ಫಲ ನೀಡಿದ ಕೇಂದ್ರ ನೂತನ ನೀತಿ, ಕೆಂಪು ಉಗ್ರರ ಪ್ರಾಬಲ್ಯಕ್ಕೆ ಭಾರಿ ಹೊಡೆತ
ದೆಹಲಿ: ದೇಶಕ್ಕೆ ಕಂಟಕವಾಗಿರುವ ನಕ್ಸಲ (ಕೆಂಪು ಉಗ್ರರ)ರನ್ನು ಸದೆಬಡೆಯಲು ಕೇಂದ್ರ ಸರ್ಕಾರ ಕೈಗೊಂಡ ಗಟ್ಟಿ ಮತ್ತು ಕಠೋರ ನಿರ್ಧಾರಗಳು ಫಲ ನೀಡಿದ್ದು, ಮಾವೋವಾದಿಗಳನ್ನು ಹತ್ತಿಕ್ಕಲು ಕೇಂದ್ರ ಸರ್ಕಾರದ ನೀತಿಗಳು ನೂತನ ನೀತಿಗಳು ಯಶಸ್ವಿಯಾಗಿವೆ.
ಆಧುನಿಕ ತಂತ್ರಜ್ಞಾನ, ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಬಲಿಷ್ಠ ಗುಪ್ತಚರ ವ್ಯವಸ್ಥೆ. ಕೇಂದ್ರ ಸರ್ಕಾರದ ದಿಟ್ಟ ಸಲಹೆ ಸೂಚನೆ, ಅಗತ್ಯಕ್ಕೆ ತಕ್ಕಂತೆ ಸಹಾಯ, ಭದ್ರತಾ ಪಡೆಗಳ ಸಂಘಟಿತ ಕಾರ್ಯಾಚರಣೆಯಿಂದ ಕೆಂಪು ಉಗ್ರರು ಬಲಿಷ್ಠವಾಗಿರುವ ಜಿಲ್ಲೆಗಳ ಸಂಖ್ಯೆ 58ಕ್ಕೆ ಇಳಿಮುಖವಾಗಿದೆ.
ಮೂರು ವರ್ಷಗಳಲ್ಲಿ ಒಟ್ಟು 150 ಕೆಂಪು ಉಗ್ರರನ್ನು ಹೊಡೆದುರುಳಿಸಲಾಗಿದೆ. ಸುಕ್ಮಾ ಜಿಲ್ಲೆಯಲ್ಲಿ ನಕ್ಸಲ್ ದಾಳಿಗೆ 25 ಮಂದಿ ಸಿಆರ್‌ಪಿಎಫ್ ಯೋಧರು ಬಲಿಯಾದ ಘಟನೆ ನಂತರ ಗೃಹಸಚಿವ ರಾಜನಾಥ್ ಸಿಂಗ್ ನಕ್ಸಲ್ ಪೀಡಿತ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಮಹತ್ವದ ಸಭೆ ನಡೆಸಿ, ಕೆಂಪು ಉಗ್ರರ ದಮನಕ್ಕೆ ಹೊಸ ನೀತಿ ರೂಪಿಸಲಾಗಿತ್ತು. ಇದರಿಂದ ನಕ್ಸಲ್ ಹಿಂಸಾಚಾರ ಶೇ 60ರಷ್ಟು ಕಡಿಮೆಯಾಗಿದೆ.
ಸಿಆರ್‌ಪಿಎಫ್ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ 2015ರಿಂದೀಚೆಗೆ ಮಾವೋ ಹಿಂಸಾಚಾರಕ್ಕೆ ತುತ್ತಾಗಿರುವ ಜಿಲ್ಲೆಗಳ ಇಳಿಖೆಯಾಗಿದೆ. 2015ರ ಬಳಿಕ ನಡೆದ ಮಾವೋ ಉಗ್ರರ ಹಿಂಸಾಕೃತ್ಯಗಳ ಪೈಕಿ ಶೇ 90 ಘಟನೆಗಳು ಬಿಹಾರ, ಛತ್ತೀಸ್‌ಗಡ್, ಜಾರ್ಖಂಡ್ ಮತ್ತು ಒಡಿಶಾ ರಾಜ್ಯಗಳಿಗೆ ಸೀಮಿತವಾಗಿವೆ.
2015ರಲ್ಲಿ 9 ರಾಜ್ಯಗಳ 75 ಜಿಲ್ಲೆಗಳಲ್ಲಿ ನಕ್ಸಲ್ ಹಿಂಸಾಚಾರವಿತ್ತು. 2016ರಕ್ಕೆ 67ಕ್ಕೆ ಹಾಗೂ 2017ರಲ್ಲಿ 58ಕ್ಕೆ ಇಳಿದಿವೆ. 2017ನೇ ವರ್ಷ ಕೆಂಪು ಉಗ್ರರ ವಿರುದ್ಧ ಯಶಸ್ವಿ ಕಾರ್ಯಾಚರಣೆ ನಡೆದ ವರ್ಷ.
ಮಾವೋವಾದಿ ನಾಯಕರನ್ನು ಹುಡುಕಿ ಹುಡುಕಿ ಬೇಟೆಯಾಡುವ ಭದ್ರತಾ ಪಡೆಗಳ ನೂತನ ನೀತಿ ಮತ್ತು ಕೆಂಪು ಉಗ್ರರ ಬಗ್ಗೆ ಗುಪ್ತಚರ ಇಲಾಖೆಯ ಸ್ಪಷ್ಟ, ನಿರ್ದಿಷ್ಟ ಮಾಹಿತಿ ಈ ಯಶಸ್ವಿಗೆ ಕಾರಣ ಎನ್ನುತ್ತಾರೆ ಅಧಿಕಾರಿಗಳು.
ಸಿಆರ್‌ಪಿಎಫ್, ಭಾರತೀಯ ವಾಯುಪಡೆ, ಬಿಎಸ್‌ಎಫ್, ಐಟಿಬಿಪಿ ಮತ್ತು ರಾಜ್ಯ ಪೊಲೀಸ್ ಪಡೆಗಳ ಸಂಘಟಿತ ಮತ್ತು ಸಮನ್ವಯದ ಕಾರ್ಯಾಚರಣೆಗಳು ಹೆಚ್ಚು ನಡೆಯುತ್ತಿವೆ. ಮೊಬೈಲ್ ಟವರ್‌ಗಳ ಅಳವಡಿಕೆ, ರಸ್ತೆಗಳ ನಿರ್ಮಾಣ ಮತ್ತು ದೂರದ ಹಳ್ಳಿಗಳಲ್ಲೂ ಪೊಲೀಸ್ ಠಾಣೆಗಳ ಸ್ಥಾಪನೆ, ಡ್ಡ್ರೋನ್ ಕ್ಯಾಮೆರಾ ಅಳವಡಿಕೆ ಸೇರಿ ನೂತನ ಅಭಿವೃದ್ಧಿ ಕಾರ್ಯಗಳು ನಕ್ಸಲ್ ದಮನ ನೀತಿಗೆ ಬಲ ನೀಡಿವೆ.
ಸಂಘಟಿತ ಹೋರಾಟದ ಫಲ
‘ನಕ್ಸಲರ ಅಡಗುದಾಣಗಳಿಗೇ ನುಗ್ಗಿ ಸದೆ ಬಡಿದಿದ್ದೇವೆ. ಪೊಲೀಸರು, ಗುಪ್ತಚರ ಏಜೆನ್ಸಿಗಳು ಮತ್ತು ಸಶಸ್ತ್ರ ಪಡೆಗಳ ಜಂಟಿ ಕಾರ್ಯಾಚರಣೆ ಫಲ ನೀಡಿದೆ. ಮಾವೋವಾದಿ ಮುಖಂಡರು, ವಿಶೇಷವಾಗಿ ಹೋರಾಟ ಮಾಡುವ ನಕ್ಸಲರು ಮತ್ತು ಅವರ ಪರ ಅನುಕಂಪವುಳ್ಳವರನ್ನು ಗುರಿಯಾಗಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ನಕ್ಸಲ್ ಕಾರ್ಯಚಟುವಟಿಕೆಗೆ ತೊಡಕು ಉಂಟಾಗಿದೆ. ನಕ್ಸಲ್ ನಾಯಕರಿಗೆ ಸ್ಥಳ ಬದಲಾವಣೆ ಮಾಡಲು ಆಗುತ್ತಿಲ್ಲ’ ಎಂದು ಸಿಆರ್‌ಪಿಎಫ್ ಮಹಾ ನಿರ್ದೇಶಕ ರಾಜೀವ್ ರಾಯ್ ಭಟ್ನಾಗರ್ ತಿಳಿಸಿದ್ದಾರೆ.
ನಕ್ಸಲರ ಪ್ರಭಾವ ಬಸ್ತಾರ್, ಸುಕ್ಮಾ (1,200 ಚದರ ಕಿ.ಮೀ ಪ್ರದೇಶ), ಎಓಬಿ (ಆಂಧ್ರ-ಒಡಿಶಾ ಗಡಿ- 2,000 ಚ.ಕಿಮೀ) ಹಾಗೂ ಅಬುಜ್ಮಾದ್ ಅರಣ್ಯ ಪ್ರದೇಶ (4,500 ಚ.ಕಿಮೀ) ಗಳಿಗೆ ಸೀಮಿತವಾಗಿದೆ. ಈ ಪ್ರದೇಶಗಳನ್ನು ತಲುಪಲು ಸಾಧ್ಯವಾಗಿಲ್ಲ. ಶೀಘ್ರದಲ್ಲಿ ಈ ಪ್ರದೇಶಗಳಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
30 ಮಹಿಳೆಯರು, 140 ಕಾಮ್ರೇಡ್ಗಳ ಹತ್ಯೆ
‘ಆ್ಯಕ್ಷನ್ ಪ್ಲಾನ್ 2017 – 2022’ ಹೆಸರಿನ ನಕ್ಸಲರ ಆಂತರಿಕ ನೀತಿಯ ದಾಖಲೆ ಭದ್ರತಾ ಸಂಸ್ಥೆಗಳು ವಶಪಡಿಸಿಕೊಂಡಿದ್ದು, 30 ಮಹಿಳೆಯರೂ ಸೇರಿದಂತೆ 140 ಕಾಮ್ರೇಡ್ ಹತರಾಗಿರುವುದನ್ನು ಮಾವೋವಾದಿಗಳೇ ಒಪ್ಪಿದ್ದಾರೆ.
Leave A Reply