ಪೆಹಲ್ಗಾಮ್ ನಲ್ಲಿ ಜನರು ಕಡಿಮೆ ಇದ್ದ ಕಾರಣ 1 ದಿನ ಮುಂದೂಡಿದ್ದ ಉಗ್ರರು?

ಇಂತಹ ಒಂದು ಸಂಶಯ ಬರಲು ಕಾರಣ ಮಹಾರಾಷ್ಟ್ರದ ರಾವುತ್ ಪರಿವಾರ. ಈ ಕುಟುಂಬ ಎಪ್ರಿಲ್ 21 ರಂದು ಕಾಶ್ಮೀರದ ಪೆಹಲ್ಗಾಮ್ ನಲ್ಲಿ ಇತ್ತು. ಅದು ಹಿಂದೂಗಳ ಹತ್ಯಾಕಾಂಡ ನಡೆಯುವ ಒಂದು ದಿನದ ಮೊದಲಿನ ಘಟನೆ. ಮಹಾರಾಷ್ಟ್ರದ ಜಾಲ್ನಾ ಜಿಲ್ಲೆಯ ಆದರ್ಶ ರಾಹುತ್ ಅವರು ಆವತ್ತು ಪೆಹಲ್ಗಾಮ್ ನಲ್ಲಿ ವಿಹರಿಸುತ್ತಿದ್ದರು. ಅಲ್ಲಿ ಒಬ್ಬ ಅಪರಿಚಿತ ವ್ಯಕ್ತಿಯೊಂದಿಗೆ ಆದರ್ಶ್ ಮಾತನಾಡಿದ್ದಾರೆ. ಮಾತನಾಡುವಾಗಲೇ ಆದರ್ಶ ಅವರಿಗೆ ಏನೋ ಸಂಶಯ ಬಂದಿದೆ. ಈ ಹತ್ಯಾಕಾಂಡದ ನಂತರ ವೈರಲ್ ಆದ ವಿಡಿಯೋ ದೃಶ್ಯದಲ್ಲಿದ್ದ ವ್ಯಕ್ತಿಯನ್ನು ನೋಡಿದ ಆದರ್ಶ ಅವರಿಗೆ ಇದೇ ಮನುಷ್ಯನನ್ನು ತಾನು ಹಿಂದಿನ ದಿನ ನೋಡಿದ್ದಲ್ಲ ಎಂದು ಅನಿಸಿದೆ. ನಂತರ ಎನ್ ಐಎ ಬಿಡುಗಡೆಗೊಳಿಸಿದ ಶಂಕಿತ ಹಂತಕರ ಫೋಟೋದಲ್ಲಿದ್ದ ವ್ಯಕ್ತಿಯನ್ನು ಆದರ್ಶ್ ಗುರುತಿಸಿದ್ದಾರೆ. ಅದೇ ವ್ಯಕ್ತಿ ಹಿಂದಿನ ದಿನ ತಮ್ಮೊಂದಿಗೆ ಪೆಹಲ್ಗಾಂನಲ್ಲಿ ಮಾತನಾಡಿದ್ದರು ಎನ್ನುವುದು ಅವರಿಗೆ ಬಲವಾಗಿ ಅನಿಸಿದೆ. ರಾಷ್ಟ್ರೀಯ ತನಿಖಾ ದಳ ಬಿಡುಗಡೆ ಮಾಡಿದ ಉಗ್ರರ ಫೋಟೋದಲ್ಲಿದ್ದ ಉಗ್ರರ ನಡುವೆ ನಿಂತಿದ್ದ ವ್ಯಕ್ತಿಯನ್ನು ಗುರುತಿಸಿ ಆದರ್ಶ್ ಎನ್ ಐಎ ಗೆ ಮಾಹಿತಿ ನೀಡಿದ್ದಾರೆ.
ರೌವತ್ ಕುಟುಂಬದ ಸಂಜಯ್ ರೌವತ್, ಅವರ ಮಗ ಆದರ್ಶ್ ಹಾಗೂ ಪತ್ನಿ ಶಾಮೀಲ್ ಅವರು ಎಪ್ರಿಲ್ 21 ರಂದು ಪಹಲ್ಗಾಮ್ ನಲ್ಲಿ ಇದ್ದರು. ಆಗ ಆದರ್ಶ್ ಅವರು ಒಬ್ಬರೇ ಕುದುರೆ ಸವಾರಿ ಮಾಡುತ್ತಾ ವಿಹರಿಸುತ್ತಾ ಇದ್ದರು. ಈಗ ಹತ್ಯಾಕಾಂಡ ನಡೆದಿರುವ ಬೈಸರನ್ ಪ್ರದೇಶದಲ್ಲಿದ್ದ ಮ್ಯಾಗಿ ಸ್ಟಾಲ್ ನಲ್ಲಿ ಅವರಿಗೆ ಒಬ್ಬ ಅಪರಿಚಿತ ವ್ಯಕ್ತಿಯ ಭೇಟಿ ಆಗಿದೆ. ಆ ವ್ಯಕ್ತಿ ” ನೀವು ಕಾಶ್ಮೀರಿ ತರಹ ಕಾಣಿಸುವುದಿಲ್ಲ, ನೀವು ಹಿಂದೂನಾ?” ಎಂದು ಕೇಳಿದ್ದಾರೆ. ಈ ಪ್ರಶ್ನೆಯಿಂದ ಆದರ್ಶ್ ಅವರಿಗೆ ಏನೋ ರಾಂಗ್ ಹೊಡೆದಂಗೆ ಆಗಿದೆ. ತಕ್ಷಣ ಅವರು ಸುಧಾರಿಸಿಕೊಂಡು ” ಇಲ್ಲ, ನಾನು ಇಲ್ಲಿಯವನೇ” ಎಂದು ಅಷ್ಟು ಹೇಳಿದ ಆದರ್ಶ್ ಅಲ್ಲಿ ನಿಲ್ಲದೇ ತಕ್ಷಣ ಜಾಗ ಖಾಲಿ ಮಾಡಿದ್ದಾರೆ.
ಎಪ್ರಿಲ್ 22 ರಂದು ರೌವತ್ ಕುಟುಂಬ ಶ್ರೀನಗರವನ್ನು ತಲುಪಿದ್ದಾರೆ. ಅದೇ ದಿನ ಪೆಹಲ್ಗಾಂನಲ್ಲಿ ಉಗ್ರಗಾಮಿಗಳಿಂದ ಭಯೋತ್ಪಾದಕ ಕೃತ್ಯ ನಡೆದಿದೆ. ಹತ್ಯಾಕಾಂಡದ ನಂತರ ಆದರ್ಶ್ ಅವರು ವೈರಲ್ ಆಗಿದ್ದ ವಿಡಿಯೋದಲ್ಲಿ ತಮ್ಮನ್ನು ಹಿಂದಿನ ದಿನ “ನೀನು ಹಿಂದೂನಾ?” ಎಂದು ಕೇಳಿದವನನ್ನು ಗುರುತಿಸಿದ್ದಾರೆ. ಆ ಅಪರಿಚಿತ ವ್ಯಕ್ತಿ ಮ್ಯಾಗಿ ಸ್ಟಾಲ್ ಬಳಿ ನಿಂತಿದ್ದು, ತನ್ನ ಬಳಿ ಇವನೇ ಎಂದು ಆದರ್ಶ್ ಖಚಿತಪಡಿಸಿದ್ದಾರೆ. ಆದರ್ಶ್ ಅವರು ತಮ್ಮ ಊರು ಜಾಲ್ನಾಕ್ಕೆ ತಲುಪಿದ ತಕ್ಷಣ ಎನ್ ಐಎ ಅಧಿಕಾರಿಗಳಿಗೆ ಈ ವಿಷಯದ ಬಗ್ಗೆ ಇ-ಮೇಲ್ ಮೂಲಕ ಮಾಹಿತಿ ರವಾನಿಸಿದ್ದಾರೆ.
ಆದರ್ಶ್ ಅವರ ಪ್ರಕಾರ ಉಗ್ರಗಾಮಿಗಳು ಎಪ್ರಿಲ್ 21 ರಂದೇ ಗುಂಡಿನ ದಾಳಿ ಮಾಡಲು ತಯಾರಿ ನಡೆಸಿದ್ದರು. ಆದರೆ ಆ ದಿನ ಅಲ್ಲಿ ಪ್ರವಾಸಿಗರ ಸಂದಣಿ ಕಡಿಮೆ ಇತ್ತು. ಆದ್ದರಿಂದ ಒಂದು ದಿನ ಉಗ್ರರು ತಮ್ಮ ಯೋಜನೆಯನ್ನು ಮುಂದೂಡಿದ್ದರು. ಈ ವಿಷಯದಲ್ಲಿ ಆದರ್ಶ್ ಅವರ ತಂದೆ ಸಂಜಯ್ ರೌವತ್ ಅವರು ಹೇಳುವ ಪ್ರಕಾರ ಯಾವ ಪ್ರದೇಶದಲ್ಲಿ ಹತ್ಯಾಕಾಂಡ ನಡೆದಿದೆಯೋ ಆ ಪ್ರದೇಶದಲ್ಲಿ ಪೊಲೀಸ್ ಅಥವಾ ಸುರಕ್ಷಾ ವ್ಯವಸ್ಥೆ ಇರಲಿಲ್ಲ. ಒಂದು ವೇಳೆ ಭದ್ರತಾ ವ್ಯವಸ್ಥೆ ಇದ್ದಿದ್ದರೆ ಇಂತಹ ಘಟನೆಯನ್ನು ತಡೆಯಬಹುದಿತ್ತು.
Leave A Reply