ಅಜಾನ್ ಚರ್ಚೆಯ ಸಂದರ್ಭದಲ್ಲಿ ದೀಪಾವಳಿ ಪಟಾಕಿ ವಿಷಯ ಎತ್ತಿದ ಸಚಿವ!
ಅಜಾನ್ ಸಮಯದಲ್ಲಿ ಲೌಡ್ ಸ್ವೀಕರ್ ಬಳಕೆಯಿಂದ ಉಂಟಾಗುತ್ತಿರುವ ಶಬ್ದದ ಪರ-ವಿರೋಧ ಚರ್ಚೆ ಬಹಳ ಕಾಲದಿಂದ ಆಗುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ವಿಷಯ ಈ ಬಾರಿ ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲದ ಅಧಿವೇಶನದಲ್ಲಿಯೂ ಚರ್ಚೆಯಾಯಿತು. ಅಜಾನ್ ಸಮಯದಲ್ಲಿ ಡೆಸಿಬಲ್ ಮಿತಿ ಮೀರಿ ಲೌಡ್ ಸ್ವೀಕರ್ ಬಳಸುತ್ತಿರುವುದನ್ನು ನಿಯಂತ್ರಿಸಬೇಕೆಂಬ ಭಾರತೀಯ ಜನತಾ ಪಾರ್ಟಿಯ ಡಿ.ಎಸ್. ಅರುಣ್ ಅವರು ಪ್ರಶ್ನೆ ಕೇಳಿದ್ದರು. ಅವರ ಪ್ರಶ್ನೆಗೆ ಪರಿಸರ ಸಚಿವ ಈಶ್ವರ್ ಖಂಡ್ರೆ ಅವರು ದೀಪಾವಳಿಯ ಪಟಾಕಿ ಬಳಕೆ, ಹಬ್ಬ ಇತ್ಯಾದಿ ವೇಳೆ ಲೌಡ್ ಸ್ಪೀಕರ್ ಬಳಕೆ ವಿಷಯ ಪ್ರಸ್ತಾಪಿಸಿದ್ದು, ಕೆಲಕಾಲ ತೀವ್ರ ಮಾತಿನ ವಾಗ್ವಾದಕ್ಕೆ ಕಾರಣವಾಯಿತು.
ಆಜಾನ್ ವಿಷಯದಲ್ಲಿ ರಾಜಕೀಯ ಮಾಡಲಾಗುತ್ತಿದೆ ಎಂದು ಸಚಿವ ಖಂಡ್ರೆ ಹೇಳಿದಾಗ, ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಕಾಂಗ್ರೆಸ್ ಸದಸ್ಯರು ಎದ್ದು ನಿಂತು ಸಚಿವರನ್ನು ಬೆಂಬಲಿಸಿ ಮಾತನಾಡತೊಡಗಿದರು.
ಚರ್ಚೆಯ ನಡುವೆ ವಿಧಾನ ಪರಿಷತ್ ಸದಸ್ಯ ಅರುಣ್ ” ಅಜಾನ್ ನಿಂದ ತೊಂದರೆಯಾಗುತ್ತದೆ ಎಂದು ದೂರು ಕೊಡುವ ಧೈರ್ಯ ಯಾರಿಗೂ ಇಲ್ಲ. ಯಾಕೆಂದರೆ ಇವರಿಗೆ ಸರಕಾರದ ಬೆಂಬಲ ಇದೆ. ಕಳೆದ ಎರಡೂವರೆ ವರ್ಷಗಳಿಂದ ಇದಕ್ಕೆ ಸರಕಾರದ ಬೆಂಬಲವಿದೆ” ಎಂದು ಹೇಳಿದ ಮಾತು ಕೆಲಕಾಲ ಮಾತಿನ ಚಕಮಕಿಗೆ ಕಾರಣವಾಯಿತು. ಈ ಮಧ್ಯೆ ಸಚಿವ ಈಶ್ವರ ಖಂಡ್ರೆ ಮಾತನಾಡಿ ದೀಪಾವಳಿಯ ಸಮಯದಲ್ಲಿ ಪಟಾಕಿ ಹೊಡೆಯುವುದರಿಂದ ಶಬ್ದ ಮಾಲಿನ್ಯ, ವಾಯು ಮಾಲಿನ್ಯ ಆಗುತ್ತದೆ ಎಂದು ಹೇಳತೊಡಗಿದರು. ಆಗ ಸಭಾಪತಿ ಬಸವರಾಜ ಹೊರಟ್ಟಿ ಅವರು ಸದಸ್ಯರು ಕೇಳಿದ ಪ್ರಶ್ನೆಗೆ ಮಾತ್ರ ಉತ್ತರ ನೀಡಿ, ಬೇರೆ ವಿಷಯ ಪ್ರಸ್ತಾಪ ಬೇಡಾ ಎಂದು ಸಚಿವರಿಗೆ ಸಲಹೆ ನೀಡಿದರು.









