ಬದಲಾಗಲಿದೆ ಗ್ರಾಮೀಣರ ಬದುಕು, ಕೇಂದ್ರ ಸರ್ಕಾರದಿಂದ ಮತ್ತೊಂದು ಜನೋಪಯೋಗಿ ಯೋಜನೆ
ದೆಹಲಿ: ದೇಶದಲ್ಲಿ ಗೋಮುಖ ವ್ಯಾಘ್ರಗಳಿಗೆ ಬಲಿಯಾಗುತ್ತಿರುವ ಮತ್ತು ಸಂಕಷ್ಟದಲ್ಲಿರುವ ಗೋ ತಳಿಗಳ ರಕ್ಷಣೆಯ ಜತೆಗೆ ಗೋ ಕೃಷಿಗೆ ಒತ್ತು ನೀಡುವುದು, ದೇಶದ ರೈತರ ಆದಾಯಕ್ಕೂ ತಕ್ಕ ಮಟ್ಟಿನ ಪ್ರೋತ್ಸಾಹ ನೀಡುವುದಕ್ಕೆ ಕೇಂದ್ರ ಸರ್ಕಾರ ನೂತನ ಯೋಜನೆಯನ್ನು ಜಾರಿಗೆ ತರಲು ಚಿಂತನೆ ನಡೆಸಿದೆ. ಪಶುಗಳ ಸಗಣಿ ಬಳಸಿ ಇಂಧನ ಉತ್ಪಾದಿಸುವ ‘ಗೋಬರ್-ಧನ್’ ಯೋಜನೆ ಜಾರಿಗೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಕೇಂದ್ರ ಕುಡಿಯುವ ನೀರು ಹಾಗೂ ನೈರ್ಮಲ್ಯ ಸಚಿವಾಲಯದಿಂದ ಈ ಯೋಜನೆ ಏಪ್ರಿಲ್‌ನಿಂದ ಜಾರಿಗೊಳಿಸಲಾಗುವುದು ಎನ್ನಲಾಗುತ್ತಿದೆ. ಈ ಯೋಜನೆಯ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯನ್ನು ಗ್ರಾಮೀಣ ಭಾಗದಲ್ಲಿ ಚುರುಕುಗೊಳಿಸುವ ಮತ್ತು ಇಂಧನ ಉತ್ಪಾದನೆ ಮತ್ತು ರೈತರಿಗೆ ಸೂಕ್ತ ಲಾಭ ದೊರಕಿಸುವ ಉದ್ದೇಶ ಕೇಂದ್ರ ಸರ್ಕಾರದ್ದು.
350 ಜಿಲ್ಲೆಯಲ್ಲಿ ಪ್ರಥಮ ಹಂತದಲ್ಲಿ ಆರಂಭ
350 ಜಿಲ್ಲೆಗಳಲ್ಲಿ ಮೊದಲ ಹಂತದಲ್ಲಿ ಯೋಜನೆ ಆರಂಭಿಸುವ ಗುರಿ ಯೋಜಿಸಲಾಗಿದೆ. ದೇಶದಲ್ಲಿ ಸುಮಾರು 30 ಕೋಟಿ ಪಶುಗಳ ಸಂಖ್ಯೆ ಇದ್ದು, ನಿತ್ಯ 30 ಲಕ್ಷ ಟನ್ ಸಗಣಿ ಸೃಷ್ಟಿಯಾಗುವ ಅಂದಾಜಿದೆ. ಸಗಣಿಯನ್ನು ಬಳಸಿ ಜೈವಿಕ ಅನಿಲ ಹಾಗೂ ಜೈವಿಕ ಸಿಎನ್‌ಜಿ ಉತ್ಪಾದಿಸುವುದು ಮತ್ತು ಅದನ್ನು ಇ-ಕಾಮರ್ಸ್ ವೇದಿಕೆ ಮೂಲಕ ಆನ್‌ಲೈನ್‌ನಲ್ಲೇ ಮಾರಾಟ ಮಾಡಲು ಈ ಯೋಜನೆ ಮೂಲಕ ಅನುಕೂಲ ಕಲ್ಪಿಸಲಾಗಿದೆ.
ಆನ್ ಲೈನ್ ಮೂಲಕ ಇಂಧನ ಮಾರಾಟಕ್ಕೆ ಕೇಂದ್ರದ ನೆರವು
ಸಾರ್ವಜನಿಕ ಸ್ವಾಮ್ಯದ ತೈಲ ಕಂಪನಿಯೊಂದು ಜೈವಿಕ ಅನಿಲ ಖರೀದಿಗೂ ಮುಂದೆ ಬಂದಿದೆ ಎನ್ನಲಾಗುತ್ತಿದೆ. ಗ್ರಾಮ ಪಂಚಾಯ್ತಿಯು ಯೋಜನೆಯ ಕೇಂದ್ರವಾಗಲಿದೆ. ಗ್ರಾಮೀಣರು ಬಯೋ ಗ್ಯಾಸ್ ಮತ್ತು ಬಯೋ ಸಿಎನ್‌ಜಿ ಘಟಕಗಳನ್ನು ಸ್ಥಾಪಿಸಬಹುದು. ಘಟಕ ಸ್ಥಾಪನೆ ಸ್ಥಳ, ತಂತ್ರಜ್ಞಾನದು ಕುರಿತು ಶೀಘ್ರದಲ್ಲಿ ನಿರ್ಧಾರ ಪ್ರಕಟವಾಗಬೇಕಿದೆ. ಉತ್ಪಾದನೆಯಾದ ಜೈವಿಕ ಅನಿಲವನ್ನು ಆನ್‌ಲೈನ್‌ನಲ್ಲಿ ಕಂಪನಿಗಳನ್ನು ಸಂಪರ್ಕಿಸಿ ಮಾರಾಟ ಮಾಡಲು ಕೇಂದ್ರ ಸರ್ಕಾರವೇ ನೆರವು ನೀಡಲಿದೆ ಎಂದು ಮೂಲಗಳು ತಿಳಿಸಿವೆ.
ಬದಲಾಗಲಿದೆ ಗ್ರಾಮೀಣರ ಜೀವನ ಶೈಲಿ
- ಎರಡು ರೀತಿಯಲ್ಲಿ ಸಗಣಿ ಬಳಕೆ, ಕೃಷಿಗೆ ಕಾಂಪೋಸ್ಟ್ ಗೊಬ್ಬರ ಲಭ್ಯವಾದರೆ, ಇಂಧನವೂ ಉತ್ಪಾದನೆಯಾಗುತ್ತದೆ.
- ಉರುವಲು ಕಟ್ಟಿಗೆ ಬಳಕೆ ಕಡಿಮೆಯಾಗಿ ಸ್ವಚ್ಛ ಮತ್ತು ಸ್ವಸ್ಥ ಭಾರತಕ್ಕೆ ಅನುಕೂಲವಾಗಲಿದೆ.
- ಗ್ರಾಮೀಣ ಭಾರತದ ರೈತರ ಆದಾಯಕ್ಕೆ ತಕ್ಕಮಟ್ಟಿಗೆ ಕೊಡುಗೆ ದೊರೆಯಲಿದೆ.
Leave A Reply