ಚಕ್ರವರ್ತಿಯನ್ನು ಸೋಲಿಸಲಾಗದವರು ಅವಹೇಳನಕ್ಕೆ ಇಳಿಯುತ್ತಾರೆ!
ಚಕ್ರವರ್ತಿ ಸೂಲಿಬೆಲೆಯವರು ಕರ್ನಾಟಕ ರಾಜ್ಯವ್ಯಾಪಿ ಸುತ್ತುತ್ತಾ ಇದ್ದಾರೆ. ಈಗಾಗಲೇ ಅರವತ್ತಕ್ಕಿಂತಲೂ ಹೆಚ್ಚು ಕಡೆ ಬಹಿರಂಗವಾಗಿ ನಮೋ ಭಾರತ್ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಪ್ರತಿ ಕಾರ್ಯಕ್ರಮದಲ್ಲಿಯೂ ಸಾವಿರಾರು ಜನ ಸೇರುತ್ತಿದ್ದಾರೆ. ಚಕ್ರವರ್ತಿಯವರು ಹತ್ತು ವರ್ಷ ಮೊದಲು ಹೀಗೆ ಕಾರ್ಯಕ್ರಮಗಳನ್ನು ಮಾಡುವಾಗಲೂ ಮೈದಾನಗಳಲ್ಲಿ ಜನ ಕಿಕ್ಕಿರಿದು ತುಂಬುತ್ತಿದ್ದರು. ಈಗಲೂ ಅದೇ ರೀತಿಯಲ್ಲಿ ಜನ ಸೇರುತ್ತಿದ್ದಾರೆ. ಯಾರಿಗೂ ಕೂಡ ರಾಜಕೀಯ ಪಕ್ಷಗಳ ಸಮಾವೇಶಗಳಿಗೆ ಕರೆದುಕೊಂಡು ಬರುವ ಹಾಗೆ ಬಸ್ಸುಗಳ ವ್ಯವಸ್ಥೆ ಮಾಡಲಾಗುವುದಿಲ್ಲ. ಜನ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಬರಲು ತಮ್ಮದೇ ವ್ಯವಸ್ಥೆ ಮಾಡಿಕೊಂಡಿರುತ್ತಾರೆ. ಯಾರಿಗೂ ಕಾರ್ಯಕ್ರಮ ಮುಗಿದ ಬಳಿಕ ಬಿರಿಯಾನಿ ಮತ್ತು ತೊಟ್ಟೆ ಸಾರಾಯಿಯ ವ್ಯವಸ್ಥೆಯೂ ಇರುವುದಿಲ್ಲ. ನಮೋ ಭಾರತ್ ಕಾರ್ಯಕ್ರಮಕ್ಕೆ ಬರುವ ಜನ ಅದನ್ನು ನಿರೀಕ್ಷೆ ಕೂಡ ಮಾಡುವುದಿಲ್ಲ. ಕಾರ್ಯಕ್ರಮಕ್ಕೆ ಬರುವಾಗಲೂ, ಹೋಗುವಾಗಲೂ ತಮ್ಮದೇ ಖರ್ಚಿನಲ್ಲಿ ತಮ್ಮ ಊಟ, ತಿಂಡಿಯ ವ್ಯವಸ್ಥೆ ಮಾಡುತ್ತಾರೆ. ಇನ್ನು ಕೊನೆಯದಾಗಿ ಬಂದವರಿಗೆ ಕಾರ್ಯಕ್ರಮ ಮುಗಿದು ಹೋಗುವಾಗ ತಲಾ ಐನೂರು ರೂಪಾಯಿಯನ್ನು ಯಾರೂ ಕೂಡ ಹಂಚುವುದಿಲ್ಲ. ಆದರೂ ಹಣದ ನಿರೀಕ್ಷೆಯನ್ನು ಕೂಡ ಯಾರೂ ಮಾಡುವುದಿಲ್ಲ. ಇಷ್ಟಾದರೂ ಸಾವಿರಾರು ಸಂಖ್ಯೆಯಲ್ಲಿ ಜನ ಸೇರುತ್ತಾರೆ.
ಮಂಡೆಬೆಚ್ಚ ಯಾಕೆ?
ಇದನ್ನು ನೋಡಿ ಆಯಾ ಕ್ಷೇತ್ರಗಳ ಕಾಂಗ್ರೆಸ್ ಜನಪ್ರತಿನಿಧಿಗಳಿಗೆ ತಲೆಕೆಟ್ಟು ಹೋಗುತ್ತದೆ. ನಾವು ಕಾರ್ಯಕ್ರಮ ಇಟ್ಟುಕೊಂಡರೆ ಜನ ಬಸ್ಸು ಕೇಳುತ್ತಾರೆ. ಬಿರಿಯಾನಿ, ಹೆಂಡ, ಸೀರೆ ಏನೇನೋ ಕೇಳುತ್ತಾರೆ. ಹಣ ಎಷ್ಟು ಕೊಡುತ್ತೀರಿ ಎನ್ನುತ್ತಾರೆ. ಒಂದೊಂದು ಕಾರ್ಯಕ್ರಮಕ್ಕೂ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿಸಲು ಕೋಟಿಗಟ್ಟಲೆ ಹಣ ಖರ್ಚಾಗುತ್ತದೆ. ಈ ಚಕ್ರವರ್ತಿಯೂ ಮಾಡುವುದು ಭಾಷಣ, ನಾವು ಕೂಡ ಮಾಡುವುದು ಭಾಷಣ. ಹಾಗಿರುವಾಗ ನಮ್ಮ ಕಾರ್ಯಕ್ರಮಕ್ಕೆ ಜನ ಸೇರಿಸುವುದು ಕಷ್ಟ ಯಾಕೆ ಎಂದು ಮಂಡೆಬೆಚ್ಚ ಮಾಡಿಕೊಂಡು ಜನರ ಮೇಲಿನ ಕೋಪವನ್ನು ಸೂಲಿಬೆಲೆ ಮೇಲೆ ತೆಗೆಯುತ್ತಾರೆ. ಚಕ್ರವರ್ತಿಯನ್ನು ಸೋಲಿಸಲಾಗದವರು ಅವರ ವೈಯಕ್ತಿಕ ನಿಂದನೆಗೆ ಇಳಿಯುತ್ತಾರೆ. ಅವರ ವ್ಯಕ್ತಿತ್ವದ ಮೇಲೆ ದಾಳಿ ಮಾಡುತ್ತಾರೆ. ಅಷ್ಟಕ್ಕೂ ಹೀಗೆ ಮಾಡುವವರು ಯಾರು ಎಂದು ನೋಡಿ.
ಯಾವ ಹಿನ್ನಲೆ ಇಲ್ಲದೆಯೂ…
ಯಾರು ತನ್ನ ತಂದೆಯ ಹೆಸರಿನಲ್ಲಿ, ತಂದೆಯ ಕಿರುಬೆರಳನ್ನು ಹಿಡಿದು ರಾಜಕೀಯದ ಪಡಸಾಲೆಯಲ್ಲಿ ಅಂಬೆಗಾಲಿಟ್ಟು ಬಂದವರೋ ಅವರು ಕೆಸರು ಎಸೆಯುವ ಕೆಲಸದ ಮುಂಚೂಣಿಯಲ್ಲಿ ನಿಂತಿರುತ್ತಾರೆ. ಅವರಿಗೆ ತಂದೆಯ ಹೆಸರು ಬಿಟ್ಟರೆ ಬೇರೆ ಯಾವ ಸ್ವತಂತ್ರ ಅಸ್ತಿತ್ವವೂ ಇಲ್ಲ. ಅವರಿಗೆ ಪಕ್ಷದಲ್ಲಿ ಉನ್ನತ ಸ್ಥಾನ ಸಿಕ್ಕಿರುವುದೇ ಅವರ ತಂದೆಯಿಂದ ಎನ್ನುವುದು ಅವರಿಗೂ ಗೊತ್ತಿದೆ. ಇನ್ನು ಕೆಲವರಿಗೆ ತಮ್ಮ ಪಕ್ಷದ ಬಲವೇ ತಮ್ಮ ಅಸ್ತ್ರ. ಅತ್ಯಂತ ಹಳೆಯ ರಾಜಕೀಯ ಪಕ್ಷದ ಪಳೆಯುಳಿಕೆಯನ್ನು ನಂಬಿಕೊಂಡು ಬಾಣ ಎಸೆಯುವವರು ಇದ್ದಾರೆ. ಆದರೆ ಚಕ್ರವರ್ತಿಯವರು ನೋಡಿ, ಅವರಿಗೆ ಯಾವ ಗಾಡ್ ಫಾದರ್ ಬಲವೂ ಇಲ್ಲ. ಅವರು ಯಾವ ಪ್ರಭಾವಿ ಕುಟುಂಬದಿಂದಲೂ ಬಂದಿಲ್ಲ. ಪ್ರಬಲ ಜಾತಿಯಿಂದಲೂ ಅವರು ಬಂದಿಲ್ಲ. ಒಂದು ವೇಳೆ ಸ್ವಲ್ಪ ಹೆಚ್ಚು ಕಡಿಮೆ ಆದರೆ ಭಾರತೀಯ ಜನತಾ ಪಾರ್ಟಿಯೇ ಅವರ ಬೆಂಬಲಕ್ಕೆ ನಿಲ್ಲುತ್ತೆ ಎನ್ನುವ ಗ್ಯಾರಂಟಿಯೂ ಇಲ್ಲ. ಬಿಜೆಪಿಯೊಳಗೆ ಅವರ ಏಳಿಗೆಯನ್ನು ಕಂಡರೆ ಅಸೂಯೆ ಪಡುವವರು ಇದ್ದಾರೆ. ಹಾಗಿರುವಾಗ ಅವರು ಯಾವ ಪಕ್ಷದ ಆಸರೆಯನ್ನು ಕೂಡ ದೃಢವಾಗಿ ನಂಬುವಂತಿಲ್ಲ. ಆದರೂ ಅವರು ಬಿಜೆಪಿಯವರು ಮಾಡಬೇಕಿದ್ದ ಕೆಲಸಗಿಂತಲೂ ಹೆಚ್ಚಿನ ಶ್ರಮವನ್ನು ಮೋದಿಯವರಿಗಾಗಿ ಹಾಕುತ್ತಾರೆ. ಬೇರೆಯವರೇನಾದರೂ ಇಷ್ಟು ಕೆಲಸ ಮೋದಿಗಾಗಿ ಮಾಡಿದ್ದರೆ ಯಾವತ್ತೋ ಶಾಸಕ, ಸಂಸದನಾಗುತ್ತಿದ್ದರೋ ಏನೋ. ಆದರೆ ಆ ಬಗ್ಗೆ ಯಾವುದೇ ಅಪೇಕ್ಷೆ ಇಲ್ಲದೆ ಕೆಲಸ ಮಾಡುತ್ತಿರುವ ಚಕ್ರವರ್ತಿ ಸೂಲಿಬೆಲೆಯವರ ಬಗ್ಗೆ ರಾಜಕೀಯ ಬಚ್ಚಾಗಳು ಹೆಚ್ಚೆಂದರೆ ಟೀಕಿಸಬಹುದು, ವ್ಯಂಗ್ಯ ಮಾಡಬಹುದು, ಅದಕ್ಕಿಂತ ಅವರು ಏನೂ ಮಾಡಲು ಸಾಧ್ಯ?
Leave A Reply