ಮೋದಿಯವರ ಬಳಿ ಇರುವುದು ಇಷ್ಟೇನಾ?
ಪ್ರಧಾನಿ ನರೇಂದ್ರ ಮೋದಿಯವರು ಮೂರನೇ ಬಾರಿ ಲೋಕಸಭಾ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಸಿದಾಗ ಅದರೊಂದಿಗೆ ಅಫಿದಾವಿತ್ ನಲ್ಲಿ ಅವರು ತಮ್ಮ ಆಸ್ತಿಯನ್ನು ಘೋಷಿಸಿದ್ದಾರೆ. ಅದರಲ್ಲಿ ಅವರು ತಮ್ಮ ಬಳಿ 52,920 ರೂಪಾಯಿ ನಗದು ಸೇರಿ ಒಟ್ಟು 3.02 ಕೋಟಿ ರೂಪಾಯಿ ಇರುವುದಾಗಿ ತಿಳಿಸಿದ್ದಾರೆ. ಇನ್ನು ಬಂಗಾರ ಅವರ ಬಳಿ ಇರುವುದು ನಾಲ್ಕು ಉಂಗುರಗಳು ಮಾತ್ರ. ಮೋದಿಯವರ ಬಳಿ ಯಾವುದೇ ಸ್ವಂತ ಮನೆಯಾಗಲಿ, ವಾಹನವಾಗಲಿ ಇಲ್ಲ.
ಒಬ್ಬ ಮನುಷ್ಯ ಹನ್ನೆರಡುವರೆ ವರ್ಷ ಅಭಿವೃದ್ಧಿಯಲ್ಲಿ ಉತ್ತುಂಗಕ್ಕೆ ಏರಿದ ರಾಜ್ಯದ ಮುಖ್ಯಮಂತ್ರಿಯಾಗಿ ಮತ್ತು ಹತ್ತು ವರುಷ ದೇಶದ ಪ್ರಧಾನಿಯಾಗಿ ಅಧಿಕಾರದಲ್ಲಿ ಇದ್ದರೂ ಅವರ ಬಳಿ ಇರುವ ಆಸ್ತಿ, ಹಣ ಇಷ್ಟೇನಾ ಎನ್ನುವುದು ನೋಡಿದಾಗ ಆಶ್ಚರ್ಯವಾಗುತ್ತದೆ. ನಮ್ಮ ಭಾರತದಲ್ಲಿ ಪಕ್ಷಾತೀತವಾಗಿ ಅಧಿಕಾರದ ಸೌಲಭ್ಯವನ್ನು ಅನುಭವಿಸಿರುವ ವ್ಯಕ್ತಿಗಳು ಹಣ, ಆಸ್ತಿಯಲ್ಲಿ ಒಂದು ಕಾಲದಲ್ಲಿ ಎಲ್ಲಿದ್ದರು ಮತ್ತು ಈಗ ಎಲ್ಲಿಗೆ ತಲುಪಿದ್ದಾರೆ ಎನ್ನುವುದನ್ನು ನಾವು ನೋಡಿದ್ದೇವೆ. ಭ್ರಷ್ಟತೆಯಲ್ಲಿ ಕುಬೇರರನ್ನು ನಾಚಿಸುವ ಲೆವೆಲ್ಲಿಗೆ ಅನೇಕ ಜನಪ್ರತಿನಿಧಿಗಳು ಬೆಳೆದಿದ್ದಾರೆ. ನಾವು ಮೂರು ತಲೆಮಾರಿಗೆ ಬೇಕಾಗುವಷ್ಟು ಮಾಡಿದ್ದೇವೆ ಎಂದು ಒಬ್ಬ ರಾಜಕಾರಣಿ, ರಾಜ್ಯದ ಸ್ಪೀಕರ್ ಆಗಿದ್ದವರು ಬಹಿರಂಗವಾಗಿ ಹೇಳಿದ್ದನ್ನು ಈ ರಾಜ್ಯದ ಜನ ಅಸಹ್ಯಭರಿತ ದೃಷ್ಟಿಯಿಂದ ನೋಡಿದ್ದಾರೆ.
ಹಿಂದೆ ನಮ್ಮ ದೇಶದ ಪ್ರಧಾನಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿಯವರು ತಮಗಾಗಿ ಏನೂ ಮಾಡಿಕೊಂಡಿಲ್ಲದೇ ಬಹಳ ಸರಳವಾಗಿ ಜೀವನವನ್ನು ಸಾಗಿಸುತ್ತಿದ್ದರು ಎನ್ನುವುದನ್ನು ನಾವು ಕೇಳಿದ್ದೇವು ಮತ್ತು ಅದನ್ನು ಓದಿದ್ದೇವು. ಇನ್ನು ದೇಶದ ರಾಷ್ಟ್ರಪತಿಯಾಗಿದ್ದ ಎಪಿಜೆ ಅಬ್ದುಲ್ ಕಲಾಂ ಅವರ ಆಸ್ತಿ ಎಂದರೆ ಪುಸ್ತಕಗಳು ಎನ್ನುವುದನ್ನು ಕೇಳಿದ್ದೇವೆ. ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ನೋಡಿದ್ದೇವೆ. ಕೇಂದ್ರದ ರೈಲ್ವೆ ಸಚಿವರಾಗಿದ್ದ ಜಾರ್ಜ್ ಫೆರ್ನಾಂಡಿಸ್ ಅವರು ಕೂಡ ಹೀಗೆ ಮಾದರಿಯಾಗಿ ಬದುಕಿದ್ದರು. ಅಂತಹ ಕೆಲವೇ ಕೆಲವು ಶ್ರೇಷ್ಟ ಸಾಧಕರ ಸಾಲಿನಲ್ಲಿ ಈಗಿನ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೂಡ ಇದ್ದಾರೆ ಎನ್ನುವುದು ನಿಜಕ್ಕೂ ಈಗಿನ ತಲೆಮಾರಿಗೆ ಖುಷಿಯ ವಿಷಯ.
ಮೋದಿಯವರು ಸಂಸತ್ತಿನಲ್ಲಿ ಇದ್ದಾಗಲೂ ಅವರು ಕ್ಯಾಂಟಿನ್ ನಲ್ಲಿ ಊಟ ಮಾಡಿದಾಗ ಅವರ ಬಿಲ್ ಅನ್ನು ಅವರೇ ಪಾವತಿಸುತ್ತಾರೆ ಎನ್ನುವುದು ಅನೇಕರಿಗೆ ತಿಳಿದಿರುವ ಸಂಗತಿ. 2001 ರಿಂದ ಅಧಿಕಾರದ ಗದ್ದುಗೆಯಲ್ಲಿ ಇರುವ ಮೋದಿ ಭ್ರಷ್ಟಾಚಾರದ ನೆರಳು ಕೂಡ ಇಲ್ಲದೇ ರಾಜ್ಯ ನಂತರ ಈಗ ದೇಶವನ್ನು ಆಳುತ್ತಿರುವುದು ಅವರ ಶುದ್ಧ ಚಾರಿತ್ರ್ಯಕ್ಕೆ ಹಿಡಿದ ಕೈಗನ್ನಡಿ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. ಅವರ ಉಡುಗೆ, ತೊಡುಗೆಯ ಬಗ್ಗೆ ಏನೇ ಟೀಕೆಗಳನ್ನು ವಿಪಕ್ಷಗಳು ಮಾಡಲಿ, ಮೋದಿಯವರು ಭ್ರಷ್ಟರು ಎನ್ನುವ ಆರೋಪವನ್ನು ಇಲ್ಲಿಯ ತನಕ ಹೊರಿಸಲು ಯಾರಿಗೂ ಸಾಧ್ಯವಾಗಿಲ್ಲ. ಅದಕ್ಕೆ ಕಾರಣ ಮೋದಿಯವರು ಹಾಗೆ ಅಧಿಕಾರವನ್ನು ನಡೆಸಿದ್ದಾರೆ ಮತ್ತು ಮೂರನೇ ಬಾರಿ ಪ್ರಧಾನಿಯಾಗುವ ದಿಕ್ಕಿನಲ್ಲಿ ಸಾಗುತ್ತಿದ್ದಾರೆ.
Leave A Reply