ಗಂಗಾ ಶುದ್ಧೀಕರಣ ಆಯ್ತು, ಈಗ ಗೋದಾವರಿ-ಕಾವೇರಿ ನದಿ ಜೋಡಣೆಗೆ ಕೇಂದ್ರ ಸರ್ಕಾರ ನಿರ್ಧಾರ!
ಚೆನ್ನೈ: ಸುಮಾರು 20 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಗಂಗಾ ನದಿ ಶುದ್ಧೀಕರಣದಂಥ ಮಹತ್ತರ ಯೋಜನೆ ಘೋಷಿಸಿರುವ ಸರ್ಕಾರ, ಈಗ ಅಂಥಾದ್ದೇ ತೀರ್ಮಾನ ಪ್ರಕಟಿಸಿದ್ದು, ಗೋದಾವರಿ-ಕಾವೇರಿ ನದಿ ಜೋಡಣೆ ಮಾಡುವುದಾಗಿ ತಿಳಿಸಿದೆ.
ಗೋದಾವರಿ ನದಿಯ ಹೆಚ್ಚುವರಿ ನೀರು ಸಮುದ್ರ ಪಾಲಾಗುವ ಬದಲು ಕೊಳವೆ ಮಾರ್ಗದ ಮೂಲಕ ಕಾವೇರಿ ನದಿಗೆ ಜೋಡಣೆ ಮಾಡುವುದಾಗಿ ಕೇಂದ್ರ ಜಲ ಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಚೆನ್ನೈನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅರುಣ್ ಜೇಟ್ಲಿ, ಕೇಂದ್ರ ಸರ್ಕಾರದ ಮಹತ್ತರ ನದಿ ಜೋಡಣೆ ಯೋಜನೆಯ ಭಾಗವಾಗಿ ಗೋದಾವರಿ-ಕಾವೇರಿ ನದಿ ಜೋಡಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಮುಂದಿನ ದಿನಗಳಲ್ಲಿ ಕಾವೇರಿ-ಗೋದಾವರಿ ನದಿ ಫಲಾನುಭವಿಗಳಾದ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ತೆಲಂಗಾಣ ಮುಖ್ಯಮಂತ್ರಿಗಳ ಜತೆಗೆ ಚರ್ಚಿಸಲಾಗುತ್ತದೆ. ಪ್ರಸ್ತುತ ಯೋಜನೆ ಪ್ರಾರಂಭಿಕ ಹಂತದಲ್ಲಿದ್ದು, ಯೋಜನೆಗೆ ಕೇಂದ್ರ ಸರ್ಕಾರ ಶೇ.90ರಷ್ಟು ಹಾಗೂ ಆಯಾ ರಾಜ್ಯ ಸರ್ಕಾರಗಳು ಶೇ.10ರಷ್ಟು ಹಣ ಭರಿಸಲಿವೆ ಎಂದು ವಿವರಿಸಿದ್ದಾರೆ.
ಗೋದಾವರಿ ನದಿಯ ಹೆಚ್ಚುವರಿ ನೀರನ್ನು ಕೃಷ್ಣಾ ನದಿಗೆ ಹರಿಸಿ, ಅಲ್ಲಿಂದ ಉತ್ತರ ಪಿನಾಕಿನಿ ನದಿಯಿಂದ ಕಾವೇರಿ ನದಿಗೆ ಹರಿಸುವ ಈ ಮಹತ್ತರ ಯೋಜನೆಯಿಂದ ನೀರಾವರಿ ಕ್ಷೇತ್ರದ ಮಹತ್ತರ ಸುಧಾರಣೆಯಾಗಲಿದೆ ಎಂದು ತಿಳಿಸಿದ್ದಾರೆ.
ಎರಡು ಹಂತಗಳಲ್ಲಿ ಯೋಜನೆ
ಮೊದಲನೇ ಹಂತ
ಈ ಹಂತದಲ್ಲಿ ಗೋದಾವರಿ ನದಿಯ 300 ಟಿಎಂಸಿ ನೀರನ್ನು ಆಂಧ್ರಪ್ರದೇಶದ ನಾಗಾರ್ಜುನ ಸಾಗರ ಡ್ಯಾಂ ಮೂಲಕ ಕೃಷ್ಣಾ ನದಿಗೆ ಸೇರಿಸುವುದು. ಅಲ್ಲಿಂದ ಉತ್ತರ ಪಿನಾಕಿನಿಗೆ ಅಡ್ಡಲಾಗಿ ನಿರ್ಮಿಸಿರುವ ಸೋಮಸಿಲ ಅಣೆಕಟ್ಟಿಗೆ ತಂದು ಶೇಖರಸಿಲಾಗುತ್ತದೆ. ಬಳಿಕ ಗ್ರ್ಯಾಂಡ್ ಅನೈಕಟ್ ಡ್ಯಾಂನಿಂದ ಕಾವೇರಿ ನದಿಗೆ ಹರಿಸುವುದು ಕೇಂದ್ರ ಸರ್ಕಾರದ ಮೊದಲನೇ ಹಂತದ ಯೋಜನೆಯಾಗಿದೆ. ಇದರಿಂದ ಕಾವೇರಿ ನದಿಗೆ ಹೆಚ್ಚುವರಿಯಾಗಿ 100 ಟಿಎಂಸಿ ನೀರು ಸಿಗಲಿದ್ದು, ಕರ್ನಾಟಕ ಹಾಗೂ ತಮಿಳುನಾಡಿಗೆ ಅನುಕೂಲವಾಗಲಿದೆ ಎಂದು ತಿಳಿದುಬಂದಿದೆ.
ಎರಡನೇ ಯೋಜನೆಯಲ್ಲಿ ಗೋದಾವರಿ ಉಪನದಿ ಇಂದ್ರಾವತಿ ನದಿ ನೀರನ್ನು ನಾಗಾರ್ಜುನ ಡ್ಯಾಂಗೆ ಹರಿಸಿ, ಅಲ್ಲಿಂದ ಸೋಮಸಿಲ ಅಣೆಕಟ್ಟಿಗೆ ಹರಿಸಲಾಗುತ್ತದೆ. ಬಳಿಕ ಆ ನೀರನ್ನು ಕಾವೇರಿ ನದಿಗೆ ಜೋಡಿಸುವುದು ಕೇಂದ್ರ ಸರ್ಕಾರದ ಮಹತ್ತರ ಯೋಜನೆಯಾಗಿದೆ.
ಒಟ್ಟಿನಲ್ಲಿ ಕೇಂದ್ರ ಸರ್ಕಾರದ ಈ ಯೋಜನೆಯಿಂದ ಸಮುದ್ರದ ಪಾಲಾಗುವ ಗೋದಾವರಿ ನದಿ ನೀರು ಕಾವೇರಿ ನದಿಗೆ ಸೇರಿ, ರೈತರಿಗೆ ಅನುಕೂಲವಾಗುವುದರಲ್ಲಿ ಎರಡು ಮಾತಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.
Leave A Reply