ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
ಏಪ್ರಿಲ್ 10 ರಿಂದ ಟೋಲ್‌ಗಳಲ್ಲಿ ನಗದು ಪಾವತಿ ಸಂಪೂರ್ಣ ಬಂದ್
ನವದೆಹಲಿ , : ದೇಶದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನ ಸವಾರರಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮಹತ್ವದ ಎಚ್ಚರಿಕೆಯೊಂದನ್ನು ನೀಡಿದೆ. ಬರುವ ಏಪ್ರಿಲ್ 10, ಶುಕ್ರವಾರದಿಂದ ಜಾರಿಗೆ ಬರುವಂತೆ ದೇಶಾದ್ಯಂತ ಎಲ್ಲಾ ಟೋಲ್ ಪ್ಲಾಜಾಗಳಲ್ಲಿ ನಗದು ಸ್ವೀಕಾರ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ನಿರ್ಧರಿಸಿದೆ.
ಹೆದ್ದಾರಿಗಳಲ್ಲಿ ಸುಗಮ ಸಂಚಾರ ಮತ್ತು ಟೋಲ್ ಪ್ಲಾಜಾಗಳಲ್ಲಿ ಕಾಯುವ ಸಮಯವನ್ನು ಶೂನ್ಯಕ್ಕೆ ಇಳಿಸುವ ಉದ್ದೇಶದಿಂದ ಈ ಕ್ರಾಂತಿಕಾರಿ ಡಿಜಿಟಲೀಕರಣದ ಕ್ರಮ ಕೈಗೊಳ್ಳಲಾಗಿದೆ. ಈ ಹೊಸ ನಿಯಮದ ಪ್ರಕಾರ, ಫಾಸ್ಟ್‌ಟ್ಯಾಗ್ (FASTag) ಹೊಂದಿರದ ವಾಹನಗಳಿಗೆ ಯುಪಿಐ (UPI) ಮೂಲಕ ಪಾವತಿಸಲು ಅವಕಾಶ ನೀಡಲಾಗಿದ್ದರೂ, ಅದಕ್ಕೆ ಭಾರಿ ಬೆಲೆ ತೆರಬೇಕಾಗುತ್ತದೆ. ಯುಪಿಐ ಮೂಲಕ ಪಾವತಿ ಮಾಡುವ ಚಾಲಕರು ನಿಗದಿತ ಟೋಲ್ ಶುಲ್ಕಕ್ಕಿಂತ ಶೇ. 25ರಷ್ಟು ಹೆಚ್ಚುವರಿ ಹಣವನ್ನು ದಂಡದ ರೂಪದಲ್ಲಿ ಪಾವತಿಸುವುದು ಕಡ್ಡಾಯವಾಗಿದೆ. ಉದಾಹರಣೆಗೆ, ₹100 ಟೋಲ್ ದರವಿದ್ದರೆ, ಯುಪಿಐ ಬಳಕೆದಾರರು ₹125 ಪಾವತಿಸಬೇಕಾಗುತ್ತದೆ.
ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ರಾಷ್ಟ್ರೀಯ ಹೆದ್ದಾರಿ ನಿಯಮ 14ರ ಅಡಿಯಲ್ಲಿ ರಸ್ತೆಯ ಪ್ರವೇಶವನ್ನು ನಿರಾಕರಿಸಲಾಗುವುದು. ಅಲ್ಲದೆ, ಅಂತಹ ವಾಹನಗಳಿಗೆ ಇ-ನೋಟಿಸ್ ಜಾರಿ ಮಾಡಲಾಗುವುದು. ನೋಟಿಸ್ ಬಂದ 3 ದಿನಗಳ ಒಳಗೆ ಬಾಕಿ ಮೊತ್ತ ಪಾವತಿಸದಿದ್ದರೆ ದಂಡದ ಮೊತ್ತವು ದುಪ್ಪಟ್ಟಾಗಲಿದೆ ಎಂದು ಸಚಿವಾಲಯದ ಅಧಿಸೂಚನೆ ತಿಳಿಸಿದೆ.
ಇನ್ನು ಮುಂದೆ ಸ್ಥಳೀಯ ನಿವಾಸಿಗಳು ಅಥವಾ ವಿನಾಯಿತಿ ಪಡೆಯುವವರು ಗುರುತಿನ ಚೀಟಿ (ID Card) ತೋರಿಸಿ ಟೋಲ್ ದಾಟುವಂತಿಲ್ಲ. ಅಂತಹವರು ಕಡ್ಡಾಯವಾಗಿ ‘ಎಕ್ಸೆಂಪ್ಟೆಡ್ ಫಾಸ್ಟ್‌ಟ್ಯಾಗ್’ ಅಥವಾ ಡಿಜಿಟಲ್ ಪೋರ್ಟಲ್ ಮೂಲಕ ವಾರ್ಷಿಕ ಪಾಸ್ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಏಪ್ರಿಲ್ 10ರ ಗಡುವು ಸಮೀಪಿಸುತ್ತಿರುವುದರಿಂದ, ವಾಹನ ಸವಾರರು ತಕ್ಷಣವೇ ತಮ್ಮ ಫಾಸ್ಟ್‌ಟ್ಯಾಗ್ ಕೆವೈಸಿ (KYC) ಅಪ್‌ಡೇಟ್ ಮಾಡಿಕೊಳ್ಳಲು ಮತ್ತು ಖಾತೆಯಲ್ಲಿ ಸಾಕಷ್ಟು ಹಣ ಇರುವುದನ್ನು ಖಚಿತಪಡಿಸಿಕೊಳ್ಳಲು ಸೂಚಿಸಲಾಗಿದೆ. ಡಿಜಿಟಲ್ ಕ್ರಾಂತಿಯ ಭಾಗವಾಗಿ ಮುಂದಿನ ದಿನಗಳಲ್ಲಿ ಜಿಪಿಎಸ್ ಆಧಾರಿತ ಟೋಲ್ ವ್ಯವಸ್ಥೆಯೂ ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ ಎಂದು ಪ್ರಾಧಿಕಾರ ತಿಳಿಸಿದೆ.









