ಚುಳು ಚುಳು ಹೊಟ್ಟೆ ನೋವಿಗೆ ಗುಟುಕ್ಕನೆಯ ಪರಿಹಾರ
ಹೊಟ್ಟೆ ನೋವು ಅತಿ ಸಾಮಾನ್ಯವಾಗಿ ಎಲ್ಲರೂ ಒಂದಲ್ಲ ಒಂದು ಸಂದರ್ಭದಲ್ಲಿ ಅನುಭವಿಸುತ್ತಿರುತ್ತಾರೆ .ಶಾಲೆಗೆ ಹೋಗುವ ದಿನಗಳಲ್ಲಿ ಇದು ಪೊಳ್ಳು ನೆಪ .ಆದಿತ್ಯವಾರ ಮಜದಲ್ಲಿ ಕಳೆದು ಸೋಮವಾರ ಬಂತೆಂದರೆ ಉದ್ಯೋಗಿಗಳಿಗೂ ಸಣ್ಣದಾಗಿ ಹೊಟ್ಟೆನೋವು ಕಾಣಿಸಿಕೊಳ್ಳುತ್ತದೆ .ಹಾಸ್ಯವನ್ನು ಬದಿಗಿಟ್ಟು ಈಗ ಹೊಟ್ಟೆ ನೋವಿಗೆ ಕಾರಣಗಳು ಏನೆಂದು ತಿಳಿಯೋಣ .
ಮಲಬದ್ಧತೆ,ಅನಿಲ ತುಂಬಿರುವುದು,ಅಜೀರ್ಣವಾಗಿರುವುದು ,ಹೊಟ್ಟೆ ಕೆಟ್ಟು ಹೋಗಿರುವುದು,ಆಹಾರದ ಅಲರ್ಜಿ ಇವು ಅತೀ ಸಾಮಾನ್ಯವಾದ ಕಾರಣಗಳು .ಇವಕ್ಕೆ ಪರಿಹಾರಗಳೇನು ?
ಪೇರಳೆ ಹಣ್ಣು ಮತ್ತು ಬಾಳೆಹಣ್ಣು
ಮಲ ಬದ್ಧತೆಯಿಂದ ಹೊಟ್ಟೆ ನೋವಾಗಿದ್ದರೆ ,ಮಲವು ಹೋಗದೆ ಇದ್ದರೆ ಗುದ ದ್ವಾರದಲ್ಲಿ ನೋವುಂಟಾಗುವ ಅನುಭವವಾಗುತ್ತದೆ .ಇದು ಹೊಟ್ಟೆ ನೋವಿಗೆ ಕಾರಣವಾಗುತ್ತದೆ .ಕೆಲವೊಮ್ಮೆ ಮಲ ಬಂದಂತಾಗುತ್ತದೆ ಆದರೆ ವಿಸರ್ಜಿಸಲು ಆಗುವುದಿಲ್ಲ .ಈ ಸಂದರ್ಭದಲ್ಲಿ ಪೇರಳೆ ಹಣ್ಣು ಇಲ್ಲವೇ ಬಾಳೆ ಹಣ್ಣನ್ನು ತಿಂದರೆ ಮಲವು ಸರಾಗವಾಗಿ ವಿಸರ್ಜಿಸಿ ಹೋಗುತ್ತದೆ .ಹೊಟ್ಟೆ ನೋವು ಶಮನವಾಗುತ್ತದೆ .
ಉಪ್ಪು ನೀರು
ನಂಬಿದರೆ ನಂಬಿ ,ಉಪ್ಪು ನೀರು ಅತಿ ಬೇಗದಲ್ಲಿ ಹೊಟ್ಟೆ ನೋವಿಗೆ ಪರಿಹಾರ ನೀಡುತ್ತದೆ .ಒಂದು ಲೋಟ ನೀರಿಗೆ ಅರ್ಧ ಚಮಚ ಉಪ್ಪನ್ನು ಬೆರೆಸಿ ಕುಡಿಯುವುದರಿಂದ ಹೊಟ್ಟೆ ನೋವು ಶೀಘ್ರವಾಗಿ ಶಮನವಾಗುತ್ತದೆ .
ಈರುಳ್ಳಿ ಮತ್ತು ಬೆಲ್ಲ
ಇದು ಋತು ಚಕ್ರದಲ್ಲಿ ಉಂಟಾಗುವ ಹೊಟ್ಟೆ ನೋವನ್ನೂ ಸಹ ಗುಣ ಪಡಿಸುತ್ತದೆ ಹೊಟ್ಟೆ ನೋವು ಉಂಟಾದಾಗ ಅರ್ಧ ಈರುಳ್ಳಿಗೆ ಸ್ವಲ್ಪ ಬೆಲ್ಲ ಬೆರೆಸಿ ತಿನ್ನಿ ,ಬೆಲ್ಲ ಇಲ್ಲದೆ ಇದ್ದಲ್ಲಿ ಸಕ್ಕರೆಯನ್ನು ಸಹ ಉಪಯೋಗಿಸಬಹುದು ,ಆದರೆ ಬೆಲ್ಲ ಒಳ್ಳೆಯದು ಅದೂ ಓಲೆ ಬೆಲ್ಲ ಇದ್ದರಂತೂ ಅತ್ಯುತ್ತಮ .
ಬಿಸಿ ನೀರಿನ ಪಟ್ಟಿ
ದಪ್ಪದ ಬಟ್ಟೆಯನ್ನು ಬಿಸಿ ನೀರಿನಲ್ಲಿ ಮುಳುಗಿಸಿ ಹೊಟ್ಟೆಯ ಮೇಲಿಟ್ಟುಕೊಂಡು ಹೊಟ್ಟೆ ನೋವಿಗೆ ವಿದಾಯವನ್ನು ಹೇಳಬಹುದು .ಇಲ್ಲವೇ ನೀರಿನ ಬಾಟಲಿಯಲ್ಲಿ ಬಿಸಿ ನೀರು ತುಂಬಿಸಿ ತಾಪಮಾನ ಭರಿಸುವಷ್ಟು ಬಿಸಿ ನೀರನ್ನು ತುಂಬಿಸಿ ಹೊಟ್ಟೆಯ ಮೇಲೆ ಉರುಳಾಡಿಸಬಹುದು .
ಹೊಟ್ಟೆಯಲ್ಲಿ ವಾಯು ಪ್ರಕೋಪದಿಂದ ನೋವುಂಟಾಗಿದ್ದರೆ ಮನೆಯಲ್ಲೇ ಸುಲಭ ಪರಿಹಾರವಿದೆ .ಒಂದು ಲೋಟ ಮಜ್ಜಿಗೆಗೆ ಸ್ವಲ್ಪ ಇಂಗಿನ ಪುಡಿ ಬೆರೆಸಿ ,ಚಿಟಿಕೆ ಉಪ್ಪನ್ನು ಸೇರಿಸಿ ಕುಡಿಯಬೇಕು .ವಾಯು ಹೊರ ಹೋಗಲು ಇದು ಸಹಾಯ ಮಾಡುತ್ತದೆ.
ಒಂದೆಲಗದ ರಸ
ಇದು ಮಕ್ಕಳ ಹೊಟ್ಟೆ ನೋವಿಗೆ ಹೇಳಿ ಮಾಡಿಸಿದ ಪರಿಹಾರವಾಗಿದೆ .ಒಂದೆಲಗ /ಬ್ರಾಹ್ಮೀ /ತಿಮರೆ ಹೀಗೆ ಇದಕ್ಕೆ ಹೆಸರಿದೆ .ಭೂಮಿಗೆ ಅಂಟಿಕೊಂಡು ಬೆಳೆಯುವ ಈ ಔಷಧೀಯ ಸಸ್ಯ ಹಲವು ರೋಗಗಳಿಗೆ ಪರಿಹಾರ ನೀಡುತ್ತದೆ .ಇದರ ಸೊಪ್ಪನ್ನು ಬೆಳಗ್ಗೆ ಕಿತ್ತು ತಂದು ಸ್ವಲ್ಪ ಬಿಸಿ ನೀರಲ್ಲಿ ಇರಿಸಿ ನಂತರ ಸ್ವಲ್ಪ ಜೀರಿಗೆಯೊಂದಿಗೆ ಗುದ್ದಿ ರಸ ಹಿಂಡಿ ಕುಡಿಯಬೇಕು .ಇದು ಮಕ್ಕಳ ಮಲ ಬದ್ಧತೆಯನ್ನು ಸಹ ಹೋಗಲಾಡಿಸುತ್ತದೆ .
ಹೀಗೆ ಮನೆ ಮದ್ದಿನ ಮುಖಾಂತರ ಹೊಟ್ಟೆ ನೋವನ್ನು ಗುಣ ಪಡಿಸಬಹುದು .ಆದರೆ ತೀವ್ರ ತರವಾದ ,ಎಡೆಬಿಡದೆ ಹೊಟ್ಟೆ ನೋವು ಕಾಣಿಸಿಕೊಂಡಲ್ಲಿ ಆಳವಾದ ತೊಂದರೆಯು ಇರಬಹುದು .ಹರ್ನಿಯಾ ,ಮೂತ್ರಕೋಶದಲ್ಲಿ ಕಲ್ಲು ,ಅಪ್ಪೆಂಡಿಸಿಟಿಸ್,ಕರುಳಿನಲ್ಲಿ ಹುಣ್ಣು ಹೀಗೆ ಗಂಭೀರ ಕಾಯಿಲೆಗಳು ಸಹ ಇರಬಹುದು ,ಆದ್ದರಿಂದ ತೀವ್ರತರವಾದ ಹೊಟ್ಟೆ ನೋವು ಕಾಣಿಸಿದಲ್ಲಿ ತಕ್ಷಣ ವೈದ್ಯರನ್ನು ಕಾಣಲು ಮರೆಯದಿರಿ .
Leave A Reply