ರಾಹುಲ್ ಗಾಂಧಿ ಕರ್ನಾಟಕಕ್ಕೆ ಬಂದರೆ ಮಾರುಕಟ್ಟೆ ವ್ಯಾಪಾರಿಗಳು ಬೀದಿಗೆ ಬರಬೇಕಾಯ್ತಲ್ಲ!
ಕೊಪ್ಪಳ: ಯಾವುದೇ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಆ ಪಕ್ಷದ ಮುಖಂಡರು ರ್ಯಾಲಿ, ಸಮಾವೇಶ ಮಾಡುವುದು ಸಾಮಾನ್ಯ. ಅವರು ಪಕ್ಷದ ದುಡ್ಡಿನಲ್ಲಿ ಮೈದಾನದಲ್ಲೋ, ಬಯಲು ಪ್ರದೇಶದಲ್ಲೋ ಮಾಡಿ, ತಮ್ಮ ಬೆಂಬಲಿಗರನ್ನು ಕರೆಸಿ ಮಾತನಾಡುವುದು ಸಂಪ್ರದಾಯ.
ಆದರೆ ಕಾಂಗ್ರೆಸ್ ಮಾತ್ರ ತಮ್ಮ ಪಕ್ಷದ ಸಮಾವೇಶಕ್ಕಾಗಿ ರಾಹುಲ್ ಗಾಂಧಿ ಆಗಮನದ ಹಿನ್ನೆಲೆಯಲ್ಲಿ ಕೊಪ್ಪಳದ ಸಾರ್ವಜನಿಕ ಮೈದಾನದಲ್ಲಿದ್ದ ವ್ಯಾಪಾರಿಗಳನ್ನು ಬೀದಿಗೆ ತಂದಿದೆ.
ಹೌದು, ರಾಹುಲ್ ಗಾಂಧಿ ಆಗಮನದ ಹಿನ್ನೆಲೆಯಲ್ಲಿ ಸಾರ್ವಜನಿಕ ಮೈದಾನದಲ್ಲಿ ಸಮಾವೇಶ ಏರ್ಪಡಿಸಿದ್ದು, ಮೈದಾನದಲ್ಲಿದ್ದ ವ್ಯಾಪಾರಿಗಳ ಅಂಗಡಿಗಳನ್ನು ಸರ್ಕಾರ ಏಕಾಏಕಿ ತೆರವುಗೊಳಿಸಿದೆ. ಹೊಸ ಮಾರುಕಟ್ಟೆ ಸಿದ್ಧವಾಗಿದ್ದರೂ ಹರಾಜು ಪ್ರಕ್ರಿಯೆ ಮಾಡದ ಕಾರಣ ಈಗ ವ್ಯಾಪಾರಿಗಳು ಬೀದಿಯಲ್ಲಿ ನಿಂತು ವ್ಯಾಪಾರ ಮಾಡುವಂತಾಗಿದೆ.
ಒಂದು ವೇಳೆ ಸರ್ಕಾರಕ್ಕೆ ಸಾರ್ವಜನಿಕ ಮೈದಾನದಲ್ಲೇ ಸಮಾವೇಶ ಮಾಡಬೇಕು ಎಂದಿದ್ದರೆ ವ್ಯಾಪಾರಿಗಳಿಗೆ ಮೊದಲೇ ತಿಳಿಸಬೇಕಿತ್ತು. ಅವರಿಗೆ ಬೇರೆ ಮಾರುಕಟ್ಟೆ ಸಿದ್ಧಗೊಳಿಸಿ, ಹರಾಜು ಪ್ರಕ್ರಿಯೆ ನಡೆಸಿ ಅವರಿಗೆ ಪರ್ಯಾಯ ಸೌಲಭ್ಯ ಮಾಡಬೇಕಿತ್ತು. ಆದರೆ ಮಂಗಳವಾರ ತಿಳಿಸಿ, ಬುಧವಾರ ತೆರವುಗೊಳಿಸಿದರೆ ಆ ಬಡ ವ್ಯಾಪಾರಿಗಳು ಏನು ಮಾಡಬೇಕು? ಇದು ಅವರ ಹೊಟ್ಟೆಯ ಮೇಲೆ ಹೊಡೆಯುವ ಕೆಲಸವಲ್ಲವೇ? ಸಿದ್ದರಾಮಯ್ಯನವರಿಗೆ ಇದು ತಿಳಿಯುವುದಿಲ್ಲವೇ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಅಷ್ಟೇ ಅಲ್ಲ ಇತ್ತೀಚೆಗಷ್ಟೇ ನವೀಕರಣಗೊಂಡಿದ್ದ ಕೊಪ್ಪಳದ ಕುಕನೂರು ಹೊರವಲಯದ ಪರಿವೀಕ್ಷಣಾ ಮಂದಿರವನ್ನು ರಾಹುಲ್ ಆಗಮನದ ಹಿನ್ನೆಲೆಯಲ್ಲಿ ಈಗ ಮತ್ತೆ ನವೀಕರಣಗೊಳಿಸಿದ್ದು, ಅದಕ್ಕಾಗಿ ಸರ್ಕಾರದಿಂದ ಲಕ್ಷಾಂತರ ರೂ ಖರ್ಚು ಮಾಡಲಾಗಿದೆ. ಪಕ್ಷದ ಕಾರ್ಯಕ್ರಮಕ್ಕೆ ಸರ್ಕಾರದ ಹಣ ಬಳಸಿ ನವೀಕರಿಸಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಸಹ ಸಾರ್ವಜನಿಕರಲ್ಲಿ ಮೂಡಿದೆ.
Leave A Reply