ಓಂ ಶ್ರೀ ರಾಮ್ ಎಂದು 21 ಸಲ ಬರೆದು ಅಧಿಕಾರ ಸ್ವೀಕರಿಸಿದ ಕೇಂದ್ರ ಸಚಿವ!
ಮೂರನೇ ಬಾರಿ ಮೈತ್ರಿ ಸರಕಾರದ ಬೆಂಬಲದೊಂದಿಗೆ ಅಧಿಕಾರಕ್ಕೆ ಏರಿರುವ ನರೇಂದ್ರ ಮೋದಿಯವರ ಸಂಪುಟದಲ್ಲಿ ಹಿಂದಿನ ಎರಡೂ ಅವಧಿಗಿಂತ ಹೆಚ್ಚಿನ ಸನಾತನಿಗಳು ಇದ್ದಾರೇನೋ ಎನ್ನುವ ಭಾವನೆ ಬರುತ್ತದೆ. ಒಂದು ಕಡೆ ಚಿರಾಗ್ ಕುಮಾರ್ ಪಾಸ್ವಾನ್ ಎಂಬ ಯುವ ನಾಯಕ ಸನಾತನ ಧರ್ಮದ ಆಚಾರ, ಸಂಪ್ರದಾಯಗಳನ್ನು ಪಾಲಿಸುವ, ಪೂಜೆ ಮಾಡುವ, ದೇವರ ಆರಾಧನೆ ಮಾಡುವ ಫೋಟೋಗಳು ಎಲ್ಲಾ ಕಡೆ ವೈರಲ್ ಆಗುತ್ತಿದ್ದರೆ, ಇನ್ನೊಂದು ಪಕ್ಷದ ಇನ್ನೊಬ್ಬ ನಾಯಕ ಅದಕ್ಕಿಂತ ಒಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ. ಅವರ ಹೆಸರು ರಾಮ ಮೋಹನ್ ನಾಯ್ಡು. 1987 ರ ಡಿಸೆಂಬರ್ ನಲ್ಲಿ ಹುಟ್ಟಿರುವ ರಾಮ ಮೋಹನ್ ನಾಯ್ಡು ಅವರು ಮೋದಿ ಕ್ಯಾಬಿನೆಟ್ ನ ಅತ್ಯಂತ ಕಿರಿಯ ಸಚಿವ ಎಂದೇ ಗುರುತಿಸಲ್ಪಟ್ಟಿದ್ದಾರೆ. ಅವರಿಗೆ ಈಗ ಕೇವಲ 37 ವರ್ಷ. ಈಗಾಗಲೇ ಇವರು ಎರಡು ಬಾರಿ ಸಂಸದರಾಗಿ ಆಂಧ್ರಪ್ರದೇಶದ ಶ್ರೀಕಾಕುಲಂ ನಿಂದ ಆಯ್ಕೆಯಾಗಿದ್ದು, ಈಗ ಮೂರನೇ ಬಾರಿ ಅಲ್ಲಿಂದಲೇ ಪುನರಾಯ್ಕೆಯಾಗಿದ್ದಾರೆ. ಪ್ರಸ್ತುತ ತೆಲುಗು ದೇಶಂ ಇದರ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಇವರು ಲೋಕಸಭೆಯಲ್ಲಿ ಪಕ್ಷದ ನಾಯಕರಾಗಿದ್ದಾರೆ.
ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಮತ್ತು ಎಂಬಿಎ ಪದವಿಯನ್ನು ವಿದೇಶದಲ್ಲಿ ಕಲಿತಿರುವ ನಾಯ್ಡು ಒಂದು ವರ್ಷ ಸಿಂಗಾಪುರದಲ್ಲಿ ಉದ್ಯೋಗದಲ್ಲಿ ಇದ್ದು ನಂತರಕ್ಕೆ ಭಾರತಕ್ಕೆ ಮರಳಿದ್ದರು. ಇವರ ತಂದೆ ಕಿಂಜಾರ್ಪು ಏರೆನ್ ನಾಯ್ಡು ಕೂಡ ಶಾಸಕರಾಗಿ, ಸಂಸದರಾಗಿ, ಕೇಂದ್ರದಲ್ಲಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಇವರ ಪತ್ನಿ ಮಾಜಿ ಸಚಿವರೂ, ಟಿಡಿಪಿಯ ಉಪಾಧ್ಯಕ್ಷರೂ ಆಗಿರುವ ಬಂಡಾರು ಸತ್ಯನಾರಾಯಣ ಮೂರ್ತಿಯವರ ಕಿರಿಮಗಳು. ಇವರ ಚಿಕ್ಕಪ್ಪ ಕೂಡ ರಾಜಕೀಯದಲ್ಲಿದ್ದಾರೆ. ಹೀಗೆ ಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಸಿಕೊಂಡಿರುವ ಈ ಕುಟುಂಬದ ಮುಂದಿನ ಕುಡಿ ರಾಮ ಮೋಹನ್ ನಾಯ್ಡು ಈಗ ಕೇಂದ್ರದ ನಾಗರಿಕ ವಿಮಾನಯಾನ ಖಾತೆಯ ಸಚಿವರಾಗಿ ನೇಮಕವಾಗಿದ್ದಾರೆ.
ಇನ್ನು ಸಚಿವರಾಗಿ ಅಧಿಕಾರ ಸ್ವೀಕರಿಸುವ ದಿನ ನಾಯ್ಡು ಒಂದು ಪುಸ್ತಕದಲ್ಲಿ ಓಂ ಶ್ರೀ ರಾಮ್ ಎಂದು 21 ಸಲ ಬರೆದು ಅಲ್ಲಿದ್ದ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿಸಿದರು. ನಂತರ ಈ ಬಗ್ಗೆ ವಿಚಾರಿಸಿದಾಗ ತಮ್ಮ ತಾಯಿಯ ಸಲಹೆಯಂತೆ ತಾವು ಹೀಗೆ ಮಾಡಿದ್ದಾಗಿ ತಿಳಿಸಿದ್ದಾರೆ. ಅಧಿಕಾರ ಸ್ವೀಕರಿಸಿದ ನಂತರ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಹಾಗೂ ತಾಯಿ, ಪತ್ನಿಗೆ ಕರೆ ಮಾಡಿ ಈ ವಿಷಯವನ್ನು ಅವರು ತಿಳಿಸಿದರು.
ಜ್ಯೋತಿರಾದಿತ್ಯ ಸಿಂಧಿಯಾ ಅವರು ಟೆಲಿಕಾಂ ಖಾತೆಗೆ ವರ್ಗಾವಣೆಗೊಂಡ ಬಳಿಕ ನಾಗರಿಕ ವಿಮಾನ ಖಾತೆ ನಾಯ್ಡು ಅವರಿಗೆ ದೊರಕಿದೆ. ಈ ಬಗ್ಗೆ ಮಾತನಾಡಿದ ನಾಯ್ಡು ” ಇದು ಬಹಳ ಪ್ರಮುಖ ಹೊಣೆಯಾಗಿದ್ದು, ವಾಯುಯಾನವನ್ನು ಜನಸಾಮಾನ್ಯರಿಗೂ ಎಟಕುವಂತೆ ಮಾಡಲು ಪ್ರಯತ್ನ ಮಾಡುವುದಾಗಿ ತಿಳಿಸಿದರು. ಹೀಗೆ ಮಾಡಬೇಕಾದರೆ ಅದಕ್ಕಿರುವ ಒಂದೇ ದಾರಿ ವಿಮಾನ ಟಿಕೆಟ್ ದರವನ್ನು ಕಡಿಮೆ ಮಾಡುವುದು. ಅದು ನಮ್ಮ ಆದ್ಯತೆಯಾಗಲಿದೆ” ಎಂದು ತಿಳಿಸಿದರು.
ಮೊದಲಿಗೆ ನನ್ನ ತವರು ರಾಜ್ಯದಲ್ಲಿ ವಿಜಯನಗರ ರಾಜ್ಯದಲ್ಲಿ ಭೋಗಂಪುರಂ ವಿಮಾನ ನಿಲ್ದಾಣವನ್ನು ಆದ್ಯತೆಯಲ್ಲಿ ಪೂರ್ಣಗೊಳಿಸಬೇಕಿದೆ. ಅದು ಉತ್ತರ ಆಂಧ್ರಪ್ರದೇಶದ ಅಭಿವೃದ್ಧಿಗೆ ನಿರ್ಣಾಯಕ ಪಾತ್ರ ವಹಿಸಲಿದೆ. ಅದರ ಬಳಿಕ ಸಹೋದರ ರಾಜ್ಯ ತೆಲಂಗಾಣದಲ್ಲಿಯೂ ಕೆಲವು ಅಭಿವೃದ್ಧಿ ಕಾರ್ಯಗಳು ನಡೆಯಲಿವೆ ಎಂದು ತಿಳಿಸಿದರು.
Leave A Reply