ಮಂಗಳೂರಿನಲ್ಲಿ “ತಿನ್ನುವ” ಯೋಜನೆಗೆ ಎಡಿಬಿಯಿಂದ ಸಾಲ!!
ಕೋಟಿಗಳಿಗೆ ಲೆಕ್ಕವೇ ಇಲ್ವೇನೋ ಅನಿಸುತ್ತದೆ. ನಾವು ಕೈ ತೊಳೆಯಲು ಪೈಪ್ ಆನ್ ಮಾಡಿದಾಗ ಎಷ್ಟು ನೀರು ಹರಿದು ಹೋಯಿತು ಎಂದು ಯೋಚಿಸುವುದಿಲ್ಲ. ಯಾಕೆಂದರೆ ಎರಡು ನಿಮಿಷ ಹೆಚ್ಚು ಪೈಪ್ ಆನ್ ಇದ್ದು ನಾಲ್ಕು ಲೀಟರ್ ನೀರು ಪೋಲು ಆದರೆ ಯಾರು ತಾನೆ ಕೇಳುತ್ತಾರೆ ಎನ್ನುವ ಧೈರ್ಯ. ಹಾಗೆ ನಮ್ಮ ಮಂಗಳೂರು ಮಹಾನಗರ ಪಾಲಿಕೆ ಮತ್ತು ನಮ್ಮ ಮಂಗಳೂರು ನಗರದ ದಕ್ಷಿಣದ ಶಾಸಕರಿಗೆ ಏಶಿಯನ್ ಡೆವಲಪ್ ಮೆಂಟ್ ಬ್ಯಾಂಕ್ ನಿಂದ ಪಡೆಯುವ ಸಾಲವನ್ನು ಹೇಗೆ ಬೇಕಾದರೂ ಪೋಲು ಮಾಡಿದರೂ ಯಾರೂ ಕೇಳುವದಿಲ್ಲ ಎನ್ನುವ ಧೈರ್ಯ ಇದೆ. ಅದಕ್ಕೆ ನೀರು ಪೈಪಿನಿಂದ ಇಳಿದು ಹೋದಂತೆ ಕೋಟಿಗಳು ನೀರಿನಂತೆ ಡ್ರೈನೇಜ್ ಸೇರುತ್ತಿವೆ.
ಮೊದಲ ಹಂತ ದೊಡ್ಡ ಫೆಲ್ಯೂರ್, ಎರಡನೇಯದ್ದು ಇನ್ನೂ ದೊಡ್ಡ….
ಹೌದು, ಡ್ರೈನೇಜ್ ಅಂದರೆ ಒಳಚರಂಡಿ ವ್ಯವಸ್ಥೆಗೆ ಎಡಿಬಿಯಿಂದ ದ್ವೀತಿಯ ಹಂತದ 195 ಕೋಟಿ ರೂಪಾಯಿ ಮಂಜೂರಾಗಿದೆ. ಕಳೆದ ಬಾರಿ 2005-06 ರಲ್ಲಿ 318 ಕೋಟಿ ರೂಪಾಯಿ ಇದಕ್ಕೆ ಬಿಡುಗಡೆಯಾಗಿತ್ತು. ಆ ಹಣ ಸರಿಯಾಗಿ ಡ್ರೈನೇಜ್ ಸೇರಿದೆ. ಅದು ನಿಮಗೆ ಗೊತ್ತಾಗುವುದು ಮಳೆಗಾಲದ ಸಂದರ್ಭದಲ್ಲಿ. ಜೋರು ಮಳೆ ಬಂದರೆ ಅಲ್ಲಲ್ಲಿ ಮ್ಯಾನ್ ಹೋಲ್ ಗಳಿಂದ ಡ್ರೈನೇಜ್ ಗಾಗಿ ಎಡಿಬಿಯವರು ಕೊಟ್ಟ ಕೋಟಿ ಹಣ ಕಾರಂಜಿಯ ರೂಪದಲ್ಲಿ ಹೊರಗೆ ಕಾಣಿಸುತ್ತದೆ. ಹಾಗಂತ ಎಡಿಬಿಯವರು ಮ್ಯಾನ್ ಹೋಲ್ ಗೆ ಕಾರಂಜಿ ಮಾಡಿ ಎಂದು 318 ಕೋಟಿ ಕೊಟ್ಟದ್ದಲ್ಲ. ಅವರು ಡ್ರೈನೇಜ್ ಮಾಡಿ ಎಂದು ಕೊಟ್ಟಿದ್ದು. ಆ ಹಣದಿಂದ ಮಳೆಗಾಲದಲ್ಲಿ ಡ್ರೈನೇಜ್ ಗೆ ಕಾರಂಜಿ ಮಾಡಿದ್ದು ನಮ್ಮ ಕುಡ್ಸೆಂಪ್. ಅದನ್ನು ನೋಡಿ ಖುಷಿಪಡುವ ಭಾಗ್ಯ ನಮ್ಮದು. ಹಿಂದಿನ ಬಾರಿ ಹಣ ಬಂದಾಗ ನಮ್ಮದು ಸಿಕ್ಕಾಪಟ್ಟೆ ದೂರದೃಷ್ಟಿ ,2026 ತನಕ ಯಾವುದೇ ಸಮಸ್ಯೆ ಇಲ್ಲ ಎಂದು ಸಾರಿಬಿಟ್ಟಿದ್ದರು. ಈಗ 2046ರ ತನಕ ಈ ಹಣದಿಂದ ಮಾಡುವ ಡ್ರೈನೇಜ್ ನಿಂದ ಜನರಿಗೆ ಉಪಯೋಗವಾಗುತ್ತದೆ ಎಂದು ಹೇಳುತ್ತಿದ್ದಾರೆ. ಡ್ರೈನೇಜ್ ಸರಿಯಾಗುತ್ತದೋ ಇಲ್ಲವೋ ನಮ್ಮ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಒಳಚರಂಡಿಯ ಹೆಸರಿನಲ್ಲಿ ತಮ್ಮ ಮನೆಯ ಒಳಗೆ ಬಂಗಾರದ ತೋಡನ್ನು ಮಾಡಬಹುದು ಎಂದು ಅನಿಸುತ್ತದೆ. ಅಷ್ಟಕ್ಕೂ ಮೊದಲ ಹಂತದ ಸಾಲ ಬಂದಾಗ ಈ ಕುಡ್ಸೆಂಪ್ ಅದರ ನಿರ್ದೇಶಕರಾಗಿದ್ದವರು ಜೆ ಆರ್ ಲೋಬೋ ಅವರು.
ಲೋಬೋ ಆಗ ಡೈರೆಕ್ಟರ್, ಈಗ ಎಂಎಲ್ ಎ…
ಆಗ ಜೆ ಆರ್ ಲೋಬೋ ಅವರನ್ನು ಯಾಕೆ ನಿರ್ದೇಶಕರನ್ನಾಗಿ ಮಾಡಿದ್ದು ಎಂದರೆ ಅವರು ಒಂದೇ ಜಿಲ್ಲೆಯಲ್ಲಿ ಸತತ ಮೂರು ದಶಕ ಸೇವೆ ಸಲ್ಲಿಸಿ ಬೇರೆ ಎಲ್ಲಾ ಅಧಿಕಾರಿಗಳಿಗಿಂತ ತನ್ನದು ವಿಭಿನ್ನ ಎಂದು ಸಾಧಿಸಿ ತೋರಿಸಿದ್ದರು. ಅಂತಹ ಅಧಿಕಾರಿಯ ಕೈಗೆ ಒಳಚರಂಡಿಯ ಯೋಜನೆ ಕೊಟ್ಟರೆ ಸಮರ್ಪಕವಾಗಿ ಮಾಡಿ ಆ ಹಣವನ್ನು ಸರಿಯಾಗಿ ವಿನಿಯೋಗಿಸುತ್ತಾರೆ ಎಂದೇ ಎಲ್ಲರೂ ನಂಬಿದ್ದರು. ಅವರನ್ನು ಒಂದೇ ಜಿಲ್ಲೆಯಲ್ಲಿ ಉಳಿಸುವ ಮೂಲಕ ನಿಯಮಗಳನ್ನು ಆಗಿನ ಜನಪ್ರತಿನಿಧಿಗಳು ಪರೋಕ್ಷವಾಗಿ ಉಲ್ಲಂಘಿಸಿದಂತೆ ಆಗಿತ್ತಾದರೂ ಈ ಯೋಜನೆಗೆ ಮಂಗಳೂರಿನ ಸಮಗ್ರ ನೆಲ, ಜಲದ ಬಗ್ಗೆ ಗೊತ್ತಿರುವ ಒಬ್ಬ ಅಧಿಕಾರಿ ಬೇಕಾಗಿದ್ದ ಕಾರಣ ಲೋಬೋ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಜೆ ಆರ್ ಲೋಬೋ ಅವರ ಕಾರ್ಯದಕ್ಷತೆ ಮಳೆಗಾಲದಲ್ಲಿ ಮ್ಯಾನ್ ಹೋಲ್ ಗಳಲ್ಲಿ ಸಿಡಿಯುವ ಕಾರಂಜಿಗಳಿಂದ ಗೊತ್ತಾಗುತ್ತದೆ. ಅದರ ನಂತರ ಅವರು ಶಾಸಕರಾದರು. ಈಗ ಮತ್ತೆ ಕೋಟಿಗಟ್ಟಲೆ ಹಣ ಬಂದಿದೆ. ಅಧಿಕಾರಿಯಾಗಿದ್ದಾಗ ಅವರಿಗೆ ಅದು ಮಾತ್ರ ಮಾಡುವ ಜವಾಬ್ದಾರಿ ಇತ್ತು. ಈಗ ಶಾಸಕರು. ಆವತ್ತೇ ಅವರು ಫೇಲ್ ಆಗಿದ್ದಾರೆ ಎನ್ನುವುದನ್ನು ನಾವು ಜನಸಾಮಾನ್ಯರು ಹೇಳಿದರೆ ಅವರು ಮತ್ತು ಅವರ ಹಿಂಬಾಲಕರು ತಪ್ಪು ತಿಳಿದುಕೊಂಡಾರು. ಕುಡ್ಸೆಂಪ್ ಯೋಜನೆ ಸಂಪೂರ್ಣ ವೈಫಲ್ಯವಾಗಿದೆ, ಗೋಲ್ ಮಾಲ್ ನಡೆದಿದೆ ಎಂದು ಹೇಳಿದ್ದು ಅವರದ್ದೇ ಪಕ್ಷದ ನಾಯಕರೂ, ಸಚಿವರೂ ಆಗಿರುವ ರೋಶನ್ ಬೇಗ್.
ರೋಶನ್ ಬೇಗ್ ಕೊಟ್ಟಿರುವ ಸರ್ಟಿಫಿಕೇಟ್ ಪಾಲಿಕೆಯಲ್ಲಿ ಫ್ರೇಮ್ ಹಾಕಿಡಿ..
ಬೇಗ್ ಈ ಅವ್ಯವಹಾರವನ್ನು ಸಿಐಡಿಗೆ ಕೊಡುತ್ತೇವೆ ಎಂದು ಹೇಳಿ ಹೋಗಿದ್ದಾರೆ. ಇನ್ನು ಕೊಟ್ಟಂತೆ ಕಾಣುತ್ತಿಲ್ಲ. ಸಂದ ಬೇಕಾಗಿರುವ ‘ವಿಷಯ” ಸಂದಿದೆಯೋ ಗೊತ್ತಿಲ್ಲ. ಈ ಎಲ್ಲಾ ಪ್ರಶ್ನೆಗಳು ಲೋಬೋ ಅವರ ಮುಂದೆ ಬರುತ್ತೆ ಎಂದು ಹೆದರಿದ ಅವರು ಮೊನ್ನೆ ಸಮಾಲೋಚನಾ ಸಭೆಗೆ ಬರಲೇ ಇಲ್ಲ. ಯಾವುದೋ ನೆಪ ಹೇಳಿದ್ದಾರೆ. ಒಂದು ದೊಡ್ಡ ಯೋಜನೆಯ ಬಗ್ಗೆ ಪಾಲಿಕೆ ನಿಜವಾಗಿಯೂ ಗಂಭೀರವಾಗಿದ್ದರೆ ಅದಕ್ಕೆ ಆ ಭಾಗದ ಶಾಸಕರು ಬರಬೇಕಿತ್ತು. ಆದರೆ ಅವರು ಜನರ ಪ್ರಶ್ನೆಗಳನ್ನು ಎದುರಿಸುವ ನೈತಿಕತೆಯನ್ನು ಕಳೆದುಕೊಂಡಿದ್ದಂತೆ ಸಭೆಯಿಂದ ತಪ್ಪಿಸಿಕೊಂಡಿದ್ದಾರೆ. ಹಾಗಾದರೆ ದ್ವೀತಿಯ ಹಂತದ ಸಾಲ ಹಾಗೆ ಮತ್ತೊಮ್ಮೆ ಮೊದಲ ಬಾರಿಯಂತೆ ಡ್ರೈನೇಜ್ ಸೇರುವ ಸಾಧ್ಯತೆ ಇನ್ನೂ ಸ್ವಷ್ಟವಾಗಿದೆ.
ಪಾಲಿಕೆ ಮತ್ತು ಶಾಸಕರು ಎರಡನೇ ಹಂತದ ಕಾಮಗಾರಿಯಲ್ಲಿ ಫೇಲ್ ಆಗುತ್ತಾರೆ ಎನ್ನುವುದನ್ನು ಹೇಗೆ ಈಗಲೇ ಹೇಳುವುದು ಸಾಧ್ಯ ಎನ್ನುವುದನ್ನು ಕೂಡ ಈಗಲೇ ವಿವರಿಸುತ್ತೇನೆ. ಮಂಗಳೂರಿನ ಕೊಡಿಯಾಲ್ ಗುತ್ತು ಈಸ್ಟ್ ನಿಂದ ಎಂಪ್ಲಾಯರ್ ಮಾಲ್ ಹತ್ತಿರ ಒಳಚರಂಡಿಗೆ ಜಾಗ ಬಿಟ್ಟುಕೊಡುವ ವಿಷಯದಲ್ಲಿ ವಿವಾದ ಇದ್ದ ಕಾರಣ ಅಲ್ಲಿ ಕಾಮಗಾರಿ ನಡೆದಿರಲಿಲ್ಲ. ಆದರೆ ಈಗ ಆ ವಿವಾದ ಬಗೆಹರಿದಿದೆ. ಎರಡೂ ಕಡೆಯವರು ಸುಪ್ರೀಂ ಕೋರ್ಟಿನ ತನಕ ಹೋಗಿದ್ದ ಕಾರಣ ಅಲ್ಲಿ ಕಾಮಗಾರಿ ಆಗಿರಲಿಲ್ಲ. ಆದರೆ ಸುಪ್ರೀಂ ಕೋರ್ಟ್ ಪಾಲಿಕೆಯ ಪರವಾಗಿ ತೀರ್ಪು ಕೊಟ್ಟ ಕಾರಣ ಎರಡನೇ ಹಂತದ ಕಾಮಗಾರಿ ಶುರುವಾಗುವಾಗ ಮೊದಲ ಕೆಲಸ ಶುರುವಾಗಬೇಕಾದದ್ದೇ ಅದು. ಆದರೆ ಅದು ಇವರ ಪಟ್ಟಿಯಲ್ಲಿಯೇ ಇಲ್ಲ. ಕೊಡಿಯಾಲ್ ಗುತ್ತು ಈಸ್ಟ್ ನಿಂದ ಕುದ್ರೋಳಿಯ ತನಕ ಒಳಚರಂಡಿ ವ್ಯವಸ್ಥೆ ಸರಿ ಮಾಡದೇ ಇವರು ಹೇಗೆ ಮುಂದಿನ ಕಾಮಗಾರಿ ಮಾಡುತ್ತಾರೆ ಎನ್ನುವುದು ಸದ್ಯದ ಪ್ರಶ್ನೆ. ಯಾಕೆಂದರೆ ಒಂದು ವೆಟ್ ವೆಲ್ ನಿಂದ ತ್ಯಾಜ್ಯ, ಕೊಳಚೆ ನೀರು ಪಂಪ್ ಮಾಡಿದಾಗ ಅದು ನಿರ್ದೀಷ್ಟ ಜಾಗದ ತನಕ ಹೋಗುತ್ತದೆ. ಅಲ್ಲಿ ಮತ್ತೊಂದು ವೆಟ್ ವೆಲ್ ನಿರ್ಮಾಣ ಮಾಡಲಾಗುತ್ತದೆ. ಹಾಗೆ ಒಂದಕ್ಕೊಂದು ವೆಟ್ ವೆಲ್ ಗಳು ಪರಸ್ಪರ ಜೋಡಣೆಯಾಗಿ ಕೊಳಚೆ ನೀರು ತ್ಯಾಜ್ಯ ಸಂಸ್ಕರಣಾ ಘಟಕದ ತನಕ ಹೋಗಬೇಕು. ಇವರು ಇಂತಹ ಲಿಂಕ್ ಬಗ್ಗೆ ಯೋಚಿಸಿಲ್ಲ ಎನ್ನುವುದೇ ಸೋಜಿಗ. ಯಾವ ಕಾರ್ಪೋರೇಟರ್ ತನ್ನ ವಾರ್ಡಿನಲ್ಲಿ ವೆಟ್ ವೆಲ್ ಅಥವಾ ಒಳಚರಂಡಿ ವ್ಯವಸ್ಥೆ ಆಗಬೇಕು ಎಂದು ಮನವಿ ಮಾಡಿದ್ದಾರೋ ಅವರ ಏರಿಯಾದಲ್ಲಿ ಕಾಮಗಾರಿ ಶುರುವಾಗಲಿದೆ. ಲಿಂಕ್ ಬಗ್ಗೆ ಯೋಚಿಸಿಯೇ ಇಲ್ಲ. ಯಾಕೆಂದರೆ ಇವರಿಗೆ ತಮ್ಮ ಬಾಯಿಗೆ ತುರುಕುವ ಗಡಿಬಿಡಿ!
Leave A Reply