ಉಗ್ರ ಸಂಘಟನೆ ನಿಷೇಧಿಸಿದ್ದೇವೆ ಎಂದ ಪಾಕ್ ಕಳ್ಳಾಟ ಬಯಲು
ಲಾಹೋರ್: ವಿಶ್ವಸಮುದಾಯದ ಒತ್ತಾಯ, ಭಾರತದ ನಿರಂತರ ಬೆದರಿಕೆಗೆ ಬಗ್ಗಿದ ಪಾಕಿಸ್ತಾನ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ನೇತೃತ್ವದ ಭಯೋತ್ಪಾದಕ ಸಂಘಟನೆ ಜಮಾತ್ ಉದ್ ದಾವಾ ನಿಷೇಧಿಸಲಾಗಿದೆ ಎಂದು ಘೋಷಿಸಿತ್ತು. ಆದರೆ ಪಾಕಿಸ್ತಾನ ತನ್ನ ಕಳ್ಳಾಟ ಮುಂದುವರಿಸಿದ್ದು, ನಿಷೇಧಿತ ಉಗ್ರ ಸಂಘಟನೆ ಜಮಾತ್ ಉದ್ ದಾವಾ ಕಚೇರಿಗಳು, ಕಾರ್ಯಚಟುವಟಿಕೆಗಳು ಬಹಿರಂಗವಾಗಿ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ತಿಳಿದುಬಂದಿದೆ. ಈ ಮೂಲಕ ಪಾಕಿಸ್ತಾನದ ಭಯೋತ್ಪಾದಕರನ್ನು ಬೆಂಬಲಿಸುವ ನೀತಿ ಬಹಿರಂಗವಾಗಿದೆ.
ವಿಶ್ವಸಮುದಾಯದ ಒತ್ತಾಯದ ಮೆರೆಗೆ ಭಯೋತ್ಪಾದಕ ಸಂಘಟನೆಗಳಾದ ಜಮಾತ್ ಉದ್ ದಾವಾ ಮತ್ತು ಎಫ್ ಐಎಫ್ ಸಂಘಟನೆಗಳನ್ನು ಇತ್ತೀಚಿಗೆ ಪಾಕಿಸ್ತಾನ ನಿಷೇಧಿಸಲಾಗಿದೆ ಎಂದು ಘೋಷಿಸಿತ್ತು. ಈ ಎರಡು ಉಗ್ರ ಸಂಘಟನೆಗಳ ನೂರಾರು ಆಸ್ಪತ್ರೆಗಳು, ಕಚೇರಿಗಳು, ಸೆಮಿನರಿ ಹಾಲ್ ಗಳು ಮತ್ತು ಆ್ಯಂಬ್ಯುಲೆನ್ಸ್ ಗಳು ಸೇವೆ ಹೆಸರಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದನೆ ಬಿತ್ತುತ್ತಿವೆ. ಇದೀಗ ಪಾಕಿಸ್ತಾನ ಸರ್ಕಾರ ಉಗ್ರ ಸಂಘಟನೆಗಳನ್ನು ನಿಷೇಧಿಸಿದರೂ ಅವರುಗಳ ಸೇವಾ ಕಾರ್ಯಕ್ಕೆ ಅವಕಾಶ ನೀಡುವ ಮೂಲಕ ಭಯೋತ್ಪಾದಕ ಸಂಘಟನೆಗಳಿಗೆ ಪರೋಕ್ಷವಾಗಿ ಸಹಕಾರ ನೀಡುತ್ತಿರುವುದು ವಿಡಿಯೋ, ಚಿತ್ರದ ದಾಖಲೆ ಮೂಲಕ ಸಾಬೀತಾಗಿದೆ.
ಪಾಕಿಸ್ತಾನದ ಭವಾಲ್ಪುರ, ರಾವಲ್ಪಿಂಡಿ, ಲಾಹೋರೆ, ಶೇಖಪುರ್, ಮುಲ್ತಾನ್, ಪೇಶಾವರ, ಹೈದರಾಬಾದ್, ಸುಕ್ಕೂರ್, ಮುಜಾಫರ್ ಬಾದ್ ಸೇರಿ ನಾನಾ ಕಡೆ ನಿಷೇಧಿತ ಭಯೋತ್ಪಾದಕ ಸಂಘಟನೆಗಳಾದ ಜೆಯುಡಿ ಮತ್ತು ಎಫ್ ಐಎಫ್ ಸಂಘಟನೆಗಳ ಕಚೇರಿಗಳು ಸ್ವಾಂತ್ರ್ಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಪಾಕಿಸ್ತಾನದ ಉಗ್ರ ವಿರೋಧಿ ನೀತಿ ಡೋಂಗಿತನದ್ದು ಎಂಬ ಮಾಹಿತಿ ಹೊರಬಿದ್ದಿದೆ.
Leave A Reply