ಬೋಳಾರ್, ಕಾಪಿಕಾಡ್ ನಲ್ಲಿ ತೆರೆದ ಚರಂಡಿಗಳಿಂದ ಹೆಚ್ಚುತ್ತಿದೆ ಸಮಸ್ಯೆ
ತೆರೆದ ಒಳಚರಂಡಿಯಿಂದಾಗಿ ವಾಸಿಸಲು ಕಷ್ಟವಾಗಿದ್ದು, ಕಾಯಿಲೆಗಳು ಕಾಡುತ್ತಿದ್ದರೂ ಸ್ಥಳೀಯ ಪಾಲಿಕೆ ಸದಸ್ಯರಾಗಲಿ, ಶಾಸಕರಾಗಲಿ ಏನೂ ಗಣನೆಗೆ ತೆಗೆದುಕೊಳ್ಳದೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಬೋಳುರು ಮತ್ತು ಕಾಪಿಕಾಡ್ ವಾರ್ಡಿನ ನಾಗರಿಕರು ದೂರಿದ್ದಾರೆ. ಬೋಳುರಿನ ವಾರ್ಡ್ 27 ಮತ್ತು ದೇರೆಬೈಲ್ ಪಶ್ಚಿಮ ವಾರ್ಡ್ 25 ಮತ್ತು ಅದರಲ್ಲಿ ಬರುವ ಕಾಪಿಕಾಡ್ ವಾರ್ಡಿನಲ್ಲಿ ತೆರೆದ ಚರಂಡಿಯಲ್ಲಿ ತ್ಯಾಜ್ಯದ ನೀರು ಹರಿಯುತ್ತಿದೆ. ಅಕ್ಕಪಕ್ಕದಲ್ಲಿ ಸಾಕಷ್ಟು ವಾಣಿಜ್ಯ ಮಳಿಗೆಗಳಿದ್ದು ಅಲ್ಲಿಂದ ತ್ಯಾಜ್ಯದ ನೀರನ್ನು ನೇರವಾಗಿ ಚರಂಡಿಗೆ ಬಿಡಲಾಗುತ್ತಿದ್ದು ಅದು ಚರಂಡಿಯಲ್ಲಿ ನಿಂತು ಸನಿಹದಲ್ಲಿರುವ ಅನೇಕ ಮನೆಗಳಲ್ಲಿ ವಾಸಿಸುತ್ತಿರುವ ನಾಗರಿಕರಿಗೆ ತೀವ್ರ ಅನಾರೋಗ್ಯಕ್ಕೆ ಕಾರಣವಾಗುತ್ತಿದೆ. ಮ್ಯಾನ್ ಹೋಲ್ ತೋರಿಕೆಗೆ ನಿರ್ಮಾಣವಾಗಿದ್ದು ಅದಕ್ಕೆ ಮನೆಗಳ ಸಂಪರ್ಕವನ್ನು ಕೊಡದೆ ಇರುವುದರಿಂದ ಅವು ಇದ್ದು ವ್ಯರ್ಥವಾಗುತ್ತಿವೆ. ಕಾಪಿಕಾಡ್ ನಲ್ಲಿರುವ ಉಪಮೇಯರ್ ರಜನೀಶ್ ಅವರ ವಾರ್ಡಿನಲ್ಲಿ ಮುಖ್ಯ ರಸ್ತೆಯಲ್ಲಿರುವ ಮ್ಯಾನ್ ಹೋಲ್ ಒಡೆದಿದ್ದು ತ್ಯಾಜ್ಯದ ನೀರು ಕಾರಂಜಿಯಂತೆ ಚಿಮ್ಮುತ್ತಿದೆ. ಇದರಿಂದ ರಸ್ತೆಯಲ್ಲಿ ಚಲಿಸುವ ವಾಹನಗಳಿಂದ ಗಲೀಜು ನೀರು ಪಾದಚಾರಿಗಳ ಮೇಲೆ ಹಾರುತ್ತಿದೆ. ಆ ರಸ್ತೆಯಲ್ಲಿ ಅನೇಕ ಮಕ್ಕಳು ಶಾಲೆಗೆ ನಡೆದುಕೊಂಡು ಹೋಗುತ್ತಿದ್ದು, ಅನೇಕ ಮಕ್ಕಳು ಬಡತನದ ಹಿನ್ನಲೆಯವರಾದ ಕಾರಣ ಕಾಲಿಗೆ ಚಪ್ಪಲಿಯನ್ನು ಕೂಡ ಧರಿಸುತ್ತಿಲ್ಲ. ಜನ ಈ ಬಗ್ಗೆ ಪ್ರತಿಭಟನೆ ಮಾಡಿದರೂ ಏನೂ ಪರಿಹಾರ ಆಗುತ್ತಿಲ್ಲ ಎಂದು ಸ್ಥಳೀಯರು ದೂರುತ್ತಿದ್ದಾರೆ.
ಈ ಬಗ್ಗೆ ಮಾತನಾಡಿದ ಸ್ಥಳೀಯ ನಿವಾಸಿಯೊಬ್ಬರು ನಮ್ಮ ಮನೆಯ ಹೊರಗೆನೆ ಇಂತಹ ಚರಂಡಿ ಇರುವುದರಿಂದ ಮನೆಗೆ ನೆಂಟರು ಕೂಡ ಬರಲು ಹಿಂದೇಟು ಹಾಕುತ್ತಿದ್ದಾರೆ. ಬೆಳಿಗ್ಗೆ ಮತ್ತು ಸಂಜೆಯ ಸಮಯದಲ್ಲಂತೂ ಮನೆಯ ಬಾಗಿಲು ತೆರೆಯುವುದು ಕೂಡ ಆಗದಂತಹ ಸ್ಥಿತಿ ಇದೆ. ಕೇವಲ ಮ್ಯಾನ್ ಹೋಲ್ ಮಾಡಿ ಬಿಟ್ಟರೆ ಸಮಸ್ಯೆ ಪರಿಹಾರವಾಗುವುದಿಲ್ಲ ಎನ್ನುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಮಂಗಳೂರು ನಗರ ದಕ್ಷಿಣ ಬಿಜೆಪಿ ಅಧ್ಯಕ್ಷ ಡಿ ವೇದವ್ಯಾಸ ಕಾಮತ್ ಅವರು ಬೋಳಾರ ಮತ್ತು ದೇರೆಬೈಲ್ ಮಾತ್ರವಲ್ಲದೆ ಇಡೀ ಮಂಗಳೂರಿನಲ್ಲಿ ಕುಡ್ಸೆಂಪ್ ಕಾಮಗಾರಿಯ ಕಳಪೆತನ ಈಗ ಜಗಜಾಹೀರವಾಗಿದೆ. ಇದಕ್ಕೆ ಉತ್ತರಿಸುವುದಷ್ಟು ಬಿಟ್ಟು ಶಾಸಕ ಜೆ ಆರ್ ಲೋಬೋ ಅವರು ಎರಡನೇ ಹಂತದ ಸಾಲ ತೆಗೆದುಕೊಳ್ಳುವುದನ್ನೇ ತಮ್ಮ ಸಾಧನೆಯಂತೆ ಬಿಂಬಿಸುತ್ತಿದ್ದಾರೆ. ಜನ ಅವರಿಗೆ ಶಾಸಕರನ್ನಾಗಿ ಮಾಡಿದ್ದು ಸಮಸ್ಯೆಗಳಿಗೆ ಪರಿಹಾರ ತರಲು ಆದರೆ ಅವರು ಸಾಲ ತಂದು ಕಳಪೆ ಕಾಮಗಾರಿ ಮಾಡಿಸುವುದರಿಂದ ಜನ ಭ್ರಮನಿರಸನಗೊಂದಿದ್ದಾರೆ ಎಂದು ತಿಳಿಸಿದರು.
Leave A Reply