ಭಾರತ್ ಮಾತಾಕೀ ಜೈ ಎನ್ನದವರು ಪಾಕಿಸ್ತಾನಿಯರಲ್ಲದೆ ಮತ್ಯಾರು?
ಕರುಳ ಬಳ್ಳಿ ಕತ್ತರಿಸಿಕೊಂಡರೂ ಒಂದು ಮಗು ತಾಯಿಯೊಂದಿಗೆ ಸಂಬಂಧ ಉಳಿಸಿಕೊಳ್ಳುತ್ತದೆ. ತಾನು ಹೆತ್ತ ಮಗುವನ್ನು ತಾಯಿಯೂ ಚೆನ್ನಾಗಿ ನೋಡಿಕೊಳ್ಳುತ್ತಾಳೆ. ಮೊದಲಿಗೆ ಪ್ರತಿಯೊಂದಕ್ಕೂ ತಾಯಿಯನ್ನೇ ಆಶ್ರಯಿಸುವ ಮಗು ಬರಬರುತ್ತ ನಡೆಯಲು, ಊಟ ಮಾಡಲು, ತಿರುಗಾಡಲು ಕಲಿಯುತ್ತದೆ.
ಮುಂದೊಂದು ದಿನ ತನ್ನ ಕಾಲ ಮೇಲೆ ತಾನು ನಿಂತು, ಹೆಸರು, ಹಣ, ಖ್ಯಾತಿ ಗಳಿಸಿದರೂ ಆತ ತನ್ನ ತಾಯಿಯನ್ನು ನೆನೆಯುತ್ತಾನೆ. ಸ್ಮರಿಸುತ್ತಾನೆ, ವಂದಿಸುತ್ತಾನೆ. ಏಕೆಂದರೆ ತಾಯಿ ಪ್ರೀತಿಯ ಋಣ ಆತನನ್ನು ಕಾಡುತ್ತದೆ.
ಅದೇ ರೀತಿ, ನಾವು ನಮ್ಮ ದೇಶವನ್ನು ಭಾರತ ಮಾತೆ, ಅಂದರೆ ತಾಯಿಗೆ ಹೋಲಿಸುತ್ತೇವೆ. ಅದಕ್ಕಾಗಿಯೇ ಭಾರತ್ ಮಾತಾ ಕೀ ಜೈ ಎನ್ನುತ್ತೇವೆ. ವಂದೇ ಮಾತಾರಂ ಎಂದ ಸಹ ಭಾರತ ಮಾತೆಯೇ ನಿನಗಿದೋ ವಂದನೆ ಎನ್ನುತ್ತೇವೆ.
ಈಗ ಇದೇ ಹೋಲಿಕೆಯನ್ನು ಮಗುವಿಗೆ ಹೋಲಿಸೋಣ. ಒಬ್ಬ ಮಗ ತಾಯಿಯ ಎದೆಹಾಲು ಕುಡಿದು, ಕೈ ತುತ್ತು ತಿಂದು, ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳದಿದ್ದರೆ, ಇಳಿ ವಯಸ್ಸಿನಲ್ಲಿ ಚೆನ್ನಾಗಿ ನೋಡಿಕೊಳ್ಳದಿದ್ದರೆ ನಾವೇ ಕ್ಯಾಕರಿಸಿ ಉಗಿಯುತ್ತೇವೆ. ನೀನ್ಯಾವ ಸೀಮೆಯ ಮಗನೋ, ಆಕೆಯ ಹೊಟ್ಟೆಯಲ್ಲಿ ಹುಟ್ಟದಿದ್ದರೇನೇ ಚೆನ್ನಾಗಿರುತ್ತಿತ್ತಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತೇವೆ.
ಇದೇ ಅರ್ಥದಲ್ಲಿಯೇ ಉತ್ತರ ಪ್ರದೇಶ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಅವರು, “ಭಾರತ್ ಮಾತಾ ಕೀ ಜೈ ಎನ್ನದವರು ಪಾಕಿಸ್ತಾನಿಯರು” ಎಂದು ಹೇಳಿದ್ದು.
ಆದರೆ ಇದನ್ನೇ ವಿವಾದವನ್ನಾಗಿ ಮಾಡಲಾಯಿತು. ಭಾರತ ಜಾತ್ಯಾತೀತ ರಾಷ್ಟ್ರ ಎಂಬ ಹೆಸರು ಕಳಚಿ, ಹಿಂದೂಗಳ ರಾಷ್ಟ್ರವನ್ನಾಗಿ ಮಾಡಲಾಗುತ್ತಿದೆ. ಹಿಂದೂಯೇತರರನ್ನು ಬಿಜೆಪಿ ಪಾಕಿಸ್ತಾನಕ್ಕೆ ಕಳುಹಿಸಲು ಹೊಂಚು ಹಾಕುತ್ತಿದೆ, ಹೇಳಿಕೆ ವಿವಾದದಿಂದ ಕೂಡಿದೆ…
ಹೀಗೆ ಸುರೇಂದ್ರ ಸಿಂಗ್ ವಿರುದ್ಧ ಹಲವು ಟೀಕೆಗಳು, ಆರೋಪಗಳನ್ನು ಮಾಡಲಾಯಿತು. ಆದರೆ ಸುರೇಂದ್ರ ಸಿಂಗ್ ಹೇಳಿದುದರಲ್ಲಿ ಯಾವ ತಪ್ಪಿದೆ? ಭಾರತದಲ್ಲಿ ಹುಟ್ಟಿ, ಇಲ್ಲಿಯ ಅನ್ನ ತಿಂದು, ನಮ್ಮ ಸರ್ಕಾರದ ಸೌಲಭ್ಯ ಪಡೆದು, ಕೊನೆಗೆ ಇದೇ ಮಣ್ಣಲ್ಲಿ ಮಣ್ಣಾಗಿ ಹೋಗುವವರು ಭಾರತ್ ಮಾತಾ ಕೀ ಜೈ ಎನ್ನುವುದರಲ್ಲಿ ಯಾವ ತಪ್ಪಿದೆ?
ಭಾರತ್ ಮಾತಾ ಕೀ ಜೈ ಎನ್ನುವುದೇ ತಪ್ಪು ಎಂದಾದರೆ, ನಾನು ಭಾರತ್ ಮಾತಾ ಕೀ ಜೈ ಎನ್ನುವುದಿಲ್ಲ ಎನ್ನುವ ಮನಸ್ಸುಗಳಿದ್ದರೆ, ಅವರು ಶತ್ರುರಾಷ್ಟ್ರ ಪಾಕಿಸ್ತಾನಿಯರು ಎಂದು ಹೋಲಿಸುವುದರಲ್ಲಿ ಯಾವ ತಪ್ಪಿದೆ? ಹೆತ್ತ ತಾಯಿಯನ್ನು ನಮಿಸದವನು ಅವನ್ಯಾವ ಮಗ? ಹುಟ್ಟಿದ ನಾಡಿಗೆ ಜೈ ಎನ್ನದವನು ಅವನ್ಯಾವ ಸೀಮೆ ನಾಗರಿಕ? ಯೋಚಿಸಿ.
Leave A Reply