ಮೊದಲ ಪ್ರಾಣಪ್ರತಿಷ್ಠೆ ಮಾಡಿದವರಾರು ?!
ಅಯೋಧ್ಯೆಯ ರಾಮಮಂದಿರ ಉದ್ಘಾಟನೆಯ ದಿನ ಹತ್ತಿರ ಬಂದ ಹಾಗೆ , ನಮ್ಮಲ್ಲಿ ಮೂಡಿದ ಪ್ರಶ್ನೆ – ಮೊದಲ ಪ್ರಾಣಪ್ರತಿಷ್ಠೆ ಮಾಡಿದವರಾರು ?!
ಪುರಾಣಗಳ ಪ್ರಕಾರ , ಅಯೋಧ್ಯೆ ಮೂಲತಃ ಸರಿಸುಮಾರು 13×3 ಯೋಜನ ವಿಸ್ತೀರ್ಣದ , ಕೋಸಲ ದೇಶದ ರಾಜಧಾನಿ. ಇದನ್ನು ಮನು ಮಹರ್ಷಿ ಕಟ್ಟಿದ್ದೆನ್ನಲಾಗುತ್ತದೆ. ಇಕ್ಷ್ವಾಕು ವಂಶದ ರಾಜ ಬೃಹದ್ಬಲ ಕೌರವರ ಪರವಾಗಿ ಕುರುಕ್ಷೇತ್ರದಲ್ಲಿ ಹೊಡೆದಾಡಿ ಅಭಿಮನ್ಯುವಿನಿಂದ ಹತನಾದ ಬಳಿಕ , ಅಯೋಧ್ಯೆ ಪಾಳು ಬಿತ್ತೆನ್ನಲಾಗುತ್ತದೆ.
ಅದಾದ ಬಳಿಕ , ರಾಜ ವಿಕ್ರಮಾದಿತ್ಯ – ಅದೇ ಬೇತಾಳನ ಬೆನ್ನಲ್ಲಿಟ್ಟು ಕತೆ ಹೇಳಿದಾತ – ಅಯೋಧ್ಯೆಯನ್ನ ಪುನರುಜ್ಜೀವನಗೊಳಿಸಿ ಮುನ್ನೂರೈವತ್ತು ಚಿಲ್ಲರೆ ದೇವಸ್ಥಾನಗಳನ್ನ ಕಟ್ಟಿಸಿದ. ಇವತ್ತು ಬಾಲರಾಮನ ಮಂದಿರ ಮೈವೆತ್ತುತಿದಿಯೆಲ್ಲ ,ಅಲ್ಲಿ ಕಟ್ಟಿಸಿದಾತ ರಾಜಾ ವಿಕ್ರಮಾದಿತ್ಯ.
ಅವನ ನಂತರ ಸರಿಸುಮಾರು ಐದು ಚಿಲ್ಲರೆ ಶತಮಾನ ಭಕ್ತಾದಿಗಳಿಂದ ತುಳುಕಿದ ರಾಮನಾಡು , ಸಮುದ್ರಗುಪ್ತನಿಂದ -ಹಾಂ , ಇವನಾರು ಗೊತ್ತೇ ?, ಇವನ ಕಾಲದಲ್ಲೇ ಗುಪ್ತ ಸಾಮ್ರಾಜ್ಯ ಮೇರುಗತಿಯನ್ನ ಕಂಡಿತ್ತು. ಪಶ್ಚಿಮದ ರಾವಿ ನದಿಯಿಂದ ಪೂರ್ವದ ಬ್ರಹ್ಮಪುತ್ರದವರೆಗೆ , ಉತ್ತರದ ಹಿಮಾಲಯದಿಂದ ದಕ್ಷಿಣದ ಕಂಚಿಯವರೆಗೆ ಸಾಮ್ರಾಜ್ಯ ವಿಸ್ತರಿಸಿದವನೀತ. ನೂರು ಯುದ್ಧ ಗೆದ್ದವನಂತೆ , ಮೈಯಲ್ಲಿ ನೂರು ಗಾಯಗಳಂತೆ – ಸಮುದ್ರಗುಪ್ತನಿಗೆ ಮತ್ತೊಂದು ಹೆಸರೇ ಪರಾಕ್ರಮ. ರಾಜಸಂಹಾರಕ ಎಂದೇ ಖ್ಯಾತ., ಅಶ್ವಮೇಧ ಮಾಡಿದ ಕೊನೆಯ ರಾಜ ಇವನೇ ಇರಬೇಕು , ಇರಲಿ , ಇವನ ಕಾಲದಲ್ಲಿ ಮತ್ತೊಮ್ಮೆ ರಾಮ ಮಂದಿರ ಪುನಃಶ್ಚೇತನಗೊಂಡಿತು.
ನಂತರದ್ದು ದುರಂತಕಥೆ.
1033ರ ಆಸುಪಾಸಿನಲ್ಲಿ ಘಜನಿಯಿಂದ ದಾಳಿಗೊಳಗಾದ ಅಯೋಧ್ಯೆಯನ್ನ ಹಿಂದೂಗಳು ಬಡಿದಾಡಿ ಉಳಿಸಿಕೊಂಡರು.
1325–1351 ರ ನಡುವೆ ಮಹಮದ್ ಬಿನ್ ತುಘಲಕ್ ಎರಡು ಬರಾಬ್ಬರೀ ದಂಡೆತ್ತಿ ಬಂದ. ಅವನನ್ನೂ ಬಡಿದರು. 1351–1388 ನಡುವೆ ಶಾಹ್ ತುಘಲಕ್ ಬಂದ. ಅವನೂ ಸೋತ. 1393–1413 ರ ನಡುವೆ ನಾಸುರಿದ್ದೀನ್ ತುಘಲಕ್ ಎರಡು ಬಾರಿ ಬಂದ. ಅವನೂ ಸೋತ.
ಮುಗೀತಾ !!
1489–1517 ನಡುವೆ ಸಿಖಂದರ್ ಲೋಧಿ ಮೇಲೇರಿ ಬಂದ. ಸೋತ. ಅವನ ಸೈನ್ಯಾಧಿಕಾರಿ ಫಿರೋಜ್ ಖಾನ್ ಹತ್ತು ಬಾರಿ ದಾಳಿಗೈದ.ಹತ್ತು ಬಾರಿಯೂ ಸೋತ. ಅದಾದ ಮೇಲೆ ಬಂದಿದ್ದು ಬಾಬರ್. 1526 ರಲ್ಲಿ 17 ದಿನದ ಯುದ್ಧದಲ್ಲಿ ಮಿರ್ ಬಂಕಿಯ ನೇತೃತ್ವದ ಮೊಘಲರ ಸೈನ್ಯ ಮೊತ್ತ ಮೊದಲ ಬಾರಿಗೆ ಅಯೋಧ್ಯೆಯನ್ನ ವಶಪಡಿಸಿಕೊಂಡಿತು. 1528ರಲ್ಲಿ ಮಿರ್ ಬಂಕಿ ಫಿರಂಗಿ ತೋಪುಗಳ ಬಳಸಿ ರಾಮ ಮಂದಿರ ಕೆಡವಿ ಅಲ್ಲಿ ಮಸೀದಿ ಕಟ್ಟಿದ. ಹೆಂಗಿತ್ತೋ ,ಎಷ್ಟು ಭವ್ಯವಾಗಿತ್ತೋ ಏನೋ . ಛೇ.
ಮುಗೀಲಿಲ್ಲ !!
1530ರಲ್ಲಿ ಹಿಂದೂಗಳು ಹತ್ತು ಯುದ್ದಗಳನ್ನು ಮಾಡಿ ಅಯೋಧ್ಯೆಯನ್ನ ಮರುಮಡೆದುಕೊಂಡರೂ ಕಾಪಾಡಿಕೊಳ್ಳಲಾಗಲಿಲ್ಲ. ರಾಮನ ಜನ್ಮಭೂಮಿಗೆ ಪ್ರಯತ್ನ ನಿಲ್ಲಲಿಲ್ಲ. 1586 ರಲ್ಲಿ ಅಕ್ಬರನ ಮೇಲೆ ೨೦ ಬಾರಿ ಹಿಂದೂಗಳು ಯುದ್ದವೆತ್ತಿ ಹೋದರು. ತೋಡರಮಲ್ಲ ಅಕ್ಬರನಿಗೆ ಅಯೋಧ್ಯೆ ಬಿಟ್ಟುಬಿಡುವಂತೆ ಹೇಳಿದರೂ ಅಕ್ಬರನೇನು ಕೇಳಲಿಲ್ಲ.
1640ರಲ್ಲಿ ಔರಂಗಜೇಬ ಅಯೋಧ್ಯೆಯನ್ನ ನೆಲಸಮಗೊಳಿಸಲು ಸೈನ್ಯ ಕಳಿಸಿದ. ಹಿಂದೂಗಳು ಒಗ್ಗೂಡಿ ಮೊಘಲರ ಒದ್ದೋಡಿಸಿದರು. ಔರಂಗಜೇಬ ಇನ್ನೂ ದೊಡ್ಡ ಸೈನ್ಯ ಕಳಿಸಿದ. ಸಿಕ್ಖ್ ಗುರು – ಗುರುಗೋವಿಂದ ಸಿಂಗ್ ಹಿಂದೂಗಳ ಜೊತೆ ಜೊತೆಗೆ ನಿಂದು ಕಾದಾಡಿ ಆವತ್ತು ಮೊಘಲರ ಓಡಿಸಿದರು. ರಕ್ತ ಪಿಪಾಸು ಔರಂಗಜೇಬ ಮತ್ತೂ ದೊಡ್ಡ ಸೈನ್ಯ ಕಳಿಸಿದ. ಅವತ್ತು ಸೋತ ಮೇಲೆ ಗೆದ್ದಿದ್ದು ಮೊನ್ನೆ.
ರಾಮ – ಈ ನೆಲದ ಅಸ್ಮಿತೆ. ಈ ನೆಲದ ಕ್ಷಾತ್ರ. ಅವನಿಲ್ಲದ ಭಾರತವಿಲ್ಲ. ಘಜನಿಯಿಂದ ಸತ್ತ ಅನಾಮಿಕ ಸೈನಿಕನಿಂದ ಹಿಡಿದು ನಮ್ಮದೇ ತಲೆಹಿಡುಕ ರಾಜಕಾರಣಿಗಳಿಂದ ಸತ್ತ ಕೊಠಾರಿ ಸೋದರರವರೆಗೆ ರಾಮನಿಗಾಗಿ ಬಿದ್ದ ರಕ್ತಕ್ಕೆ ಲೆಕ್ಕವಿಲ್ಲ. ಒಂದೆರಡು ರೂಪಾಯಿ ದಕ್ಷಿಣೆ ಕೊಟ್ಟು ನಮ್ಮನ್ಯಾಕೆ ಕರೀಲಿಲ್ಲ ಅನ್ನುವ ಬೇವರಸಿ ಜನರ ಕಂಡು ಬರುವ ಹೇಸರಿಕೆಗೆ ಹೆಸರೂ ಇಲ್ಲ.
ನಾಡಿದ್ದು 22ಕ್ಕೆ ಆ ಎಲ್ಲ ತ್ಯಾಗಕ್ಕೆ ಒಂದು ತಾರ್ಕಿಕ ಅಂತ್ಯ. ಸಂಭ್ರಮದ ಜೊತೆಗೆ , ಪ್ರಾಣ ತೆತ್ತ ಆ ಎಲ್ಲ ಯೋಧರ ನೆನಪಿಗೆ ಕಣ್ಣಂಚಲ್ಲಿ ಒಂದಷ್ಟು ನೀರಿರಲಿ.
Courtesy: Sanatana
Leave A Reply