ಕಾಶ್ಮೀರದಲ್ಲಿ ಭಾರತೀಯ ಸೈನಿಕರು ಉಗ್ರರನ್ನು ಹೊಡೆದುರುಳಿಸುವ ಜತೆಗೆ ಐಸಿಸ್ ಅಸ್ತಿತ್ವಕ್ಕೂ ಅವಕಾಶ ಕೊಟ್ಟಿಲ್ಲ!
ದೆಹಲಿ: ಪ್ರಸಕ್ತ ಸಾಲಿನಲ್ಲಿ ಪಾಕಿಸ್ತಾನಿ ಸೈನಿಕರು, ಉಗ್ರರು ಭಾರತದ ಮೇಲೆ ಹಲವು ಬಾರಿ ದಾಳಿ ಮಾಡಿದ್ದಾರೆ. ಪಾಕಿಸ್ತಾನಿ ಸೈನಿಕರೇ 50ಕ್ಕೂ ಅಧಿಕ ಬಾರಿ ಕದನ ವಿರಾಮ ಉಲ್ಲಂಘಿಸಿದೆ ಎಂದು ತಿಳಿದುಬಂದಿದೆ. ಪ್ರತಿ ಬಾರಿ ದಾಳಿ ಮಾಡಿದಾಗಲೂ ಸೈನಿಕರನ್ನೇ ಗುರಿಯಾಗಿಸಿದೆ. ಕೆಲವೊಮ್ಮೆ ಸಾರ್ವಜನಿಕರನ್ನು ಗುರಿಯಾಗಿಸಿ ದಾಳಿ ಮಾಡಿದೆ.
ಇದನ್ನೆಲ್ಲ ಅವಲೋಕಿಸಿದಾಗ, ಕಾಶ್ಮೀರದಲ್ಲಿ ಪದೇಪದೆ ನಡೆಯುತ್ತಿರುವ ದಾಳಿಯನ್ನು ಗಮನಿಸಿದಾಗ, ಜಮ್ಮು-ಕಾಶ್ಮೀರದಲ್ಲಿ ಐಸಿಸ್ ಸಂಘಟನೆ ನೆಲೆಯೂರಿದೆಯಾ? ಐಸಿಎಸ್ ಉಗ್ರರು ಜಮ್ಮು-ಕಾಶ್ಮೀರದ ಕಾಡುಗಳಲ್ಲಿ ಅವಿತಿದ್ದಾರಾ? ಈ ಸಂಘಟನೆ ಕಾಶ್ಮೀರದ ಲಷ್ಕರೆ ತಯ್ಯಬಾ, ಹಿಜ್ಬುಲ್ ಮುಜಾಹಿದ್ದೀನ್ ಜತೆ ಕೈ ಜೋಡಿಸಿದೆಯಾ ಎಂಬ ಕುರಿತು ಅನುಮಾನಗಳು ಮೂಡಿದ್ದವು. ಚರ್ಚೆಗಳು ಶುರುವಾಗಿದ್ದವು.
ಆದರೆ ನಮ್ಮ ಸೈನಿಕರು ಪಾಕಿಸ್ತಾನಿ ಸೈನಿಕರ ಗುಂಡಿಗೆ ಪ್ರತಿ ಗುಂಡು ಹಾರಿಸಿ, ಉಗ್ರರ ದಾಳಿಗೆ ಪ್ರತ್ಯುತ್ತರ ನೀಡಿ, ದಿಟ್ಟ ಹೋರಾಟ ನಡೆಸುವ ಜತೆಗೆ, ಐಸಿಸ್ಸಿನ ಲವಲೇಶವೂ ಜಮ್ಮು-ಕಾಶ್ಮೀರವನ್ನು ಪ್ರವೇಶಿಸಲು ಬಿಟ್ಟಿಲ್ಲ ಎಂಬುದು ಖಚಿತವಾಗಿದೆ. ಆ ಮೂಲಕ ನಮ್ಮ ಯೋಧರು ದಕ್ಷ ಹೋರಾಟದ ಜತೆಗೆ, ಮುನ್ನೆಚ್ಚರಿಕೆಯಿಂದಲೂ ಇದ್ದಾರೆ ಎಂಬುದು ಸಾಬೀತಾಗಿದೆ.
ಹೌದು, ಈ ಕುರಿತು ಕೇಂದ್ರ ಗೃಹ ಸಚಿವಾಲಯವೇ ಸ್ಪಷ್ಟನೆ ನೀಡಿದ್ದು, ಜಮ್ಮು-ಕಾಶ್ಮೀರದಲ್ಲಿ ಐಸಿಎಸ್ ಉಗ್ರ ಸಂಘಟನೆಯ ಯಾವುದೇ ಉಗ್ರರು, ಐಸಿಸ್ ಘಟಕದ ಅಸ್ತಿತ್ವ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಜಮ್ಮು-ಕಾಶ್ಮೀರದಲ್ಲಿ ಫಾರೂಕ್ ಅಹ್ಮದ್ ಯಾಟೂ ಎಂಬುವವರನ್ನು ಉಗ್ರರು ಭಾನುವಾರ ಹತ್ಯೆ ಮಾಡಿದ ಬಳಿಕ, ಕಣಿವೆ ರಾಜ್ಯದಲ್ಲಿ ಐಸಿಸ್ ಸಂಘಟನೆ ನೆಲೆಯೂರಿದೆ ಎಂಬ ಅನುಮಾನ ಬಲವಾದ ಹಿನ್ನೆಲೆಯಲ್ಲಿ ಕೇಂದ್ರ ಗೃಹಸಚಿವಾಲಯ ಮಾಹಿತಿ ಸಂಗ್ರಹಿಸಿದ್ದು, ಐಸಿಎಸ್ ಅಸ್ತಿತ್ವದಲ್ಲಿಲ್ಲ ಎಂದು ಸ್ಪಷ್ಟಪಡಿಸಿದೆ.
Leave A Reply