ಅಂದು ಕ್ಲರ್ಕ್.. ಇಂದು ಕರ್ಣಾಟಕ ಬ್ಯಾಂಕಿನ ಎಂಡಿ, ಸಿಇಒ!

ದೇಶದ ಪ್ರಮುಖ ಖಾಸಗಿ ಬ್ಯಾಂಕ್ ಗಳಲ್ಲಿ ಪ್ರಮುಖವಾಗಿರುವ ಕರ್ಣಾಟಕ ಬ್ಯಾಂಕ್ ರಾಘವೇಂದ್ರ ಶ್ರೀನಿವಾಸ್ ಭಟ್ ಅವರನ್ನು ಮೂರು ತಿಂಗಳ ಅವಧಿಗೆ ಮಧ್ಯಂತರ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಘೋಷಿಸಿದೆ. ಮಾಜಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಕೃಷ್ಣನ್ ಹರಿಹರ ಶರ್ಮಾ ಜೂನ್ 29 ರಂದು ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ರಾಜೀನಾಮೆ ನೀಡಿದ್ದರು.
ಮೂರು ದಶಕಗಳಿಗಿಂತಲೂ ಹೆಚ್ಚು ಕಾಲ ಬ್ಯಾಂಕಿನ ಬೇರೆ ಬೇರೆ ಸ್ತರಗಳಲ್ಲಿ ಕೆಲಸ ಮಾಡಿ ಅನುಭವ ಇರುವ ರಾಘವೇಂದ್ರ ಶ್ರೀನಿವಾಸ್ ಭಟ್ ಅವರನ್ನು ಕಳೆದ ತಿಂಗಳು ಸಿಒಒ ಆಗಿ ನೇಮಿಸಲಾಗಿತ್ತು. ಈಗ ರಾಘವೇಂದ್ರ ಶ್ರೀನಿವಾಸ್ ಭಟ್ ಅವರನ್ನು ಮಧ್ಯಂತರ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ನೇಮಿಸಿದೆ. ಈ ಹಿಂದೆ ಮುಖ್ಯ ಕಾರ್ಯಾಚರಣಾ ಅಧಿಕಾರಿಯಾಗಿದ್ದ ಭಟ್ ಅವರು ಮೂರು ತಿಂಗಳ ಕಾಲ ಈ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ. ಶರ್ಮಾ ಅವರ ನಿರ್ಗಮನವು ಬ್ಯಾಂಕಿನ ಷೇರು ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರಿತ್ತು.
ಭಟ್ ಅವರು 1981 ರಲ್ಲಿ ಕರ್ಣಾಟಕ ಬ್ಯಾಂಕಿನಲ್ಲಿ ಗುಮಾಸ್ತರಾಗಿ ಕೆಲಸ ಆರಂಭಿಸಿದ್ದರು. ಅವರು ಬ್ಯಾಂಕಿನೊಂದಿಗೆ 38 ವರ್ಷಗಳ ಸುರ್ಧೀರ್ಘ ಕಾಲದ ಸಂಬಂಧ ಹೊಂದಿದ್ದಾರೆ. 2019 ರಲ್ಲಿ ಅವರು ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಆಗಿದ್ದರು.
ಇನ್ನು ಕಾರ್ಯನಿರ್ವಾಹಕ ನಿರ್ದೇಶಕ ಶೇಖರ್ ರಾವ್ ಅವರು ಮಂಗಳೂರಿಗೆ ಸ್ಥಳಾಂತರಗೊಳ್ಳಲು ಇಚ್ಚಿಸದೇ ಮತ್ತು ಇತರ ವೈಯಕ್ತಿಕ ಕಾರಣಗಳನ್ನು ನೀಡಿ ರಾಜೀನಾಮೆ ನೀಡಿದ್ದರು. ಅವರ ರಾಜೀನಾಮೆಯನ್ನು ಮಂಡಳಿಯು ಅಂಗೀಕರಿಸಿದೆ. ಅದು ಜುಲೈ 31 ರಿಂದ ಜಾರಿಗೆ ಬರಲಿದೆ. ಪೂರ್ಣಾವಧಿ ಸಿಇಒ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರ ಹುದ್ದೆಗಳಿಗೆ ಸೂಕ್ತ ಅಭ್ಯರ್ಥಿಗಳನ್ನು ಗುರುತಿಸಲು ಬ್ಯಾಂಕ್ ಶೋಧ ಸಮಿತಿಯನ್ನು ರಚಿಸಿದೆ.