ಈಶಾನ್ಯದಲ್ಲೂ ಮೋದಿ ಮೋದಿ.. ಬಿಜೆಪಿಗೆ ಜನರ ಜೈಕಾರ, ಕೈ ನಾಮಾವಶೇಷ
ತ್ರಿಪುರಾದಲ್ಲಿ ಕಮಲ ಕಮಾಲ್, ಕಮ್ಯುನಿಸ್ಟರಿಗೆ ಆಘಾತ, ಕೈ ಸರ್ವನಾಶ
ಅಗರ್ತಲಾ: 25 ವರ್ಷಗಳಿಂದ ಕೆಂಪು ರಾಜಕೀಯ ಪಕ್ಷದಿಂದ ಆಡಳಿತಕ್ಕೆ ಒಳಗಾಗಿದ್ದರೂ, ಅಭಿವೃದ್ಧಿಯನ್ನು ಕಾಣದೇ ನಿತ್ಯ ಸಂಕಷ್ಟದಲ್ಲಿ ದಿನದೂಡುತ್ತಿದ್ದ ತ್ರಿಪುರಾದ ಜನರು ಇದೀಗ ಹೊಸ ಇತಿಹಾಸವನ್ನು ಸೃಷ್ಟಿಸಿದ್ದಾರೆ. 25 ವರ್ಷಗಳ ಎಡರಂಗದ ರಾಜಕೀಯ ಇತಿಹಾಸಕ್ಕೆ ಕೊನೆ ಹಾಡಿ, ಇದೀಗ ರಾಷ್ಟ್ರದಲ್ಲಿ ಭರವಸೆ ಮೂಡಿಸಿರುವ ಕಮಲ ಪಕ್ಷಕ್ಕೆ ಭರ್ಜರಿ ಗೆಲುವು ಸಾಧಿಸಲು ಬೆಂಬಲ ನೀಡಿದ್ದಾರೆ.
ತ್ರಿಪುರಾದಲ್ಲಿ ಬಿಜೆಪಿ ಸರ್ಕಾರ ರಚಿಸಲು ಬೇಕಾದ ಸ್ಪಷ್ಟ ಬಹುಮತ ಗಳಿಸಿದ್ದು, ಈಶಾನ್ಯದ ರಾಜ್ಯದಲ್ಲಿ ಕೇಸರಿ ಅಲೆಯ ಛಾಪು ಮೂಡಿಸಿದೆ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ಜನರ ವಿಶ್ವಾಸ ದ್ವಿಗುಣವಾಗಿದೆ ಎಂಬುದಕ್ಕೆ ಒಂದೇ ಒಂದು ಕ್ಷೇತ್ರದಲ್ಲೂ ಅಧಿಕಾರದಲ್ಲಿ ಇರದ ಬಿಜೆಪಿ ಇಡೀ ರಾಜ್ಯದ ಜನರ ವಿಶ್ವಾಸ ಪಡೆದುಕೊಂಡು ಅಧಿಕಾರದ ಗದ್ದುಗೆ ಏರುವ ಮಟ್ಟಿಗೆ ಸ್ಥಾನಗಳನ್ನು ಪಡೆಯುವ ಮೂಲಕ ಸಾಬೀತಾಗಿದೆ.
59 ಕ್ಷೇತ್ರಗಳಲ್ಲಿ ಬಿಜೆಪಿ 43 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಸ್ಪಷ್ಟ ಬಹುಮತದತ್ತ ಸಾಗಿದೆ. ಆದರೆ ಆಡಳಿತಾರೂಢ ಸಿಪಿಎಂ ಮೈತ್ರಿಕೂಟಕ್ಕೆ ಭಾರಿ ಮುಖಭಂಗವಾಗಿದ್ದು, ಎಡಪಕ್ಷಗಳ ಒಕ್ಕೂಟ ಕೇವಲ 20 ಸ್ಥಾನದಲ್ಲಿ ಮುನ್ನಡೆ ಸಾಧಿಸಿದ್ದು, ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಹೇಳ ಹೆಸರಿಲ್ಲದ ಸ್ಥಾನಕ್ಕೆ ತಲುಪಿದೆ. 60 ವಿಧಾನ ಸಭಾ ಕ್ಷೇತ್ರಗಳಿರುವ ತ್ರಿಪುರದಲ್ಲಿ 59 ಕ್ಷೇತ್ರಗಳಲ್ಲಿ ಫೆ.18 ರಂದು ಮತದಾನ ನಡೆದಿತ್ತು.
ಕೇರಳದಲ್ಲಿ ಮಾತ್ರ ಎಡರಂಗದ ಸರ್ಕಾರ
ತ್ರಿಪುರಾದಲ್ಲಿ ಸುಮಾರು 25 ವರ್ಷಗಳ ಎಡರಂಗದ ಆಡಳಿತಕ್ಕೆ ಕೊನೆ ಮೊಳೆ ಜನರು ಜಡಿದಿದ್ದು, ಪಶ್ಚಿಮ ಬಂಗಾಳದಲ್ಲಿ ಅಸ್ತಿತ್ವ ಕಳೆದುಕೊಂಡಿದ ಎಡರಂಗದವರು, ಇದೀಗ ಕೇವಲ ಕೇರಳದಲ್ಲಿ ಮಾತ್ರ ಅಧಿಕಾರ ಉಳಿಸಿಕೊಂಡಿದ್ದಾರೆ. ಕೇರಳದಲ್ಲಿ ಬದಲಾವಣೆಯ ಪರ್ವ ಬೀರಿದ್ದು, ಹೊಸ ನಿರೀಕ್ಷೆ ಮೂಡುವ ಸಂಭವವಿದೆ. ಕೇಸರಿ ಪಾಳಯಕ್ಕೆ ದೇಶದಲ್ಲಿ ತನ್ನ ವಿಸ್ತಾರವನ್ನು ಹೆಚ್ಚಿಸಿಕೊಂಡಿದೆ.
Leave A Reply