ಕಾರ್ಕಳ ಪರಶುರಾಮನ ವಿಗ್ರಹ ಕಂಚಿನದ್ದು ಅಲ್ಲ, ನಕಲಿ: ಚಾರ್ಜ್ ಶೀಟ್ ಸಲ್ಲಿಕೆ

ಕಾರ್ಕಳದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಪರಶುರಾಮನ ವಿಗ್ರಹದ ಬಗ್ಗೆ ಕಳೆದೆರಡು ವರ್ಷಗಳಿಂದ ಸಾಕಷ್ಟು ಸುದ್ದಿಯಾಗಿದೆ. ಅದನ್ನು ಕಂಚಿನಿಂದ ನಿರ್ಮಿಸಿದ್ದಲ್ಲ, ಫೈಬರ್ ನಿಂದ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷ ಕಾರ್ಕಳದ ಶಾಸಕ ಸುನೀಲ್ ಕುಮಾರ್ ಮೇಲೆ ಆರೋಪ ಮಾಡಿತ್ತು. ನಿಮ್ಮದೇ ಸರಕಾರ ಇದೆ, ತನಿಖೆ ಮಾಡಿ ಎಂದು ಸುನೀಲ್ ಕುಮಾರ್ ಆರೋಪಕ್ಕೆ ಪ್ರತಿಕ್ರಿಯಿಸಿದ್ದರು. ಕಾಂಗ್ರೆಸ್ಸಿನ ಸ್ಥಳೀಯ ಮುಖಂಡರು ರಾಜ್ಯದ ಕಾಂಗ್ರೆಸ್ ಸರಕಾರದ ಮೇಲೆ ಒತ್ತಡ ತಂದು ತನಿಖೆಯನ್ನು ತೀವ್ರವಾಗಿ ನಡೆಸಲು ಆಗ್ರಹಿಸಿದ್ದರು. ಕೊನೆಗೂ ತಮ್ಮ ಪಕ್ಷದ ನಾಯಕರ ಒತ್ತಡಕ್ಕೆ ಮಣಿದು ರಾಜ್ಯ ಸರಕಾರ ಈ ಬಗ್ಗೆ ಸಮರ್ಪಕ ತನಿಖೆ ನಡೆಸಲು ಪೊಲೀಸ್ ಇಲಾಖೆಗೆ ಸೂಚಿಸಿತ್ತು. ಅಂತಿಮವಾಗಿ ಕಾರ್ಕಳ ಪೊಲೀಸರು 1231 ಪುಟಗಳ ಚಾರ್ಜ್ ಶೀಟ್ ಕಾರ್ಕಳ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಬಹುವಿವಾದಿತ ಕಾರ್ಕಳದ ಉಮ್ಮಿಕಲ್ ಬೆಟ್ಟದಲ್ಲಿ ಸ್ಥಾಪಿಸಲಾಗಿದ್ದ 33 ಅಡಿ ಎತ್ತರದ ಪರಶುರಾಮನ ವಿಗ್ರಹದ ವಿಷಯದಲ್ಲಿ ತನಿಖೆ ನಡೆದು ಕೊನೆಗೂ ಪೊಲೀಸ್ ಇಲಾಖೆ ಪ್ರಕರಣವನ್ನು ಬಹುತೇಕ ತಾರ್ಕಿಕ ಅಂತ್ಯಕ್ಕೆ ತಂದು ನಿಲ್ಲಿಸಿದೆ.
10 ಕೋಟಿ ರೂ ವೆಚ್ಚದಲ್ಲಿ ಸ್ಥಾಪಿಸಲಾಗಿರುವ ಪರಶುರಾಮ ದೇವರ ವಿಗ್ರಹ ಕೊನೆಗೂ ನಕಲಿ ಎಂದು ಸಾಬೀತಾಗಿದ್ದು, ಈ ಬಗ್ಗೆ ಶಿಲ್ಪಿ ಮತ್ತು ಉಡುಪಿ ನಿರ್ಮಿತಿ ಕೇಂದ್ರದ ಇಬ್ಬರು ಅಧಿಕಾರಿಗಳ ಮೇಲೆ ಕಾರ್ಕಳ ಕೋರ್ಟಿನಲ್ಲಿ ದೋಷಾರೋಹಣ ಪಟ್ಟಿ ಸಲ್ಲಿಸಲಾಗಿದೆ.
2024 ರಲ್ಲಿ ಕೃಷ್ಣ ಶೆಟ್ಟಿ ಎಂಬುವರು ನೀಡಿದ ದೂರಿನಂತೆ ಈ ಪ್ರಕರಣದ ತನಿಖೆ ನಡೆಯುತ್ತಿದೆ. ಬೆಂಗಳೂರಿನ ಕ್ರಿಶ್ ಆರ್ಟ್ ವಲ್ಡ್ ನ ಶಿಲ್ಪಿ ಕೃಷ್ಣ ನಾಯ್ಕ್ ಅವರು ಕಂಚಿನ ವಿಗ್ರಹವನ್ನು ರಚಿಸಲು ಹಣ ಪಡೆದುಕೊಂಡಿದ್ದರು. ಆದರೆ ಅವರು ಕಂಚಿನ ಮೂರ್ತಿಯ ಬದಲಿಗೆ ಹಿತ್ತಾಳೆಯ ವಿಗ್ರಹ ನಿರ್ಮಿಸಿದ್ದಾರೆ ಎಂದು ತನಿಖಾ ವರದಿಯಲ್ಲಿ ತಿಳಿದು ಬಂದಿದೆ. ನಿರ್ಮಿತಿಯ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಮತ್ತು ಇಂಜಿನಿಯರ್ ಸಚಿನ್ ವೈ ಕುಮಾರ್ ಅವರು ವಿಗ್ರಹ ನಿರ್ಮಾಣದ ವರ್ಕ್ ಆರ್ಡರ್ ನಲ್ಲಿದ್ದ ಷರತ್ತುಗಳನ್ನು ಪಾಲಿಸಿರಲಿಲ್ಲ. ವಿಗ್ರಹದ ಸೊಂಟದಿಂದ ಮೇಲ್ಭಾಗವನ್ನು ಉಮ್ಮಿಕಲ್ ಬೆಟ್ಟದಿಂದ ತೆಗೆದುಕೊಂಡು ಹೋಗಿ ಮಣಿಪಾಲದಲ್ಲಿರುವ ನಿರ್ಮಿತಿ ಕೇಂದ್ರದ ಶೆಡ್ ನಲ್ಲಿ ಇರಿಸಿದ್ದರು. ಅದನ್ನು ದುರಸ್ತಿ ಮಾಡಲು ಶಿಲ್ಪಿ ಕೃಷ್ಣ ನಾಯ್ಕ್ ಅವರಿಗೆ ಹಸ್ತಾಂತರ ಮಾಡಿದ್ದಾಗಿ, ತಪ್ಪು ಮಾಹಿತಿ ನೀಡಿದ್ದರು ಎಂದು ದೂರಲಾಗಿತ್ತು.
ಇದೀಗ ಕಾರ್ಕಳ ಪೊಲೀಸರು ಶಿಲ್ಪಿ ಕೃಷ್ಣ ನಾಯ್ಕ, ನಿರ್ಮಿತಿ ಕೇಂದ್ರದ ಅರುಣ್ ಕುಮಾರ್ ಹಾಗೂ ಸಚಿನ್ ವೈ ಕುಮಾರ್ ಅವರು ಒಳಸಂಚು, ನಂಬಿಕೆ ದ್ರೋಹ ಮತ್ತು ವಂಚನೆ ಎಸಗಿ, ಸಾಕ್ಷಿನಾಶ ಮಾಡಿದ್ದಾರೆ ಎಂದು ಅವರ ವಿರುದ್ಧ ಕಾರ್ಕಳ ತಾಲೂಕು ನ್ಯಾಯಾಲಯಕ್ಕೆ 1231 ಪುಟಗಳ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದಾರೆ.