ದೆಹಲಿ ಸರಕಾರದ ಸರಕಾರಿ ಶಾಲೆಗಳ ಗಬ್ಬುನಾತ ಬಯಲಿಗೆ!!
ಮಾತನಾಡಿದರೆ ಆಮ್ ಆದ್ಮಿ ಪಕ್ಷದವರು ನಮ್ಮ ದೆಹಲಿ ಸರಕಾರಿ ಶಾಲೆಗಳನ್ನು ನೋಡಿ ಎಂದು ಸವಾಲೆಸೆಯುತ್ತಾರೆ. ನಾವು ಸರಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳ ಲೆವೆಲ್ಲಿಗೆ ಬೆಳೆಸಿದ್ದೇವೆ ಎಂದು ಪೋಸ್ ನೀಡುತ್ತಾರೆ. ಅದನ್ನೇ ಇಡೀ ದೆಹಲಿಯ ಮಾಡೆಲ್ ಎಂದು ಹೇಳಿಕೊಂಡು ತಿರುಗಾಡುತ್ತಾರೆ. ನಮಗೆ ಮತ ನೀಡಿದರೆ ಏನು ಮಾಡಿ ತೋರಿಸುತ್ತೇವೆ, ನೋಡಿ ಎಂದು ಭಾಷಣ ಬಿಗಿಯುತ್ತಾರೆ. ಮನಿಶ್ ಸಿಸೋಡಿಯಾ ತಾವು ಒಂದೆರಡು ಶಾಲೆಗಳನ್ನು ಹಾಗೆ ಮಾಡಿ ಅದರ ಫೋಟೋಗಳನ್ನೇ ಹಿಡಿದುಕೊಂಡು ಇಡೀ ದೇಶ ಸುತ್ತಿಬಿಟ್ಟರು. ಕೇಜ್ರಿವಾಲ್ ಎಲ್ಲಿಗೆ ಹೋದರೂ ದೆಹಲಿ ಸ್ಕೂಲ್ ಕ್ಯಾ ಕರಚುಕೇ ಹಮ್ ದೆಕೋ ಎಂದು ಎದೆಯುಬ್ಬಿಸಿ ಹೇಳುತ್ತಿರುತ್ತಾರೆ. ಅದನ್ನು ನೋಡಿ ನಮ್ಮ ರಾಜ್ಯದಲ್ಲಿಯೂ ಇದೇ ಆಪ್ ಸರಕಾರ ಬರಲಿ ಎಂದು ಬಯಸಿ ಕೆಲವರು ಟೋಪಿ ಹಾಕಿಸಿಕೊಂಡು ಚುನಾವಣೆಗೆ ನಿಂತಿದ್ದಾರೆ. ಆ ಟೋಪಿಯಲ್ಲಿ ಹಿಡಿಸೂಡಿಯ ಫೋಟೋ ಮತ್ತು ಕೇಜ್ರಿವಾಲ್ ಮುಖ ಇದೆ. ಆದರೆ ದೆಹಲಿಯ ಈಗಿನ ಶಿಕ್ಷಣ ಸಚಿವೆ ಅತಿಶಿ ಎನ್ನುವವರು ಮಾತ್ರ ತಮ್ಮ ರಾಜ್ಯದ ಸರಕಾರಿ ಶಾಲೆಗಳ ನಿಜಬಣ್ಣವನ್ನು ಬಯಲಿಗೆ ಎಳೆದು ಇದು ದೆಹಲಿ ಮಾಡೆಲ್ ಎಂದು ಬಹಿರಂಗಪಡಿಸಿದ್ದಾರೆ. ಅಲ್ಲಿಗೆ ದೆಹಲಿ ಸರಕಾರದ ಒಳಗಿನ ಬಣ್ಣ ಹೊರಗೆ ಕಾಣಿಸುತ್ತಿದೆ.
ಕೇಜ್ರಿವಾಲ್ ಹೇಳಿಕೇಳಿ ಬಣ್ಣಬಣ್ಣಗಳ ಆಟಿಕೆಗಳನ್ನು ಮಾರುವ ಪಕ್ಕಾ ಸಂತೆಯ ವ್ಯಾಪಾರಿಯ ತರಹ ರಾಜಕೀಯದಲ್ಲಿಯೂ ಅದನ್ನೇ ಬಳಸಿ ಎಣಿ ಹತ್ತಲು ಹೊರಟು ಅದರಲ್ಲಿ ಒಂದಿಷ್ಟು ಯಶಸ್ಸು ಕಂಡಿದ್ದಾರೆ.
ಅವರಿಗೆ ಈ ವಿಷಯದಲ್ಲಿ ಹೆಗಲಿಗೆ ಹೆಗಲು ಕೊಟ್ಟು ಸುಳ್ಳುಗಳನ್ನು ಪೋಣಿಸುತ್ತಾ ಬರುತ್ತಿದ್ದವರು ಮನೀಶ್ ಸಿಸೋಡಿಯಾ. ಈಗ ಸೀಸೋಡಿಯಾ ಜೈಲಿನಲ್ಲಿ ಇರುವುದರಿಂದ ಅವರ ಕೈಯಲ್ಲಿದ್ದ ಶಿಕ್ಷಣ ಖಾತೆಗೆ ಅವರು ಬರುವ ತನಕ ಅತಿಶಿ ಎನ್ನುವ ಮಹಿಳೆಯ ಕೈಗೆ ನೀಡಲಾಗಿದೆ. ಇದೇ ಅತಿಶಿ ತಾವು ಕೂಡ ಲೇಡಿ ಸಿಂಗಂ ಆಗುವ ನಿಟ್ಟಿನಲ್ಲಿ ಒಂದು ಸರಕಾರಿ ಶಾಲೆಗೆ ದಿಢೀರ್ ಭೇಟಿ ನೀಡಿದ್ದರು. ಆ ಸಮಯದಲ್ಲಿ ಅಲ್ಲಿ ವಿಡಿಯೋ ಮಾಡುವವರನ್ನು ಕೂಡ ಕರೆದುಕೊಂಡು ಹೋದ ಅತಿಶಿ ತಮ್ಮೊಂದಿಗೆ ದೆಹಲಿಯ ಮೇಯರ್ ಅವರನ್ನು ಕೂಡ ಕರೆದುಕೊಂಡು ಹೋಗಿದ್ದಾರೆ. ಸಾಮಾನ್ಯವಾಗಿ ಒಬ್ಬ ವ್ಯಕ್ತಿ ವಿರೋಧ ಪಕ್ಷದಲ್ಲಿದ್ದಾಗ ಸರಕಾರವನ್ನು ಆಗ್ರಹಿಸುವುದು, ಆಕ್ರೋಶ ವ್ಯಕ್ತಪಡಿಸುವುದು ಎಲ್ಲವೂ ಸರ್ವೇ ಸಾಮಾನ್ಯ. ಆದರೆ ಅದೇ ವ್ಯಕ್ತಿ ಆಡಳಿತ ಪಕ್ಷದಲ್ಲಿ ಬಂದು ಅದರೊಂದಿಗೆ ಸರಕಾರದ ಭಾಗವಾಗಿ ಸಚಿವರಾದರೆ ಆಗ ಅವರೇ ತಮ್ಮ ಸರಕಾರದ ಬಂಡವಾಳವನ್ನು ಬಯಲಿಗೆ ಎಳೆಯುವುದು ಇದೆಯಲ್ಲ, ಅದು ಒಂದು ರೀತಿಯಲ್ಲಿ ತಮ್ಮ ಕಾಲಿನ ಮೇಲೆ ತಾವೇ ಕಲ್ಲು ಎತ್ತಿ ಹಾಕಿದ ಹಾಗೆ. ಆಪ್ ಸರಕಾರದ ಶಿಕ್ಷಣ ಸಚಿವೆಯ ವಿಡಿಯೋ ಹೇಗಿದೆ ಎಂದರೆ ಒಂದು ಸರಕಾರಿ ಶಾಲೆಯ ವಸ್ತುಸ್ಥಿತಿಯನ್ನು ಎಳೆಎಳೆಯಾಗಿ ಬಿಡಿಸಿಟ್ಟು ತಮ್ಮ ಸರಕಾರಕ್ಕೆ ತಾವೇ ಮುಜುಗರ ತಂದಿಟ್ಟುಕೊಂಡಿದ್ದಾರೆ. 2018 ರಂದು ಇದೇ ಕೇಜ್ರಿವಾಲ್ ದೆಹಲಿಯ 200 ಸರಕಾರಿ ಶಾಲೆಯ ಶಿಕ್ಷಕರನ್ನು ಸಿಂಗಾಪುರ, ಫಿನಲ್ಯಾಂಡ್, ಅಮೇರಿಕಾಕ್ಕೆ ಕಳುಹಿಸಿ ಅಲ್ಲಿ ಅಧ್ಯಯನ ಮಾಡಿ ಅದನ್ನು ಮಕ್ಕಳಿಗೆ ಇಲ್ಲಿ ಕಲಿಸಿ ಎಂದು ಕಳುಹಿಸಿಕೊಟ್ಟಿದ್ದರು. ಸರಕಾರದ ಹಣದಲ್ಲಿ ಇದನ್ನು ಮಾಡಿದ್ದರೂ ತಮ್ಮ ಬೆನ್ನು ತಾವೇ ತಟ್ಟಿಕೊಂಡಿದ್ದರು. ಆ ಶಿಕ್ಷಕರು ದೆಹಲಿಗೆ ಮರಳಿದ ಕೆಲವು ಯೋಜನೆಗಳನ್ನು ಜಾರಿಗೆ ತರುವುದಾಗಿ ಸರಕಾರ ಘೋಷಣೆ ಮಾಡಿತ್ತು.
ಈ ಮೂಲಕ ದೆಹಲಿ ಸರಕಾರ ತಾನು ಕ್ರಾಂತಿಕಾರಿ ಬದಲಾವಣೆ ಮಾಡುತ್ತಿದೆ ಎಂದು ಕೋಟಿಗಟ್ಟಲೆ ಜಾಹೀರಾತು ವ್ಯಯಿಸಿ ಪುಕ್ಕಟೆ ಪ್ರಚಾರ ಪಡೆದುಕೊಂಡಿತ್ತು. ಇವರ ಸುಳ್ಳು ಪ್ರಚಾರವನ್ನು ಭಾರತೀಯ ಜನತಾ ಪಾರ್ಟಿ ಖಂಡಿಸಿದ್ದಕ್ಕೆ ಅವರಿಗೆ ಹೊಟ್ಟೆಕಿಚ್ಚು, ಸಿಸೋಡಿಯಾ ಅವರನ್ನು ನೋಡಿದರೆ ಬಿಜೆಪಿಗೆ ಮತ್ಸರ ಎಂದು ಆಪ್ ಹೇಳಿಕೊಂಡು ತಿರುಗಾಡಿತ್ತು. ಆದರೆ ಯಾವಾಗ ಸಿಸೋಡಿಯಾ ಜೈಲ್ ಒಳಗೆ ಸೆಟ್ಲ್ ಆದರೋ ಅವರ ಸರಕಾರದ ಮುಚ್ಚಿಟ್ಟ ಹುಳುಕುಗಳನ್ನು ಅವರದ್ದೇ ಸಚಿವರು ಹೊರಗೆ ಹಾಕುತ್ತಿದ್ದಾರೆ. ಒಂದು ವಿಡಿಯೋದಲ್ಲಿ ನೀವು ಸೂಕ್ಷ್ಮವಾಗಿ ನೋಡಿದರೆ ಶಿಕ್ಷಣ ಸಚಿವರು ಶಾಲೆಯೊಂದಕ್ಕೆ ಭೇಟಿ ಕೊಟ್ಟಾಗ ಮುಖ್ಯೋಪಾಧ್ಯಾಯರೇ ಅಲ್ಲಿಲ್ಲ. ತಾನು ಎಲ್ಲಿಗೋ ಹೋಗಿದ್ದೇನೆ ಎಂದು ಫೊನ್ ಮಾಡಿದಾಗ ಹೇಳುತ್ತಾರೆ. ಯಾರಿಗೆ ಬೇರೆ ಜವಾಬ್ದಾರಿ ನೀಡಿದ್ದೀರಿ ಎಂದು ಕೇಳಿದ್ದಕ್ಕೆ ಅವರು ಹೇಳಿದ ವ್ಯಕ್ತಿ ಶಾಲೆಗೆ ಬರಲೇ ಇಲ್ಲ. ಇನ್ನು 49 ಮಕ್ಕಳು ಇದ್ದರೆ ಅದರಲ್ಲಿ 14 ಮಾತ್ರ ಬಂದಿರುವುದು ಕೂಡ ಪತ್ತೆಯಾಗಿದೆ. ಅದರೊಂದಿಗೆ ಮಕ್ಕಳು ಬಳಸಬೇಕಾದ ಪೀಠೋಪಕರಣಗಳನ್ನು ಒಂದು ಕೋಣೆಯಲ್ಲಿ ಸಂಗ್ರಹಿಸಿಟ್ಟು ಮಕ್ಕಳನ್ನು ನೆಲದ ಮೇಲೆ ಕುಳ್ಳಿರಿಸಲಾಗಿದೆ. ಆ ಟೇಬಲ್, ಖುರ್ಚಿಯ ಬಗ್ಗೆ ಕೇಳಿದ್ದಕ್ಕೆ ಅದು ಶಾಲೆಯ ವಾಚ್ ಮೆನ್ ರಾತ್ರಿ ತಂಗಲು ಬಳಸುತ್ತಾರೆ ಎಂದು ಅಲ್ಲಿದ್ದ ಶಿಕ್ಷಕರು ಹೇಳುತ್ತಾರೆ. ಇನ್ನು ತರಗತಿ ಕೊಠಡಿಯ ಒಳಗೆ ಏಣಿ ಇದೆ. ಕೋಣೆ ಗಬ್ಬು ನಾರುತ್ತಿದೆ. ಅಲ್ಲಿ ಕಲಿಯುವುದು ಬಿಡಿ, ಮಕ್ಕಳು ಬರುವುದೇ ದೊಡ್ಡ ಸಾಹಸ. ಹೀಗಿರುವಾಗ ಮಕ್ಕಳು ಶಾಲೆಯಲ್ಲಿ ಹೇಗೆ ತಾನೆ ಕಲಿಯಬಲ್ಲರು. ಇಂತಹ ಸರಕಾರಿ ಶಾಲೆಗಳು ದೆಹಲಿಯಲ್ಲಿ ಒಂದೆರಡಲ್ಲ. ಆದರೆ ಹೊರಗಿನ ಪ್ರಪಂಚಕ್ಕೆ ನೋಡುವಾಗ ದೆಹಲಿಯ ಶಾಲೆಗಳನ್ನು ರೋಲ್ ಮಾಡೆಲ್ ತರಹ ಬಿಂಬಿಸಲಾಗಿದೆ. ಅದು ಆಪ್ ಸರಕಾರದ ಮಾರುಕಟ್ಟೆ ತಂತ್ರ. ಅದಕ್ಕಾಗಿ ಕೇಜ್ರಿವಾಲ್ ಮತ್ತು ಸಿಸೋಡಿಯ ಪ್ಲಾನ್ ಹೆಣೆದಿದ್ದರು. ಈಗ ಸಿಸೋಡಿಯಾ ಜಾಗದಲ್ಲಿ ಆತಿಶಿ ಬಂದಿದ್ದಾರೆ. ಅಸಲಿ ಕಥೆ ಹೊರಗೆ ಬಂದಿದೆ. ಯಾವ ವಿಷಯವನ್ನು ಹೆಚ್ಚು ಕಾಲ ಮುಚ್ಚಿಡಲು ಆಗುವುದಿಲ್ಲ. ಕಾಗೆ ಬಂಗಾರ ಕೂಡ ಒಂದು ದಿನ ಹೊಳಪು ಕಳೆದುಕೊಳ್ಳುತ್ತದೆ. ಆಗ ಸತ್ಯ ಜನರಿಗೆ ಗೊತ್ತಾಗುತ್ತದೆ. ಅಲ್ಲಿಯ ತನಕ ಮಾತ್ರ ಆಟ ಚಾಲ್ತಿಯಲ್ಲಿ ಇರುತ್ತದೆ!
Leave A Reply