ಟ್ರಂಪ್ ಗುಂಡಿನ ದಾಳಿ ಬೆನ್ನಲ್ಲೇ ಧನ್ಯವಾದ ಎಸ್ ಪಿಜಿ ಎಂದ ನೆಟ್ಟಿಗರು!
ಅಮೇರಿಕಾದ ಮಾಜಿ ಅಧ್ಯಕ್ಷ ಹಾಗೂ ಅಮೇರಿಕಾದ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್ ಪಕ್ಷದ ಅಧಿಕೃತ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ಮೇಲೆ ಭೀಕರ ಗುಂಡಿನ ದಾಳಿ ನಡೆದಿದ್ದು, ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಮೇರಿಕಾದ ಪೆನ್ಸಿಲ್ವೇನಿಯಾ ರಾಜ್ಯದ ಬಟ್ಲರ್ ಟೌನ್ ಎಂಬಲ್ಲಿ ಅಮೇರಿಕಾದ ಕಾಲಮಾನ ಶನಿವಾರ ಸಂಜೆ ನಡೆಯುತ್ತಿದ್ದ ಸಭೆಯಲ್ಲಿ ಟ್ರಂಪ್ ಭಾಷಣ ಮಾಡುತ್ತಿದ್ದರು. ಆಗ ಅವರ ಬಲಗಿವಿಯ ಮೇಲ್ತುದಿಯನ್ನು ಸೀಳಿಕೊಂಡು ಬುಲೆಟ್ ಹೋಗಿದೆ. ತಕ್ಷಣ ಟ್ರಂಪ್ ಕೆಳಗೆ ಕುಳಿತಿದ್ದಾರೆ. ಅವರನ್ನು ಭದ್ರತಾ ಸಿಬ್ಬಂದಿಗಳು ಸುತ್ತುವರೆದಿದ್ದಾರೆ. ಹಂತಕನ ಗುಂಡಿಗೆ ಒಬ್ಬ ವ್ಯಕ್ತಿ ಬಲಿಯಾಗಿದ್ದಾನೆ. ಭದ್ರತಾ ಸಿಬ್ಬಂದಿಯಿಂದ ಹಂತಕನ ಹತ್ಯೆ ನಡೆದಿದೆ.
ಈ ಘಟನೆ ನಡೆದ ನಂತರ ಭಾರತೀಯರು ಪಂಜಾಬ್ ನಲ್ಲಿ ಆವತ್ತು ನಡೆದ ಘಟನೆಯನ್ನು ನೆನಪಿಸಿಕೊಳ್ಳುತ್ತಿದ್ದಾರೆ.
ಅದು 2022 ರ ಜನವರಿ. ಪಂಜಾಬಿನ ಭತ್ತಿಂಡಾ ಎನ್ನುವ ಪ್ರದೇಶ. ಪ್ರಧಾನಿ ನರೇಂದ್ರ ಮೋದಿಯವರು ಪಂಜಾಬ್ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲು ಆಗಮಿಸಿದ್ದರು. ವಿಮಾನ ನಿಲ್ದಾಣದಿಂದ ಸಮಾವೇಶದ ಸ್ಥಳಕ್ಕೆ ಹೋಗುವ ದಾರಿಯಲ್ಲಿ ಒಂದು ಪ್ಲೈ ಒವರ್ ಸಿಗುತ್ತದೆ. ಅದರ ಮೇಲೆ ಮೋದಿಯವರ ಕಾರು ಮುಂದಕ್ಕೆ ಹೋಗಲಾರದ ಸ್ಥಿತಿಯಲ್ಲಿ ಬ್ಲಾಕ್ ಆಗಿದೆ. ಕಾರಣ ಸ್ವಲ್ಪ ದೂರದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದರು.
ಇದರಿಂದ ಸುಮಾರು 20 ನಿಮಿಷ ಮೋದಿಯವರ ಕಾರು ಪ್ಲೈಒವರ್ ಮೇಲೆ ಕಾಯುವಂತಾಗಿತ್ತು. ಹೇಳಿ ಕೇಳಿ, ಅದು ಪಾಕಿಸ್ತಾನದ ಗಡಿಗೆ ಹತ್ತಿರವಿರುವ ಊರು. ಒಂದು ವೇಳೆ ಸ್ವಲ್ಪ ಹೆಚ್ಚು ಕಡಿಮೆ ಆದರೂ ಆವತ್ತು ಮೋದಿಯವರ ಜೀವಕ್ಕೆ ಅಪಾಯ ಬರುವ ಸಾಧ್ಯತೆ ಇತ್ತು. ಆದರೆ ಮೋದಿಯವರ ವಿಶೇಷ ಭದ್ರತಾ ಪಡೆ (ಎಸ್ ಪಿಜಿ) ಅದನ್ನು ಬಹಳ ಸೂಕ್ಷ್ಮವಾಗಿ ನಿರ್ವಹಿಸಿದೆ. ಅದರಿಂದ ಮೋದಿಯವರು ಅಂತಹ ಸೂಕ್ಷ್ಮ ಪ್ರದೇಶದಲ್ಲಿ ಕಾಯುವಂತಾದರೂ ಏನೂ ಅವಘಡ ಸಂಭವಿಸಿರಲಿಲ್ಲ.
ಆದರೆ ಟ್ರಂಪ್ ಅವರ ಜೀವಕ್ಕೆ ಅಪಾಯ ಆಗದಿದ್ರೂ ವಿಶ್ವದ ದೊಡ್ಡಣ್ಣ ಎನಿಸಿಕೊಂಡ ಅಮೇರಿಕಾದ ಮಾಜಿ ಅಧ್ಯಕ್ಷರಿಗೆ ರಕ್ಷಣೆ ಇಲ್ಲ ಎಂದ ಮೇಲೆ ಅದಕ್ಕಿಂತ ಬೇರೆ ನಾಚಿಕೆ ಇದೆಯಾ? ಅಮೇರಿಕಾದಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು, ಮಾಜಿ ಅಧ್ಯಕ್ಷರು, ಅವರ ಕುಟುಂಬಗಳನ್ನು ಸಿಕ್ರೆಟ್ ಸರ್ವಿಸ್ ಎಂಬ ರಕ್ಷಣಾ ಸಂಸ್ಥೆ ಯೋಧರು ಸುತ್ತುವರಿದಿರುತ್ತಾರೆ. ಅಮೇರಿಕಾದ ಅಧ್ಯಕ್ಷರ ಮೇಲೆ ದಾಳಿ ಮಾಡುವುದು ಅಷ್ಟು ಸುಲಭದ ವಿಷಯವಲ್ಲ. ಬಹಳ ಅತ್ಯಾಧುನಿಕ ಆಯುಧಗಳು, ರಕ್ಷಣಾ ವ್ಯವಸ್ಥೆಯನ್ನು ಈ ಯೋಧರು ಹೊಂದಿರುತ್ತಾರೆ. ಇಷ್ಟಿದ್ರೂ ಈ ದಾಳಿ ನಡೆದಿದೆ ಎಂದರೆ ಕಟ್ಟಕಡೆಯಲ್ಲಿ ಉಳಿಯುವ ಪ್ರಶ್ನೆ, ಯಾರು ಗ್ರೇಟ್? ಭಾರತವೋ, ಅಮೇರಿಕಾವೋ? ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ
Leave A Reply