ಪಾಲಿಕೆಯ ಹೊಸ ಕಮೀಷನರ್ ಕಿವಿ ಹಿತ್ತಾಳೆಯಾಗದಿದ್ದರೆ ಅಷ್ಟೇ ಸಾಕು!!

ಮಂಗಳೂರಿನ ಪಾಲಿಕೆ ಎನ್ನುವುದು ಕೆಲವು ಕಾರ್ಪೋರೇಟರ್ ಗಳಿಗೆ ವ್ಯವಹಾರಕ್ಕೆ ಒಂದು ಅಂಗಡಿ ಇದ್ದ ಹಾಗೆ. ಅಂತಹ ಕಾರ್ಪೋರೇಟರ್ ಗಳು ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಾರ್ಟಿ ಎರಡೂ ಪಕ್ಷದಲ್ಲಿದ್ದಾರೆ. ಅವರಿಗೆ ಅಲ್ಲಿ ಕುಳಿತುಕೊಳ್ಳಲು, ಚರ್ಚೆ ಮಾಡಲು ಎಲ್ಲಾ ವ್ಯವಸ್ಥೆಗಳಿವೆ. ಡೀಲ್ ಕುದುರಿಸಲು ಕೋಣೆಗಳಿವೆ. ಅದಕ್ಕಾಗಿ ಲೈಟ್, ಫ್ಯಾನ್, ಎಸಿ ನೀಡಲಾಗಿದೆ. ಯಾರಿಂದ ಹೇಗೆ ಎಷ್ಟು ವಸೂಲು ಮಾಡುವುದು ಎಂದು ಚರ್ಚೆ ನಡೆಸಲಾಗುತ್ತದೆ. ಇವರೊಂದು ಸಿಂಡಿಕೇಟ್ ಮಾಡಿಕೊಂಡಿದ್ದಾರೆ. ಪಾಲಿಕೆಗೆ ಹೊಸ ಕಮೀಷನರ್ ಆಗಿ ಯಾರಾದರೂ ಬಂದರೆ ವೈಟ್ ಶರ್ಟ್, ವೈಟ್ ಪ್ಯಾಂಟ್ ಹಾಕಿ ಐದಾರು ಜನ ಒಟ್ಟಿಗೆ ಕಮೀಷನರ್ ಚೇಂಬರಿಗೆ ಹೋಗುತ್ತಾರೆ. ತಮ್ಮ ಬಯೋ ಡಾಟಾವನ್ನು ತಾವೇ ಹೇಳಿಕೊಳ್ಳುತ್ತಾರೆ. ಮೂರ್ನಾಕು ಸಲ ಗೆದ್ದವರು ಎಂದ ಕೂಡಲೇ ಹೊಸ ಕಮೀಷನರ್ ಅವರಿಗೆ ಸಹಜವಾಗಿ ಇವರ ಬಗ್ಗೆ ಗೌರವ ಬರುತ್ತದೆ. ಇವರ ಬಳಿ ಮಂಗಳೂರಿನ ಬಗ್ಗೆ ಕೇಳುತ್ತಾರೆ. ಇವರು ಹೇಳುತ್ತಾರೆ. ಇವರು ಹೇಳಿದ್ದನ್ನು ಹೊಸ ಕಮೀಷನರ್ ನಂಬಿ ಬಿಟ್ಟರೋ ಅಲ್ಲಿಗೆ ಮುಗಿಯಿತು ಎಂದೇ ಲೆಕ್ಕ. ಹಾಗಂತ ಇವರು ಹೇಳಿದ್ದನ್ನು ಕೇಳದೇ ಇದ್ದರೆ ಇವರು ಎಲ್ಲಾ ಪಕ್ಷದವರು ಒಗ್ಗೂಡಿ ಹೆಪ್ಸಿಬಾ ರಾಣಿ ಕೊರ್ಲಪಾಟಿಯವರನ್ನು ಮಾಡಿದ ಹಾಗೆ ಮಂಗಳೂರಿನಿಂದ ಓಡಿಸಿಬಿಡುತ್ತಾರೆ. ಆದ್ದರಿಂದ ಈ ಸ್ಲೋ ಪಾಯಿಸನ್ ಗಳ ಮಾತನ್ನು ಕೇಳಬೇಕು. ಆದರೆ ನಂಬಬಾರದು. ಯಾಕೆಂದರೆ ನಮಗೆ ಹೊಸ ಕಮೀಷನರ್ ಪಾಲಿಕೆಗೆ ಬಂದ ಕೂಡಲೇ ಹೊಸ ಅಭಿವೃದ್ಧಿಯ ನಿರೀಕ್ಷೆ ಇರುತ್ತೆ. ಆದರೆ ಈ ಬಿಳಿ ಶರ್ಟಿನ ಕಪ್ಪು ಮುಖಗಳು ಕಮೀಷನರ್ ಅವರನ್ನು ಅಭಿನಂದಿಸುವ ನೆಪದಲ್ಲಿ ಎದುರು ಕುತ್ಕೊಂಡು ಬಿಟ್ಟರೆ ಮಂಗಳೂರಿನ ಪರಿಸ್ಥಿತಿ ಒಂದು ಚೂರು ಅಭಿವೃದ್ಧಿ ಆಗಲ್ಲ ಎನ್ನುವುದು ಪಕ್ಕಾ. ಹಾಗಾದರೆ ಹೊಸ ಕಮೀಷನರ್ ಏನು ಮಾಡಬೇಕು.
ಮೊದಲಿಗೆ ಹೊಸ ಕಮೀಷನರ್ ಚೆನ್ನಬಸಪ್ಪ ಅವರು ಇಡೀ ಮಂಗಳೂರನ್ನು ಸುತ್ತಬೇಕು. ಆಗ ಅವರಿಗೆ ಈ ತ್ಯಾಜ್ಯದ ರಾಶಿ ಅಲ್ಲಲ್ಲಿ ಬಿದ್ದಿರುವುದು ಕಾಣಿಸುತ್ತದೆ. ನಂತರ ಅವರು ಪಾಲಿಕೆಗೆ ಬಂದು ಇಷ್ಟು ತ್ಯಾಜ್ಯ ಬಿದ್ದಿರಲು ಏನು ಕಾರಣ ಎಂದು ಕೇಳಬೇಕು. ನಂತರ ಮಂಗಳೂರಿನ ತ್ಯಾಜ್ಯ ಸಂಗ್ರಹಣೆ ಹಾಗೂ ವಿಲೇವಾರಿಗೆ ಎಷ್ಟು ಖರ್ಚಾಗುತ್ತದೆ ಎಂದು ಅಧಿಕಾರಿಗಳನ್ನು ಕೇಳಬೇಕು. ಅವರು ಒಂದೂವರೆ ಕೋಟಿಯ ಬಿಲ್ ಪಾವತಿಯಾಗುವುದರ ಬಗ್ಗೆ ಹೇಳುತ್ತಾರೆ. ಆದರೆ ಅಲ್ಲಿ ನಿಜವಾಗಿ ಖರ್ಚು ಆಗುತ್ತಿರುವುದು ಎಷ್ಟು ಎಂದು ಕಣ್ಣಂಚಿನಲ್ಲಿ ನೋಡಿದರೆ 50 ಲಕ್ಷ ರೂಪಾಯಿ ಕೂಡ ಇಲ್ಲ ಎನ್ನುವುದು ಯಾರಿಗಾದರೂ ಅರ್ಥವಾಗುತ್ತದೆ. ಅವರು ಈ ಗುತ್ತಿಗೆಯನ್ನು ವಹಿಸಿರುವ ಆಂಟೋನಿ ವೇಸ್ಟ್ ಮ್ಯಾನೇಜಮೆಂಟಿನವರನ್ನು ಕರೆದು ಕೇಳಬೇಕು. ಅದರೊಂದಿಗೆ ಮೊದಲಿಗೆ ಪಾಲಿಕೆಯಲ್ಲಿ ಅನಾರೋಗ್ಯ ವಿಭಾಗದವರನ್ನು ಕರೆಸಿ ಇಂಜೆಕ್ಷನ್ ಕೊಟ್ಟು ಹುಶಾರು ಮಾಡಬೇಕು. ಆ ವಿಭಾಗದವರಿಗೆ ಆಂಟೋನಿ ವೇಸ್ಟಿನವರ ಮೇಲೆ ಎಷ್ಟು ಪ್ರೀತಿ ಎಂದರೆ ತ್ಯಾಜ್ಯವನ್ನು ತಮ್ಮದೇ ವಿಭಾಗಕ್ಕೆ ತಂದು ಅವರ ಕಾಲಬುಡದಲ್ಲಿಯೇ ರಾಶಿ ಹಾಕಿದ್ರು ಅಧಿಕಾರಿಗಳು ಏನೂ ಹೇಳುವುದಿಲ್ಲ. ಅಷ್ಟು ಪ್ರೀತಿ ಕೆಲವು ಕಾರ್ಪೋರೇಟರ್ ಗಳಿಗೂ ಇದೆ. ತಮ್ಮದೇ ಮನೆಯ ತ್ಯಾಜ್ಯ ತೆಗೆದುಕೊಂಡು ಹೋಗದಿದ್ದರೂ ಮಾತನಾಡದ ಕಾರ್ಪೋರೇಟರ್ ಗಳಿದ್ದಾರೆ. ಯಾಕೆಂದರೆ ಆಂಟೋನಿಯವರು ಅಷ್ಟು ಪ್ರೀತಿಯನ್ನು ಕವರ್ ನಲ್ಲಿ ಹಾಕಿಕೊಡುತ್ತಾರೆ.
ಇನ್ನು ಕಮೀಷನರ್ ಚನ್ನಬಸಪ್ಪನವರು ಈ ಫ್ಲೆಕ್ಸ್, ಹೋರ್ಡಿಂಗ್ಸ್ ನಲ್ಲಿ ಸೋರಿಕೆಯಾಗುತ್ತಿರುವ ಪಾಲಿಕೆಯ ಆದಾಯವನ್ನು ಗಮನಿಸಬೇಕು. ನೂರು ಫ್ಲೆಕ್ಸ್ ಹಾಕಿ ಹತ್ತು ಫೆಕ್ಸ್ ಹಣ ಕಟ್ಟಿ ಮನೆ, ಮಠ ಕಟ್ಟಿ ದುಂಡಗಾಗಿರುವವರು ನಮ್ಮಲ್ಲಿ ಹಲವರಿದ್ದಾರೆ. ಅವರು ಪಾಲಿಕೆಯ ಅಧಿಕಾರಿಗಳನ್ನು ಸಾಕುತ್ತಿದ್ದಾರೆ. ಅವರಿಬ್ಬರಿಗೂ ಸೂಕ್ತ ಚಾಟಿ ಬೀಸಿದರೆ ಮಂಗಳೂರಿಗೆ ಒಳ್ಳೆಯದು. ಇನ್ನು ಮಂಗಳೂರಿನಲ್ಲಿರುವ ಅನಧಿಕೃತ ಕಟ್ಟಡಗಳನ್ನು ಧರಾಶಾಯಿ ಮಾಡುವ ಬಗ್ಗೆ ರಾಜ್ಯದ ಉಚ್ಚ ನ್ಯಾಯಾಲಯ ಎರಡು ರೀತಿಯ ಆದೇಶಗಳನ್ನು ನೀಡಿದೆ. ಕೆಲವು ಕಟ್ಟಡ ಮಾಲೀಕರಿಗೆ ಇನ್ನೊಂದು ಅವಕಾಶ ನೀಡಿ ರೀ ಹಿಯರಿಂಗ್ ಮಾಡಲು ಹೇಳಲಾಗಿದೆ. ಇನ್ನು ಕಮೀಷನರ್ ಆದೇಶದ ವಿರುದ್ಧ ಹೋದವರಿಗೆ ಸೋಲಾಗಿದೆ. ಆದ್ದರಿಂದ ಅಂತಹ ಕಟ್ಟಡಗಳನ್ನು ತೆಗೆಯಲು ಹೊಸ ಕಮೀಷನರ್ ಮುಂದಾಗಬೇಕಿದೆ. ಇದರೊಂದಿಗೆ ಪಾಲಿಕೆಯಲ್ಲಿಯೇ ಶಿಸ್ತು ಮೊದಲಿಗೆ ಬರಬೇಕು. ಬಹುತೇಕ ಜನ ಸಿಬ್ಬಂದಿಗಳು ಪಾಲಿಕೆಯನ್ನು ಮಾವನ ಮನೆ ಅಂದುಕೊಂಡು ಬಿಟ್ಟಿದ್ದಾರೆ. ಬರುವುದಕ್ಕೆ, ಹೋಗುವುದಕ್ಕೆ ಸಮಯವೇ ಇಲ್ಲದಂತೆ ಆಗಿದೆ. ಎಷ್ಟೊತ್ತಿಗೋ ಬರುವುದು, ಸಂಜೆ ಮಾತ್ರ ನಿಗದಿತ ಸಮಯಕ್ಕಿಂತ ಎಷ್ಟೋ ಮೊದಲು ಹೋಗುವುದು. ಇದು ನಡೆಯುತ್ತಿದೆ. ಇನ್ನು ಪಾಲಿಕೆಯ ಭ್ರಷ್ಟಾಚಾರ ಯಾವ ಮಟ್ಟದಲ್ಲಿ ಇದೆ ಎಂದರೆ ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸಲು ಇರುವ ಥರ್ಢ್ ಪಾರ್ಟಿಯೊಂದಿಗೂ ಅಧಿಕಾರಿಗಳ ಮತ್ತು ಕಾರ್ಪೋರೇಟರ್ ಗಳ ಸೆಟ್ಟಿಂಗ್ ಇದೆ. ಇದನ್ನು ಕೂಡ ಹೊಸ ಕಮೀಷನರ್ ಗಮನಿಸಬೇಕು. ಯಾವುದಾದರೂ ಸಂಶಯ ಬಂದ ಕಾಮಗಾರಿಯಲ್ಲಿ ಖುದ್ದಾಗಿ ತಾವೇ ಇಳಿದು ಅದಕ್ಕೆ ಯೋಗ್ಯ ಕಾಯಕಲ್ಪ ನೀಡಬೇಕು. ಇಲ್ಲದಿದ್ದರೆ ಪಾಲಿಕೆಯ ಹಂಚಿ ತಿನ್ನುವ ಬುದ್ಧಿಯಿಂದ ಜನರ ತೆರಿಗೆಯ ಹಣ ಪೋಲಾಗುತ್ತಾ ಹೋಗುತ್ತದೆ. ಹೀಗೆ ಇನ್ನು ಅನೇಕ ವಿಷಯಗಳು ಇವೆ. ಅದನ್ನು ಮುಂದಿನ ದಿನಗಳಲ್ಲಿ ಹೊಸ ಕಮೀಷನರ್ ಅವರ ಮುಂದೆ ಇಡುವ ಪ್ರಯತ್ನ ಮಾಡುತ್ತೇನೆ. ಆದರೆ ಅವರಿಗೆ ನಮ್ಮಂತಹ ಜನರ ಸಲಹೆಗಿಂತಲೂ ಕಲ್ಲಿಗೆ ಜೇನು ತುಪ್ಪ ಸವರಿ ನೆಕ್ಕಲು ಕೊಡುವ ಕಾರ್ಪೋರೇಟರ್ ಗಳ ಗುಣವೇ ಇಷ್ಟವಾದರೆ ಏನೂ ಮಾಡಲು ಆಗುವುದಿಲ್ಲ!
Leave A Reply