ಓಲಾ ಕ್ಯಾಬ್ ಓಡಿಸುತ್ತಿದ್ದ ಆತ ಸೈನ್ಯ ಸೇರಿದ ಕತೆಯೇ ನಮಗೆಲ್ಲರಿಗೂ ಮಾದರಿ!
ನಾವು ಹಾಗೇನೆ, ನಮ್ಮ ಮನಸ್ಥಿತಿಯೂ ಒಂದೇನೇ. ನಮಗೆ ಉದ್ಯೋಗಕ್ಕೆ ಸರ್ಕಾರಿ ನೌಕರಿಯೇ ಬೇಕು, ಆದರೆ ಎಂಜಿನಿಯರ್ ಅಥವಾ ಡಾಕ್ಟರ್ ಆಗಬೇಕು. ಐದು, ಆರಂಕಿ ಸಂಬಳ ಬರುತ್ತಿರಬೇಕು ಹಾಗೂ ನಾವು ಎಂಟು ತಾಸು ಕೆಲಸ ಮಾಡಿ ರೆಸ್ಟ್ ತೆಗೆದುಕೊಳ್ಳಬೇಕು. ಆದರೆ ದೇಶಸೇವೆಯ ವಿಷಯ ಬಂದಾಗ ಮಾತ್ರ ಪಕ್ಕದ ಮನೆಯವನೇ ಸೈನ್ಯಕ್ಕೆ ಸೇರಬೇಕು.
ಹೀಗೆ, ಪಕ್ಕದ ಮನೆಯವನೊಬ್ಬ, ಓಲಾ ಕ್ಯಾಬ್ ಓಡಿಸುತ್ತಿದ್ದ ವ್ಯಕ್ತಿಯೊಬ್ಬ ಸೈನ್ಯಕ್ಕೆ ಸೇರಿದ್ದಾನೆ ಎಂಬುದೇ ನಮಗೆ ಮೆಚ್ಚುಗೆಯ ವಿಷಯ. ಹೌದು, ಚೆನ್ನೈನ ಜಿ.ಸಿ. ಓಂ ಪೈಥಾನೆ ಎಂಬಾತನೇ ಓಲಾ ಕ್ಯಾಬ್ ಓಡಿಸುತ್ತ, ಓಡಿಸುತ್ತ, ಈಗ ದೇಶಸೇವೆ ಮಾಡುವ ಅದೃಷ್ಟ ಗಿಟ್ಟಿಸಿಕೊಂಡಾತ.
ನನ್ನ ತಂದೆ ಕಾರು ಚಾಲಕನಾಗಿದ್ದ. ಆದರೆ ಒಂದು ದಿನ ನಡೆದ ರಸ್ತೆ ಅಪಘಾತದಲ್ಲಿ ಎರಡೂ ಕಾಲು ಕಳೆದುಕೊಂಡ. ಆಗ, ಬಿಎಸ್ಸಿ ಕೊನೇ ವರ್ಷದಲ್ಲಿ ಓದುತ್ತಿದ್ದ ನಾನು ಕುಟುಂಬಕ್ಕೆ ನೆರವಾಗಲೇಬೇಕಿತ್ತು. ಹಾಗಾಗಿ ನಾನೂ ಓಲಾ ಕ್ಯಾಬ್ ಡ್ರೈವರ್ ಆದೆ ಎನ್ನುತ್ತಾರೆ ಪೈಥಾನೆ.
ಆದರೆ ಅದೊಂದು ದಿನ ನಿವೃತ್ತ ಕರ್ನಲ್ ಒಬ್ಬರು ನನ್ನ ಕಾರು ಹತ್ತಿದರು. ನನ್ನ ಆಸಕ್ತಿ, ವಿಚಾರ ತಿಳಿದ ಅವರು ನೀನೇಕೆ ಸೇನೆ ಸೇರಬಾರದು ಎಂದರು. ಬಳಿಕ ಅವರೇ ಮಾರ್ಗದರ್ಶನ ನೀಡಿದರು. ಹಾಗಾಗಿ ನಾನು ಸೇನೆ ಸೇರಲು ಅನುಕೂಲವಾಯಿತು ಎಂದು ಸ್ಮರಿಸುತ್ತಾರೆ.
ಪ್ರಸ್ತುತ ಚೆನ್ನೈನ ಆಫೀಸರ್ ಟ್ರೇನಿಂಗ್ ಅಕಾಡೆಮಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಪೈಥಾನೆ, ಸೇನಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ. ಸುಮಾರು 257 ಕೆಡೆಟ್ಸ್ ಗಳಲ್ಲಿ ಈ ಮಾಜಿ ಓಲಾ ಚಾಲಕನೂ ಒಬ್ಬ ಎಂಬುದೇ ಹೆಮ್ಮೆಯ ವಿಷಯವಲ್ಲವೇ!
Leave A Reply