ಮೋದಿ ಭೇಟಿ ಕೊಟ್ಟ ಆಂಧ್ರಪ್ರದೇಶದ ವೀರಭದ್ರ ದೇವಸ್ಥಾನಕ್ಕೆ ರಾಮಾಯಣ ಕನೆಕ್ಷನ್!
ಭಾರತದಲ್ಲಿರುವ ವಿವಿಧ ರಾಜ್ಯಗಳಲ್ಲಿ ಶ್ರೀರಾಮನ ಹೆಜ್ಜೆಗಳ ಗುರುತುಗಳು ಇರುವುದನ್ನು ನಾವು ವಿವಿಧ ಮೂಲಗಳಿಂದ ಕೇಳಿ ತಿಳಿದುಕೊಂಡಿದ್ದೇವೆ. ಪ್ರಸ್ತುತ ಆಂಧ್ರಪ್ರದೇಶದ ಲೇಪಾಕ್ಷಿಯಲ್ಲಿರುವ ವೀರಭದ್ರ ದೇವಸ್ಥಾನಕ್ಕೂ ಭಗವಂತ ರಾಮನಿಗೂ ಪೌರಾಣಿಕ ಲಿಂಕ್ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿಯವರು ಈ ದೇವಸ್ಥಾನಕ್ಕೆ ಭೇಟಿ ಕೊಟ್ಟ ಬಳಿಕ ಅದರ ವಿಶಿಷ್ಟತೆ ಜಗತ್ತಿಗೆ ಗೊತ್ತಾಗಿದೆ.
ಸೀತಾ ಮಾತೆಯನ್ನು ರಾವಣ ಅಪಹರಿಸುವಾಗ ಜಟಾಯು ರಾವಣನನ್ನು ಬೆನ್ನಟ್ಟಿದ್ದ ಕಥೆ ನಾವು ಕೇಳಿದ್ದೇವೆ. ಬಳಿಕ ರಾವಣನ ವಿರುದ್ಧ ಪ್ರಬಲ ಹೋರಾಟ ಮಾಡಿ ಆತನ ದಾಳಿಯಿಂದ ನೆಲಕ್ಕೆ ಬಿದ್ದು ಜಟಾಯು ಸಾಯುವ ಸ್ಥಿತಿಯಲ್ಲಿತ್ತು. ಆದರೆ ಶ್ರೀರಾಮ ಸೀತಾದೇವಿಯನ್ನು ಹುಡುಕಿ ಆ ದಾರಿಯಲ್ಲಿ ಬರುವುದನ್ನು ಕಾದು ರಾವಣ ಅಪಹರಿಸಿದ ವಿಚಾರವನ್ನು ಶ್ರೀರಾಮನಿಗೆ ತಿಳಿಸಿ ಬಳಿಕ ಇಹಲೋಕ ತ್ಯಜಿಸಿತ್ತು. ನಂತರ ರಾಮ ಜಟಾಯುವಿನ ಅಂತ್ಯಕ್ರಿಯೆ ನಡೆಸಿ ಮೋಕ್ಷ ಕಲ್ಪಿಸಿದ್ದ ಎಂಬ ಪ್ರತೀತಿ ಇದೆ.
ಮೋದಿ ಈ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಇದರ ವಿಶೇಷತೆಯನ್ನು ಕಂಡು ಕೆಲವರು ಜಟಾಯುವಿನ ಸ್ವಾಮಿನಿಷ್ಟೆಯನ್ನು ಕೊಂಡಾಡಿದ್ದಾರೆ. ತನ್ನ ಶಕ್ತಿ ಸಾಮರ್ತ್ಯವನ್ನು ಪಣಕ್ಕಿಟ್ಟು ಸೀತೆಯನ್ನು ಉಳಿಸಲು ಹೋರಾಡಿದ ಜಟಾಯುವಿನ ತ್ಯಾಗ ನಿಜಕ್ಕೂ ಅಜರಾಮರವಾಗಿದೆ. ಇಲ್ಲಿ ಸೀತಾಮಾತೆಯನ್ನು ಸ್ತ್ರೀಶಕ್ತಿ ಎಂದು ನಾವು ಪರಿಗಣಿಸಿದರೆ ಜಟಾಯುವಿನ ಶೌರ್ಯ ಮತ್ತು ಬಲಿದಾನವನ್ನು ನಮ್ಮಲ್ಲಿ ಆವಾಹನೆ ಮಾಡಿ ಇಂದಿನ ಕಾಲದಲ್ಲಿ ಮಾಡಬೇಕಾದ ಕಾರ್ಯ ಹಲವಿದೆ ಎನ್ನುವುದು ಜಟಾಯುವಿನ ಅಧ್ಯಾಯದಿಂದ ಕಲಿಯಬೇಕಾದ ಸಂಗತಿಗಳಾಗಿವೆ. ಆಂಧ್ರಪ್ರದೇಶ, ಕೇರಳ ಪ್ರವಾಸದಲ್ಲಿರುವ ಮೋದಿಯವರು ಕೇರಳದ ಗುರುವಾಯನಕೆರೆ ಮತ್ತು ತ್ರಿಪ್ರಯಾರ್ನ ಶ್ರೀ ರಾಮಸ್ವಾಮಿ ದೇವಾಲಯಗಳಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ ಎಂದು ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ.
Leave A Reply