ಇಸ್ಲಾಮಿನ ನಿಬಂಧನೆಗಳಿಂದ ಬೇಸತ್ತ ಯುವತಿ ಹಿಂದೂ ಧರ್ಮಕ್ಕೆ ಮತಾಂತರ!
ಡೆಹರಾಡೂನ್: ದೇಶದಲ್ಲಿ ಹಿಂದೂಗಳನ್ನು ಬಲವಂತವಾಗಿ ಇಸ್ಲಾಮಿಗೆ ಮತಾಂತರಗೊಳಿಸುತ್ತಿರುವ ಪ್ರಕರಣಗಳು ಸುದ್ದಿಯಾಗುತ್ತಿರುವ ಬೆನ್ನಲ್ಲೇ, ಇಸ್ಲಾಂ ಧರ್ಮದ ಹಲವು ನಿಬಂಧನೆಗಳಿಂದ ಬೇಸತ್ತ ಯುವತಿಯೊಬ್ಬರು ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲು ಇಚ್ಛಿಸಿದ್ದಾರೆ.
ಉತ್ತರಾಖಂಡದ ಹಲ್ದ್ವಾನಿ ಬಂಧುಲ್ಪುರ ಎಂಬಲ್ಲಿನ ಶಾಹ್ ನವಾಜ್ ಎಂಬ ಯುವತಿ ನಾನು ಹಿಂದೂ ಧರ್ಮಕ್ಕೆ ಮತಾಂತರವಾಗಲು ಇಚ್ಛಿಸಿದ್ದೇನೆ. ಹಾಗಾಗಿ ಅನುಮತಿ ನೀಡಬೇಕು, ಜತೆಗೆ ನನಗೆ ಭದ್ರತೆ ಒದಗಿಸಬೇಕು ಎಂದು ಸ್ಥಳೀಯ ಆಡಳಿತಕ್ಕೆ ಅಫಿಡವಿಟ್ ಸಲ್ಲಿಸಿದ್ದಾರೆ.
ನಾನು ಇನ್ನು ಮುಂದೆ ನನ್ನ ಹೆಸರನ್ನು ಸುನೀತಾ ಎಂದು ಬದಲಾಯಿಸಿಕೊಳ್ಳಲು ಬಯಸಿದ್ದೇನೆ. ಹಿಂದೂ ಧರ್ಮದಲ್ಲಿ ಮಹಿಳೆಯರು ಸ್ವತಂತ್ರವಾಗಿ ಬದುಕಬಹುದು. ಹಾಗಾಗಿ ಹಿಂದೂ ಧರ್ಮಕ್ಕೆ ಮತಾಂತರವಾಗಲು ಇಚ್ಛಿಸಿದ್ದೇನೆ ಎಂದು 22 ವರ್ಷದ ಯುವತಿ ಸ್ಥಳೀಯ ಮ್ಯಾಜಿಸ್ಟ್ರೇಟ್ ಕಚೇರಿಗೆ ಅಫಿಡವಿಟ್ ಸಲ್ಲಿಸಿದ್ದಾರೆ.
ಇತ್ತೀಚೆಗೆ ಕುಟುಂಬಸ್ಥರು ಇಸ್ಲಾಂ ಧರ್ಮದ ಹೆಸರಿನಲ್ಲಿ ಹಲವು ನಿಬಂಧನೆಗಳನ್ನು ಹೇರುತ್ತಿದ್ದು, ಹಲ್ಲೆ ಸಹ ಮಾಡಿದ್ದಾರೆ. ಇಸ್ಲಾಮಿನಲ್ಲಿರುವ ತ್ರಿವಳಿ ತಲಾಖ್ ಸಹ ಯುವತಿಗೆ ಬೇಸರ ಮೂಡಿಸಿದ್ದು, ಈ ಕಾರಣಗಳಿಂದಾಗಿ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲು ಬಯಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಯುವತಿ ಈಗ ಹಿಂದೂ ಧರ್ಮಕ್ಕೆ ಮತಾಂತರವಾಗಲು ನಿರ್ಧಿರಿಸಿದ ಕಾರಣ ಪೋಷಕರು ಕೊಲೆ ಬೆದರಿಕೆ ಹಾಕಿದ್ದು, ನನಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಸಹ ಯುವತಿ ಅಫಿಡವಿಟ್ ನಲ್ಲಿ ಉಲ್ಲೇಖಿಸಿದ್ದಾರೆ.
Leave A Reply