ನರೇಂದ್ರ ಮೋದಿ ಅವರಿಂದ ಹೊಗಳಿಸಿಕೊಂಡ ಪ್ರತಾಪ್ ಸಿಂಹ, ತಮ್ಮ ಕ್ಷೇತ್ರಕ್ಕೆ ಏನೇನು ಕೊಡುಗೆ ನೀಡಿದ್ದಾರೆ ಗೊತ್ತಾ?
ಅಂಕಣಕಾರರಾಗಿದ್ದ ಪ್ರತಾಪ್ ಸಿಂಹ ಕೈತುಂಬ ಸಂಬಳ ಬರುವ ಕೆಲಸ ಬಿಟ್ಟು ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಹೊರಟಾಗ ರಾಜಕಾರಣಿಗಳನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಳ್ಳುತ್ತಿದ್ದ ಅವರೇ ರಾಜಕಾರಣಿಯಾಗಿ ಹೇಗೆ ನಿಷ್ಠೆ, ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಾರೋ? ರಾಜಕಾರಣದಲ್ಲಿ ಹೇಗೆ ಇರುತ್ತಾರೋ? ಯಾವ ರೀತಿ ಅಭಿವೃದ್ಧಿ ಮಾಡುತ್ತಾರೋ ಎಂಬ ಪ್ರಶ್ನೆಗಳು ಮೂಡಿದ್ದವು.
ಆದರೆ ನರೇಂದ್ರ ಮೋದಿ ಅವರ ಅಲೆ, ಮೈಸೂರು ಭಾಗದಲ್ಲಿ ಪ್ರತಾಪ್ ಸಿಂಹ ಅವರಿಗಿದ್ದ ವರ್ಚಸ್ಸು, ಅವರ ನಿಷ್ಠೆ, ಪ್ರಾಮಾಣಿಕತೆಗೆ ಮೈಸೂರು-ಕೊಡಗು ಜನ ಮತದ ಮುದ್ರೆ ಒತ್ತಿ ಆರಿಸಿ ಕಳುಹಿಸಿಯೇ ಬಿಟ್ಟರು.
ಪ್ರತಾಪ್ ಸಿಂಹ ಸಂಸದರಾದ ಈ ಅವಧಿಯಲ್ಲಿ ಹಲವು ಟೀಕೆಗಳನ್ನು ಎದುರಿಸಿದ್ದಾರೆ. ಧರ್ಮದ ರಕ್ಷಣೆಗಾಗಿ ಹೋರಾಟ ಸಹ ಮಾಡಿದ್ದಾರೆ. ಇದರ ಜತೆಗೆ ಅಭಿವೃದ್ಧಿಯನ್ನೂ ಮಾಡಿದ್ದಾರೆ.
ಇದುವರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪಕ್ಷದ ಯಾವ ಸಂಸದರನ್ನೂ, ಸಚಿವರನ್ನು ಹೊಗಳಿಲ್ಲ. ಅವರ ಕೆಲಸವನ್ನು ಅವರು ಮಾಡಿಕೊಂಡು ಹೋಗುವಂತೆ ಸೂಚನೆಯಷ್ಟೇ ನೀಡಿ ಸುಮ್ಮನಾಗಿದ್ದಾರೆ. ಆದರೆ ಸೋಮವಾರ ಮೈಸೂರಿಗೆ ಆಗಮಸಿದ ಪ್ರಧಾನಿ ಮೋದಿ ಅವರು ಒಂದೇ ಮಾತಿನಲ್ಲಿ ಪ್ರತಾಪ್ ಸಿಂಹರ ಅಭಿವೃದ್ಧಿಪರ ನಡೆಯನ್ನು ಹಾಡಿಹೊಗಳಿದರು.
ಮೋದಿ ಹೇಳಿದ್ದಿಷ್ಟೇ, “ನಿಮ್ಮ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ದಿನಬೆಳಗಾದರೆ ಯಾವುದಾದರೂ ಒಂದು ಯೋಜನೆ ಕೈಯಲ್ಲಿ ಹಿಡಿದುಕೊಂಡೇ ನಮ್ಮ ಬಳಿ ಬರುತ್ತಾರೆ. ಅವರು ಸುಮ್ಮನಿರುವ ರಾಜಕಾರಣಿಯೇ ಅಲ್ಲ” ಎಂದುಬಿಟ್ಟರು.
ಹಾಗಾದರೆ ಮೈಸೂರು ಕೊಡಗು ಕ್ಷೇತ್ರಕ್ಕೆ ಪ್ರತಾಪ್ ಸಿಂಹ ನೀಡಿದ ಕೊಡುಗೆ ಏನು? ಅವರು ಚುನಾವಣೆ ವೇಳೆ ನೀಡಿದ ಯಾವ ಯೋಜನೆ ಜಾರಿಗೊಳಿಸಿದ್ದಾರೆ? ನುಡಿದಂತೆ ನಡೆದಿದ್ದಾರಾ? ಮೋದಿ ಅವರನ್ನು ಹೊಗಳು ಕಾರಣವೇನು ಎಂಬ ಪ್ರಶ್ನೆ ಕೇಳಿಕೊಂಡರೆ ಹಲವು ಉತ್ತರಗಳು ತೆರೆದುಕೊಳ್ಳುತ್ತಾ ಹೋಗುತ್ತವೆ.
ಪ್ರತಾಪ್ ಸಿಂಹ ಪತ್ರಿಕೋದ್ಯಮವನ್ನು ಬಿಟ್ಟು ಮೈಸೂರು-ಕೊಡಗು ಕ್ಷೇತ್ರದ ಸಂಸದರಾಗಿ ಇನ್ನೂ ಆಯ್ಕೆಯಾಗಿರಲಿಲ್ಲ. ಆಗಲೇ ಅವರು ಕೊಡಗಿಗೆ ರೈಲು ಯೋಜನೆ ಜಾರಿಗೊಳಿಸುತ್ತೇನೆ ಎಂದರು. 60 ವರ್ಷ ರಾಜ್ಯವನ್ನಾಳಿದ್ದ ಕಾಂಗ್ರೆಸ್ಸಿಗೇ ಕೊಡಗಿಗೆ ರೈಲು ಬಿಡಲು ಆಗಿರಲಿಲ್ಲ. ಆದರೂ ರಿಸ್ಕ್ ತೆಗೆದುಕೊಂಡ ಸಿಂಹ ಕೊಡಗಿಗೆ ರೈಲು ಬಿಡದಿದ್ದರೆ ಮುಂದಿನ ಬಾರಿ ಚುನಾವಣೆಗೇ ನಿಲ್ಲುವುದಿಲ್ಲ ಎಂದು ಘೋಷಿಸಿದರು.
ಇಂತಹ ಪ್ರತಾಪ್ ಸಿಂಹ ಸಂಸದರಾಗಿ ಆಯ್ಕೆಯಾದ ಬಳಿಕ ಕ್ಷೇತ್ರದ ಜನತೆಗೆ ಕೊಟ್ಟ ಮಾತಿನಂತೆ ಆಗ ರೈಲ್ವೆ ಖಾತೆ ಸಚಿವರಾಗಿ ಡಿ.ವಿ.ಸದಾನಂದಗೌಡರ ದುಂಬಾಲು ಬಿದ್ದು, ಕೊಡಿಗೆಗೆ ರೈಲು ಯೋಜನೆ ಮಂಜೂರು ಮಾಡಿಸಿದ್ದಾರೆ. ಕೊಟ್ಟ ಮಾತಿನಂತೆ ನಡೆದುಕೊಳ್ಳುವುದು ಎಂದರೆ ಇದೇ ಅಲ್ಲವೇ?
ಅಷ್ಟೇ ಅಲ್ಲ, ಮೈಸೂರಿಗೆ ಪಾಸ್ ಪೋರ್ಟ್ ಸೇವಾ ಕೇಂದ್ರ, ಹಲವು ರೈಲುಗಳಿಗೆ ಮಂಜೂರು, ರೈಲು ಓಡಾಟ ಸೇರಿ ಹಲವು ಯೋಜನೆಗಳಿಗೆ ಸಂಸದ ಮುನ್ನುಡಿ ಬರೆದಿದ್ದಾರೆ. ಆ ಮೂಲಕ ಕೊಟ್ಟ ಮಾತಿಗೆ ನಡೆದುಕೊಂಡು ಉತ್ತಮ ಸಂಸದರಾಗಿ ಮುಂದುವರಿಯುತ್ತಿದ್ದಾರೆ.
ಇವುಗಳ ಜತೆಗೆ ಹಿಂದೂ ಧರ್ಮದ ರಕ್ಷಣೆಗಾಗಿಯೂ ಸಂಸದರು ಕಂಕಣಬದ್ಧರಾಗಿದ್ದು, ಹುಣಸೂರಿನಲ್ಲಿ ಹನುಮ ಜಯಂತಿಗೆ ಪರೋಕ್ಷವಾಗಿ ಪೊಲೀಸ್ ಇಲಾಖೆ ಮೂಲಕ ಸರ್ಕಾರ ಹೇಗೆ ವಿರೋದ ವ್ಯಕ್ತಪಡಿಸಿತು ಎಂಬುದು ಎಲ್ಲರಿಗೂ ಗೊತ್ತು. ಆದರೆ ಇದಕ್ಕೆ ಬಗ್ಗದ ಪ್ರತಾಪ್ ಸಿಂಹ ಹನುಮ ಜಯಂತಿ ಹಾಗೂ ಮೆರವಣಿಗೆಯನ್ನು ಯಶಸ್ವಿಯಾಗಿ ಮುನ್ನಡೆಸಿದರು. ಹಲವು ಟೀಕೆಗಳನ್ನು ಎದುರಿಸಿಯೂ!
ಕಳೆದ 10-15 ದಿನದ ಹಿಂದೆ ಪ್ರತಾಪ್ ಸಿಂಹರ ಅಂಕಣ ಬರಹಕ್ಕಾಗಿ ಹಾಮಾ ನಾಯಕ್ ಪ್ರಶಸ್ತಿ ಜತೆಗೆ 50 ಸಾವಿರ ರೂ. ನಗದು ಸಿಕ್ಕಿತು. ಆ ಚೆಕ್ಕನ್ನು ತಮ್ಮ ಅಕೌಂಟಿಗೆ ಹಾಕಿಸಿಕೊಳ್ಳದ ಪ್ರತಾಪ್ ಸಿಂಹ, ದುಷ್ಕರ್ಮಿಗಳ ಕೃತ್ಯಕ್ಕೆ ಜೀವ ಕಳೆದುಕೊಂಡ ದೀಪಕ್ ರಾವ್ ಕುಟುಂಬಕ್ಕೆ ನೀಡಿ ಜನಾನುರಾಗಿ ಎನಿಸಿದರು.
ಇವುಗಳ ಜತೆಗೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿ, ರಾಜ್ಯದಲ್ಲಿ ಕಾಂಗ್ರೆಸ್ಸಿಗರ ಉಪಟಳ ಪ್ರಶ್ನಿಸುವ ನಿಷ್ಠೂರರಾಗಿ, ಭೇಟಿ ಬಚಾವೋ ಆಂದೋಲನದ ಭಾಗವಾದ ಸೆಲ್ಫೀ ವಿತ್ ಡಾಟರ್ ಅಭಿಯಾನಕ್ಕೆ ತಮ್ಮ ಮಗಳ ಜತೆ ಸೆಲ್ಫೀ ತೆಗೆಸಿಕೊಂಡು ಜಾಗೃತಿ ಮೂಡಿಸುವವರಾಗಿ, ನಳೀನ್ ಕುಮಾರ್ ಕಟೀಲ್ ಅವರಂತಹ ದೇಶದ ನಂಬರ್ ಒನ್ ಸಂಸದರ ಸಖ್ಯವನ್ನೂ ಗಳಿಸಿ ಉತ್ತಮ ಆಡಳಿತ ನೀಡಿದ್ದಾರೆ.
ಈ ಎಲ್ಲ ಅಂಶಗಳನ್ನು ಗಮನಿಸಿಯೇ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಾಪ್ ಸಿಂಹರನ್ನು ಮುಕ್ತ ಕಂಠದಿಂದ ಹೊಗಳಿದ್ದಾರೆ. ಒಬ್ಬ ಯುವ ಸಂಸದ, ಅನುಭವವಿಲ್ಲದೆ ರಾಜಕಾರಣಕ್ಕೆ ಬಂದು ಮೂರು ಮುಕ್ಕಾಲು ವರ್ಷದಲ್ಲಿ ಇಷ್ಟೊಂದು ಸಾಧನೆ ಮಾಡುವುದು ಎಂದರೆ ಸುಮ್ಮನೇ ಅಲ್ಲ. ಇದೆಲ್ಲದರ ಜತೆಗೆ ಕೈಯನ್ನೂ ಶುದ್ಧವಾಗಿಟ್ಟುಕೊಂಡಿರುವ ಸಿಂಹ, ಸಂಸದರಾಗಿಯೂ ಇಂದಿಗೂ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಈಗ ಹೇಳಿ ಮೋದಿ ಹೊಗಳಿದುದರಲ್ಲಿ ಯಾವುದಾದರೂ ಅತಿಶಯೋಕ್ತಿ ಇದೆಯೇ?
Leave A Reply