ಲೋಬೊ ಅದೃಷ್ಟವಂತರ ಚೀಟಿ ಎತ್ತಿದ್ದಾರೆ, ಅರ್ಹರು ಬಾಕ್ಸಿನಲ್ಲಿಯೇ ಬಾಕಿಯಾಗಿದ್ದಾರೆ!!
ಒಟ್ಟಿನಲ್ಲಿ ಚುನಾವಣಾ ನೀತಿ ಸಂಹಿತೆ ಪ್ರಾರಂಭವಾಗುವ ಕೆಲವೇ ದಿನಗಳ ಒಳಗೆ ನಾಮಫಲಕ ಅನಾವರಣ ಮಾಡಿ ಶಾಸಕ ಜೆ ಆರ್ ಲೋಬೋ ಅವರು ನಿಟ್ಟುಸಿರುಬಿಟ್ಟಿದ್ದಾರೆ. ತಮ್ಮ ಪ್ರಯತ್ನದ ಫಲವಾಗಿ ಜಿ-ಪ್ಲಸ್ ವಸತಿ ಯೋಜನೆಯೊಂದು ಕನಿಷ್ಟ ನಾಮಫಲಕ ಅನಾವರಣಗೊಳ್ಳುವುದರ ಮಟ್ಟಿಗಾದರೂ ಐದು ವರ್ಷಗಳ ಒಳಗೆ ನಡೆಯಿತಲ್ಲ ಎಂದು ಶಾಸಕರಿಗೆ ಸಮಾಧಾನವಾಗಿರಬಹುದು. ಯೋಗೀಶ್ ಭಟ್ ಕೂಡ ತಾವು ಚುನಾವಣೆಗೆ ಹೋಗುವ ಕೆಲವೇ ದಿನ ಇರುವಾಗ ಇದನ್ನಾದರೂ ಮಾಡಿದ್ರೆ ಬಹುಶ: ಸೋಲುತ್ತಿರಲಿಲ್ಲವೇನೋ. ಆದರೆ ಅವರು ಮಾಡಿಲ್ಲ. ಲೋಬೋ ಮಾಡಿದ್ರು. ಮನೆ ಯಾವಾಗಲಾದರೂ ಮುಂದೆ ಆದರೆ ಅದರಲ್ಲಿ ಕೀ ಸಿಗುವ ಜನ ಅರ್ಹರು ಹೌದೋ ಅಲ್ವೋ, ಆದರೆ ಅದೃಷ್ಟವಂತರು ಎಂದು ಹೇಳಬಲ್ಲೆ. ಯಾಕೆಂದರೆ ಇತ್ತೀಚೆಗೆ ಮಂಗಳೂರಿನ ಟೌನ್ ಹಾಲಿನಲ್ಲಿ ಲಕ್ಕಿಡ್ರಾ ಮಾಡಲಾಗಿತ್ತಲ್ಲ. ಅದೇ ದೊಡ್ಡ ಅಕ್ರಮ ಎನ್ನುವುದು ನನ್ನ ಅನಿಸಿಕೆ. ಅದನ್ನು ವಿವರಿಸುತ್ತೇನೆ, ಕೇಳಿ.
ಕೇಂದ್ರ ಸರಕಾರ ಈ ಆಶ್ರಯ ಅಥವಾ ಬೇರೆ ಬೇರೆ ಹೆಸರಿನಲ್ಲಿ ಸರಕಾರಗಳು ಮನೆ ಕಟ್ಟಿಸಿ ಕೊಡುತ್ತವಲ್ಲ, ಅದಕ್ಕಾಗಿ ಕೆಲವು ನೀತಿ ನಿಯಮಾವಳಿಗಳನ್ನು ಮಾಡಿದೆ. ಯಾರಿಗೆ ಮನೆಯೇ ಇಲ್ಲವೋ ಅವರಿಗೆ ಮೊದಲಿಗೆ ಪ್ರಾಶಸ್ತ್ರ ಕೊಡಬೇಕು ಎನ್ನುವುದು ನಿಯಮ. ಎರಡನೇಯದಾಗಿ ಗುಡಿಸಲಲ್ಲಿ ವಾಸಿಸುವವರಿಗೆ ನಂತರದ ಪ್ರಾಶಸ್ತ್ಯ. ಕೊನೆಯದಾಗಿ ತಾತ್ಕಾಲಿಕ ಶೆಡ್ ನಲ್ಲಿ ವಾಸಿಸುವವರಿಗೆ ಮೂರನೇಯ ಪ್ರಾಶಸ್ತ್ಯ ಕೊಡಬೇಕು ಎನ್ನುವುದು ನಿಯಮ. ಇದೇ ಆಧಾರದ ಮೇಲೆ ಫಲಾನುಭವಿಗಳ ಪಟ್ಟಿಯನ್ನು ತಯಾರಿಸಬೇಕು. ಇದೆಲ್ಲ ಮಾಡಿದ ನಂತರ ಯಾರಿಗೆ ಫಸ್ಟ್ ಸ್ಲಾಟ್ ನಲ್ಲಿ ಕೊಡಬೇಕು ಎನ್ನುವುದು ಗೊತ್ತಾಗುತ್ತದೆ. ಹಾಗೆ ನೀಡಿದ್ದಲ್ಲಿ ಮಾತ್ರ ನಿಜವಾದ ಅರ್ಹರಿಗೆ ಮನೆಗಳನ್ನು ಸರದಿಯ ಪ್ರಕಾರ ಸಿಗುತ್ತದೆ. ಅದೆಲ್ಲ ಬಿಟ್ಟು ನೀವು ಲಕ್ಕಿ ಡ್ರಾ ಮೂಲಕ ಚೀಟಿ ಎತ್ತಿದಾಗ ಏನಾಗುತ್ತದೆ ಎಂದರೆ ಮೂರನೇ ಲೆವೆಲ್ಲಿನಲ್ಲಿ ಸಿಗಬೇಕಾದವರಿಗೆ ಮೊದಲೇ ಸಿಗುತ್ತದೆ. ನಿಜವಾಗಿ ಮೊದಲು ಸಿಗಬೇಕಾದವರಿಗೆ ಇನ್ನೊಂದು ಹತ್ತು ವರ್ಷ ಕಾಯಬೇಕಾಗಬಹುದು. ಇದು ಏನಾಗುತ್ತೆ ಎಂದರೆ ಆಯಾ ಕಾರ್ಪೋರೇಟರ್, ಕಾಂಗ್ರೆಸ್ ಮುಖಂಡರ ಶಿಫಾರಸ್ಸಿನ ಮೇಲೆ ಇದ್ದವರು, ಇಲ್ಲದವರು ಎಲ್ಲಾ ಅರ್ಜಿ ಹಾಕಿದ್ದಾರೆ. ಅರ್ಜಿ ಪಡೆದುಕೊಂಡವರು ಅದನ್ನು ಕ್ರಾಸ್ ವೆರಿಫಿಕೇಶನ್ ಮಾಡಿ ಯಾರು ನಿಜವಾದ ಅರ್ಹರು ಎಂದು ಪರಿಗಣಿಸಬೇಕು. ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆ ಆದ ಕಾರಣ ಅರ್ಹರಿಗೆ ಮಾತ್ರ ಕೊಡಬೇಕು.
ಕ್ರಾಸ್ ವೆರಿಫಿಕೇಶನ್ ಮಾಡಲು ಪುರುಸೊತ್ತು ಎಲ್ಲಿದೆ…
ಆದರೆ ಇಲ್ಲಿ ಏನಾಯಿತು ಎಂದರೆ ಕಳೆದ 14 ವರ್ಷಗಳಿಂದ ವಸತಿ ಯೋಜನೆ ಆಗದೇ ಇದ್ದ ಕಾರಣ ಇನ್ನು ಕೂಡ ತಾವು ಮಾಡದೇ ಇದ್ದಲ್ಲಿ ಜನರು ಅಸಮಾಧಾನಗೊಂಡರೆ ಏನು ಕಥೆ ಎಂದು ಲೋಬೋ ಹೆದರಿದ್ದಾರೆ. ಮೂರು ತಿಂಗಳೊಳಗೆ ಇದನ್ನು ಮಾಡಿ ಮುಗಿಸಿ ಹೋದರೆ ತಾವು ಸೇಫ್ ಎಂದು ಲೋಬೋ ಅವರು ಲೆಕ್ಕ ಹಾಕಿದ್ದಾರೆ. ಆದ್ದರಿಂದ ಅರ್ಜಿ ಹಾಕಿದವರಿಗೆ ನಿಜವಾಗಿಯೂ ಮನೆಯ ಅಗತ್ಯ ಇದೆಯಾ, ಅವರು ಗುಡಿಸಲಲ್ಲಿ ವಾಸ ಮಾಡುತ್ತಿದ್ದಾರಾ ಅಥವಾ ಶೆಡ್ ನಲ್ಲಿ ಇದ್ದಾರಾ ಅವರಿಗೆ ಜನರ ತೆರಿಗೆಯ ಹಣದಿಂದ ಮಾಡಿಕೊಡುವ ಈ ಮನೆಗಳಿಂದ ನಿಜಕ್ಕೂ ನೆಮ್ಮದಿಯ ಬದುಕನ್ನು ಕಟ್ಟಿಕೊಟ್ಟಂತೆ ಆಗುತ್ತದೆಯಾ ಎಂದು ಯೋಚಿಸಲು ಶಾಸಕರಿಗೆ ಪುರುಸೊತ್ತು ಇರಲೇ ಇಲ್ಲ. ಅದೆಲ್ಲ ಮಾಡಿ ಕುಳಿತರೆ ಚುನಾವಣೆ ಬಂದು ಹೋಗಿ ನಾನು ಅಲ್ಲಿಯೇ ಬಾಕಿಯಾಗಬಹುದು ಎಂದು ಅಂದುಕೊಂಡ ಲೋಬೋ ಅವರು ಒಂದು ದೊಡ್ಡ ಪೆಟ್ಟಿಗೆಯಲ್ಲಿ ಇದ್ದಬದ್ದವರದ್ದೆಲ್ಲ ಚೀಟಿ ಹಾಕಿ ಚರುಂಬುರಿಯಂತೆ ಕಲಸಿ 930 ಚೀಟಿ ಎತ್ತಿದ್ದಾರೆ. ಅದರಲ್ಲಿ ಉಳಿದ 3600 ಕ್ಕೂ ಮಿಕ್ಕಿದ ಚೀಟಿಗಳಲ್ಲಿ ಅದೆಷ್ಟೋ ಹೆಚ್ಚು ಅರ್ಹರು ಇದ್ದರೋ ಏನೋ. ಆದರೆ ಏನು ಮಾಡುವುದು. ಶಾಸಕರಿಗೆ ಪುರುಸೊತ್ತು ಇಲ್ಲ, ಅದಕ್ಕೆ ಗಡಿಬಿಡಿಯಲ್ಲಿ ಎಲ್ಲವನ್ನು ಬಾಕ್ಸಿನಲ್ಲಿ ಹಾಕಿ ತೆಗೆದಿದ್ದಾರೆ ಎಂದು ಉಳಿದ ಚೀಟಿಗಳಿಗೆ ಹೇಳುವುದಾದರೂ ಯಾರು? ಇದು ಒಂದು ರೀತಿಯಲ್ಲಿ ನಿಜವಾದ ಅರ್ಹರಿಗೆ ಮಾಡಿದ ಮೋಸ. ಇನ್ನೊಂದು ಎರಡು ವರ್ಷಗಳಲ್ಲಿ ಅಲ್ಲಿ ಫ್ಲಾಟ್ ಆಯಿತು ಎಂದಾದರೆ ಆಗ ಅಲ್ಲಿ ವಾಸಿಸುವ ಸಂಭ್ರಮದಲ್ಲಿ ಹೊರಡುವವರು ತಮಗಿಂತ ಹೆಚ್ಚು ಅರ್ಹರು ಅದೇ ರಸ್ತೆಯಲ್ಲಿ ಬಂದರೆ ಮುಖ ಮುಚ್ಚಿಕೊಳ್ಳುವ ಪರಿಸ್ಥಿತಿ ಬರಬಹುದು.
ಪ್ರತಿಭಟನೆಗೆ ಹೋದರೆ ಮನೆ ಇಲ್ಲ..
ಇನ್ನು ಲೋಬೋ ಅವರು ಒಂದು ನೋಟಿಸ್ ತರಹದ್ದು ಪ್ರಿಂಟ್ ಮಾಡಿದ್ದಾರೆ. ಅದರಲ್ಲಿ ತಮ್ಮ ಪ್ರಯತ್ನದ ಫಲವಾಗಿ ಈ ಯೋಜನೆ ಜಾರಿಗೆ ಬರುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಇದು ಯಾರ ಕನಸಿನ ಕೂಸು, ಯಾರು ಇಂತಹ ವಸತಿ ಯೋಜನೆ ಮಾಡೋಣ, ಜಿ3 ಫ್ಲಾಟ್ ತರಹದ್ದು ಕಟ್ಟೋಣ ಎಂದು ಪ್ಲಾನ್ ಹಾಕಿದ್ದರು. ಅದರ ನಂತರ ಅವರು ಸೋತ ಕಾರಣ ಇದು ಹೇಗೆ ನಿಂತು ಹೋಯಿತು ಎಂದು ಹಿಂದೆನೆ ಹೇಳಿದ್ದೇನೆ. ಅದನ್ನು ಮತ್ತೆ ಹೇಳುವ ಅಗತ್ಯ ಇಲ್ಲ. ಲೋಬೋ ಅವರು ಯಾರೋ ಕಹಾಕದ ತಳಹದಿ ಮೇಲೆ ಇನ್ನು ಕೂಡ ಕಟ್ಟಡ ಬಿಲ್ಡಿಂಗ್ ಬಗ್ಗೆ ಕನಸು ಹಂಚುತ್ತಿದ್ದಾರೆ, ಅಷ್ಟೇ. ಇಲ್ಲಿಗೆ ಫ್ಲಾಟ್ ಆಯಿತು ಎಂದು ಸಂಭ್ರಮಿಸುವ ಕನಸು ಕಾಣುವವರು ಒಂದು ವಿಷಯ ಅರ್ಥ ಮಾಡಿಕೊಳ್ಳಬೇಕು. ಅದೇನೆಂದರೆ ಯಾರಾದರೂ ಫಲಾನುಭವಿಗಳು (ಇನ್ನೂ ಮನೆ ಸಿಕ್ಕಿಲ್ಲ, ಅದು ಬೇರೆ ವಿಷಯ) ಅಪ್ಪಿ ತಪ್ಪಿ ಈ ಯೋಜನೆಯ ವಿರುದ್ಧ ನಡೆಸುವ ಯಾವುದೇ ಪ್ರತಿಭಟನೆಯಲ್ಲಿ ಭಾಗವಹಿಸಿದರೆ ಅವರಿಗೆ ತಾತ್ಕಾಲಿಕವಾಗಿ ಕೊಟ್ಟಿರುವ ಮಂಜೂರಾತಿಯ ಬಗ್ಗೆ ಚಿಂತಿಸಬೇಕಾಗುತ್ತದೆ ಎಂದು ಕೂಡ ಹೇಳಲಾಗಿದೆ. ಇದನ್ನು ಆ ನೋಟಿಸಿನಲ್ಲಿ ಪ್ರಿಂಟ್ ಮಾಡಲಾಗಿದೆ. ಒಂದು ರೀತಿಯಲ್ಲಿ ಪರೋಕ್ಷ ದಮ್ಕಿ!
Leave A Reply