ಕಮ್ಯುನಿಸ್ಟರ ಆಡಳಿತ ಅಂತ್ಯ, ತ್ರಿಪುರಾ ಸಿಎಂ ಸ್ಥಾನಕ್ಕೇರಿದ ಬಿಜೆಪಿಯ ಬಿಪ್ಲಬ್ ದೇಬ್
ಅಗರ್ತಲಾ: 25 ವರ್ಷದ ಕಮ್ಯುನಿಸ್ಟರ್ ಆಡಳಿತಕ್ಕೆ ಕೊನೆ ಮೊಳೆ ಹೊಡೆದಿರುವ ತ್ರಿಪುರಾದ ಜನ ಬಿಜೆಪಿ ಭರ್ಜರಿ ಅಧಿಕಾರ ನೀಡಿದ್ದು, ಶುಕ್ರವಾರ ತ್ರಿಪುರಾದ ಮುಖ್ಯಮಂತ್ರಿಯಾಗಿ ಬಿಪ್ಲಬ್ ದೇಬ್ ಅಧಿಕಾರ ಸ್ವೀಕರಿಸಿದರು. ಬಿಜೆಪಿಯಿಂದ ತ್ರಿಪುರಾದಲ್ಲಿ ಪ್ರಥಮ ಬಾರಿಗೆ ಅಧಿಕಾರ ಸ್ವೀಕರಿಸುವ ಮೂಲಕ ದೇಬ್ ಇತಿಹಾಸ ಸೃಷ್ಟಿಸಿದ್ದಾರೆ.
48 ಹರೆಯದ ವಯಸ್ಸಿನ ಬಿಪ್ಲಬ್ ದೇಬ್ ಪ್ರಮಾಣ ವಚನ ಸಮಾರಂಭ ಅಗರ್ತಲಾದ ಅಸ್ಸಾಂ ರೈಫಲ್ಸ್ ಮೈದಾನದಲ್ಲಿ ಅದ್ದೂರಿಯಾಗಿ ನೆರವೇರಿತು. ಉಪ ಮುಖ್ಯ ಮಂತ್ರಿಯಾಗಿ ಜಿಷ್ಣು ದೇವ್ ಬರ್ಮನ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜ್ಯಪಾಲ ತಥಾಗಥಾ ರಾಯ್ ಮುಖ್ಯಮಂತ್ರಿಗೆ ಪ್ರಮಾಣ ವಚನ ಬೋಧಿಸಿದರು.
ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ, ತ್ರಿಪುರಾದ ಮಾಜಿ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್, ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಗೃಹ ಸಚಿವ ರಾಜನಾಥ್ ಸಿಂಗ್ ಸೇರಿ ಹಲವು ಬಿಜಪಿ ಮತ್ತು ಪ್ರತಿಪಕ್ಷಗಳ ಮುಖಂಡರು ಭಾಗವಹಿಸಿ, ನೂತನ ಮುಖ್ಯಮಂತ್ರಿ ಮತ್ತು ಸಚಿವರಿಗೆ ಶುಭಕೋರಿದರು.
60 ಸದಸ್ಯ ಬಲದ ತ್ರಿಪುರಾ ವಿಧಾನ ಸಭೆಯಲ್ಲಿ ಬಿಜೆಪಿ 35 ಶಾಸಕರನ್ನು ಹೊಂದಿದ್ದು ಐಪಿಎಫ್‌ಟಿ ಎಂಟು ಸದಸ್ಯರೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರ ನಡೆಸಲು ತೀರ್ಮಾನಿಸಿದೆ. ಕಳೆದ ತಿಂಗಳು ನಡೆದ ಚುನಾವಣೆಯಲ್ಲಿ 25 ವರ್ಷಗಳ ಸಿಪಿಐ(ಎಂ) ಆಡಳಿತಕ್ಕೆ ತ್ರಿಪುರಾದ ಜನರು ಕೊನೆ ಮೊಳೆ ಜಡಿದಿದ್ದರು. ಬಿಜೆಪಿ ಭರ್ಜರಿ ಬಹುಮತ ಸಾಧಿಸಿದರೇ, ಸಿಪಿಐ(ಎಂ) ಅತ್ಯಂತ ಕಡಿಮೆ ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರ ಕಳೆದುಕೊಂಡಿತ್ತು.
Leave A Reply