ತ್ರಿವಳಿ ತಲಾಖ್ ಆಯ್ತು, ಈಗ ಬಹುಪತ್ನಿತ್ವ ಕೊನೆಗಾಣಿಸಲು ಸುಪ್ರೀಂ ಮೆಟ್ಟಿಲೇರಿದ ಮುಸ್ಲಿಂ ಮಹಿಳೆಯರು!
ದೆಹಲಿ: ತ್ರಿವಳಿ ತಲಾಖ್ ವಿರುದ್ಧ ಲಕ್ಷಾಂತರ ಮಹಿಳೆಯರು ಹೋರಾಡಿದ ಫಲವಾಗಿ ತ್ರಿವಳಿ ತಲಾಖ್ ನಿಷೇಧಿಸಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದ ಬಳಿಕ, ಈ ಅನಿಷ್ಠ ಪದ್ಧತಿ ವಿರುದ್ಧ ಕಾನೂನು ರಚಿಸಲು ಮುಂದಾಗಿದೆ.
ತ್ರಿವಳಿ ತಲಾಖ್ ವಿರುದ್ಧ ಮುಸ್ಲಿಂ ಮಹಿಳೆಯರಿಗೆ ಸಿಕ್ಕ ನ್ಯಾಯ ಹಾಗೂ ಅಭೂತಪೂರ್ವ ಗೆಲುವಿನ ಬಳಿಕ ಮತ್ತೊಂದು ದಿಟ್ಟ ನಿರ್ಧಾರ ಕೈಗೊಂಡಿರುವ ಮುಸ್ಲಿಂ ಮಹಿಳೆಯರು ಈಗ ಇಸ್ಲಾಮಿನಲ್ಲಿ ಅಸ್ತಿತ್ವದಲ್ಲಿರುವ ಬಹುಪತ್ನಿತ್ವ ಪದ್ಧತಿ ವಿರುದ್ಧ ಹೋರಾಡಲು ಮುಂದಾಗಿದ್ದಾರೆ.
ಹೌದು, ದೆಹಲಿ ಮೂಲದ ಹಸೀನಾ ಬೇಗಂ ಹಾಗೂ ಕಾಸಿಂಬಿ (ಹೆಸರು ಬದಲಾಯಿಸಲಾಗಿದೆ) ಎಂಬ ಇಬ್ಬರು ಮಹಿಳೆಯರು ಬಹುಪತ್ನಿತ್ವ ಪದ್ಧತಿ ನಿಷೇಧಿಸಬೇಕು ಎಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಆ ಮೂಲಕ ಇವರು ಬಹುಪತ್ನಿತ್ವ ಪದ್ಧತಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಮೊದಲ ಮಹಿಳೆಯರು ಎಂಬ ಕೀರ್ತಿಗೂ ಭಾಜನರಾಗಿದ್ದಾರೆ.
ಇಸ್ಲಾಂ ಕಾನೂನಿನಲ್ಲಿ ಒಬ್ಬ ಪುರುಷ ನಾಲ್ಕು ಮಹಿಳೆಯರನ್ನು ಮದುವೆಯಾಗುವ ಅವಕಾಶವಿದ್ದು, ಇದರಿಂದ ಮುಸ್ಲಿಂ ಮಹಿಳೆಯರಿಗೆ ತೊಂದರೆಯಾಗುತ್ತಿದೆ. ಹಾಗಾಗಿ ಈ ಅನಿಷ್ಠ ಪದ್ಧತಿ ನಿಷೇಧಿಸಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಹಸೀನಾ ಬೇಗಂ 2008ರಲ್ಲಿ ವ್ಯಕ್ತಿಯೊಬ್ಬನನ್ನು ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಮದುವೆಯಾದ ಹೊಸತರಲ್ಲಿ ಚೆನ್ನಾಗಿಯೇ ಇದ್ದ ಗಂಡ, ಬಳಿಕ ವರದಕ್ಷಿಣೆ ತೆಗೆದುಕೊಂಡು ಬಾ ಸೇರಿ ಹಲವು ಕ್ಷುಲ್ಲಕ ಕಾರಣಕ್ಕಾಗಿ ಕಿರುಕುಳ ನೀಡಿದ್ದಾನೆ. ಕೊನೆಗೆ ಕಳೆದ ಜನವರಿಯಲ್ಲಿ ಬೇರೊಬ್ಬಳನ್ನು ಮದುವೆಯಾಗಿದ್ದಾನೆ ಎಂದು ತಿಳಿದುಬಂದಿದೆ. ಕಾಸಿಂಬಿ ಪರಿಸ್ಥಿತಿಯೂ ಇದೇ ಅಗಿದೆ. ಹಾಗಾಗಿ ಬಹುಪತ್ನಿತ್ವ ನಿಷೇಧಿಸುವಂತೆ ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿದ್ದಾರೆ.
ಒಟ್ಟಿನಲ್ಲಿ ಮುಸ್ಲಿಂ ಮಹಿಳೆಯರ ಜೀವನ ನಿರ್ವಹಣೆಗೆ, ನೆಮ್ಮದಿಯ ಜೀವನಕ್ಕೆ ಕಂಟಕವಾಗಿದ್ದ ತ್ರಿವಳಿ ತಲಾಖ್ ರದ್ದುಗೊಳಿಸಿದ ಬಳಿಕ ಅವರಲ್ಲೊಂದು ಆಶಾಭಾವನೆ ಮೂಡಿದ್ದು, ಈಗ ಬಹುಪತ್ನಿತ್ವವನ್ನೂ ನಿಷೇಧಿಸಿದರೆ ಮಹಿಳೆಯರ ನೆಮ್ಮದಿ ಜೀವನಕ್ಕೆ ರಹದಾರಿಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
* ಸಾಂದರ್ಭಿಕ ಚಿತ್ರಗಳು
ಚಿತ್ರಕೃಪೆ: ಇಂಟರ್ನೆಟ್
Leave A Reply