ಪಳನಿಸ್ವಾಮಿ ಬಣಕ್ಕೆ ಎರಡೆಲೆ ಚಿಹ್ನೆ, ಶಶಿಕಲಾಗೆ ಮತ್ತೊಂದು ಹಿನ್ನಡೆ
ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ಗೆ ಮತ್ತೊಂದು ಹಿನ್ನಡೆಯಾಗಿದ್ದು, ಎಐಎಡಿಎಂಕೆ ಪಳನಿಸ್ವಾಮಿ ಬಣಕ್ಕೆ ಎರಡೆಲೆ ಚಿಹ್ನೆ ಸಿಕ್ಕಿದೆ.
ಪಳನಿ ಸ್ವಾಮಿ ಬಣಕ್ಕೆ ಎರಡೆಲೆ ಚಿಹ್ನೆ ನೀಡಲು ಚುನಾವಣೆ ಆಯೋಗ ತೀರ್ಮಾನಿಸಿದ್ದು, ವಿವಾದಕ್ಕೆ ತೆರೆ ಎಳೆದಿದೆ. ಜಯಲಲಿತಾ ನಿಧರಾದ ಬಳಿಕ ಶಶಿಕಲಾ ಹಾಗೂ ಪಳನಿಸ್ವಾಮಿ ಬಣಗಳು ಎಐಎಡಿಎಂಕೆ ಪಕ್ಷದ ಚಿಹ್ನೆಗಾಗಿ ಕದನ ಶುರುವಿಟ್ಟುಕೊಂಡಿದ್ದವು. ಅಲ್ಲದೆ ವಿವಾದ ಬಗೆಹರಿಸುವಂತೆ ಇದೇ ತಿಂಗಳ ಆರಂಭದಲ್ಲಿ ಚುನಾವಣೆ ಆಯೋಗಕ್ಕೆ ಲಿಖಿತ ಮನವಿ ಮಾಡಿದ್ದವು. ಈ ಹಿನ್ನೆಲೆಯಲ್ಲಿ ನಿರ್ಧಾರ ಪ್ರಕಟಿಸಿರುವ ಚುನಾವಣೆ ಆಯೋಗ ಎರಡೆಲೆ ಚಿಹ್ನೆಯನ್ನು ಪಳನಿಸ್ವಾಮಿ ಬಣಕ್ಕೆ ನೀಡಲು ನಿರ್ಧಿರಿಸಿದೆ.
ಎರಡೆಲೆ ಚಿಹ್ನೆಯನ್ನು ಶಶಿಕಲಾ ಬಣಕ್ಕೆ ನೀಡಬೇಕು ಎಂದು ಶಶಿಕಲಾ ಸಂಬಂಧಿ ಟಿಟಿವಿ ದಿನಕರನ್ ಚುನಾವಣೆ ಆಯೋಗಕ್ಕೆ ಮನವಿ ಮಾಡಿದ್ದರಾದರೂ ಫಲಿಸಿಲ್ಲ. ಅಲ್ಲದೆ, ಟಿಟಿವಿ ದಿನಕರನ್ ಎರಡೆಲೆ ಚಿಹ್ನೆ ಪಡೆಯಲು ಚುನಾವಣೆ ಆಯೋಗದ ಅಧಿಕಾರಿಗಳಿಗೆ ಲಂಚ ನೀಡಿದ ಆರೋಪದಲ್ಲಿ ಜೈಲು ಸಹ ಸೇರಿದ್ದರು. ಆದಾಗ್ಯೂ ಪ್ರಸ್ತುತ ಶಶಿಕಲಾ ನಟರಾಜನ್ ಸಹ ಅಕ್ರಮ ಆಸ್ತಿ ಗಳಿಕೆ ಹಗರಣದಲ್ಲಿ ಜೈಲುಪಾಲಾಗಿದ್ದಾರೆ.
ಇತ್ತೀಚೆಗಷ್ಟೇ ಜಯಲಲಿತಾ ವಾಸಿಸುತ್ತಿದ್ದ ಪೋಯೆಸ್ ಗಾರ್ಡನ್ ನಿವಾಸದ ಮೇಲೆ ಐಟಿ ದಾಳಿ ಮಾಡಿ ಅಪಾರ ಹಣ ವಶಪಡಿಸಿಕೊಂಡಿತ್ತು.
Leave A Reply