ಡಾ|ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನ ಮಾಡಲು ಹೊರಟಿದೆಯಾ ಪಾಲಿಕೆ!!
ಮಂಗಳೂರು ನಗರದ ಪ್ರಮುಖ ಬೀದಿಗಳಲ್ಲಿ ಇನ್ನು ಫ್ಲೆಕ್ಸ್ ಗಳನ್ನು ಹಾಕಲು ಪೈಪೋಟಿ ನಡೆಯಲಿದೆ. ಇದು ನನ್ನ ಜಾಗ, ಇದು ನಿನ್ನ ಜಾಗ ಅದು ಆ ಸಂಘಟನೆಯ ಜಾಗ ಎಂದು ಅಲಿಖಿತ ನಿಯಮವೊಂದು ಜಾರಿಗೆ ಬರಬಹುದು. ಹಿಂದೆ ಬೇರೆ ಬೇರೆ ಥಿಯೇಟರ್ ಗಳಲ್ಲಿ ಬಿಡುಗಡೆಯಾಗುವ ಸಿನೆಮಾಗಳ ಪೋಸ್ಟರ್ ಗಳು ನಿರ್ದಿಷ್ಟವಾದ ಗೋಡೆಗಳ ಮೇಲೆನೆ ಇರುತ್ತಿದ್ದವು. ಆ ಜಾಗಗಳನ್ನು ನೋಡಿದರೆ ಯಾವ ಥಿಯೇಟರ್ ಎಂದು ನೋಡುವ ಅಗತ್ಯ ಇರಲಿಲ್ಲ. ಆಯಾ ಜಾಗಗಳಲ್ಲಿನ ಪೋಸ್ಟರ್ ಗಳು ಬದಲಾದರೆ ಆ ಥಿಯೇಟರ್ ಗಳಲ್ಲಿ ಸಿನೆಮಾ ಬದಲಾಗಿದೆ ಎಂದು ದೂರದಿಂದಲೇ ಗೊತ್ತಾಗುತ್ತಿತ್ತು. ಇನ್ನು ಬರುವ ದಿನಗಳಲ್ಲಿ ಮಂಗಳೂರಿನ ಗೋಡೆಗಳ ಬದಿ ಕೂಡ ಹಾಗೆ ಆಗಬಹುದು. ಬಿಜೆಪಿಯವರದ್ದು ಹ್ಯಾಮಿಲ್ಟನ್ ಸರ್ಕಲ್ ನ ಎಡಬದಿ, ಕಾಂಗ್ರೆಸ್ಸಿನವರದ್ದು ಬಲಬದಿ, ಜೆಡಿಎಸ್ ನವರದ್ದು ಇನ್ನೊಂದು ಬದಿ ಎಂದು ಒಪ್ಪಂದ ಮಾಡಿ ಫ್ಲೆಕ್ಸ್ ಹಾಕಬೇಕಾಗಬಹುದು. ಅದರೊಂದಿಗೆ ಸುಂದರ ಮಂಗಳೂರು ಎನ್ನುವ ಪರಿಕಲ್ಪನೆಗೆ ಎಳ್ಳು ನೀರು ಬಿಡಬೇಕಾಗಬಹುದು. ಬೇಕಾದರೆ ನಿನ್ನೆ ಪುರಭವನದ ಬಲಭಾಗ ಅಂದರೆ ಕೇಂದ್ರ ಮೈದಾನ ಪ್ರವೇಶಿಸಲು ವಾಹನಗಳು ಹೋಗುವ ರಸ್ತೆಯನ್ನು ನೀವು ಗಮನಿಸಿರಬಹುದು. ಹಳೆ ಕ್ಲಾಕ್ ಟವರ್ಸ್ ನಿಂದ ರಸ್ತೆ ಮುಗಿಯುವ ತನಕ ಈ ಸೀರೆಗೆ ಫಾಲ್ ಎಂದು ಹೊಲೆಯುತ್ತಾರಲ್ಲ, ಹಾಗೆ ಒಂದು ಚೂರು ಜಾಗ ಬಿಡದೆ ರಸ್ತೆಯ ಅಂಚಿನಲ್ಲಿ ಫ್ಲೆಕ್ಸ್ ಗಳದ್ದೇ ಕರಾಮತ್ತು. ಎಲ್ಲ ಫ್ಲೆಕ್ಸ್ ಗಳು ಬೇರೆ ಬೇರೆ ಪಕ್ಷಗಳದ್ದು. ಫ್ಲೆಕ್ಸ್ ಮಾಡುವವರಿಗೆ ಈಗ ಸುವರ್ಣ ಯುಗ. ಹಾಗಾದರೆ ಇವುಗಳಿಗೆ ಕಾನೂನು ಒಪ್ಪಿಗೆ ಇದೆಯಾ?
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಇರುವ ಕಾನೂನುಗಳು ಸರಿಯಾಗಿ ಜಾರಿಗೆ ಬರುವುದಿಲ್ಲ ಎನ್ನುವುದಕ್ಕೆ ನಮ್ಮ ಸುತ್ತಮುತ್ತಲು ನಾಯಿಕೊಡೆಗಳಂತೆ ಎದ್ದೇಳುತ್ತಿರುವ ಫ್ಲೆಕ್ಸ್ ಗಳೇ ಉದಾಹರಣೆ. ನಮ್ಮ ಹಳೆ ಕ್ಲಾರ್ಕ್ ಟವರ್ ನಲ್ಲಿ ನಿಯಮಪ್ರಕಾರ ಯಾವುದೇ ಪ್ಲೆಕ್ಸ್ ಹಾಕುವಂತಿಲ್ಲ. ಆದರೆ ಇಲ್ಲಿ ಪಕ್ಷಾತೀತವಾಗಿ ಎಲ್ಲರೂ ತಮ್ಮ ಫ್ಲೆಕ್ಸ್, ಹೋರ್ಡಿಂಗ್ ನಿಲ್ಲಿಸುತ್ತಾರೆ. ಪಾಲಿಕೆಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಲ್ಲಾ ಪಕ್ಷದ ಸದಸ್ಯರಿದ್ದಾರೆ. ಎಲ್ಲರಿಗೂ ನಿಯಮ ಗೊತ್ತು. ಅದರಲ್ಲಿಯೂ ರಾಜ್ಯ ಸರಕಾರ ನಿಷೇಧಿಸಿರುವ ಉತ್ಪನ್ನಗಳಿಂದ ಫ್ಲೆಕ್ಸ್, ಹೋರ್ಡಿಂಗ್ ಮಾಡಿ ಹಾಕಿಸುವುದು ತಪ್ಪು, ನಿಯಮ ಬಾಹಿರ ಎನ್ನುವುದು ಎಲ್ಲರಿಗೂ ಗೊತ್ತು. ಶಾಸಕ ಜೆ ಆರ್ ಲೋಬೋ ಅವರಂತೂ ಮಂಗಳೂರಿನ ಇದ್ದಬದ್ದ ಹೋರ್ಡಿಂಗ್ಸ್ ಗಳಲ್ಲಿ ಬ್ಯಾನ್ ಮಾಡಿರುವ ಪ್ಲಾಸ್ಟಿಕ್ ಅನ್ನೇ ಬಳಸಿ ಹೋರ್ಡಿಂಗ್ಸ್ ಮಾಡಿಸಿ ಹಾಕಿದ್ದಾರೆ. ಕಾಂಗ್ರೆಸ್ಸಿನವರು ಅದರ ಬಗ್ಗೆ ಧ್ವನಿ ಎತ್ತಲು ಆಗುವುದಿಲ್ಲ. ಅವರು ಬಿಡಿ, ಭಾರತೀಯ ಜನತಾ ಪಾರ್ಟಿಯವರು ಪರಿಷತ್ ಸಭೆಯಲ್ಲಿ ಈ ಬಗ್ಗೆ ಧ್ವನಿ ಎತ್ತಬಹುದಲ್ಲ. ಶಾಸಕರು ಮಾಡುವುದು ಕಾನೂನು ಬಾಹಿರ ಎನ್ನಬಹುದಲ್ಲ. ಯಾಕೆ ಹೇಳಲ್ಲ, ಯಾಕೆಂದರೆ ಇವರದ್ದು ನಾಳೆ ಹೋರ್ಡಿಂಗ್ಸ್ ಹಾಕುವಾಗ ಅವರು ಧ್ವನಿ ಎತ್ತಬಾರದಲ್ಲ, ಅದಕ್ಕೆ.
ಫ್ಲೆಕ್ಸ್ ಹಾಕಿದವರಿಗೆ ದಂಡ ಹಾಕಿ….
ಇನ್ನು ಫ್ಲೆಕ್ಸ್ ಹಾಕುವವರಿಗೆ ಒಂದು ಧೈರ್ಯ ಇದೆ. ಅದೇನೆಂದರೆ ಯಾರೂ ತೆಗೆಯುವುದಕ್ಕೆ ಹೋಗುವುದಿಲ್ಲ. ನಿಯಮ ಪ್ರಕಾರ ನಿಬಂದ್ಧಿತ ಸ್ಥಳಗಳಲ್ಲಿ ಫ್ಲೆಕ್ಸ್, ಹೋರ್ಡಿಂಗ್ಸ್ ಹಾಕಿದರೆ ಅದನ್ನು ಹಾಕಿದವರಿಗೆ ಪಾಲಿಕೆಯ ಆಯುಕ್ತರು ನೋಟಿಸ್ ಜಾರಿ ಮಾಡಬಹುದು. ನಂತರ ದಂಡ ಹಾಕಬಹುದು. ಹಾಗೆ ನೋಟಿಸ್ ಸ್ವೀಕರಿಸಿ, ದಂಡ ಕಟ್ಟಿದವರಿಗೆ ಬುದ್ಧಿ ಬರುತ್ತೋ, ಇಲ್ವೋ ಪಾಲಿಕೆಗೆ ಒಂದಿಷ್ಟು ಆದಾಯ ಬರುತ್ತದೆ. ಈಗ ಹಾಗಲ್ಲ. ಯಾರೋ ತಮ್ಮ ಪ್ರಚಾರಕ್ಕೆ ಫ್ಲೆಕ್ಸ್ ಹಾಕುವುದು ನಂತರ ಯಾವಾಗಲೋ ಹೋಗಿ ಪಾಲಿಕೆಯವರು ತಮ್ಮ ಖರ್ಚಿನಲ್ಲಿ ಅದನ್ನು ತೆಗೆಸುವುದು, ಆ ಗುಜರಿ ಫ್ಲೆಕ್ಸ್ ಗಳನ್ನು ತಂದು ಪಾಲಿಕೆಯ ಹಿಂದೆ ಹಾಕುವುದು. ಅದರ ಫ್ರೇಮ್ ಗಳನ್ನು ಮತ್ತೆ ಫ್ಲೆಕ್ಸ್ ಮಾಡುವವರಿಗೆ ಹಿಂದಿರುಗಿಸುವುದು ನಡೆಯುತ್ತಿರುತ್ತದೆ. ಇಲ್ಲಿ ನಷ್ಟ ಆಗುವುದು ಯಾರಿಗೆ? ಸಾಮಾನ್ಯ ಜನರಿಗೆ.
ಯಾರೋ ತಮ್ಮ ಪ್ರಚಾರಕ್ಕೆ ಹಾಕಿದ ಫ್ಲೆಕ್ಸ್ ಗಳಿಂದ ಅದನ್ನು ತೆಗೆಯುವ ಸಾವಿರಾರು ರೂಪಾಯಿ ಖರ್ಚು ಯಾಕೆ ಪಾಲಿಕೆ ಕೊಡಬೇಕು. ಯಾಕೆ ನಮ್ಮಂತಹ ಜನಸಾಮಾನ್ಯ ಕೊಡಬೇಕು? ಇನ್ನು ಚುನಾವಣೆ ಹತ್ತಿರ ಬರುತ್ತಿದ್ದಂತೆ ಜನರ ಬಹುಕಾಲದ ಬೇಡಿಕೆಯಾಗಿದ್ದ ರಸ್ತೆ ಸೂಚಕ ಅಥವಾ ದಾರಿಯ ಹೆಸರನ್ನು ಸೂಚಿಸಿ ಹಾಕುವ ಮಾರ್ಗಸೂಚಿಗಳನ್ನು ಹಾಕಲು ಪಾಲಿಕೆ ತಯಾರಾಗಿದೆ. ಗುತ್ತಿಗೆ ಪಡೆದುಕೊಂಡ ವ್ಯಕ್ತಿ ಅದನ್ನು ಸಿಕ್ಕಿದ ಕಡೆಗಳಲ್ಲಿ ನಿಲ್ಲಿಸುತ್ತಿದ್ದಾನೆ. ಅವು ಎಲ್ಲಿ ಹಾಕಲಾಗಿದೆ ಎಂದರೆ ಆ ದಾರಿಯಲ್ಲಿ ಹೋಗುವ ವಾಹನಗಳಿಗೆ ಅದರಿಂದ ಅನುಕೂಲವಾಗುತ್ತೋ ಇಲ್ವೋ ಆದರೆ ಆ ದಾರಿಯಲ್ಲಿ ಹೋಗುವ ಪಾದಚಾರಿಗಳಿಗೆ ಕಿರಿಕಿರಿಯಾಗುತ್ತದೆ. ಒಂದಂತೂ ಪೊಲೀಸ್ ಚೌಕಿಗೆ ತಾಗಿ ಹಾಕಿದ ಕಾರಣ ಪೊಲೀಸ್ ಚೌಕಿಯ ಉದ್ದೇಶವೇ ಅರ್ಥಹೀನವಾಗಿದೆ.
ಅಂಬೇಡ್ಕರ್ ವೃತ್ತ ಹೆಸರು ಬದಲಾದದ್ದು ಯಾವಾಗ….
ಇನ್ನು ನೀವು ನಾನು ಹಾಕಿದ ಪೋಸ್ಟ್ ನೋಡಿರಬಹುದು. ಜ್ಯೋತಿ ವೃತ್ತ ಎಂದೇ ಬರೆಯಲಾಗಿದೆ. ಕೆಲವು ತಿಂಗಳ ಹಿಂದೆ ರಸ್ತೆಯೊಂದರ ಹೆಸರು ಹೀಗೆ ಬಾಯಿ ಮಾತಿಗೆ ಯಾವುದೋ ಬರೆದು ನಂತರ ಬದಲಾಯಿಸಲು ಹೋದಾಗ ವಿವಾದವಾಗಿ ಅದು ಇನ್ನೂ ಮುಗಿದಿಲ್ಲ. ಅಷ್ಟಕ್ಕೂ ಜ್ಯೋತಿ ವೃತ್ತ ಎನ್ನುವುದು ಮಂಗಳೂರಿನಲ್ಲಿ ಇಲ್ಲವೇ ಇಲ್ಲ. ಈಗ ಇರುವುದು ಜ್ಯೋತಿ ಥಿಯೇಟರ್ ಎದುರಿನ ಬಿ ಆರ್ ಅಂಬೇಡ್ಕರ್ ವೃತ್ತ. ಅದು ಕಾನೂನು ಪ್ರಕಾರ ಪ್ರಕ್ರಿಯೆ ನಡೆದು ಇಟ್ಟ ಹೆಸರು. ಈಗ ಯಾವುದೋ ಗುತ್ತಿಗೆದಾರ ಅದಕ್ಕೆ ಜ್ಯೋತಿ ವೃತ್ತ ಎಂದು ಹೆಸರಿಟ್ಟು ಭವಿಷ್ಯದಲ್ಲಿ ಯಾರೋ ಬಂದು ಅದಕ್ಕೆ ನಾರಾಯಣ ಗುರು ವೃತ್ತ ಎಂದು ಹೆಸರಿಡೋಣ ಎಂದು ಮನವಿ ಕೊಟ್ಟರೆ ನಂತರ ಅದು ಪಾಸಾದರೆ ಆಗ ಯಾರೋ ಗೊತ್ತಿರುವವರು ಅದು ಹಿಂದೆ ಅಂಬೇಡ್ಕರ್ ವೃತ್ತ ಎಂದು ಕರೆಯಲಾಗಿತ್ತು ಅದನ್ನು ನಾರಾಯಣ ಗುರು ವೃತ್ತ ಎಂದು ಈಗ ನಾಮಕರಣ ಮಾಡುವುದು ಸರಿಯಲ್ಲ ಎಂದು ಆಕ್ಷೇಪ ಎತ್ತಿದರೆ ಇವರು ಮತ್ತೆ ಎರಡು ಸಮುದಾಯದವರ ನಡುವೆ ತಂದು ಇಟ್ಟ ಹಾಗೆ ಆಗಲ್ವಾ? ಈಗ ಆದರೆ ಎಲೋಶಿಯಸ್ ಕಾಲೇಜಿನವರ ಪರವಾಗಿ ಫೈಟ್ ಮಾಡಿ ಸಾವಿರಾರು ಜನರಿಗೆ ಪ್ರಾತ: ಸ್ಮರಣೀಯರಾಗಿರುವ ಮೂಲ್ಕಿ ಸುಂದರರಾಮ ಶೆಟ್ಟಿಯವರ ಹೆಸರು ಇಡದ ಹಾಗೆ ನೋಡಿಕೊಂಡು ಶಾಸಕ ಲೋಬೋ ಅವರು ಬಂಟರಿಗೆ ಅವಮಾನ ಮಾಡಿಯಾಗಿದೆ. ಇನ್ನು ಅಂಬೇಡ್ಕರ್ ಅವರಿಗೂ ಅವಮಾನ ಮಾಡಲು ಪಾಲಿಕೆ ಹೊರಟಿದೆಯಾ? ಹೊಸ ಮೇಯರ್ ಉತ್ತರಿಸಬೇಕು!
Leave A Reply