ರೆಸಾರ್ಟ್ ಮೋಜಿನಲ್ಲಿರುವ 18 ಎಐಎಡಿಎಂಕೆ ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್
ಚೆನ್ನೈ : ಎಐಎಡಿಎಂಕೆ ಮಾಜಿ ಉಪ ಪ್ರಧಾನಕಾರ್ಯದರ್ಶಿ ಹಾಗೂ ಶಶಿಕಲಾ ಸಂಬಂಧಿ ಟಿ.ಟಿ.ವಿ ದಿನಕರನ್ ಬಣದಲ್ಲಿ ಗುರುತಿಸಿಕೊಂಡು ತಮಿಳುನಾಡು ಸಿಎಂ ಇ.ಪಳನಿಸಾಮಿ ಬಹುಮತ ಸಾಬೀತಿಗೆ ರಾಜಕೀಯ ಚದುರಂಗದ ದಾಳಗಳಾಗಿ ಮಡಿಕೇರಿಯ ರೆಸಾರ್ಟ್‍ಗಳಲ್ಲಿ ಮೋಜು-ಮಸ್ತಿಯಲ್ಲಿದ್ದ 18 ಶಾಸಕರನ್ನು ವಿಧಾನಸಭೆ ಸ್ಪೀಕರ್ ಪಿ.ಧನಪಾಲ್ ಅನರ್ಹಗೊಳಿಸಿ ಆದೇಶಿಸಿದ್ದಾರೆ. ಪಳನಿಸಾಮಿ ಮತ್ತು ಪನ್ನೀರ್ ಸೆಲ್ವಂ ಬಣಗಳು ಒಂದಾಗಿ ಸರ್ಕಾರ ರಚಿಸಿದ ನಂತರ ಬಹುಮತದ ಸಂಖ್ಯಾಬಲ ದಕ್ಕಬಾರದೆಂದು ದಿನಕರನ್ ಈ ಶಾಸಕರನ್ನು ರೆಸಾರ್ಟ್ ವಾಸದಲ್ಲಿ ಇರಿಸಿದ್ದರು. ಶುಕ್ರವಾರದೊಳಗೆ ಪಕ್ಷ ವಿರೋಧಿ ಚಟುವಟಿಕೆ ನಿಲ್ಲಿಸಿ ತವರು ಕ್ಷೇತ್ರಗಳಿಗೆ ಮರಳುವಂತೆ ಕಳೆದ ವಾರ ಸ್ಪೀಕರ್ ಸೂಚಿಸಿದ್ದರು. ಈ ಮಾತನ್ನು ಮೀರಿಯೂ ಮಜಾ ಉಡಾಯಿಸುತ್ತಿದ್ದ ಶಾಸಕರು ಈಗ ಅನರ್ಹರಾಗಿದ್ದಾರೆ. ಶಾಸಕರು ಪ್ರಜಾಪ್ರಭುತ್ವದ ಲೇವಡಿ ಮಾಡುತ್ತಿದ್ದಾರೆ ಎಂದು ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ತಮಿಳುನಾಡು ರಾಜಕೀಯದ ಬಗ್ಗೆ ಜನರಲ್ಲಿ ಹೇಸಿಗೆ ಮೂಡಿತ್ತು.
ಸಿಎಂ ಪಳನಿಸಾಮಿ ವಿಶ್ವಾಸಮತ ಯಾಚನೆಗೆ ಮುಂದಾಗಬೇಕೆ ಬೇಡವೇ ಎಂದು ಮದ್ರಾಸ್ ಹೈಕೋರ್ಟ್ ಇನ್ನೂ ನಿರ್ಧರಿಸಬೇಕಿದೆ.
ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ. ಸ್ಟಾಲಿನ್ ಮತ್ತು ದಿನಕರನ್ ಬೆಂಬಲಿತ ಶಾಸಕರೊಂದಿಗೆ ಕೆಲ ವಾರಗಳ ಹಿಂದೆ ತಮಿಳುನಾಡು ರಾಜ್ಯಪಾಲ ಸಿ.ವಿದ್ಯಾಸಾಗರ ರಾವ್ ಭೇಟಿ ಮಾಡಿ ಸಿಎಂ ಪಳನಿಗೆ ವಿಶ್ವಾಸಮತ ಸಾಬೀತಿಗೆ ಸೂಚಿಸುವಂತೆ ಮನವಿ ಸಲ್ಲಿಸಿದ್ದರು.
Leave A Reply