ಮಹಿಳಾ ತಾಕತ್ತು ತೋರಿದ ಅವನಿ ಚತುರ್ವೇದಿ, ಏಕಾಂಗಿಯಾಗಿ ಯುದ್ಧ ವಿಮಾನ ಹಾರಾಟ ಮಾಡಿ ಇತಿಹಾಸ ಸೃಷ್ಟಿ
ಅಹಮದಾಬಾದ್: ಭಾರತ ಮಹಿಳೆಯರ ತಾಕತ್ತು ಇದೀಗ ಬಾನಂಗಳದಲ್ಲಿ ಪ್ರದರ್ಶಿತವಾಗುತ್ತಿದ್ದು, ಭಾರತದ ಸೈನ್ಯದಲ್ಲಿರುವ ಮಹಿಳೆಯೊಬ್ಬರು ಮಿಗ್ 21 ಬಿಸನ್ ಯುದ್ಧ ವಿಮಾನವನ್ನು ಏಕಾಂಗಿಯಾಗಿ ಹಾರಾಟ ಮಾಡುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ವಿಶ್ವದಲ್ಲೇ ತನ್ನ ಸೈನಿಕ ಬಲದ ಮೂಲಕ ಗಮನ ಸೆಳೆದಿರುವ ಭಾರತೀಯ ಸೇನೆ ಇದೀಗ ಹೊಸ ಇತಿಹಾಸ ಸೃಷ್ಟಿಸಿದೆ. ಮೊದಲ ಬಾರಿಗೆ ಏಕಾಂಗಿಯಾಗಿ ಮಹಿಳಾ ಪೈಲಟ್‌ವೊಬ್ಬರು ಯುದ್ಧ ವಿಮಾನ ಹಾರಾಟ ನಡೆಸುವ ಮೂಲಕ ಐತಿಹಾಸಿಕ ಘಟನೆ ನಿರ್ಮಾಣ ಮಾಡಿದ್ದಾರೆ.
ಅವನಿ ಚತುರ್ವೇದಿ ಯುದ್ಧ ವಿಮಾನವನ್ನು ಏಕಾಂಗಿಯಾಗಿ ಹಾರಾಟ ನಡೆಸಿದ ಭಾರತೀಯ ಸೇನೆಯ ಮಹಿಳಾ ಪೈಲಟ್ ಅಧಿಕಾರಿ. ಗುಜರಾತ್‌ನ ಜಮ್‌ನಗರ್‌ನಲ್ಲಿ ಸೋಮವಾರ ಅವನಿ ಚತುರ್ವೇದಿ ಒಬ್ಬರೇ ಮಿಗ್-21 ಬಿಸನ್ ಯುದ್ಧ ವಿಮಾನ ಹಾರಾಟ ನಡೆಸಿದ್ದಾರೆ. ಭಾರತೀಯ ವಾಯುಪಡೆ ಹಾಗೂ ಭಾರತಕ್ಕೆ ಇದೊಂದು ಅನನ್ಯ ಸಾಧನೆ ಎಂದು ವಾಯುಪಡೆಯ ಕಮಾಂಡರ್ ಪ್ರಶಾಂತ್ ದೀಕ್ಷಿತ್ ತಿಳಿಸಿದ್ದಾರೆ.
ಮಿಗ್-21 ಬಿಸನ್ ಯುದ್ಧ ವಿಮಾನ ಹಾರಾಟ ನಡೆಸಿ ಅವನಿ ಚತುರ್ವೇದಿ ಭಾರತೀಯ ಸೈನ್ಯದ ಇತಿಹಾಸದಲ್ಲಿ ಹೊಸ ಭಾಷ್ಯ ಬರೆದಿದ್ದಾರೆ. ಮಿಗ್-21 ಬಿಸನ್ ಯುದ್ಧ ವಿಮಾನ ವಿಶ್ವದಲ್ಲೇ ಅತ್ಯಧಿಕ (ಪ್ರತಿ ಗಂಟೆಗೆ 340 ಕಿ.ಮೀ.) ಲ್ಯಾಂಡಿಂಗ್ ಹಾಗೂ ಟೇಕ್‌ಆಫ್ ವೇಗ ಹೊಂದಿದೆ ಎಂದು ಪ್ರಶಾಂತ್ ದೀಕ್ಷಿತ್ ತಿಳಿಸಿದ್ದಾರೆ.
2016ರ ಜೂನ್ 8ರಂದು ಅವನಿ ಚತುರ್ವೇದಿ, ಮೋಹನಾ ಸಿಂಗ್ ಹಾಗೂ ಭಾವನಾಕಾಂತ್ ಅವರನ್ನು ಭಾರತದ ಯುದ್ಧ ವಿಮಾನದ ಮೊದಲ ಮಹಿಳಾ ಪೈಲಟ್‌ಗಳೆಂದು ಘೋಷಿಸಲಾಗಿತ್ತು.
ಅವಾನಿ ಚತುರ್ವೇದಿ, ಮೋಹನಾ ಸಿಂಗ್ ಹಾಗೂ ಭಾವನಾಕಾಂತ್ ಅವರ ತರಬೇತಿ ಜನವರಿಯಲ್ಲಿ ಪೂರ್ಣಗೊಂಡಿದೆ. ಶೀಘ್ರವೇ ಮೋಹನಾ ಸಿಂಗ್ ಹಾಗೂ ಭಾವನಾಕಾಂತ್ ಕೂಡ ಯುದ್ಧ ವಿಮಾನದ ಹಾರಾಟ ನಡೆಸಲಿದ್ದಾರೆ. ಅವನಿ ಚತುರ್ವೇದಿ ಮಧ್ಯಪ್ರದೇಶದ ರೇವಾ ಜಿಲ್ಲೆಯವರಾಗಿದ್ದಾರೆ.
Leave A Reply