ಸಿಎಂ ಒಬ್ಬರ ತಡವರಿಕೆ ಮತ್ತು ಕಾಂಗ್ರೆಸ್ ಪಕ್ಷದ ಕನವರಿಕೆ!
ತಪ್ಪು ಯಾರೇ ಮಾಡಲಿ ಅವರನ್ನು ಬಂಧಿಸಿ ಎಂದು ಹೇಳಿದರೆ ಅಲ್ಲಿಗೆ ಮುಗಿಯುತ್ತಿತ್ತು. ಆದರೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ ಶಬ್ದಗಳನ್ನು ಸರಿಯಾಗಿ ಕೇಳಿ. ವಾರ್ತಾ ವಾಹಿನಿಯೊಂದರ ವಿಡಿಯೋ ಕ್ಲೀಪ್ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ. ಅದರಲ್ಲಿ ಸಿಎಂ ” ಎಲ್ಲಾ ಸೀನಿಯರ್ ಪೊಲೀಸ್ ಆಫೀಸರ್ಸ್ ಜೊತೆ ಮಾತನಾಡಿದ್ದಿನಿ. ಯಾರೂ ಕಾನೂನನ್ನು ಕೈಗೆತ್ತಿಕೊಂಡರೂ ಕೂಡ ನಿದರ್ಾಕ್ಷಿಣ್ಯವಾಗಿ ಅವರ ಕ್ರಮ ತೆಗೆದುಕೊಳ್ಳಲು ಹೇಳಿದ್ದೀನಿ. ಯಾರೇ, ಸಮಾಜದಲ್ಲಿ ಸ್ವಾಸ್ಥವನ್ನು ಹಾಳು ಮಾಡತಕ್ಕಂತಹ ಕಾನೂನು ಉಲ್ಲಂಘನೆ ಮಾಡತಕ್ಕಂತಹ ಅವರು ಯಾರೇ ಆಗಲಿ ಹಿಂದೂಗಳಿರಲಿ ಅಥವಾ ಆ………ಆ…….ಹ್ಞಾ….. ಬೇರೆ ಯಾವುದೇ ಧರ್ಮದವರು ಆದರೂ ಕೂಡ ಸಮಾಜದಲ್ಲಿ ಸಾಮರಸ್ಯವನ್ನು ಹಾಳು ಮಾಡತಕ್ಕಂತಹ ಪ್ರಯತ್ನ ಮಾಡಿದ್ರೆ ಅವರ ಮೇಲೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದ್ದಿನಿ ಎಂದು ಹೇಳಿ ತಕ್ಷಣ ಸಿಎಂ ಸಿದ್ಧರಾಮಯ್ಯ ಸುದ್ದಿಗೋಷ್ಟಿಯಿಂದ ಏಳುತ್ತಾರೆ. ಬಂಟ್ವಾಳದಲ್ಲಿ ಗಲಾಟೆ ಆಗಿರುವುದು ಯಾರ ನಡುವೆ ಸ್ವಾಮಿ? ಬಹುಶ: ಗೊತ್ತಿಲ್ಲದಿದ್ದರೆ “ಯಾವುದೇ ವ್ಯಕ್ತಿ ಅಪರಾಧ ಮಾಡಲಿ ಕ್ರಮ ತೆಗೆದುಕೊಳ್ಳಿ” ಎಂದು ಹೇಳಬಹುದಿತ್ತು. ಅದರಲ್ಲಿ ತಪ್ಪಿಲ್ಲ. ಅದು ಒಬ್ಬ ಮುಖ್ಯಮಂತ್ರಿಯ ಅಧಿಕಾರ ಮತ್ತು ಕರ್ಥವ್ಯ. ಆದರೆ ನೀವು ಹೇಳುವಾಗ ಹಿಂದೂಗಳ ಎಂದು ಶಬ್ದ ಕರೆಕ್ಟಾಗಿ ಹೇಳಿದ್ದಿರಿ, ಅದೇ ಇನ್ನೊಂದು ಧರ್ಮ ಎನ್ನುವಾಗ ನಿಮಗೆ ಆ ಧರ್ಮದ ಹೆಸರು ನೆನಪಿಗೆ ಬರಲಿಲ್ಲ. ನೀವು ತಡವರಿಸಿದ್ದಿರಿ ಅಥವಾ ತಡವರಿಸಿದಂತೆ ನಾಟಕ ಮಾಡಿದ್ರಿ. ಯಾಕೆಂದರೆ ಮುಸ್ಲಿಮರ ವಿರುದ್ಧವೂ ಸರಿಯಾದ ಕ್ರಮ ತೆಗೆದುಕೊಳ್ಳಿ ಎಂದಿದ್ದರೆ ಬರುವ ಚುನಾವಣೆಯಲ್ಲಿ ನಿಮಗೆ ಕರಾವಳಿಯಲ್ಲಿ ಈಗ ಬಂದಿರುವ ಸೀಟುಗಳ ಕಾಲಂಶ ಬರಲು ಕೂಡ ಕಷ್ಟವಾಗುತ್ತಿತ್ತು ಎನ್ನುವ ಹೆದರಿಕೆಯಾ ಸ್ವಾಮಿ. ನೀವು ಈಗ ತಾನೇ ಅಮೇರಿಕಾದಿಂದ ಬೆಂಗಳೂರಿಗೆ ಬಂದಿಳಿದವರಂತೆ ಹಿಂದೂಗಳ ಮೇಲೆ ಯಾರು ಕಲ್ಲೇಸೆದರು ಎಂದು ಗೊತ್ತಾಗದಂತೆ ವರ್ಥಿಸಿದಾಗ ಅದನ್ನೇ ಕಾಯುತ್ತಿದ್ದ ನಿಮ್ಮ ಬಳಗ ” ಯಾವುದೇ ಧರ್ಮ” ಎಂದು ಹೇಳಿ ನಿಮಗೆ ಸಹಾಯ ಮಾಡಿದ್ರು. ಒಂದು ವೇಳೆ ಪ್ಯಾಲಿಸ್ತೇನ್ ನಲ್ಲಿ ಗಲಾಟೆ ಆಗಿದಿದ್ದರೆ ಅಲ್ಲಿ ಇರುವ ಧರ್ಮಗಳ ಪರಿಚಯ ನಿಮಗೆ ಇಲ್ಲದೆ ಇರಬಹುದು. ಇಸ್ರೇಲ್ ನಲ್ಲಿ ಕೋಮು ಗಲಭೆ ಆಗಿದ್ದರೆ ನೀವು ಹೇಳಲು ತಡವರಿಸಿದ್ದರೆ ನಮಗೆ ಅದು ಅರ್ಥವಾಗುತ್ತದೆ. ಆದರೆ ಬಂಟ್ವಾಳ ಹಾಗೆ ಅಲ್ಲ. ಗಲಾಟೆಯಾದ ಹಿಂದಿನ ದಿನ ನೀವು ಅಲ್ಲಿಯೇ ಇದ್ರಿ. ನಿಮ್ಮ ಪಕ್ಷದ ಸಮಾವೇಶ ಇತ್ತು. ನೀವು ಬರುತ್ತೀರಿ ಎಂದು ಕೆಲವು ಗಂಟೆ ನಿಮ್ಮ ಪಕ್ಷದ ಸಮಾವೇಶ ಮಾಡಲು ಸೆಕ್ಷನ್ 144 ಕೂಡ ಸಡಿಲಿಸಲಾಗಿತ್ತು. ಏಕೆಂದರೆ ಸಡಿಲಿಸದೆ ಹೋದರೆ ನಿಮಗೆ ಸಮಾವೇಶ ಮಾಡಲು ಆಗುತ್ತಿರಲಿಲ್ಲ. ಅದಕ್ಕಾಗಿ ನೀವು ನಿಮ್ಮ ಸಮಾವೇಶಕ್ಕಾಗಿ ಗೃಹ ಇಲಾಖೆಯನ್ನು, ಜಿಲ್ಲಾಡಳಿತವನ್ನು ಬಳಸಿಕೊಂಡ್ರಿ. ಸಮಾವೇಶ ಮುಗಿದ ನಂತರ ನೀವು ಬೆಂಗಳೂರಿಗೆ ಹೋದ್ರಿ. ಅದರ ನಂತರ ಶರತ್ ಸಾವನ್ನಪ್ಪಿದ್ದಾರೆ ಎಂದು ಸುದ್ದಿ ಬಹಿರಂಗ ಪಡಿಸಲಾಯಿತು. ಹಾಗಂತ ಶರತ್ ಯಾವಾಗ ಕಣ್ಮುಚ್ಚಿಕೊಂಡರು ಎಂದು ಸರಿಯಾಗಿ ವೈದ್ಯೋ ನಾರಾಯಣೋ ಹರಿಗೆ ಮಾತ್ರ ಗೊತ್ತು. ಅದರ ನಂತರ ಶವಯಾತ್ರೆ ನಡೆಯಿತು. ದಾರಿಯಲ್ಲಿ ಹಿಂದೂಗಳ ಮೇಲೆ ಕಲ್ಲು ಬಿಸಾಡಲಾಯಿತು. ಆಗ ನಿಮ್ಮ ಹೇಳಿಕೆ ಬಿತ್ತರವಾಯಿತು. ಹಾಗಂತ ಶರತ್ ಶವಯಾತ್ರೆಯ ಮೇಲೆ ಕಲ್ಲು ಬಿಸಾಡಿದ ಕೆಲವು ಪುಂಡರು ಇಡೀ ಇಸ್ಲಾಂ ಧರ್ಮವನ್ನು ಪ್ರತಿನಿಧಿಸುತ್ತಾರೆ ಎಂದು ನಾನು ಹೇಳಲ್ಲ. ಇನ್ ಫ್ಯಾಕ್ಟ್ ಕಲ್ಲು ಬಿಸಾಡಿದ ದುಷ್ಕಮ್ಮಿಗಳನ್ನು ಮುಸಲ್ಮಾನರು ತಮ್ಮವರು ಎಂದು ಹೇಳಿದರೆ ಅದು ಅವರು ತಮ್ಮ ಧರ್ಮಕ್ಕೆ ಮಾಡಿದ ಅಪಚಾರ. ಧರ್ಮ ಯಾವತ್ತೂ ಗಲಾಟೆ ಮಾಡಲು ಹೇಳುವುದಿಲ್ಲ. ಆದರೆ ಸಿಎಂ ಹೇಳಿದ ಸ್ಟೈಲ್ ನೋಡಿದಾಗ ಯಾವನೇ ಹಿಂದೂ ತಪ್ಪು ಮಾಡಿದರೂ ಬಂಧಿಸಿ ಮತ್ತು ಬೇರೆ ಧರ್ಮದವರು ತಪ್ಪು ಮಾಡಿದರೂ ಬಂಧಿಸಿ ಎಂದು ಹೇಳುವಾಗ ಸಿಎಂ ಪೊಲೀಸರಿಗೆ ನಾಲ್ಕು ಗೋಡೆಯ ಮಧ್ಯೆ ಏನು ಹೇಳಿರಬಹುದು ಎಂದು ಅರ್ಥವಾಗುತ್ತದೆ. ಒಂದು ವಿಷಯ ಸಿಎಂಗೆ ಚೆನ್ನಾಗಿ ಗೊತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಸ್ ಡಿಪಿಐ ಎನ್ನುವ ಪಕ್ಷ ನಿಧಾನವಾಗಿ ಬೆಳೆಯುತ್ತಿದೆ. ಅದು ಮುಸ್ಲಿಮರ ವೋಟ್ ಬ್ಯಾಂಕ್ ಮೇಲೆ ಆಧಾರಿತ ಪಕ್ಷ. ಅವರು ಈಗಾಗಲೇ ಒಂದಿಷ್ಟು ಗ್ರಾಮ ಪಂಚಾಯತ್ ಮೇಲೆ ಹಿಡಿತ ಸಾಧಿಸಿದ್ದಾರೆ. ಇನ್ನು ಮುಸಲ್ಮಾನರು ಕಾಂಗ್ರೆಸ್ಸಿಗೂ ವೋಟ್ ಬ್ಯಾಂಕ್. ಮುಸಲ್ಮಾನರಿಗೆ ಕಾಂಗ್ರೆಸ್ ಏನೂ ಮಾಡಿಲ್ಲ ಎಂದು ಎಸ್ ಡಿಪಿಐ ಪಟ್ಟಿ ಹೊರಗೆ ತೆಗೆಯುತ್ತಿದೆ. ಎಸ್ ಡಿಪಿಐಯಲ್ಲಿ ಚೆನ್ನಾಗಿ, ಸ್ಫುಟವಾಗಿ ಮಾತನಾಡುವ ನಾಯಕರು ಹುಟ್ಟಿಕೊಳ್ಳುತ್ತಿದ್ದಾರೆ. ಅವರು ಟಿವಿ ಚಾನೆಲ್ ಡಿಬೇಟ್ ಗಳಲ್ಲಿ ಕಾಂಗ್ರೆಸ್ ವಕ್ತಾರರ ಮುಖದ ನೀರನ್ನು ಇಳಿಸುತ್ತಿದ್ದಾರೆ. ದನಗಳ್ಳ ಕಬೀರ್ ನಿಗೆ ಹತ್ತು ಲಕ್ಷ ಕೊಟ್ಟು ಮುಸಲ್ಮಾನರ ಅನುಕಂಪ ಗಿಟ್ಟಿಸಿದ ನಂತರ ಕಾಂಗ್ರೆಸ್ ಅದನ್ನೇ ಪ್ರತಿಬಾರಿ ಹೇಳುತ್ತಾ ಬಂತು. ಆದರೆ ಎಸ್ ಡಿಪಿಐ ಸೈಲೆಂಟ್ ಆಗಿ ವಿಷಯಗಳನ್ನು ಒಟ್ಟು ಮಾಡುತ್ತಾ ಬರುತ್ತಿದೆ. ಕಾಂಗ್ರೆಸ್ ವಕ್ತಾರರು ಗುಂಪುಗಾರಿಕೆಯಲ್ಲಿ ತೊಡಗಿದ್ದರೆ, ಎಸ್ ಡಿಪಿಐ ಮುಸಲ್ಮಾನರ ರಕ್ಷಕನಾಗಿ ಹೊರಹೊಮ್ಮುತ್ತಿದೆ. ಇದು ಕಾಂಗ್ರೆಸ್ಸಿಗೆ ಎಚ್ಚರಿಕೆಯ ಗಂಟೆ. ಅದಕ್ಕೆ ಸಿಎಂ ಮುಸಲ್ಮಾನರ ಮೇಲೆಯೂ ಕ್ರಮ ತೆಗೆದುಕೊಳ್ಳಿ ಎಂದು ಹೇಳಲು ಹೆದರಿದ್ದು!
Leave A Reply