ಶಾಸಕರ ಸಾಧನೆ ಎಂದರೆ ಆಶ್ರಯ ಮನೆಗಳ ಕನಸು ಹಂಚಿದ್ದು ಮಾತ್ರ!!
ಪುರಭವನದಲ್ಲಿ ಆಶ್ರಯ ಮನೆಗಳ ಫಲಾನುಭವಿಗಳನ್ನು ಆಯ್ಕೆ ಮಾಡಲು ಲಕ್ಕಿ ಡ್ರಾ ಮಾಡಿದ್ದು ಅಕ್ರಮವಲ್ಲವಾ ಎಂದು ಶಾಸಕ ಜೆ ಆರ್ ಲೋಬೋ ಅವರನ್ನು ಕೇಳಿನೋಡಿ. 4500 ಅರ್ಜಿಗಳಲ್ಲಿ ಅರ್ಹರನ್ನು ಹುಡುಕುವುದು ಕಷ್ಟ ಎನ್ನುತ್ತಾರೆ. ಅಂದರೆ ತಮಗೆ ಸುಲಭವಾದರೆ ಸಾಕು. ಮನೆ ಯಾರಿಗೆ ಕೊಟ್ಟರೂ ಪರವಾಗಿಲ್ಲ ಎನ್ನುವ ಅರ್ಥವಾ? ಅಷ್ಟಕ್ಕೂ ಇವರು ಅರ್ಹರನ್ನು ಹುಡುಕಲು ಕಷ್ಟಬೇಕಾಗಿರಲಿಲ್ಲ. ಸರಕಾರವೇ ಮಾಡಿರುವ ಮಾನದಂಡಗಳಿವೆ. ಅದನ್ನು ಅನುಸರಿಸಿದರೆ ಸಾಕು. ಆ ಮಾನದಂಡಗಳ ಬಗ್ಗೆ ನನ್ನ ನಿನ್ನೆಯ ಜಾಗೃತ ಅಂಕಣದಲ್ಲಿ ವಿವರಿಸಿದ್ದೇನೆ. ಅದನ್ನು ಓದಿದರೆ ನನ್ನ ಹಿತೈಷಿಗಳಿಗೆ ಮಾನದಂಡಗಳ ಬಗ್ಗೆ ಗೊತ್ತಾಗುತ್ತದೆ. ಇದರ ಮೊದಲು ಕೂಡ ಅಶ್ರಯ ಮನೆ ಯೋಜನೆಯಲ್ಲಿ ಹಿಂದಿನ ಶಾಸಕರುಗಳು ಮನೆ ಕೊಟ್ಟಿದ್ದಾರೆ. ಇದು ಮೊದಲನೇಯದ್ದು ಅಲ್ಲ. ಅಷ್ಟಕ್ಕೂ ಬಾಂದಳದಿಂದ ಚಂದ್ರನನ್ನು ತಂದು ಮಂಗಳೂರಿನಲ್ಲಿ ನೀವು ಇಳಿಸುತ್ತಿಲ್ಲ. ಕಣ್ವಗುಡ್ಡೆ, ಕಾನ, ಜನತಾ ಕಾಲೋನಿ, ಶಕ್ತಿನಗರದಲ್ಲಿ ಮನೆಗಳ ನಿರ್ಮಾಣವಾಗಿದೆ. ಕೇಳಿದರೆ ಶಾಸಕರು ಹೊರಡಿಸಿರುವ ಒಂದು ಕರಪತ್ರದಲ್ಲಿ ತನ್ನ ಸ್ವಪ್ರಯತ್ನದ ಮೂಲಕ ಮನೆಗಳ ನಿರ್ಮಾಣ ಆಗುತ್ತಿದೆ ಎಂದು ಪದೇ ಪದೇ ಒತ್ತಿ ಹೇಳುತ್ತಿದ್ದಾರೆ. ಸ್ವಪ್ರಯತ್ನ ಆದರೆ ಐದು ವರ್ಷ ಯಾಕೆ ಬೇಕಿತ್ತು ಶಾಸಕರೇ. ನಿಮ್ಮದೇ ರಾಜ್ಯ ಸರಕಾರ ಇರುವುದು. ನೀವು 2013 ರಲ್ಲಿಯೇ ಶಾಸಕರಾಗಿರುವುದು. ಅದರ ಮೊದಲು ಇದರ ಸಿದ್ಧತೆಗಳನ್ನು ಯೋಗೀಶ್ ಭಟ್ ಮಾಡಿಟ್ಟಿರುವುದು ನಿಮಗೆ ಗೊತ್ತಿದೆ. ಯಾಕೆಂದರೆ ನೀವು ಇಲ್ಲಿ ಕಮೀಷನರ್ ಆಗಿದ್ದಿರಿ. ಅಷ್ಟಾಗಿ ನೀವು ನಿಮ್ಮ ಪ್ರಯತ್ನ ಎನ್ನುವುದಾದರೆ ಅಲ್ಲಿ ಯಾಕೆ ಭೂಮಿಯನ್ನು ಇನ್ನೂ ಸಮತಟ್ಟು ಮಾಡಿಲ್ಲ. ಯಾಕೆ ಕಂಪೌಂಡ್ ಗೋಡೆ ಕಟ್ಟಿಲ್ಲ. ರಸ್ತೆಯ ಸಂಪರ್ಕ ಇಲ್ಲ ಯಾಕೆ?
ಮೂರು ತಿಂಗಳಲ್ಲಿ ಫ್ಲಾಟ್ ಕೊಟ್ಟು ಮುಗಿಸುತ್ತೇವೆ ಎಂದು ಹೇಳುತ್ತಾ ಬಂದಿದ್ದಿರಿ. ಈಗ ನೋಡಿದರೆ ಎಲ್ಲಿಯೋ ಸಭಾಂಗಣದೊಳಗೆ ಶಿಲಾನ್ಯಾಸದ ಫಲಕವನ್ನು ಅನಾವರಣಗೊಳಿಸುತ್ತಿದ್ದಿರಿ. ಯಾಕೆ ಶಾಸಕರೇ. ನಿಮ್ಮ ಮಾತನ್ನು ನಿಮ್ಮದೇ ಪಕ್ಷವೇ ಅಧಿಕಾರದಲ್ಲಿರುವ ಮಂಗಳೂರು ಮಹಾನಗರ ಪಾಲಿಕೆಯವರು ಕೇಳುವುದಿಲ್ಲವಾ? ನೀವು ಮೂಲಭೂತ ಸೌಕರ್ಯ ಮಾಡಿಕೊಡಿ ಎಂದು ಸಭೆ ಮಾಡಿ ಹೇಳಿದರೂ ಆರು ತಿಂಗಳಿಂದ ಅಲ್ಲಿ ಯಾಕೆ ಏನು ಆಗಿಲ್ಲ. ಒಂದೇ ಪಕ್ಷದ ಸರಕಾರ ಎರಡೂ ಕಡೆ ಇದ್ದಾಗಲೇ ನಿಮ್ಮ ಕೈಯಲ್ಲಿ ಏನೂ ಮಾಡಲು ಆಗಿಲ್ಲ. ಇನ್ನು ಮುಂದಿನ ಬಾರಿ ಕಾಂಗ್ರೆಸ್ ಸರಕಾರ ಬರುವುದು ನೂರಕ್ಕೆ ನೂರು ಸಾಧ್ಯತೆ ಇಲ್ಲದೆ ಇರುವುದರಿಂದ ನಿಮಗೆ ಹೇಳಲು ಮತ್ತೊಂದು ಅವಕಾಶ ಸಿಗುತ್ತದೆ. ನಮ್ಮ ಪಕ್ಷ ಅಧಿಕಾರದಲ್ಲಿ ಇಲ್ವಲ್ವಾ ಎಂದು ನೀವು ಹೇಳಿ ನುಣುಚಿಕೊಳ್ಳಬಹುದು. ಅಂತಹ ಅವಕಾಶ ನಿಮಗೆ ಸಿಗಲಿಕ್ಕಿಲ್ಲ.
ಮನೆ ಸಿಕ್ಕಿದವರು ಗುಲಾಮರಾಗಿರಬೇಕಾ..
ಇನ್ನು ಕಾಂಗ್ರೆಸ್ ಸರಕಾರದ ಯೋಜನೆ ಎನ್ನುವಂತೆ ಇದನ್ನು ಬಿಂಬಿಸುತ್ತಿದ್ದಿರಿ. ಕಾಂಗ್ರೆಸ್ ಗಿಂತ ಹೆಚ್ಚಾಗಿ ನಿಮ್ಮದೇ ಹಣದಲ್ಲಿ ಮಾಡುತ್ತಿರುವ ಯೋಜನೆ ಎನ್ನುವಂತೆ ಹೇಳಿಕೊಳ್ಳುತ್ತಿದ್ದಿರಿ. ಯಾಕೆ ಪ್ರತಿ ಮನೆಗೆ ಕೇಂದ್ರ ಸರಕಾರ ಒಂದು ಲಕ್ಷದ ಎಪ್ಪತ್ತು ಸಾವಿರ ಕೊಡುತ್ತಿಲ್ಲವೇ. ಅದನ್ನು ಯಾಕೆ ಹೇಳುತ್ತಿಲ್ಲ. ಈಗ ಫ್ಲಾಟ್ ಕಟ್ಟಲು ನೀವು ತೋರಿಸಿರುವ ಜಾಗ ಹಿಂದೆ ಬಿಜೆಪಿ ಸರಕಾರ ಇದ್ದಾಗಲೂ ಇತ್ತು. ಈಗ ಕಾಂಗ್ರೆಸ್ ಸರಕಾರ ಇರುವಾಗಲೂ ಇದೆ. ನೀವೆನೂ ಪ್ರಪಂಚದ ಯಾವುದೋ ಮೂಲೆಯಿಂದ ಹೊತ್ತುಕೊಂಡು ಬಂದು ಇಲ್ಲಿ ಇಟ್ಟಿದ್ದಲ್ಲ. ಆದ್ದರಿಂದ ಈ ಭೂಮಿ ನೀವು ಕೊಡುವುದು ಜನರಿಗೆ ಉಪಕಾರ ಅಲ್ಲ ಅಥವಾ ನೀವು ಮನೆ ಕಟ್ಟಿಸಿಕೊಟ್ಟು ಜನರ ಬದುಕನ್ನೇ ಉದ್ಧಾರ ಮಾಡಿದ್ದೀರಿ ಎಂದು ಅಂದುಕೊಳ್ಳುವುದು ಬೇಡಾ. ಹಾಗಿದ್ದ ಮೇಲೆ ಅದು ಜನರ ಜಾಗ. ಅಲ್ಲಿ ಏನು ತಪ್ಪು ನಡೆದರೂ ಅಥವಾ ಅಕ್ರಮ ನಡೆದರೂ ಅದನ್ನು ಪ್ರತಿಭಟಿಸುವ ಹಕ್ಕು ಅಲ್ಲಿನ ಪ್ರತಿಯೊಬ್ಬರಿಗೂ ಇದೆ. ನೀವು ಮನೆ ಕೊಡುತ್ತೀರಿ ಅಂದರೆ ಮನೆ ಪಡೆದುಕೊಳ್ಳಲು ಡ್ರಾನಲ್ಲಿ ಅದೃಷ್ಟಶಾಲಿಗಳಾದ ಜನ ನಿಮ್ಮ ಗುಲಾಮರಾಗಿ ಇರಬೇಕಾಗಿಲ್ಲ.
ಯಾರೂ ಈ ಯೋಜನೆಯ ವಿರುದ್ಧದ ಯಾವುದೇ ಸಭೆ, ಪ್ರತಿಭಟನೆಯಲ್ಲಿ ಭಾಗವಹಿಸಿದರೆ ಅವರಿಗೆ ಮನೆ ಕೊಡಲು ಚಿಂತಿಸಬೇಕಾಗಬಹುದು ಎಂದು ನಿಮ್ಮ ಲೆಟರಿನಲ್ಲಿ ಬರೆದಿದ್ದಿರಿ. ಅದನ್ನು ಇವತ್ತು ಪೋಸ್ಟ್ ಮಾಡಿದ್ದೇನೆ. ಅಂದರೆ ನೀವು ಮನೆ ಕೊಟ್ಟರೆ ಅದು ನಮ್ಮ ಪೂರ್ವ ಜನ್ಮದ ಸುಕೃತ ಎಂದು ನಿಮ್ಮ ಫೋಟೋ ಹಾಕಿ ನಿತ್ಯ ಪೂಜೆ ಮಾಡಬೇಕು ಎಂದು ನಿರೀಕ್ಷೆ ಇಟ್ಟುಕೊಂಡಿದ್ದಿರಾ ಶಾಸಕರೇ.
ಆಶ್ರಯ ಯೋಜನೆ ಕ್ರೆಡಿಟ್ ಬೇಕಾದರೆ ಕುಡ್ಸೆಂಪ್ಪಿದು ಬೇಡ್ವಾ…
ಇನ್ನು ನೀವು ಆಯುಕ್ತರಾಗಿದ್ದಾಗಲೂ 2001 ರಲ್ಲಿ ಸ್ವಪ್ರಯತ್ನದಿಂದ ಮನೆಗಳನ್ನು ಶಕ್ತಿನಗರದಲ್ಲಿ ಕಟ್ಟಿಸಿ ಕೊಟ್ಟಿದ್ದಿರಿ ಎಂದು ಕರಪತ್ರದಲ್ಲಿ ನಮೂದಿಸಿದ್ದೀರಿ. ಅಂದರೆ ಆಗಿನ ಶಾಸಕರು ಏನೂ ಮಾಡಿಲ್ಲ ಎಂದು ಹೇಳಿದ ಹಾಗೆ ಆಯಿತು. ಹಾಗಂತ ಬಿಜೆಪಿ ಶಾಸಕರನ್ನು ನಾನು ಡಿಫೆಂಡ್ ಮಾಡಲು ಹೋಗುವುದಿಲ್ಲ. ಅದನ್ನು ಬಿಜೆಪಿಯ ಸ್ಥಳೀಯ ಮುಖಂಡರು ಮಾಡಲಿ. ಆದರೆ ನನ್ನ ಪ್ರಶ್ನೆ ಇರುವುದು ಮನೆಗಳನ್ನು ಕೊಟ್ಟರೆ ನೀವು ಮಾಡಿದ ಪ್ರಯತ್ನ ಎನ್ನುತ್ತೀರಿ. ಅದೇ ಕುಡ್ಸೆಂಪ್ ನಿಂದ ನಮ್ಮ 318 ಕೋಟಿ ನೀರಿನಲ್ಲಿ ಹೋಮ ಮಾಡಿದ ಹಾಗೆ ಆಯಿತಲ್ಲ. ಆಗ ನೀವೆ ಕುಡ್ಸೆಂಪ್ ನಿರ್ದೇಶಕರಾಗಿದ್ದಿರಲ್ಲ. ಹಾಗಾದರೆ ಆ ಕಳಪೆ ಕಾಮಗಾರಿಯ ಕ್ರೆಡಿಟ್ ನಿಮಗೆ ಬೇಡ್ವಾ?
ಇನ್ನು ಜೆ ಆರ್ ಲೋಬೋ ಅವರೇ ಇಡೀ ಕರಪತ್ರದಲ್ಲಿ ಅದೆಷ್ಟು ಸಲ ನಿಮ್ಮದೇ ಪ್ರಯತ್ನದಿಂದ ಈ ಯೋಜನೆ ಸಾಧ್ಯವಾಗಿರುವುದು ಎಂದು ಕೊಚ್ಚಿಕೊಳ್ಳುತ್ತೀರಿ. ನೀವು ಅನೇಕ ಸುತ್ತಿನ ಸಭೆಗಳನ್ನು ಬೇರೆ ಬೇರೆಯವರ ಜೊತೆ ಮಾಡಿದ್ದೀರಿ ಎಂದು ಹೇಳುತ್ತಿದ್ದಿರಿ. ಆದರೆ ಒಬ್ಬ ಗುತ್ತಿಗೆದಾರನ ಕೈಯಲ್ಲಿ ಭೂಮಿ ಸಮತಟ್ಟು ಮಾಡಿಸಲು ನಿಮಗೆ ಆಗದೇ ಇದ್ದಲ್ಲಿ ಈ ಯೋಜನೆ ಇನ್ನು ಮೂರು ತಿಂಗಳೊಳಗೆ ಆಗುತ್ತೆ ಎನ್ನುವ ಧೈರ್ಯ ನಿಮಗೆ ಹೇಗೆ ಬಂತು? ಬೇರೆಯವರ ಕಿವಿ ಮೇಲೆ ಹೂ ಇಡುವುದಕ್ಕಾದರೂ ಕೈಯಲ್ಲಿ ಹೂ ಇರಬೇಕು. ನೀವು ಈ ಯೋಜನೆಯ ಕ್ರೆಡಿಟ್ ಬೇರೆಯವರು ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳುತ್ತಿದ್ದಿರಿ. ಈ ಯೋಜನೆಯ ಹಿಂದೆ ಬೇರೆ ಸಂಘಟನೆ, ಪಕ್ಷದವರು ಫಲಾನುಭವಿಗಳಿಂದ ಹಣ ವಸೂಲಿ ಮಾಡುತ್ತಿರುವುದು ನಿಮ್ಮ ಗಮನಕ್ಕೆ ಬಂದಿದೆ ಎಂದು ಕರಪತ್ರದಲ್ಲಿ ಬರೆದಿದ್ದಿರಿ. ಆ ಸಂಘಟನೆ, ಪಕ್ಷ ಯಾವುದು ಎಂದು ಬಹಿರಂಗವಾಗಿ ಹೇಳಿ. ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ಕೊಟ್ಟ ಇನ್ನೂರು ಕೋಟಿಯಲ್ಲಿ ಕೆಲಸ ಮಾಡಿದ ನಿಮಗೆ ಈ 60 ಕೋಟಿಯ ಯೋಜನೆ ಮುಗಿಸಲು ಇನ್ನೂ ಸಾಧ್ಯವಾಗದೇ ಇದ್ದ ಮೇಲೆ ಮಂಗಳೂರನ್ನು ಅಭಿವೃದ್ಧಿ ಮಾಡಿದ್ದಿರಿ ಎಂದು ಹೇಗೆ ಹೇಳುತ್ತೀರಿ ಸ್ವಾಮಿ!
Leave A Reply