ಈ ಬಾಲೆ ಮಾಡಿದ ಸಾಧನೆ ಅಚ್ಚರಿ ಮೂಡಿಸುವಂತದ್ದು!
ಆಕೆಗೆ ಈಗ 14 ವರ್ಷ. ಕೆಲವು ತಿಂಗಳ ಹಿಂದಿನ ತನಕ ನೀರಿಗೆ ಇಳಿದವಳಲ್ಲ. ಆದರೆ ಇತ್ತೀಚೆಗೆ ಆಕೆ ಮಾಡಿರುವ ಸಾಧನೆಯನ್ನು ನೋಡಿದರೆ ಆಕೆಗೆ ಈಜು ಕಲಿಸಿದ ಗುರುಗಳೇ ಮೂಗಿನ ಮೇಲೆ ಬೆರಳಿಡುತ್ತಾರೆ . ಅಷ್ಟಕ್ಕೂ ಅವಳು ಮಾಡಿರುವ ಸಾಧನೆಯಾದರೂ ಏನು?
ಬೇರೆ ಬೇರೆ ಮಕ್ಕಳು ಬೇರೆ ಬೇರೆ ಕ್ಷೇತ್ರಗಳಲ್ಲಿ ತಮ್ಮ ಸಾಧನೆಯನ್ನು ಮೆರೆದಿದ್ದಾರೆ. ಆ ಮೂಲಕ ತಮ್ಮ ಹೆಸರನ್ನು ಪೋಷಕರ, ಶಿಕ್ಷಕರ, ಶಾಲೆಯ ಹೆಸರನ್ನು ರಾಜ್ಯ, ದೇಶ, ವಿಶ್ವಮಟ್ಟದಲ್ಲಿ ಖ್ಯಾತಿಗೊಳಿಸಿದ್ದಾರೆ. ಅದರಲ್ಲಿಯೂ ಈ ಅಪ್ರತಿಮ ಸಾಧನೆಯನ್ನು ಮಾಡುವುದು ಗ್ರಾಮೀಣ ಭಾಗದ ಮಕ್ಕಳು ಎಂದ ಕೂಡಲೇ ನಮಗೆ ಆಗುವ ಪುಳಕ ಬೇರೆಯದ್ದು. ಯಾಕೆಂದರೆ ನಗರದ ಮಕ್ಕಳಿಗೆ ಎಲ್ಲಾ ಸೌಲಭ್ಯಗಳಿದ್ದು ಮಾಡಲಾಗದ ಸಾಧನೆಯನ್ನು ಏನೂ ಸೌಲಭ್ಯವಿಲ್ಲದ ಹಳ್ಳಿಗಳಲ್ಲಿ ಮಕ್ಕಳು ಮಾಡಿ ತೋರಿಸುವುದೆಂದರೆ ಅದು ಆಶ್ಚರ್ಯವೇ ಸರಿ.
ಅದು ಕೋಟೇಶ್ವರ ಸಮೀಪದ ಅಂಕದಕಟ್ಟೆ ಗ್ರಾಮ. ಸಾಮಾನ್ಯವಾಗಿ ಈ ಗ್ರಾಮೀಣ ಪ್ರದೇಶದಲ್ಲಿರುವ ತೋಟಗಳಲ್ಲಿ ಕೆರೆಗಳು ಇರುತ್ತವೆ. ಆ ಕೆರೆಗಳಲ್ಲಿ ಮಕ್ಕಳು, ದೊಡ್ಡವರು ಬಿಡುವಿನ ವೇಳೆಯಲ್ಲಿ ಈಜುವುದು ಸಾಮಾನ್ಯ. ಈ ಪ್ರದೇಶದಲ್ಲಿ ವಾಸಿಸುವ ಗಿರಿಧರ ಪ್ರಭುಗಳು ತಮ್ಮ ತೋಟದಲ್ಲಿರುವ 12 ಅಡಿ ಆಳದ ಕೆರೆಯನ್ನು ಸಂರಕ್ಷಣೆ ಮಾಡಿ ಕಾಪಾಡಿಕೊಂಡು ಬಂದಿದ್ದರು. ಅದರಲ್ಲಿ ಪರಿಸರದ ಕೆಲವು ಮಕ್ಕಳು ಆಗಾಗ ಈಜು ಕಲಿಯಲು ಬರುತ್ತಿದ್ದರು. ಅವರಿಗೆ ಅಶೋಕ್ ಬಸ್ರೂರು ಎನ್ನುವ ಈಜು ತರಬೇತುದಾರರು ಈಜು ಕಲಿಸುತ್ತಿದ್ದರು. ಆದರೆ ಯಾವತ್ತೂ ತನ್ನ ಮನೆಯ ಅಂಗಳದಲ್ಲಿರುವ ಈ ಕೆರೆಯಲ್ಲಿ ಈಜು ಕಲಿಯಲು ಯಾವತ್ತೂ ಮೇಘನಾ ಪ್ರಭುಗೆ ಅನಿಸಿರಲಲಿಲ್ಲ. ಆದರೆ 6-7 ತಿಂಗಳ ಮೊದಲು ಒಂದು ದಿನ ಮೇಘನಾಳಿಗೆ ಏನು ಅನಿಸಿತೊ ಏನೋ, ತಾನು ಕೂಡ ಕಲಿಯುತ್ತೇನೆ ಎಂದು ಗುರುಗಳ ಹತ್ತಿರ ಹೇಳಿಕೊಂಡಳು. ಗುರುಗಳು ಕಲಿಸಲು ಒಪ್ಪಿದರು. ಈಗ ಈಕೆ ಮಾಡಿರುವ ಸಾಧನೆ ನೋಡಿ ಎಲ್ಲರೂ ಅಚ್ಚರಿ ಪಟ್ಟಿದ್ದಾರೆ.
ಹೌದು, ಮೇಘನಾ ಪ್ರಭು ಯೋಗಾಸನದ ಮಾದರಿಯಲ್ಲಿ ಅಂಗಾತ ಮಲಗಿ ಒಂದು ತ್ರಾಸಿಗೂ ಹೆಚ್ಚು ಹೊತ್ತು ನೀರಿನಲ್ಲಿ ತೇಲುತ್ತಾಳೆ. ಅದರಿಂದ ತನಗೆ ಯಾವುದೇ ಆಯಾಸವಾಗುವುದಿಲ್ಲ ಎಂದು ಹೇಳುವ ಮೇಘನಾ ಪ್ರಭು ಪ್ರಸ್ತುತ ಕುಂದಾಪುರದ ವಿಕೆ ಆರ್ ಆಚಾರ್ಯ ಆಂಗ್ಲ ಮಧ್ಯಮ ಶಾಲೆಯಲ್ಲಿ ಎಂಟನೇ ತರಗತಿ ಕಲಿಯುತ್ತಿದ್ದಾಳೆ.
ಬೇರೆ ಮಕ್ಕಳು ವರ್ಷಗಟ್ಟಲೆ ಮಾಡಿದರೂ ಸಿದ್ಧಿಸದ ಈ ಕಲೆ ಮೇಘನಾ ಪ್ರಭು ಸುಲಭದಲ್ಲಿ ಕರಗತ ಮಾಡಿಕೊಂಡಿದ್ದಾಳೆ. ಚೆಸ್ ಪಂದ್ಯಾಟದಲ್ಲಿ ಈಗಾಗಲೇ ರಾಜ್ಯಮಟ್ಟದಲ್ಲಿ ಶಾಲೆಯನ್ನು ಪ್ರತಿನಿಧಿಸಿರುವ ಮೇಘನಾ ಪ್ರಭು ಬಗ್ಗೆ ಇಡೀ ಊರಿಗೆ ಹೆಮ್ಮೆ ಇದೆ.
“ನಾ” ಕಂಡಂತೆ
Leave A Reply