ಮಾವೋವಾದಿಗಳಿಗೆ ಸೇನೆ ದಿಟ್ಟ ಉತ್ತರ, 20 ಕೆಂಪು ಉಗ್ರರ ಸಂಹಾರ
ರಾಯಪುರ: ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಛತ್ತೀಸ್ ಗಡದಲ್ಲಿ ನಕ್ಸಲರ ವಿರುದ್ಧ ಕೈಗೊಂಡ ಕ್ರಮದಿಂದ ಕೆಂಪು ಉಗ್ರರ ಉಪಟಳ ಕಡಿಮೆಯಾಯಿತು ಎನ್ನುವ ಮಾತು ಕೇಳಿಬರುತ್ತಿವ ಬೆನ್ನಲ್ಲೇ, ಮಾವೋವಾದಿಗಳು ಸೇನಾನೆಲೆಗಳ ಮೇಲೆ ದಾಳಿ ಮಾಡಿ ಇಬ್ಬರು ಯೋಧರನ್ನು ಹತ್ಯೆ ಮಾಡಿದ್ದಾರೆ.
ಆದರೆ ಇದಕ್ಕೆ ಪ್ರತಿಯಾಗಿ ಭದ್ರತಾ ಸಿಬ್ಬಂದಿ ಸಹ ದಿಟ್ಟ ಪ್ರತಿದಾಳಿ ಮಾಡಿದ್ದು, ಬರೋಬ್ಬರಿ ಇಪ್ಪತ್ತು ನಕ್ಸಲರನ್ನು ಹೊಡೆದುರುಳಿಸಿದ್ದಾರೆ.
ಛತ್ತೀಸ್ ಗಡದ ಸುಕ್ಮಾ ಎಂಬಲ್ಲಿ ನಕ್ಸಲರು ಭದ್ರತಾ ಸಿಬ್ಬಂದಿ ಮೇಲೆ ಮಾಡಿದ ದಾಳಿಯಲ್ಲಿ ಇಬ್ಬರು ಯೋಧರು ಹಾಗೂ ಒಬ್ಬ ನಾಗರಿಕ ಮೃತಪಟ್ಟಿದ್ದರು. ಇದರಿಂದ ಕೆರಳಿದ ಸೇನೆ ಸತತ ಐದು ಗಂಟೆ ಕಾರ್ಯಾಚರಣೆ ನಡೆಸಿ 20 ಕೆಂಪು ಉಗ್ರರನ್ನು ಹತ್ಯೆ ಮಾಡಿದ್ದಾರೆ.
ಪರಿಸ್ಥಿತಿ ತಿಳಿಯಾಗಿದೆ ಎಂದು ಭದ್ರತಾ ಸಿಬ್ಬಂದಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ಆಗ ನಕ್ಸಲರು ಭಾರಿ ಗುಂಡಿನ ದಾಳಿ ಮಾಡಿದ್ದು, ಇದಕ್ಕೆ ಪ್ರತಿಯಾಗಿ ನಮ್ಮ ಸಿಬ್ಬಂದಿ ಸಹ ಗುಂಡಿನ ಸುರಿಮಳೆಗೈದರು. ದಾಳಿಯಲ್ಲಿ 20 ನಕ್ಸಲರನ್ನು ಹತ್ಯೆ ಮಾಡಲಾಗಿದೆ ಎಂದು ನಕ್ಸಲ್ ನಿಗ್ರಹ ಕಾರ್ಯಾಚರಣೆ ಪಡೆಯ ವಿಶೇಷ ಡಿಜಿ ಡಿ.ಎಂ.ಅಸ್ವಥಿ ಮಾಹಿತಿ ನೀಡಿದ್ದಾರೆ.
ಡಿಸ್ಟ್ರಿಕ್ಟ್ ರಿಸರ್ವ್ ಗಾರ್ಡ್ ಮತ್ತು ಜಂಟಿ ವಿಶೇಷ ಕಾರ್ಯಪಡೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು, ಇದುವರೆಗೂ ಹತ್ಯೆ ಮಾಡಲಾಗಿರುವ ನಕ್ಸಲರ ದೇಹ ಪತ್ತೆಯಾಗಿಲ್ಲ, ಹುಡುಕಾಟ ನಡೆಯುತ್ತಿದೆ ಎಂದು ವಿವರಿಸಿದ್ದಾರೆ.
ಈ ಹಿಂದೆಯೂ ಹಲವು ಬಾರಿ ಸುಕ್ಮಾದಲ್ಲಿ ನಕ್ಸಲರು ದಾಳಿ ಮಾಡಿರುವ ಹಿನ್ನೆಲೆ ಇರುವುದರಿಂದ ಭದ್ರತಾ ಸಿಬ್ಬಂದಿ ಹಗಲು-ರಾತ್ರಿ ನಕ್ಸಲರ ಬೇಟೆಗಾಗಿ ಹಾತೊರೆಯುತ್ತದೆ. ಅದಕ್ಕಾಗಿ ಅಪಾರ ಸಿಬ್ಬಂದಿಯನ್ನು ಸಹ ನಿಯೋಜನೆ ಮಾಡಲಾಗಿದೆ.
Leave A Reply