ದೂರದರ್ಶನದ ರಾಮ ಆಗ್ತಾರಾ ಮೀರತ್ ಸಂಸದ?
35 ವರ್ಷಗಳ ಹಿಂದೆ ದೂರದರ್ಶನದಲ್ಲಿ ಪ್ರಸಾರಗೊಂಡು ಇಡೀ ದೇಶದಲ್ಲಿ ಪ್ರಖ್ಯಾತಗೊಂಡಿದ್ದ ರಾಮಾಯಣ ಧಾರಾವಾಹಿಯ ಶ್ರೀರಾಮ ಪಾತ್ರಧಾರಿ ಅರುಣ್ ಗೋವಿಲ್ ಅವರು ಉತ್ತರ ಪ್ರದೇಶದ ಮೀರತ್ ಲೋಕಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ದಟ್ಟವಾಗಿದೆ.
ಧಾರಾವಾಹಿ ಮೊದಲ ಬಾರಿಗೆ ಪ್ರಸಾರಗೊಂಡು ಮೂರವರೆ ದಶಕಗಳ ಬಳಿಕವೂ ಅರುಣ್ ಗೋವಿಲ್ ಜನಪ್ರಿಯತೆ ಮಾಸಿಲ್ಲ. ಅವರು ಹೋದಲೆಲ್ಲಾ ಗ್ರಾಮಸ್ಥರು ಅವರ ಕಾಲಿಗೆ ಬಿದ್ದು ಆರ್ಶೀವಾದ ಪಡೆಯುವುದು ಇವತ್ತಿಗೂ ಮುಂದುವರೆದಿದೆ. ಅವರು ತಾನು ದೇವರಲ್ಲ ಎಂದು ಎಷ್ಟೇ ಹೇಳಿದರೂ ಅವರನ್ನೇ ಶ್ರೀರಾಮ ಎಂದು ಅಂದುಕೊಂಡಿರುವ ಅಮಾಯಕರ ಸಂಖ್ಯೆ ಏನೂ ಕಡಿಮೆ ಇಲ್ಲ. ಅವರ ಜನಪ್ರಿಯತೆಯನ್ನು ಚುನಾವಣೆಗೆ ಬಳಸಿಕೊಳ್ಳುವ ಯೋಚನೆಯಲ್ಲಿರುವ ಭಾರತೀಯ ಜನತಾ ಪಾರ್ಟಿ ಅವರಿಗೆ ಮೀರತ್ ಲೋಕಸಭೆಯ ಟಿಕೆಟ್ ಘೋಷಣೆ ಮಾಡುವ ಸಾಧ್ಯತೆ ಇದೆ. ಮೀರತ್ ಲೋಕಸಭಾ ಕ್ಷೇತ್ರದಿಂದ ಕಳೆದ ಬಾರಿ ಮೂರು ಬಾರಿ ಬಿಜೆಪಿಯ ರಾಜೇಂದ್ರ ಅಗರವಾಲ್ ಗೆಲ್ಲುತ್ತಾ ಬಂದಿದ್ದಾರೆ. ಈ ಬಾರಿ ಅವರನ್ನು ಬದಲಾಯಿಸಿ ಅರುಣ್ ಗೋವಿಲ್ ಅವರನ್ನು ಕಣಕ್ಕೆ ಇಳಿಸುವ ಸಾಧ್ಯತೆ ಇದೆ.
ಇನ್ನು ಏಪ್ರಿಲ್ 17 ರಂದು ರಾಮ ನವಮಿ ಬರುವುದರಿಂದ ಅಂದು ಪ್ರಧಾನಿ ನರೇಂದ್ರ ಮೋದಿಯವರು ಅಯೋಧ್ಯೆಗೆ ಭೇಟಿ ನೀಡಿ ಅಲ್ಲಿ ದೇವರಿಗೆ ಪೂಜೆ ಸಲ್ಲಿಸಲಿದ್ದಾರೆ. ಅದರ ಎರಡು ದಿನಗಳ ಬಳಿಕ ದೇಶ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ತಯಾರಾಗುವುದರಿಂದ ರಾಮನವಮಿಯಂದು ಅಯೋಧ್ಯೆಯ ರಾಮಪೂಜೆ ಬಹಳ ಪ್ರಮುಖ ಸಂದೇಶವನ್ನು ದೇಶಕ್ಕೆ ನೀಡಲಿದೆ. ಇನ್ನು ಈ ಬಾರಿಯ ರಾಮ ನವಮಿಯನ್ನು ರಾಷ್ಟ್ರಾದ್ಯಂತ ಅದ್ದೂರಿಯಾಗಿ ಆಚರಿಸಲು ಬಿಜೆಪಿ ತೀರ್ಮಾನಿಸಿದಂತಿದೆ. ಈ ಮೂಲಕ ಅಯೋಧ್ಯೆಯ ಭವ್ಯ ರಾಮ ಮಂದಿರದ ಹಿಂದಿನ ಶ್ರಮ ಜನ ಮತ್ತೆ ಸ್ಮರಿಸುವಂತಾಗಲಿ ಎನ್ನುವುದು ಮತ್ತು ಎಪ್ರಿಲ್ 19 ರಂದು ದೇಶ ಮೊದಲ ಹಂತದ ಮತದಾನಕ್ಕೆ ಸಜ್ಜಾಗುವುದರಿಂದ ಇಂತಹ ರಣತಂತ್ರ ಹೆಣೆಯುವ ಸಾಧ್ಯತೆ ಇದೆ.
Leave A Reply