ಗಡಿ ದಾಟುವ ಪಾಕಿಸ್ತಾನಕ್ಕೆ ತಕ್ಕ ಪಾಠ, ಪಾಕ್ ಸೇನಾ ನೆಲೆ ಉಡೀಸ್!
ಶ್ರೀನಗರ: ಇತ್ತೀಚೆಗೆ ಜಮ್ಮು-ಕಾಶ್ಮೀರದ ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸಿ ದಾಳಿ ಮಾಡುತ್ತಿದ್ದ ಪಾಕಿಸ್ತಾನಕ್ಕೆ ಭಾರತೀಯ ಸೇನಾ ಪಡೆ ತಕ್ಕ ಪಾಠ ಕಲಿಸಿದ್ದು, ಪಾಕಿಸ್ತಾನ ಭಾರತದ ಮೇಲೆ ಗುಂಡಿನ ದಾಳಿ ಮಾಡುವ ಸೇನಾ ನೆಲೆಗಳನ್ನು ನಾಶಪಡಿಸಿದೆ.
ಅಂತಾರಾಷ್ಟ್ರೀಯ ಗಡಿ ಭಾಗದ ಹಲವು ಸೇನಾ ನೆಲೆಗಳನ್ನು ಧ್ವಂಸಗೊಳಿಸಲಾಗಿದೆ. ಗಡಿ ನಿಯಮ ಉಲ್ಲಂಘಿಸಿ ದಾಳಿ ಮಾಡುತ್ತಿದ್ದ ಪಾಕಿಸ್ತಾನದ ಹಲವು ಸೇನಾ ನೆಲೆಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಬಿಎಸ್ಎಫ್ ವಕ್ತಾರರು ಮಾಹಿತಿ ನೀಡಿದ್ದಾರೆ. ದಾಳಿ ವೇಳೆ ಪಾಕಿಸ್ತಾನದ ಸೇನಾ ನೆಲೆ, ಶಸ್ತ್ರಾಸ್ತ್ರ ಹೊಂದಿರುವ ನೆಲೆ ಹಾಗೂ ಇಂಧನ ಹೊಂದಿರುವ ನೆಲೆಗಳನ್ನು ನಾಶಪಡಿಸಿಲಾಗಿದ್ದು, ಸಮರ್ಥ ದಾಳಿ ನಿಭಾಯಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಭಾರತೀಯ ಸೇನಾಪಡೆ ಸುಮಾರು ಒಂಬತ್ತು ಸಾವಿರ ಸುತ್ತು ಮೋರ್ಟಾರ್ ಶೆಲ್ ಬಳಸಿ ಕಳೆದ ನಾಲ್ಕು ದಿನಗಳಿಂದ ದಾಳಿ ನಡೆಸಲಾಗಿದೆ. ಪಾಕಿಸ್ತಾನಿ ಸೇನೆಯ ನೆಲೆಗಳನ್ನು ಎಡೆಬಿಡದೆ ಹುಡುಕಿ ಧ್ವಂಸಗೊಳಿಸಲಾಗಿದೆ ಎಂದು ವಿವರಿಸಿದ್ದಾರೆ.
ಜನವರಿ 19ರಂದು ಪಾಕಿಸ್ತಾನ ಮೊದಲ ಬಾರಿಗೆ ಗಡಿ ನಿಯಮ ಉಲ್ಲಂಘಿಸಿ ದಾಳಿ ಆರಂಭಿಸಿತು. ಇದರಿಂದಾಗಿ ಜಮ್ಮುವಿನ ಅಂತಾರಾಷ್ಟ್ರೀಯ ಗಡಿ ವ್ಯಾಪ್ತಿಯ 190 ಕಿಲೋ ಮೀಟರ್ ಪ್ರದೇಶದಲ್ಲಿ ಪರಿಸ್ಥಿತಿ ಬಿಗಡಾಯಿಸಿತ್ತು. ಹಾಗಾಗಿ ಪ್ರತಿ ದಾಳಿ ಅನಿವಾರ್ಯವಾಯಿತು ಎಂದು ಸೇನೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಒಟ್ಟಿನಲ್ಲಿ ಗಡಿಯಲ್ಲಿ ನಿಯಮ ಉಲ್ಲಂಘಿಸಿ ದಾಳಿ ಮಾಡುತ್ತಿದ್ದ ಪಾಕಿಸ್ತಾನಕ್ಕೆ ಭಾರತದ ಈ ಪ್ರತ್ಯುತ್ತರ ತಕ್ಕ ಪಾಠವಾಗಿದ್ದು, ಪಾಕಿಸ್ತಾನ ಇನ್ನಾದರೂ ಸುಮ್ಮನಿದ್ದರೆ ಅದೇ ರಾಷ್ಟ್ರಕ್ಕೆ ಒಳಿತು ಎಂಬ ಸಂದೇಶ ರವಾನಿಸಿದ್ದಾರೆ.
Leave A Reply