ವಿಡಿಯೋ ಕಾಲ್ ನಲ್ಲಿ ನಿಶ್ಚಿತಾರ್ಥ-ಎಲ್ ಇಡಿ ಸ್ಕ್ರೀನ್ ಗೆ ಆರತಿ!
ಜಗತ್ತು ಬದಲಾಗಿದೆ. ಆದರೆ ಹಿಂದೂ ಧಾರ್ಮಿಕ ವಿಧಾನಗಳು ಮಾತ್ರ ಇವತ್ತಿಗೂ ನಮ್ಮ ಹಿರಿಯರು ಪಾಲಿಸಿಕೊಂಡು ಬಂದ ಹಿಂದಿನ ರೀತಿಯಲ್ಲಿವೆ ಎನ್ನುವ ಸಮಾಧಾನವಿತ್ತು. ಆದರೆ ಈಗ ಅದು ಕೂಡ ಹೊಸ ತಂತ್ರಜ್ಞಾನದತ್ತ ಸರಿಯುತ್ತಿರುವುದು ಆಧುನಿಕ ಕಾಲಕ್ಕೆ ಹಿಡಿದ ದ್ಯೋತಕವಾಗಿದೆ.

ಆಹಾರ ಆನ್ ಲೈನ್, ವಸ್ತುಗಳು ಆನ್ ಲೈನ್ ಬಳಿಕ ಈಗ ಮದುವೆಗಳು ಕೂಡ ಆನ್ ಲೈನ್ ಆಗುತ್ತಿರುವುದು ಸೋಜಿಗ. ಅದಕ್ಕೆ ತಾಜಾ ಉದಾಹರಣೆ ಇತ್ತೀಚೆಗೆ ನಡೆದ ನಿಶ್ಚಿತಾರ್ಥವೊಂದರ ಘಟನೆ. ಉಡುಪಿ ಮೂಲದ ಮೇಘನಾ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆ ಮಾಗಡಿ ತಾಲೂಕಿನ ಚಕ್ರಭಾವಿ ಗ್ರಾಮದ ಸುಹಾಸ್ ವಿಡಿಯೋ ಕಾಲದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿರುವುದು ಹೊಸ ಬೆಳವಣಿಗೆ.
ಉಡುಪಿಯ ಖಾಸಗಿ ಕಲ್ಯಾಣ ಮಂಟಪದಲ್ಲಿ ಈ ನಿಶ್ಚಿತಾರ್ಥ ನಡೆದಿದೆ. ವರನ ಅನುಪಸ್ಥಿತಿಯಲ್ಲಿ ಎರಡೂ ಕುಟುಂಬಗಳು ಈ ಶುಭ ಕಾರ್ಯವನ್ನು ನೆರವೇರಿಸಿವೆ. ಕೆನಡಾದಲ್ಲಿ ಕೆಲಸ ಮಾಡುತ್ತಿರುವ ಸುಹಾಸ್ ಗೆ ಭಾರತಕ್ಕೆ ಬರಲು ರಜೆ ಸಿಕ್ಕಿಲ್ಲ. ಜನವರಿ 7 ಹಾಗೂ 8 ಕ್ಕೆ ಮದುವೆ ನಿಗದಿಯಾಗಿದ್ದು, ಕುಟುಂಬಗಳು ವಿಡಿಯೋ ಕಾಲ್ ಮೂಲಕ ನಿಶ್ಚಿತಾರ್ಥ ಮಾಡಿ ಮುಗಿಸಿವೆ. ಬ್ರಾಹ್ಮಣ ಸಂಪ್ರದಾಯದಂತೆ ಎರಡೂ ಕುಟುಂಬಸ್ಥರು ನಿಶ್ಚಿತಾರ್ಥ ನೆರವೇರಿಸಿದ್ದಾರೆ.

ಎಲ್ ಇಡಿ ಸ್ಕ್ರೀನ್ ಗೆ ಆರತಿ ಬೆಳಗಿ, ಮಂತ್ರಾಕ್ಷತೆ ಹಾಕಿ ವಧು, ವರನಿಗೆ ಶುಭ ಕೋರಿದ್ದಾರೆ. ಕ್ಯಾಮೆರಾ ಮುಂದೆ ಯುವಕ – ಯುವತಿ ಉಂಗುರ ಹಾಕಿಕೊಂಡರು. ಒಟ್ಟಿನಲ್ಲಿ ಹೊಸ ಬದುಕನ್ನು ಆರಂಭಿಸಲು ನಿರ್ಧರಿಸಿರುವ ಜೋಡಿಗಳು ಹೊಸ ರೀತಿಯಲ್ಲಿ ಬದುಕನ್ನು ಆರಂಭಿಸಲು ತೀರ್ಮಾನಿಸಿರುವುದು ಹೊಸ ಬೆಳವಣಿಗೆ. ಮುಂದಿನ ದಿನಗಳಲ್ಲಿ ಇದು ಬೇರೆಯವರಿಗೂ ಮಾದರಿಯಾಗುತ್ತದಾ, ಅನಿವಾರ್ಯ ಸಂದರ್ಭದಲ್ಲಿ ಇದೊಂದು ದಾರಿಯಾಗುತ್ತಾ ಎನ್ನುವುದು ಕಾದು ನೋಡಬೇಕು.









