ಕರೆದು ಹೋಳಿಗೆ ಕೊಟ್ಟರೆ ತುಪ್ಪ ಬೇಕು ಎಂದರಂತೆ ಮುಸ್ಲಿಂ ಮುಖಂಡರು!
ಆರ್ಟ್ ಆಫ್ ಲಿವಿಂಗ್ ನ ಸಂಸ್ಥಾಪಕ ಶ್ರೀ ರವಿಶಂಕರ ಗುರೂಜಿ ಅವರು ರಾಮಜನ್ಮಭೂಮಿಯ ವಿಷಯದಲ್ಲಿ ಇಲ್ಲಿಯ ತನಕ ಖ್ಯಾತೆ ತೆಗೆಯುತ್ತಿರುವ ವಿವಿಧ ಸಂಘಟನೆಗಳ ಅಲ್ಪಸಂಖ್ಯಾತ ಮುಖಂಡರನ್ನು ಕರೆಸಿ ರಹಸ್ಯವಾಗಿ ಮಾತುಕತೆ ನಡೆಸಿದ್ದಾರೆ. ಬೆಂಗಳೂರಿನ ತಮ್ಮ ಆಶ್ರಮದಲ್ಲಿ ಮೂರು ತಾಸು ನಡೆದಿರುವ ಈ ಮಾತುಕತೆಯ ಕೆಲವು ಅಂಶಗಳನ್ನು ರಿಪಬ್ಲಿಕ್ ರಾಷ್ಟ್ರೀಯ ಟಿವಿ ವಾಹಿನಿ ಬಹಿರಂಗಪಡಿಸಿದೆ. ರವಿಶಂಕರ್ ಅವರೊಂದಿಗೆ ಇದ್ದ ಅಷ್ಟೂ ಮುಸಲ್ಮಾನ ಮುಖಂಡರು ಅಲ್ಲಿರುವ ಬಾಬ್ರಿ ಮಸೀದಿಯನ್ನು ಬೇರೆಡೆಗೆ ಸ್ಥಳಾಂತರಿಸಲು ಒಪ್ಪಿದ್ದಾರೆ. ಅಲ್ಲಿಗೆ ದಶಕಗಳ ಬಹುದೊಡ್ಡ ವಿವಾದವೊಂದು ಕೊನೆಯಾಗಲು ಕಾಲ ಸಿದ್ಧವಾಗಿದೆ ಎಂದೇ ಅರ್ಥ.
ಅದರೊಂದಿಗೆ ಅಖಿಲ ಭಾರತೀಯ ಮುಸ್ಲಿಂ ಪರ್ಸನಲ್ ಲಾ ಬೋರ್ಡಿನ ಸದಸ್ಯರಾಗಿರುವ ಸಲ್ಮಾನ್ ನಾಡ್ವಿ ಅವರು ಇನ್ನೊಂದು ವಿಷಯ ಕೂಡ ಹೇಳಿದ್ದಾರೆ. ಅದೇನೆಂದರೆ ಯಾರಿಗೆ ಈ ವಿವಾದ ಮುಗಿಯುವ ಆಸಕ್ತಿ ಇಲ್ಲವೋ ಅವರನ್ನು ಗಣನೆಗೆ ತೆಗೆದುಕೊಳ್ಳುವ ಅಗತ್ಯ ಇಲ್ಲ. ಬಹುಶ: ಇದನ್ನು ಯಾರು ಅರ್ಥ ಮಾಡಿಕೊಳ್ಳಬೇಕೋ ಅವರು ಅರ್ಥ ಮಾಡಿಕೊಂಡರೇ ಒಳ್ಳೆಯದು. ನಿಜಕ್ಕೂ ಬಹುಸಂಖ್ಯಾತ ಹಿಂದೂಗಳು ಬಯಸುವುದು ಅದನ್ನೇ. ಇದು ಭಾರತೀಯ ಜನತಾ ಪಾರ್ಟಿ, ಕಾಂಗ್ರೆಸ್ ಅಥವಾ ಬೇರೆ ಯಾವುದೇ ಪಕ್ಷದ ವಿಚಾರವಲ್ಲ. ಇದು ದೇವರನ್ನು ನಂಬುವ ಹಿಂದೂಗಳು ಮತ್ತು ಅಲ್ಲಾನನ್ನು ನಂಬುವ ಮುಸಲ್ಮಾನರ ನಡುವಿನ ವಿಷಯ. ತುಂಬಾ ಜನರಿಗೆ ಈ ವಿಷಯ ಜೀವಂತ ಇದ್ದರೆನೆ ಲಾಭ ಎಂದು ಅನಿಸಬಹುದು. ಆದರೆ ಒಳ್ಳೆಯ ಮನಸ್ಸಿರುವ ಮುಸ್ಲಿಮ್ ಮುಖಂಡರು ಇದನ್ನು ಆದಷ್ಟು ಬೇಗ ಮುಗಿಸುವ ನಿರ್ಧಾರ ಮಾಡಿರುವುದು ತುಂಬಾ ಒಳ್ಳೆಯದು.
ಕಂಡೀಶನ್ ಕೂಡ ಹಾಕಿದ್ದಾರೆ….
ರಹಸ್ಯ ಸಭೆಯಲ್ಲಿದ್ದವರು ಹಾಕಿರುವ ಕೆಲವು ಕಂಡೀಶನ್ ಗಳಲ್ಲಿ ಎರಡು ಪ್ರಮುಖವಾಗಿರುವುದು. ಒಂದು ತಮಗೆ ಮಸೀದಿ ಕಟ್ಟಲು ಜಾಗ ಕೊಡಬೇಕು ಮತ್ತು ಆ ಜಾಗದಲ್ಲಿ ಒಂದು ವಿಶ್ವವಿದ್ಯಾನಿಲಯದ ಸ್ಥಾಪನೆ ಆಗಬೇಕು. ಆ ವಿಶ್ವವಿದ್ಯಾನಿಲಯದ ಒಳಗೆನೆ ಮಸೀದಿ ಇರಬೇಕು ಎಂದಿದ್ದಾರೆ. ಇನ್ನೊಂದು ಅವರ ಕಂಡೀಷನ್ ವಿವಾದಿತ ಕಟ್ಟಡ ಅಥವಾ ಇವರು ಹೇಳುವ ಬಾಬ್ರಿ ಮಸೀದಿ ಕೆಡವಿದ ವ್ಯಕ್ತಿಗಳಿಗೆ ಶಿಕ್ಷೆ ಆಗಬೇಕು. ಇಲ್ಲಿಯೇ ಸಮಸ್ಯೆಯಾಗುವುದು. ನಾವು ಒಂದರ ಬದಲಿಗೆ ಇನ್ನೊಂದು ಕೇಳುವಾಗ ಕೇಳುವವರು ಇದ್ದಾರೆ ಎನ್ನುವ ಕಾರಣಕ್ಕೆ ಹಾಸಿಗೆನೂ ಕೊಡು, ದಿಂಬು ಕೊಡು ಎನ್ನಬಾರದು. ನೀವು ಮಲಗಲಿಕ್ಕೆ ಜಾಗ ಕೊಟ್ಟಿರುವುದೇ ದೊಡ್ಡ ವಿಷಯ ಎಂದು ಹೇಳುವುದು ಬಿಟ್ಟು ಅದು ಕೊಡು ಇದು ಕೊಡು ಎಂದರೆ ಕೊಡುವವನಿಗೆ ಇವನದ್ದು ಯಾಕೊ ಅತೀ ಆಯಿತು ಎನಿಸುತ್ತದೆ. ಯಾವ ಮಸೀದಿಯಲ್ಲಿ ಪ್ರಾರ್ಥನೆ ಆಗುವುದಿಲ್ಲವೋ ಅದನ್ನು ಹಾಗೆ ಉಳಿಸಿ ಚೆಂದ ನೋಡುವುದಕ್ಕಿಂತ ಬೇರೆ ಕಡೆ ಹೊಸ ಮಸೀದಿ ಕಟ್ಟಿಸಿ ಚೆಂದದಿಂದ ಪ್ರಾರ್ಥನೆ ಮಾಡಿದರೆ ಅಲ್ಲಾ ಕೂಡ ಆರ್ಶೀವದಿಸುತ್ತಾನೆ. ಅದರೊಂದಿಗೆ ಮುಸ್ಲಿಂ ವಿಶ್ವವಿದ್ಯಾನಿಲಯ ಕೇಳುತ್ತಿದ್ದಾರೆ, ಕೊಡೋಣ ಎಂದು ಒಮ್ಮತದ ಅಭಿಪ್ರಾಯವಾದರೆ ಅದರಲ್ಲಿ ಯಾರೂ ಕಳೆದುಕೊಳ್ಳುವುದು ಏನೂ ಇಲ್ಲ. ದೆಹಲಿಯಲ್ಲಿರುವ ಜೆಎನ್ ಯು ನಲ್ಲಿ ದೇಶವಿದ್ರೋಹಿಗಳು “ಭಾರತವನ್ನು ತುಂಡು ಮಾಡುತ್ತೇವೆ” ಎಂದು ಸರಿರಾತ್ರಿಯ ತನಕ ಘೋಷಣೆ ಕೂಗಿದಾಗ ಅವರಿಗೆ ಗಲ್ಲುಶಿಕ್ಷೆ ಕೊಡದೆ ಇಡೀ ದೇಶದೊಳಗೆ ಸುತ್ತಲೂ ಅವಕಾಶ ಕೊಟ್ಟ ವಿಶಾಲಹೃದಯಿ ದೇಶ ನಮ್ಮದು. ಹಾಗಿರುವಾಗ ಇಲ್ಲಿ ಅಂತದ್ದೇನೂ ಆಗುವುದಿಲ್ಲ ಎನ್ನುವ ಭರವಸೆ ಇಟ್ಟುಕೊಂಡೆ ಮುನ್ನಡೆಯಬಹುದು.
ಇನ್ನು ಅವರ ಎರಡನೇ ಕಂಡೀಷನ್ ವಿವಾದಿತ ಕಟ್ಟಡ ಧ್ವಂಸ ಮಾಡಿದವರಿಗೆ ಶಿಕ್ಷೆ ಆಗಬೇಕು ಎನ್ನುವುದು. ಇದು ಮತ್ತೆ ಸಂಧಾನ ವೈಫಲ್ಯಕ್ಕೆ ಕಾರಣವಾಗುವುದಲ್ಲದೇ ಬೇರೆ ಏನೂ ಅಲ್ಲ. ಒಂದು ಪ್ರಕರಣ ಏನು, ಎತ್ತ ಎನ್ನುವುದು ಯಾರು? ಅದರಲ್ಲಿ ಆರೋಪಿಗಳು ತಪ್ಪು ಮಾಡಿದ್ದಾರಾ, ಇಲ್ಲವಾ ಎಂದು ನಿರ್ಧಾರ ಮಾಡುವುದು ಯಾವುದೇ ಸಂತರೂ ಅಲ್ಲ, ಮೋದಿಯೂ ಅಲ್ಲ, ಕೇಂದ್ರ ಸರಕಾರವೂ ಅಲ್ಲ. ಇಲ್ಲಿ ಕೋರ್ಟ್ ನಿರ್ಧಾರ ಮಾಡುತ್ತದೆ. ಇನ್ನು ಆರೋಪಿಗಳಿಗೆ ಶಿಕ್ಷೆ ಆಗಬೇಕು ಅಥವಾ ಎಷ್ಟಾಗಬೇಕು ಎನ್ನುವುದು ಸುಪ್ರೀಂ ಕೋರ್ಟಿಗೆ ಬಿಟ್ಟಿದ್ದು. ಸರಿಯಾದ ಸಾಕ್ಷಿ ಇದ್ದರೆ ಯಾವುದೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನು ಕೂಡ ಜೈಲಿಗೆ ತಳ್ಳುವ ಸಾಮರ್ಥ್ಯ ಇರುವ ನ್ಯಾಯಾಂಗ ವ್ಯವಸ್ಥೆ ನಮ್ಮದು. ಅದನ್ನು ಈ ಸಭೆಯಲ್ಲಿ ಮುಸ್ಲಿಂ ಮುಖಂಡರು ಕೇಳಬಾರದು.
ಸುಪ್ರೀಂಕೋರ್ಟ್ ದೃಷ್ಟಿಯಲ್ಲಿ ಇದು ಜಾಗದ ವಿವಾದ…
ಇನ್ನು ಬಹುಮುಖ್ಯವಾಗಿ ಸುಪ್ರೀಂ ಕೋರ್ಟ್ ಬಹಳ ಸ್ಪಷ್ಟವಾಗಿ ಹೇಳಿದೆ. ನಾವು ಈ ಪ್ರಕರಣವನ್ನು ಕೇವಲ ಜಾಗದ ವಿವಾದ ಎಂದು ಮಾತ್ರ ನೋಡುತ್ತೇವೆ ವಿನ: ಬೇರೆ ಯಾವ ದೃಷ್ಟಿಕೋನದಲ್ಲಿಯೂ ನೋಡುವುದಿಲ್ಲ. ಆದ್ದರಿಂದ ನ್ಯಾಯಾಲಯ ಅದೇ ಫ್ಯಾಕ್ಟ್ ಆಫ್ ದಿ ಕೇಸ್ ಮೇಲೆ ಹೋದರೆ ಉತ್ಖನನದಿಂದ ಹಿಡಿದು ಇತಿಹಾಸದ ತನಕ ಅದು ಅಯೋಧ್ಯೆಯ ರಾಮಜನ್ಮಭೂಮಿ ಯಾವ ಧರ್ಮಕ್ಕೆ ಸೇರಿದ ಜಾಗ ಎಂದು ಎಲ್ಲರಿಗೂ ಗೊತ್ತಿದೆ. ಸಂಧಾನ ಮಾತುಕತೆ ನಡೆಸಲು ರವಿಶಂಕರ್ ಗುರೂಜಿ ಯಾರು ಎಂದು ಹಿಂದೊಮ್ಮೆ ವಿವಿದೆಡೆಯಿಂದ ಅಪಸ್ವರ ಕೇಳಿಬಂದಿದ್ದವು. ನಾವು ಯಾರನ್ನೂ ನಮ್ಮ ಕಡೆಯಿಂದ ನೇಮಕ ಮಾಡಿಲ್ಲ ಎಂದು ಕೇಂದ್ರ ಸರಕಾರ ಕೂಡ ಹೇಳಿತ್ತು. ಆವತ್ತು ರವಿಶಂಕರ್ ಗುರೂಜಿಯವರೇ ತಾವು ಸಂಧಾನ ಮಾಡಲು ಸಿದ್ಧ ಎಂದು ಬಹಿರಂಗವಾಗಿ ಹೇಳಿದ್ದರು. ನಂತರ ವಿರೋಧ ಕೇಳಿಬಂದ ನಂತರ ಹಿಂದೆ ಸರಿದಿದ್ದರು. ಆದರೆ ಈ ವಿವಾದ ಮುಗಿಯಲೇಬೇಕೆಂಬ ಒತ್ತಾಸೆ ಅವರಿಗಿರುವುದರಿಂದ ಅವರು ಈಗ ರಹಸ್ಯವಾಗಿ ಸಭೆ ನಡೆಸಿ ಅದಕ್ಕೆ ಪ್ರಯತ್ನಪಟ್ಟಿದ್ದಾರೆ. ಆದರೆ ಕರೆದು ಹೋಳಿಗೆ ಕೊಟ್ಟರೆ ತುಪ್ಪ ಬೇಕು ಎಂದು ಹೇಳಿದ್ದು ಮಾತ್ರ ಮುಸ್ಲಿಂ ಮುಖಂಡರ ಅಧಿಕಪ್ರಸಂಗತನ!!
Leave A Reply