ಕಿಸ್, ಅಪ್ಪುಗೆ ಪ್ರೀತಿ, ಪ್ರೇಮದಲ್ಲಿ ಸ್ವಾಭಾವಿಕ -ಎಂದ ಮದ್ರಾಸ್ ನ್ಯಾಯಾಲಯ
ಪುರುಷನೊಬ್ಬನ ವಿರುದ್ಧ ದಾಖಲಾಗಿದ್ದ ಇಂಡಿಯನ್ ಪೀನಲ್ ಕೋಡ್ ಸೆಕ್ಷನ್ 354 ಎ ಪ್ರಕಾರ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯದ ಪ್ರಕರಣವನ್ನು ಮಾನ್ಯ ಮದ್ರಾಸ್ ಹೈಕೋರ್ಟ್ ಅಸಿಂಧುಗೊಳಿಸಿದೆ. ನ್ಯಾಯಮೂರ್ತಿ ಆನಂದ ವೆಂಕಟೇಶ್ ಅವರು ತಮ್ಮ ತೀರ್ಪಿನಲ್ಲಿ ಲೈಂಗಿಕ ದೌರ್ಜನ್ಯ ಎಂದರೆ ದೈಹಿಕವಾಗಿ ಸಂಬಂಧವನ್ನು ಇಟ್ಟುಕೊಳ್ಳುವುದು ಮತ್ತು ಲೈಂಗಿಕತೆಗಾಗಿ ವಿವಿಧ ರೀತಿಯಲ್ಲಿ ಪೀಡಿಸುವುದು ಆಗಿರುತ್ತದೆ. ಆದರೆ ಪ್ರೀತಿ, ಪ್ರೇಮದ ಸಂಬಂಧ ಇದ್ದಾಗ ಪ್ರೇಮಿಗಳಿಬ್ಬರು ಭೇಟಿಯಾದಾಗ ಅಪ್ಪುಗೆಯೊಂದಿಗೆ ಚುಂಬಿಸಿದರೆ ಅದು ಲೈಂಗಿಕ ದೌರ್ಜನ್ಯದ ವ್ಯಾಪ್ತಿಯಲ್ಲಿ ಬರುವುದಿಲ್ಲ. ಅದು ಪ್ರೀತಿ, ಪ್ರೇಮದಲ್ಲಿ ಸಹಜ ಎಂದು ಹೇಳಿದರು.
ತನ್ನ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿರುವುದನ್ನು ರದ್ದುಗೊಳಿಸಬೇಕಾಗಿ ಶಂತನಾಗಣೇಶ್ ಎಂಬುವರು ಸಲ್ಲಿಸಿದ ಮೇಲ್ಮನವಿಯ ಬಗ್ಗೆ ತೀರ್ಪು ನೀಡಿದ ಹೈಕೋರ್ಟ್ ಆತನ ಮೇಲೆ ಶ್ರೀವೈಗುಂಡಂನ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣವನ್ನು ರದ್ದುಗೊಳಿಸಲು ಆದೇಶ ನೀಡಿತು.
ಅರ್ಜಿದಾರರ ಮನವಿಯ ಬಗ್ಗೆ ವಿಚಾರಣೆ ನಡೆಸಿದ ಮಾನ್ಯ ನ್ಯಾಯಾಲಯ 2020 ರಿಂದ ದೂರುದಾರ ಯುವತಿಯೊಂದಿಗೆ ಅರ್ಜಿದಾರರಿಗೆ ಪ್ರೇಮವಿತ್ತು. 2022 ರ ನವೆಂಬರ್ 13 ರಂದು ಆಕೆಯನ್ನು ತನ್ನ ಬಳಿ ಕರೆಸಿಕೊಂಡಿದ್ದ ಅರ್ಜಿದಾರರು ಆಕೆಯೊಂದಿಗೆ ಮಾತನಾಡುತ್ತಿದ್ದಾಗ ಆಕೆಯನ್ನು ಚುಂಬಿಸಿದ್ದಾರೆ. ಅದನ್ನು ದೂರುದಾರ ಯುವತಿ ತನ್ನ ಪೋಷಕರಿಗೆ ಹೇಳಿದ್ದಾರೆ. ಅವರು ಶಂತನಾಗಣೇಶ್ ಎನ್ನುವ ವ್ಯಕ್ತಿಯನ್ನು ಭೇಟಿಯಾಗಿ ಅವಳು ಮದುವೆಯಾಗಲು ಒತ್ತಾಯಿಸಿದ್ದಾರೆ. ಆದರೆ ಆ ವ್ಯಕ್ತಿ ಮದುವೆಯಾಗಲು ನಿರಾಕರಿಸಿ ಆಕೆಯಿಂದ ದೂರವಾಗಲು ನಿರ್ಧರಿಸಿದ್ದಾನೆ. ನಂತರ ಆಕೆಯ ಮನೆಯವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದಾಗ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.
ಮಾನ್ಯ ನ್ಯಾಯಾಲಯ ತನ್ನ ತೀರ್ಪಿನಲ್ಲಿ ” ಪ್ರಥಮ ಮಾಹಿತಿ ವರದಿಯಲ್ಲಿ ಇರುವ ವಿಷಯ ನಿಜ ಎಂದು ನಂಬಿದರೂ ಅದರಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿ ಮುಂದುವರೆದಿರುವುದು ಸಮಂಜಸವಲ್ಲ” ಎಂದು ಹೇಳಿದೆ.
Leave A Reply