ತ್ರಿಪುರ ಚುನಾವಣೆಯಲ್ಲಿ ಸೋತ ಬಳಿಕ ಎಚ್ಚೆತ್ತುಕೊಂಡ ಸಿಪಿಎಂ, ಕೊಲೆ ಪ್ರಕರಣದಲ್ಲಿ ನಾಲ್ವರು ಕಾರ್ಯಕರ್ತರ ಅಮಾನತು!

ತಿರುವನಂತಪುರ: ನೈತಿಕವಾಗಿ ಅಧಃಪತನಕ್ಕಿಳಿದ ಪಕ್ಷ ಒಂದೇ ಒಂದು ಸೋಲಿನಿಂದ ಹೇಗೆ ಪಾಠ ಕಲಿಯುತ್ತದೆ ಹಾಗೂ ಕಲಿತ ಹಾಗೆ ನಾಟಕ ಮಾಡುತ್ತದೆ ಎಂಬುದು ತ್ರಿಪುರ ಚುನಾವಣೆ ಸೋಲಿನ ಬಳಿಕ ಸಿಪಿಎಂ ಮುಂದಡಿಯಿಡುತ್ತಿರುವ ಹೆಜ್ಜೆಗಳು ಸಾಬೀತುಪಡಿಸಿವೆ.
ಹೌದು, ಎರಡು ದಶಕದ ಬಳಿಕ ತ್ರಿಪುರದಲ್ಲಿ ಸೋತು ಸುಣ್ಣವಾಗಿರುವ, ಕೇರಳದಲ್ಲಿ ಮಾತ್ರ ಅಸ್ತಿತ್ವ ಉಳಿಸಿಕೊಂಡಿರುವ ಸಿಪಿಎಂ, ಈಗ ಎಚ್ಚೆತ್ತುಕೊಂಡಿದೆ.
ಕಳೆದ ಫೆಬ್ರವರಿ 12ರಂದು ಕೇರಳದಲ್ಲಿ ಕಾಂಗ್ರೆಸ್ ಯುವಕ ಮುಖಂಡ ಶೌಹಿಬ್ ಎಂಬಾತನ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಪಿಎಂ ತನ್ನ ಪಕ್ಷದ ನಾಲ್ವರು ಕಾರ್ಯಕರ್ತರನ್ನು ಅಮಾನತುಗೊಳಿಸಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ನೇತೃತ್ವದಲ್ಲಿ ನಡೆಸಿದ ಸಭೆಯಲ್ಲಿ ಸಿಪಿಎಂ ಈ ತೀರ್ಮಾನ ಕೈಗೊಂಡಿದೆ. ಪಕ್ಷದ ಎಂ.ವಿ.ಆಕಾಶ್, ಟಿ.ಕೆ.ಅಸ್ಕರ್, ಕೆ.ಅಖಿಲ್ ಮತ್ತು ಸಿ.ಎಸ್.ದೀಪಚಾಂದ್ ಎಂಬುವವರನ್ನು ಅಮಾನತುಗೊಳಿಸಿದೆ.
ಕೊಲೆ ಪ್ರಕರಣದಲ್ಲಿ ಸಿಪಿಎಂ ಕಾರ್ಯಕರ್ತರ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ನಾಲ್ವರನ್ನೂ ಅಮಾನತುಗೊಳಿಸಲಾಗಿದೆ. ಒಂದು ವೇಳೆ ಅಪರಾಧದಲ್ಲಿ ಭಾಗಿಯಾಗಿರುವುದು ಸಾಬೀತಾದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣ ತಿಳಿಸಿದ್ದಾರೆ.
ಮೊದಲಿನಿಂದಲೂ ಕೇರಳದಲ್ಲಿ ಹಿಂದೂಗಳು, ಬಿಜೆಪಿ, ಆರೆಸ್ಸೆಸ್ ಕಾರ್ಯಕರ್ತರ ಹತ್ಯೆಯಲ್ಲಿ ಸಿಪಿಎಂ ಕಾರ್ಯಕರ್ತರ ಕೈವಾಡ ಇದೆ ಎಂಬ ಶಂಕೆಯಿದೆ. ಆದರೆ ಯಾವ ಕಾರ್ಯಕರ್ತರ ವಿರುದ್ಧವೂ ಸಿಪಿಎಂ ಕ್ರಮ ಕೈಗೊಂಡಿರಲಿಲ್ಲ. ಈಗ ತ್ರಿಪುರ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಹಿನ್ನೆಲೆಯಲ್ಲಿ ಕೇರಳದಲ್ಲಾದರೂ ಅಸ್ತಿತ್ವ ಉಳಿಸಿಕೊಳ್ಳುವ ದಿಸೆಯಲ್ಲಿ ಈ ಕ್ರಮ ಕೈಗೊಂಡಿದೆ ಎಂದು ತಿಳಿದುಬಂದಿದೆ.