ಡಿಫರೆಂಟ್ ಮಿನಿಸ್ಟರ್!
ಡಿಸಿ ಕಚೇರಿಯ ಹೊಸ ಕಟ್ಟಡದ ನಕ್ಷೆ ತಯಾರಿಸಿದ ಇಂಜಿನಿಯರ್ ಯಾರೋ?
ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಕಚೇರಿ ಸಂಕೀರ್ಣಕ್ಕೆ ಬಾಲಗ್ರಹ ಪೀಡೆ ತಗುಲಿದೆ. ಕಟ್ಟಡ ರಚನೆಗೆ ನಾಂದಿ ಹಾಕಿ 6 ವರ್ಷಗಳ ಮೇಲಾಗಿದೆ. ಕಳೆದ ಬಾರಿ ಸಿದ್ಧರಾಮಯ್ಯನವರದ್ದೇ ಸರಕಾರ ಇದ್ದಾಗ ಅದರ ಕೆಲಸಕ್ಕೆ ಚಾಲನೆ ನೀಡಲಾಗಿತ್ತು. ಅದಾಗಿ ಈಗ ಮತ್ತೆ ಸಿದ್ದು ಸರಕಾರ ಬಂದಿದೆ. ಮಧ್ಯದ ಐದು ವರ್ಷಗಳ ಅವಧಿಯಲ್ಲಿ ನಮ್ಮ ಜನಪ್ರತಿನಿಧಿಗಳು ಅಲ್ಲಿ ಹೋಗುವುದು, ಅಲ್ಲಿ ನಕ್ಷೆ ನೋಡುವುದು, ಕೆಲವು ಸಲಹಾ ಇಂಜಿನಿಯರ್ ಗಳು ಅವರಿಗೆ ವಿವರಿಸುವುದು, ಅಲ್ಲಿಂದ ಸರ್ಕ್ಯೂಟ್ ಹೌಸಿಗೆ ಬರುವುದು, ಕೋಣೆಯಲ್ಲಿ ಕುಳಿತು ಚಾ ಕುಡಿಯುವುದು ಎಲ್ಲವೂ ನಡೆಯುತ್ತಲೇ ಇರುತ್ತಿತ್ತು. ಆದರೆ ಇನ್ನು ಹಾಗೆ ಆಗುವ ಲಕ್ಷಣ ಇಲ್ಲ. ಏಕೆಂದರೆ ಸಪೂರ ದೇಹದ, ಇಂಜಿನಿಯರಿಂಗ್ ಪದವಿಯನ್ನು ಅಮೇರಿಕಾದಿಂದ ಕಲಿತುಬಂದ, ರಾಜಕಾರಣವನ್ನು ಚಮಚಾದಲ್ಲಿ ಬಾಯಿಯಲ್ಲಿ ಇಟ್ಟುಕೊಂಡೇ ಹುಟ್ಟಿದ, ಮಾತನಾಡಲು ನಿಂತರೆ ಪಕ್ಕಾ ರೈತನಾಗಿ, ಚಾಟಿ ಬೀಸಲು ನಿಂತರೆ ಪಕ್ಕಾ ಸಿಡಿಗುಂಡಿನಂತೆ ಮತ್ತು ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಖಾಯಂ ಸಚಿವರಾಗಿ ಇರುವ ಕೃಷ್ಣ ಭೈರೇಗೌಡರು ಮೊನ್ನೆಯಷ್ಟೇ ಕಂದಾಯ ಸಚಿವರಾಗಿ ಮಂಗಳೂರಿಗೆ ಬಂದಿದ್ರು.
ಡಿಫರೆಂಟ್ ಮಿನಿಸ್ಟರ್!
ಮಂಗಳೂರಿಗೆ ಬೇರೆ ಬೇರೆ ಸರಕಾರಗಳು ಇದ್ದಾಗ ಹಲವಾರು ಸಚಿವರು ಬಂದು ಹೋಗಿದ್ದಾರೆ. ಹೆಚ್ಚಿನವರು ಬರಬೇಕಲ್ಲ ಎಂದು ಬರುವುದು, ಬಂದ ಮೇಲೆ ಸರಕಾರಿ ಅತಿಥಿ ಗೃಹದಲ್ಲಿ ನಿಲ್ಲುವುದು. ಊಟ, ಉಪಚಾರ ಸ್ವೀಕರಿಸಿ ಬಂದ ಕರ್ಮಕ್ಕೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸುವುದು. ಹೆಚ್ಚೆಂದರೆ ಯಾವುದೇ ಕಾಮಗಾರಿ ಆಗುವ ಕಡೆ ಹೋಗಿ ನೋಡಿದಂತೆ ಮಾಡುವುದು ಮತ್ತು ಕೊನೆಗೆ ಅದಕ್ಕೂ ನಮಗೂ ಸಂಬಂಧವಿಲ್ಲದಂತೆ ತೆರಳುವುದು. ಹೆಚ್ಚೆಂದರೆ ಅಲ್ಲಿ ಅಧಿಕಾರಿಗಳನ್ನು ಹೇಳಿದ್ದನ್ನು ಗಿಳಿಪಾಠದಂತೆ ಮಾಧ್ಯಮಗಳ ಎದುರು ಒಪ್ಪಿಸುವುದು ಅಲ್ಲಿಂದ ವಿಮಾನ ಹತ್ತಿ ಬೆಂಗಳೂರಿಗೆ ಹೋಗುವುದು, ಹೀಗೆ ವಿವಿಧ ಇಲಾಖೆಗಳ ಸಚಿವರ ಕಾರ್ಯಚಟುವಟಿಕೆಗಳು ನಡೆಯುತ್ತಲೇ ಬರುತ್ತಿದೆ. ಆದರೆ ಕೃಷ್ಣ ಭೈರೇಗೌಡರು ಹಾಗೆ ಅಲ್ಲ. ಅವರಿಗೆ ಅನೇಕ ವಿಷಯಗಳ ಬಗ್ಗೆ ಆಳವಾದ ಮಾಹಿತಿ ಮತ್ತು ಅದರೊಂದಿಗೆ ಅದನ್ನು ನಿಭಾಯಿಸುವ ಜ್ಞಾನ ಇದೆ. ಅಧಿಕಾರಿಗಳು ಏನಾದರೂ ಹೇಳಿದಾಗ ಅದನ್ನು ಕ್ರಾಸ್ ಚೆಕ್ ಮಾಡುತ್ತಾರೆ. ಮೊನ್ನೆ ಜಿಲ್ಲಾಧಿಕಾರಿ ಕಚೇರಿಯ ನೂತನ ಕಟ್ಟಡ ಆಗುವ ಪಡೀಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅವರು ಕೇಳಿದ್ದು ಒಂದೇ ಪ್ರಶ್ನೆ. ಈ ಕ್ರಿಕೆಟಿನಲ್ಲಿ ಹೆಲಿಕಾಪ್ಟರ್ ಶಾಟ್ ಎನ್ನುತ್ತಾರಲ್ಲ, ಹಾಗೆ. ಇಷ್ಟು ದೊಡ್ಡ ಕಟ್ಟಡ ಬೇಕಿತ್ತಾ? ಈ ಉತ್ತರ ಬಂದಾಗಲೆಲ್ಲಾ ಅಧಿಕಾರಿಗಳ ಬಳಿ ಫಿಕ್ಸ್ ಉತ್ತರ ಇರುತ್ತದೆ. ಅದೇನೆಂದರೆ ಎಲ್ಲಾ ಸರಕಾರಿ ಕಚೇರಿಗಳು ಒಂದೇ ಕಡೆ ಬರುತ್ತವೆ. ಅದಕ್ಕೆ ಸಚಿವರ ಉತ್ತರ ಕೂಡ ಬ್ಯಾಟ್ ರಿವರ್ಸ್ ಇಟ್ಟು ಸಿಕ್ಸ್ ಹೊಡೆದ ಹಾಗೆ ಇತ್ತು.
ಅಧಿಕಾರಿಗಳನ್ನು ಪ್ರತಿ ಸಲ ಕಣ್ಣುಮುಚ್ಚಿ ನಂಬಬಾರದು!
ಮಂಗಳೂರಿನಲ್ಲಿ ತಾಲೂಕು ಕಚೇರಿ ಸ್ವಂತದ್ದು ಇದೆ. ಅದರಲ್ಲಿ ಹಲವಾರು ಕಚೇರಿಗಳು ಇವೆ. ಹಾಗಿರುವಾಗ ಅವೆಲ್ಲಾ ಇಲ್ಲಿಗೆ ಬಂದರೆ ಆ ಕಟ್ಟಡ ಏನು ಮಾಡುವುದು ಎನ್ನುವ ಅರ್ಥದ ಮಾತುಗಳನ್ನು ಹೇಳಿದ್ದಾರೆ. ಇನ್ನು ಈಗಾಗಲೇ 59 ಕೋಟಿಯಷ್ಟು ಖರ್ಚಾಗಿದೆ. ಇನ್ನು 29 ಕೋಟಿ ರೂಪಾಯಿಗಳಷ್ಟು ಬೇಕಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಬಹುಶ: ಕೃಷ್ಣ ಭೈರೇಗೌಡರು ಒಪ್ಪುವಂತೆ ಕಾಣುತ್ತಿಲ್ಲ. ಜನರ ತೆರಿಗೆಯ ಹಣವನ್ನು ಪೋಲು ಮಾಡಲು ಅವರು ಸಮ್ಮತಿಸುತ್ತಿಲ್ಲ. ನನ್ನ ಪ್ರಕಾರ ಎಲ್ಲಾ ಜನಪ್ರತಿನಿಧಿಗಳು ಹೀಗೆ ಇರಬೇಕು. ಆಗಲೇ ಅಧಿಕಾರಿಗಳಿಗೆ ಹೆದರಿಕೆ ಎನ್ನುವುದು ಇರುತ್ತದೆ. ಒಟ್ಟಿನಲ್ಲಿ ಕಾಂಗ್ರೆಸ್ಸಿಗರೇ ಶಿಲಾನ್ಯಾಸ ಮಾಡಿದ್ದು ಅವರೇ ಉದ್ಘಾಟನೆ ಮಾಡಲು ಅವಕಾಶ ಸಿಗುವ ಲಕ್ಷಣ ಇದರಿಂದ ಕಾಣುತ್ತಿದೆ. ಅದೃಷ್ಟ ಅಂದರೆ ಅದು!
Leave A Reply