ತ್ರಿಪುರಾದಲ್ಲಿ ಮೊದಲ ಬಾರಿಗೆ ಅರಳಲಿದೆ ಕಮಲ, ಸಮೀಕ್ಷೆ ಅನ್ವಯ ಬಿಜೆಪಿ ಹಾದಿ ಸರಳ
ಅಗರ್ತಲಾ: ಕರ್ನಾಟಕ ಸೇರಿ ಪ್ರಸಕ್ತ ವರ್ಷದಲ್ಲಿ ನಡೆಯುವ ಎಂಟೂ ವಿಧಾನಸಭೆ ಚುನಾವಣೆಗಳಲ್ಲಿ ಕೇಸರಿ ಧ್ವಜ ಹಾರಿಸುವ ಕನಸು ಕಂಡಿರುವ ಬಿಜೆಪಿ ಕನಸಿಗೆ ಆರಂಭದಲ್ಲೇ ರೆಕ್ಕೆಪುಕ್ಕ ಬಂದಿವೆ.
ಹೌದು, ತ್ರಿಪುರಾದಲ್ಲಿ ಮಂಗಳವಾರ ವಿಧಾನಸಭೆ ಚುನಾವಣೆಯ ಮತದಾನ ಮುಕ್ತಾಯವಾಗಿದ್ದು, ಇದೇ ಮೊದಲ ಬಾರಿಗೆ ತ್ರಿಪುರಾದಲ್ಲಿ ಕೇಸರಿ ಧ್ವಜ ಹಾರಾಡಲಿದೆ ಎಂದು ನ್ಯೂಸ್ ಎಕ್ಸ್ ಸಂಸ್ಥೆ ನಡೆಸಿರುವ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.
ರಾಜ್ಯದಲ್ಲಿ ಐ.ಪಿ.ಎಫ್.ಟಿ. ಪಕ್ಷದೊಂದಿಗೆ ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು, ಈ ಮೈತ್ರಿಕೂಟ ಸುಮಾರು 35 ರಿಂದ 45 ಸ್ಥಾನಗಳನ್ನು ಕಬಳಿಸಿದೆ ಎಂದು ಸಮೀಕ್ಷೆಯಲ್ಲಿ ತಿಳಿದುಬಂದಿದ್ದು, ಇದೇ ಮೊದಲ ಬಾರಿಗೆ ತ್ರಿಪುರಾದಲ್ಲಿ ಬಿಜೆಪಿ ಸರ್ಕಾರ ರಚಿಸುವ ಮೂಲಕ ಇತಿಹಾಸ ನಿರ್ಮಿಸಲಿದೆ ಎಂದೇ ಹೇಳಲಾಗುತ್ತಿದೆ.
ಅತ್ತ ಕಳೆದ 25 ವರ್ಷಗಳಿಂದ ತ್ರಿಪುರಾದಲ್ಲಿ ಸಿಪಿಎಂ ಸರ್ಕಾರ ಅಸ್ತಿತ್ವದಲ್ಲಿದ್ದು, ಸಮೀಕ್ಷೆ ಪ್ರಕಾರ ಸಿಪಿಎಂ ಕೇವಲ 14-23 ಸ್ಥಾನಗಳಲ್ಲಿ ಜಯ ಗಳಿಸಿ ಅದಿಕಾರ ಕಳೆದುಕೊಳ್ಳಲಿದೆ ಎಂದು ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ.
ಅತ್ತ ಆ್ಯಕ್ಸಿಸ್ ಮೈ ಇಂಡಿಯಾ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲೂ ತ್ರಿಪುರಾದಲ್ಲಿ ಕೇಸರಿ ಧ್ವಜ ಹಾರಾಡಲಿದ್ದು, ಒಟ್ಟು 60 ಸ್ಥಾನಗಳಲ್ಲಿ ಬಿಜೆಪಿ ಸುಮಾರು 50 ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳಲಿದೆ ಎಂದು ಸಮೀಕ್ಷೆಯಲ್ಲಿ ತಿಳಿಸಿದೆ.
ಒಟ್ಟಿನಲ್ಲಿ ಪ್ರಸ್ತುತ ದೇಶದ 19 ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದು, ಈ ಬಾರಿ ನಡೆಯುವ ಹಲವು ವಿಧಾನಸಭೆ ಚುನಾವಣೆಗಳಲ್ಲೂ ಬಿಜೆಪಿ ನಿರೀಕ್ಷಿತ ಮುನ್ನಡೆ ಸಾಧಿಸಲಿದೆ ಎಂಬುದಕ್ಕೆ ತ್ರಿಪುರಾ ಚುನಾವಣೋತ್ತರ ಸಮೀಕ್ಷೆ ಕನ್ನಡಿ ಹಿಡಿದಿವೆ.
Leave A Reply