುತ್ತಾಡುವ ಉಗ್ರರು ಬ್ಯೂಟಿ ಪಾರ್ಲರ್ ಹೊರಗೆ ಹೆಣ್ಣಿನ ಮುಖದ ಪೋಸ್ಟರ್ ಹಾಕಿರುವುದನ್ನು ಕೂಡ ಸಹಿಸುವುದಿಲ್ಲ, ಆದರೂ ಅವರ ಬಗ್ಗೆ ಮಾತನಾಡುವ ಧಮ್ ಇಲ್ಲ, ಅದರೊಂದಿಗೆ ಈ ಕುರಿತು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಜಾಗತಿಕ ಹಿರಿಯಣ್ಣರಿಗೆ ಹೇಳುವಷ್ಟು ಪುರುಸೊತ್ತು ಕೂಡ ಬುದ್ಧಿಜೀವಿಗಳಿಗೆ ಇಲ್ಲ.
ಅಮೇರಿಕಾ ನಟ್ಟನಡು ಮೈದಾನದಲ್ಲಿ ಅಪಘಾನಿಸ್ತಾನವನ್ನು ಬಿಟ್ಟು ಹೋಗುವಾಗ, ಅಲ್ಲಿನ ರಾಷ್ಟ್ರಾಧ್ಯಕ್ಷ, ಅಮೇರಿಕಾ ರಿಟನ್ ಘನಿ ಅಪರಾತ್ರಿಯಲ್ಲಿ ಅಪಘಾನಿಸ್ತಾನವನ್ನು ಉಗ್ರರ ತೆಕ್ಕೆಗೆ ಬಿಟ್ಟು ಓಡಿ ಹೋಗಿರುವಾಗ ಯಾವ ಘನಂದಾರಿ ಜೀವಿಯೂ ಮಾತನಾಡುತ್ತಿಲ್ಲ. ಇಷ್ಟು ದೊಡ್ಡ ಪೀಠಿಕೆ ಯಾಕೆ ಹೇಳಬೇಕಾಯಿತೆಂದರೆ ಯಾವುದೇ ದೇಶದಲ್ಲಿ ಏನೇ ಕೆಟ್ಟದು ಸಂಭವಿಸಲಿ ಈ ಬುದ್ಧಿಜೀವಿಗಳು ಎಂದು ಇರುತ್ತಾರಲ್ಲ ಅವರು ನೋಡುವುದು ಯಾರು, ಯಾರಿಗೆ, ಏನು ಮಾಡಿದರು ಎನ್ನುವುದನ್ನು ಮಾತ್ರ. ಅಪಘಾನಿಸ್ತಾನದ ಉಗ್ರರಿಗೆ ಬೈದರೆ ಎಲ್ಲಿಯಾದರೂ ಮುಸ್ಲಿಮರಿಗೆ ಬೇಜಾರು ಆಗುತ್ತದಾ? ಎಲ್ಲಿಯಾದರೂ ಅವರು ಕೋಪಿಸಿಕೊಳ್ಳುತ್ತಾರಾ ಎನ್ನುವ ಆತಂಕ ಇವರಿಗೆ ಇರುತ್ತದೆ. ಎರಡನೇಯದಾಗಿ ಅಲ್ಲಿ ಸಾಯುತ್ತಿರುವವರು ಅಮಾಯಕ ಮುಸ್ಲಿಂ ಮಹಿಳೆಯರು. ಜನಸಾಮಾನ್ಯರು ಸತ್ತರೆ ಅದರಲ್ಲಿಯೂ ಯಾರೂ ಗತಿಯಿಲ್ಲದ, ಗಂಡ ಓಡಿಹೋಗಿರುವ ಮಹಿಳೆಯರು ಅತ್ಯಾಚಾರಕ್ಕೆ ಒಳಗಾದರೆ ನಮ್ಮದೇನೂ ಹೋಗುತ್ತದೆ ಎಂದು ಅಂದುಕೊಂಡಿರುವ ಯಾವ ಅರ್ಬನ್ ನಕ್ಸಲ್ ಕೂಡ ಮಾತನಾಡುತ್ತಿಲ್ಲ. ಇದೇ ಕಾರಣಕ್ಕೆ ಇಂತವರನ್ನು ಬುದ್ಧಿಜೀವಿ ಎನ್ನಲಾಗುತ್ತದೆ. ಈ ಬುದ್ಧಿಜೀವಿಗಳಲ್ಲಿ ಕೆಲವರು ಈ ಪ್ರಪಂಚದಿಂದ ಕೆಳಗೆ ಇರುವ ನರಕಕ್ಕೆ ಶಿಫ್ಟ್ ಆಗಿದ್ದಾರೆ. ಉಳಿದವರು ಅಪಘಾನಿಸ್ತಾನದ ತಮ್ಮ ಸಹೋದರರು ಕೈಯಲ್ಲಿ ಗನ್ ಹಿಡಿದು ಹೆಣ್ಣುಮಕ್ಕಳ ಜುಟ್ಟು ಹಿಡಿದು ಎಳೆದುಕೊಂಡು ಹೋಗುವುದನ್ನು ಕಣ್ಣುಬಿಟ್ಟು ನೋಡುತ್ತಿದ್ದಾರೆ!
- Advertisement -
Trending Now
ರಾಜ್ಯ ಸರಕಾರ 350 ಕೋಟಿ ಬಾಕಿ ಹಿನ್ನಲೆ; ದಯಾಮರಣ ನೀಡಲು ಮನವಿ!
January 14, 2025
Leave A Reply